-೧-
ಗಾಳಿ ಬೀಸುತ್ತಲೇ, ಬೀಸುತ್ತಲೇ ಇತ್ತು;
ಬಿಸಿಲು ಉರಿಯುತ್ತಲೇ, ಉರಿಯುತ್ತಲೇ ಇತ್ತು ;
ಗುಡುಗಿ ಬಾನ್ ಮಿಂಚುರಿದು ಮಳೆ ಬೀಳುವಂತಿತ್ತು ;
ಇನ್ನೊಂದು ನಿಮಿಷದಲಿ ಮಳೆ ಗಾಳಿಯಾಗಿತ್ತು.

ಇನ್ನೊಂದು ನಿಮಿಷದಲಿ ಮಳೆ ಗಾಳಿಯಾಗಿತ್ತು ;
ಗಾಳಿ ಬೀಸುತ್ತಲೇ, ಬೀಸುತ್ತಲೇ ಇತ್ತು;
ಹೂಮುಡಿದ ಹುತ್ತದಲಿ ಹಾವು ಹೆಡೆ ತೆರೆದಿತ್ತು;
ಹಳ್ಳ ಹರಿಯುತ್ತಲೇ, ಹರಿಯುತ್ತಲೇ ಇತ್ತು.

ಹಳ್ಳ ಹರಿಯುತ್ತಲೇ, ಹರಿಯುತ್ತಲೇ ಇತ್ತು;
ಗಿಡದ ಹೂ ಒಂದೊಂದು ಉದುರುತ್ತಲೇ ಇತ್ತು;
ಗಾಳಿ ಬೀಸುತ್ತಲೇ, ಬೀಸುತ್ತಲೇ ಇತ್ತು;
ಉಣಿಸಿಲ್ಲದೂರಿನಲಿ ಮಧ್ಯಾಹ್ನವಾಗಿತ್ತು.

ಉಣಿಸಿಲ್ಲದೂರಿನಲಿ ಮಧ್ಯಾಹ್ನವಾಗಿತ್ತು ;
ಹುಟ್ಟಬಾರದ ಕಂದ ತೊಟ್ಟಿಲಲಿ ನುಲಗಿತ್ತು;
ಸಂತೋಷವೊಂದಿರದ ಸಂಸಾರ ಬೆಳೆದಿತ್ತು ;
ಗಾಳಿ ಬೀಸುತ್ತಲೇ, ಬೀಸುತ್ತಲೇ ಇತ್ತು.

-೨-
ಗಾಳಿ ಬೀಸುತ್ತಲೇ, ಬೀಸುತ್ತಲೇ ಇತ್ತು ;
ಮನೆ ಮನೆಯ ಮುಂದೆಲ್ಲ ಭಿಕ್ಷುಕರ ದಂಡಿತ್ತು;
ಪೆಟ್ಟೆಯಲಿ ಬತ್ತ ಪಾತಾಳವನು ಕಂಡಿತ್ತು ;
ಗಂಟಲೋ ತಂಬಟೆಯೋ ತಾಳವೋ ಕೊಂದಿತ್ತು.

ಗಂಟಲೋ ತಂಬಟೆಯೋ ತಾಳವೋ ಕೊಂದಿತ್ತು;
ಗಾಳಿ ಬೀಸುತ್ತಲೇ, ಬೀಸುತ್ತಲೇ ಇತ್ತು;
ಚಾಟಿಯ ಛಟೀರೆನಿಸಿ ಮಾರಿಯೂ ಬಂದಿತ್ತು;
ದಾಟಿ ಹೋಗಲು ದಾರಿ ಸುತ್ತಲೂ ಕಟ್ಟಿತ್ತು.

ದಾಟಿ ಹೋಗಲು ದಾರಿ ಸುತ್ತಲೂ
ಒಂದು ಹಿಡಿ ಅನ್ನಕ್ಕೆ ಬಾಳು ಆಳಾಗಿತ್ತು;
ಗಾಳಿ ಬೀಸುತ್ತಲೇ, ಬೀಸುತ್ತಲೇ ಇತ್ತು;
ಕುಳಿಬಿದ್ದ ಮುದಿಕೆನ್ನೆ ಕೆಟ್ಟ ನಗೆ ಬೀರಿತ್ತು.

ಕುಳಿಬಿದ್ದ ಮುದಿಕೆನ್ನೆ ಕೆಟ್ಟ ನಗೆ ಬೀರಿತ್ತು;
ಉಸಿರಿಲ್ಲದೊಂದು ಉತ್ಸವ ಮುಂದೆ ಸಾಗಿತ್ತು;
ನಗೆಯಿರದ ಬಲವಿರದ ಶಾಂತಿ ಕೈಮುಗಿದಿತ್ತು;
ಗಾಳಿ ಬೀಸುತ್ತಲೇ, ಬೀಸುತ್ತಲೇ ಇತ್ತು.
*****