
ಪುಟಾಣಿ ಇರುವೆಗೆ ನಾನು ಹ್ಯಾಗೆ
ಕಾಣ್ತಾ ಇರಬೋದು?
ನಮ್ ಕಾಲ್ಬೆರಳೇ ಅದಕ್ಕೆ ಭಾರೀ
ಬಂಡೆ ಇರಬೋದು!
ಆದ್ರೂ ಅದು ಹೇಗೋ ಮಾಡಿ
ಹತ್ತೇ ಬಿಡುತ್ತೆ!
ಅಟ್ಲು ಮೇಲಿನ್ ಡಬ್ಬದೊಳಕ್ಕೂ
ಇಳಿದೇ ಬಿಡುತ್ತೆ!
ನೋಡೋಕ್ ಇರುವೆ ಪುಟ್ಟಕ್ಕಿದ್ರೂ
ಕಷ್ಟಕ್ಕ್ ಹೆದರಲ್ಲ;
ಬೇಜಾರಿಲ್ದೆ ದುಡೀತಿರತ್ತೆ
ಕೆಲ್ಸ ನಿಲ್ಸಲ್ಲ.
ಜೊತೇಲಿ ದೊಡ್ಡ ಗುಂಪು ಕರ್ಕೊಂದು
ಹೋಗ್ತಾ ಇರುತ್ತೆ
ಅಷ್ಟೊಂದ್ ಇರುವೆ ಜೊತೆಗಿದ್ರೂನೂ
ಕ್ಯೂನಲ್ಲಿರುತ್ತೆ!
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.