(ಕಾರ್ಮೆನ್‌ಗೆ)

ಹೆನ್ಲಿಯೆಂಬುದೊಂದು ಹಳ್ಳಿ ಅಲ್ಲಿ
ಥೆಮ್ಸ್ ನದಿಗೆ ಅಪರೂಪದ ಭರ
ನದಿಯ ಮಧ್ಯದ ತನಕ ಹಾಕಿದ
ಮರದ ಸೇತುವೆಯಲ್ಲಿ
ನಾವು ನಡೆದವು.
ರೊಟ್ಟಿಯ ತುಣುಕಿಗೆ ಅಥವಾ
ಸೇಬಿನ ತಿರುಳಿಗೆ ಬಾತುಕೋಳಿಗಳು
ಹತ್ತಿರಕ್ಕೆ ಬರುತ್ತಿದ್ದುವು
ನೋಡುತ್ತ ನಿಂತೆವು.

ಆಕಡೆ ಗುಡ್ಡ ಕಾಡು-ಸೂಜಿ ಮೊನೆಯ
ಮರಗಳು, ಮೌನ ಮಂಜು
ಈಚೆ ದಡದ ಮೇಲೆ
ಮೋಜಿಗೆಂದು ವಿರಾಮ ಹಿಡಿಯಲು ಕುಳಿತವರು
ಒಬ್ಬೊಬ್ಬನ ಪಕ್ಕದಲ್ಲೂ
ಒಂದೊಂದು ಬುಟ್ಟಿ ಹುಳಗಳು

ಈ ಸೇತುವೆ, ಈ ನೀರು, ಇಲ್ಲಿ ಈ ನಿಮಿಷ
ಒಟ್ಟಿಗೆ ಬಂದು ನಿಂತ ಈ ನಾವು
ಇದೆಲ್ಲ ಇನ್ನೊಂದು ಕಾಲದ ಇನ್ನೊಂದು ದಿನದ
ಆವರ್ತನೆಯೆ ಅಥವ
ಬೇರೆಯ ದಿನವೆ?

ತೇಲಿ ಹೋಗುತ್ತಿರುವ ಆ
ಖಾಲಿ ಬೀಯರು ಡಬ್ಬದ ಹಾಗೆ
ಕೆಳಗಿನ ಇಳುಕಲಿನಲ್ಲಿ ಮರೆಯಾದರೆ
ಎಷ್ಟು ಖುಷಿ!
–ಎಂದಳು ಅವಳು

ಹಿಂದೆ ಬರುತ್ತಿದ್ದಾಗಲೇ ನಾವು ಗಮನಿಸಿದ್ದು
ಮಾಸಿದ ಅಕ್ಷರಗಳ ನೋಟಿಸು-
ಪ್ರವಾಸಿಗಳು ತಮ್ಮ ರಕ್ಷಣೆಗೆ
ತಾವೇ ಜವಾಬ್ದಾರರು-ಎಂದು.

ರೆವರೆಂಡ್ ಜೋನ್ಸ್–
ಈಗಿಲ್ಲಿದ ಜೋನ್ಸ್ ಟೌನಿನ ಪೂಜಾರಿ-
ಆತ ಕುಳಿತ್ತಿದ್ದ ವೇದಿಕೆಯ ಮೇಲೆ
ಬರೆದಿತ್ತಂತೆ:
“ಹಿಂದಿನದನ್ನು ಯಾರು ಮರೆಯುತ್ತಾರೋ
ಅವರು ಅದನ್ನೇ ಮತ್ತೆ ಮತ್ತೆ
ಆವರ್ತಿಸುವುದಕ್ಕೆ ಗುರಿಯಾಗುತ್ತಾರೆ.”

ಅವು ಸಾಂತಾಯನನ ಮಾತುಗಳಲ್ಲವೆ
ಏನದರ ಅರ್ಥ?

ಯಾರಿಗೆ ಗೊತ್ತು, ಕಾರ್ಮೆನ್,
ಆ ಎಂಟುನೂರ ಹನ್ನೊಂದು ಮಂದಿಯಲ್ಲಿ
ಯಾರೂ ಉಳಿಯಲಿಲ್ಲ.
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)