ಭತ್ತದ ಚಿಗುರು ಚಿಮುಕಿಸಲು ಹದವಾದ ಗದ್ದೆ
ಅಲ್ಲಲ್ಲಿ ಮಣ್ಣಡಿಯ ಒಳಬಾಗಿಲ ಜಿಗಿದು
ಇಣುಕುತ್ತಿವೆ ಗದ್ದೆ ಗುಳ್ಳೆಗಳು
ಪುಟ್ಟ ಎಳೆಯ ಆಕೃತಿಯೊಂದು ಮೆಲ್ಲನೆ ಸರಿಯುತ್ತಿದೆ
ಹದುಳಿಂದ ಪಾದ ಊರುತ್ತ,
ಕಂಡ ಕಂಡ ಗುಳ್ಳೆಗಳನ್ನೆಲ್ಲಾ ಆಯುತ್ತಿದೆ ಒಂದೊಂದಾಗಿ
ತುಂತುರು ಸೋನೆ ಮಳೆಗೆ ಸ್ವಲ್ಪ ಸ್ವಲ್ಪವೇ ನಡಗುತ್ತ
ಆದರೂ ಬತ್ತದ ಉತ್ಸಾಹದಲಿ

ಆಯ್ದ ಗುಳ್ಳೆಗಳು ಈಗ ಮನೆಯ ನಡು ಅಂಗಳದಿ ಚದುರಿ ಬಿದ್ದಿವೆ-
ಮೂತಿ ಹೊರ ತೂರುವ ಗುಳ್ಳೆಗಳ ಹೊಂಚಿ ಹಿಡಿದು
ತೆಂಗಿನ ಗರಿಯ ಕಡ್ಡಿಯಿಂದ ಮೀಟಿ ಮಾಂಸವನ್ನು
ಒತ್ತಿ ತೆಗೆಯುತ್ತಿದೆ ಆಕೃತಿ,
ಕೆಲವು ಬೆರಕಿ ಗುಳ್ಳೆಗಳು ಹವಣಿಸುತ್ತಿವೆ ಜೀವ ಜೋಪಾನಕ್ಕಾಗಿ-
ವ್ಯರ್ಥವಾಗಿ -ಗೌಲಕೋಣೆಯ ಮಣ್ಣ ಮಡಿಕೆಯಲ್ಲಿ
ಕೊತ ಕೊತ ಕುದಿಯುತ್ತಿದೆ ಮಸಾಲೆ
ಗುಳ್ಳೆ ಮಾಂಸಕ್ಕೆ ಕಾಯುತ್ತ.

ನೋಡ ನೋಡುತ್ತ ಮಬ್ಬುಗತ್ತಲೆ ಅವುಚಿಕೊಳ್ಳುತ್ತಿದೆ.
ಹತ್ತಲಾಗದ ದೃಷ್ಟಿಯ ನಿಚ್ಚಳವಾಗಿಸಿ
ಗೂಡಿನತ್ತ ತೆವಳುತ್ತ ಮತ್ತೆ ಮಂದದಿಟ್ಟಿಗೆ ಬಿದ್ದ
ಹುಳವನ್ನೊಮ್ಮೆ ಕೊಕ್ಕಿನಿಂದ ಹೆಕ್ಕಿ ಕುಕ್ಕತೊಡಗಿದೆ-ಹುಂಜ
ಮತ್ತೀಗ ಅದೇ ಆಕೃತಿ
ಮರಿಕೋಳಿ ಹುಂಜಗಳ ಹಿಡಿದು ಗೂಡಿಗೆ ತಳ್ಳುತ್ತಿದೆ.
ಒತ್ತರಿಸಿ, ಜಪ್ಪರಿಸಿ ಸುರಿಯತೊಡಗಿದೆ ಮುಸಲಧಾರೆ,
ಅದಾವ ಪರಿಯ ಸೊಗಡುಗಾರನೋ ತಿಳಿಯದಾದಂತೆ,
ಥಕಥೈ ಕುಣಿತ ಅಮಲೇರಿದಂತೆ.
ಅಷ್ಟೇ ಅಲ್ಲ, ಸೇರಿಗೆ ಸವ್ವಾಸೇರು, ಜುಗಲಬಂದಿಗೆ
ಸೆಟೆದು ಬೀಸತೊಡಗಿದೆ ಗಾಳಿ, ಪರಕಾಯ ಪ್ರವೇಶ ಮಾಡಿದಂತೆ.

ಗಿಡಮರದ ಕಿವಿಯೊಳಗೆ ತೂರಿ ಕಚಗುಳಿ ಇಡುತ್ತಿದ್ದ
ತಂಬೆಲರು ಮಟಮಾಯ.
ಎಲೆಗಳು ಥರಥರನೇ ನಡಗುತ್ತಿವೆ, ಹಕ್ಕಿಗೂಡಿನ ಮರಿಗಳು
ತಾಯ್ ಪಕ್ಕೆಯಲಿ ಬಚ್ಚಿಟ್ಟುಕೊಳ್ಳುತ್ತಿವೆ,
ಮುಚ್ಚಟೆಯಾಗಿ ಸುರಿವ ಮಳೆಮಾರುತಕ್ಕೆ ಬೆದರಿ.
ಈಗ ಗಾಢಾಂಧಕಾರ ವಕ್ಕರಿಸಿದೆ,
ತಡಕಾಡುತ್ತಿವೆ ಹತ್ತಾರು ಕೈಗಳು – ದೀಪ ಬೆಳಗಲು,
ಹೊತ್ತಿಸಿದ ಮಂದ ಪ್ರಭೆಯಲ್ಲಿ ದಿಟ್ಟಿಸುತ್ತೇನೆ
-ಅದೋ, ಎಳೆಯ ಆಕೃತಿಯ ಸ್ತಬ್ಧ ಚಿತ್ರ
ಬಯಲು ಚಿತ್ರದಂತೆ-ನನ್ನದೇ ನಿಚ್ಚಳ ರೂಪ.
*****

ನಾಗರೇಖಾ ಗಾಂವಕರ
Latest posts by ನಾಗರೇಖಾ ಗಾಂವಕರ (see all)