ಆಕಾಶಮಾರ್ಗದಲ್ಲೂ ಇಳಿಜಾರು ಬೆಟ್ಟ
ಆಕ್ಸಿಡೆಂಟ್ ಝೋನ್, ಅಂಕುಡೊಂಕು ರಸ್ತೆ ಎಂದಿರಬೇಕಾಗಿತ್ತು
ಬ್ರೇಕು ಗೇರುಗಳ ಕಿರಿಕಿರಿ ಶಬ್ದ
ನಡುರಾತ್ರಿ ಟಾಯರ್ ಪಂಕ್ಚರ್ ಎಲ್ಲೋ ಕತ್ತಲಲ್ಲಿ
ಒಂಟಿಯಾಗಿ ನಿಂತ ಒಗ್ಗಾಲಿ ಬಸ್ಸು
ಹೊರಗೆ ಗಾಲಿ ಬದಲಿಸುವ
ಡ್ರೈವರ್, ಕ್ಲಿನರ್ಸ್ ಜೊತೆಗೊಂದಿಷ್ಟು ಜಗಳದ ಪ್ಯಾಸೆಂಜರ್ಸ್….
ಕೊನೆಯ ಸೀಟಿಗೆ ಅರ್ಜೆಂಟ್ದಲ್ಲಿ ಬಂದ
ಗಾಗಲ್ವಾಲಾನ ಬೂಟ ಸಪ್ಪಳ,
ಬೆಚ್ಚಗೆ ಮಲಗಿದ ಮಗು ತನ್ನಿರುವಿಕೆಯ ಅಳು
ಪಕ್ಕಲ್ಲೇ ಲೋಡೆಡ್ ಟ್ರಕ್ ಧಡಾರನೇ ದಾಟಿ ಹೋದದ್ದು
ಬಸ್ ಅಲುಗಾಟ
ಮತ್ತೆ ಡ್ರೈವರ್ ಸೀಟಿಗೆ ಹಾಜರ್
ಗೇರು ಬ್ರೇಕು ಚೆಕ್ ಮಾಡಬೇಕಾದ ಕೈ
ಟಿ.ವಿ. ಸ್ಟೀರಿಯೋ ಬಟನ್ಗಳ ಮೇಲೆ
ಸರಿಗಮ- ಉಲ್ಟಾ ಸನಿದಪ
ಹಾಡುವುದಕ್ಕೆ ರಾಗ ಕೂಡಿಸುವದೊ
ನೋಡುವುದಕ್ಕೆ ಕಣ್ಣು ಬಿಡುವುದೊ
ಗಡಿಯಾರ ನೋಡಿದ್ದೇ ನೋಡಿದ್ದು
ಊರು ತಲುಪುವುದೆಂದೊ! ಒಂದೇ ಸವನೆ ಚಡಪಡಿಕೆ…
ಅರೇರೆ! ಇದೇನಿದು ಕುಡಿದ ನೀರು ಅಲುಗಾಡದೆ
ಕೂದಲು ಕೊಂಕದೆ, ಸಾವಿರಾರು ಮೈಲು
ಆಕಾಶಹಾದಿ ದಾಟಿ ಬಿ.ಪಿ ಏರಿ ತಲೆಬಿಸಿಯಾಗದೆ
ಸಮಯಕ್ಕೆ ಸರಿಯಾಗಿ ಇಳಿದದ್ದು…..
ಛೇ! ಯಾಕೋ ಒಮ್ಮೊಮ್ಮೆ ಬೇಸರ.
*****