ಮಾನಸ ಲೋಕದ ಪ್ರಭುವೆ
ಮನ ಮಾನಸದ ಹೊನಲಿನ ವಿಭುವೆ ||ಪ||

ಮುಗಿಲಿಗೂ ಮಿಗಿಲು
ನಿನ್ನಯ ಹರವು,
ಕಡಲಿಗೂ ಹಿರಿದು
ತಿಳಿವಿನ ಅಳವು,

ಸಮೀರನ ಹಿಂದಿಕ್ಕೂ
ವೇಗದ ಲೀಲೆ,
ಅನಲನ ದಾಟಿಸೋ
ಅಪುವಿನ ಓಲೆ,

ಮಾಯಾ ಮೃಗದ
ನಯನದ ಮಿಂಚೊ,
ನಾನಾ ಛಾಯೆಯ
ಥಳುಕಿನ ಸಂಚೋ,

ಕಾಂತ ಕಾಂತಿಗಳ
ಏಕಾನೇಕದ ದೀಪ್ತಿ
ಕ್ರಾಂತಿಯುತ್ಕ್ರಾಂತಿಯ
ನಿಮೀಲನ ಶಕ್ತಿ

ಯುಗದ ಯಾತ್ರಿಯ
ಯಾತ್ರೆಯ ಕಿರಣ
ಜುಗದ ಧರಿತ್ರಿಯ
ಅಕ್ಷಯ ಕಾರಣ

ಮಾತನು ಮೀರಿದ
ಮೌನದ ಮನನ
ನಿಧಿನ್ಯಾಸ ಧ್ಯಾನದಿ
ನಿನ್ನಯ ದರುಶನ ||
*****