
ಹಣ್ಣು ಮರಗಳ ಮುಡಿಯಲ್ಲಿ,
ಬೇರು?
ಅಡಿಯಲ್ಲಿ,
ಬಂಗಲೆ ಬೆಚ್ಚನೆ ಬಿಸಿಲಲ್ಲಿ,
ಪಾಯ?
ತಳದಲ್ಲಿ.
ಚಿನ್ನ ದೊಡ್ಡೋರ್ ಮೈಯಲ್ಲಿ,
ಅದಿರು?
ನೆಲದಲ್ಲಿ.
ನದೀ ನೀರು ಬಯಲಲ್ಲಿ
ಮರಳು?
ತಳದಲ್ಲಿ
ಬೇರು ಪಾಯ ಅದಿರು ಮರಳು
ಯಾಕೆ ಕಾಣೋಲ್ಲ?
ದುಡಿಯೋ ಹಿರಿಯರೆ ಹಾಗೆ, ಎಂದೂ
ಎದುರಿಗೆ ಬರೋಲ್ಲ.
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.