ಹನುಮಂತನ ಜನನ

ಶ್ರೀರಾಮ ಶ್ರೀರಾಮ ಶ್ರೀರಾಮ ನಾಮವನು
ವಿಂದ್ಯಾದ್ರಿ ಗಿರಿದುದಿಯ ಮೇಲಿನಿಂದುರಿಸಿ;
ಸಾನಂದ ಸಂಸ್ಕಾರ ಸಾಯುಜ್ಯವನ್ನಿತ್ತ
ಶ್ರೀರಾಮ ಭೃತ್ಯನೀ ಮಂಡಲದಿ ಹಾರಿ.

ಹಾರಾರಿ ಲೋಕದಾ ಜನದೊಡೆಯ ರಾಮನಾ
ಸೇವೆಯನು ಪೂಜೆಯನು ಧ್ಯಾನವನು ಸದಾ;
ಧ್ಯಾನದಾ ಬೀಜವನು ಆ ಸೇತು ಹಿಮಿಗಿರಿಯ
ನಡುಭೂಮಿಯೆಡೆ ಬಿತ್ತಿ ಧನ್ಯನವನಾದ!

ಸೂಸಿಬಹ ತಣ್ಣೆಲರ, ಸುರುಳಾಯ್ವ ಬಿರುಗಾಳಿ
ಮಧ್ಯೆ ಶ್ರೀರಾಮ ರಾಮೆಂಬ ಧ್ವನಿ ಕೇಳಿ;
ಪೂರ್ವಾಪರ ದಡಬಡೆವ ಸಾಗರದ ತೆರೆಗಳೂ
ಶ್ರೀರಾಮ ಎಂದೆನುತ ಘೋಷಿಪುದು ಉರುಳಿ!

ಪುಣ್ಯೆ ಶ್ರೀ ತಾಯಮ್ಮ ಭೂರಮೆಯ ಪ್ರಿಯಸುತೆ,
ಈ ನಮ್ಮ ಭಾರತಿಯು ಆ ಧ್ವನಿಯ ಕೇಳಿ
ವಾಯುಸುತ ಹಾರಾಡಿ ಚೆಲ್ಲಾಡಿದಾ ಮಂತ್ರ
ಇದೊ ಕುವರ ಕೋಟಿಗಳೆ ಕಲಿಯಿರೆಂದುಸುರೆ!

ಕಿಷ್ಕಿಂಧ ನಗರದಲ್ಲಿ ಕಿರಿದಾದ ಜನ್ಮದಲಿ
ವಾನರನ ರೂಪದಲಿ ಶ್ರೀದೇವ ಮಾಯೆ;
ಅವತಾರ ಲೀಲೆಯಲಿ ದಾಶರಥಿ ಸುತ್ತಾಡೆ
ದಂಡಕಾರಣ್ಯದಲಿ ಜಗಜನರಕಾಯೆ!

ಕಪಿವೀರ ಕುಂಜರನು ಮುದ್ದಾಡಿದೆಳೆಪಸುಳೆ
ವಾನರನ ಕುಲಪೋತೆಯಂತೆಸೆದು ಕುವರಿ,
ಅಂಜನಾದೇವಿ ಶ್ರೀ ರಮಣಿಯಂತಾಡುತಲಿ
ಕೇಸರಿಯ ಸರಿಸತಿಯೆಂದೆನಿಸಿದಳೂ ಮುದದಿ!

ವೀರ ಸ್ತ್ರೀ ಅಂಜನಿಯು ಕೇಸರಿಯ ಪ್ರಿಯ ಪತ್ನಿ
ಪುತ್ರ ಸುಖ ಹೊಂದಲೆಂದೆಲ್ಲ ಜನರಂತೆ,
ಮರುಮರುಗಿ ಕಟ್ಟಕಡೆ ಬ್ರಹ್ಮನಂ ಮೊರೆಯಿಡಲು
ಗಿರಿವನಕೆ ಸಾಗಿದಳು ಘೋರ ತಪಕೆಂದೆ.

ವೃಷಭಾಚಲಾಗ್ರದಲಿ ಪತಿಯಾಜ್ಞೆ ಪಂಥದಲಿ
ತಪವೆಸಗಿ, ಸತ್ಪುತ್ರ ಮಾತೆಯೆಂದೆನಿಸೆ-
ಅಂಜನಿ-ನಿರಾಹಾರ, ಜಲಪಾನ, ಏಕಪದ,
ಉಂಗುಷ್ಠ ಮಾತ್ರದಲಿ ನಿಲ್ಲುತಲಿ ತಪಕೆ!

ಧ್ಯಾನದಲಿ ಏಳುಸಾವಿರ ವರ್ಷ ಕಳೆಯುತಲಿ
ಲೋಕದಲಿ ಶಾಂತಿಯದು ಇಲ್ಲದಿರೆ ಕಡೆಗೆ
ಪರಮಾತ್ಮ ಶಂಕರನೆ ತಾನ್ಬಂದು ಓಡೋಡಿ
ಅಂಜನಿಯ ಮೊರೆಯನ್ನು ಸ್ಮರಿಸಿದನು ನಿಜದೆ.

ಸಾಹಸದ ಚಿಚ್ಛಕ್ತಿ ದೃಢವ್ರತದ ಮಹಿಮೆಯು
ಸ್ತ್ರೀಯೊಳಿಹ ಮೌನ ಪ್ರತಿಜ್ಞೆ ಪ್ರಭಾವ-
ಜನಗಣಕೆ ಹರಿಮನಕೆ ಯೋಗಿ ಜನಭಾವಕೆ
ಅಚ್ಚರಿಯವಡಿಸಿದವು ಅಂಜನಿಯ ಸ್ಥೈರ್ಯ!

ಮನನೊಂದು ಬಹುಮೆಚ್ಚಿ ದೇವಾಧಿಪಾ ವಾಯು
ನಿಜರೂಪಿಂದಂಜನಿಗೆ ‘ತನ್ನ ಬಲವೀರ್ಯ
ತೇಜಸ್ಸು ಮುಂತಾಗಿ ಇರುವ ವರ ಕುವರನನು
ಪಡೆ’ಎಂದು ವರವಿತ್ತು ಪೋದ ಸಖ ಸೂರ್ಯ.

‘ಬಾ ಎನ್ನ ಶಂಕರನೆ, ಶ್ರೀಲೋಲ ಶ್ರೀಕರನೆ!
ಬಾ ಎನ್ನ ಮೂರುತಿಯೆ’ ಎಂದು ಮೊರೆಯಿಟ್ಟು!
‘ಮಗನನ್ನು ಮಡಿಲಲ್ಲಿ ಮಮತೆಯಲಿ ಮುದ್ದಿಸುವ
ಭಾಗ್ಯವೆನಗಿಡು’ ಎಂದು ಮೊರೆದು ಮತಿಗೆಟ್ಟು.

ವರುಷವನು ಕ್ಷಣದಂತೆ ಕಳೆಯುತಿರೆ ಬಂದನದೊ
‘ಭೋ’ವೆಂದು ಬೊಬ್ಬಿಡುತ ಶಂಕರನೆ ಬಳಿಗೆ
ಏಳೇಳು ನಿಂತಿರುವೆ, ಸನ್ನಿಧಿಗೆ ಬಂದಿರುವೆ
ಬೇಡು ನೀ ಬೇಕದ ವರಗಳನು ಮುದದೆ.

ಅರೆತೆರೆದ ಕಣ್ಣನ್ನು ಕೆದರಿರಿತ ವೇಣಿಯನು
ಜೋಲುಮೊಗ ಜೋಡು ಕೈ ಎಲ್ಲವನು ಸಮದೆ;
ಸರಿಪಡಿಸಿ ತಲೆಬಾಗಿ ‘ನಮೋ’ಎಂದೆನ್ನುತಲಿ
ಅಂಜನಿಯು ಪ್ರಸನ್ನ ಮುಖಿಯಾಗಿ ಶಿವಗೆ!-

ಬಗ್ಗಿದಳು, ಕಂಬನಿಯ ಸುರಿಸಿದಳು, ಮುದದಿಂದ
ಹಿಗ್ಗಿದಳು, ಮನದಲ್ಲಿ ಬೆದರಿದಳು ನೋಡೆ;
‘ಹೇ ಶಿವಾ, ಶಂಕರಾ, ಹರಹರಾ, ಗಿರಿಜೆವರ!
ಬಂದೆಯಾ?  ನಿಂತೆಯಾ? ರೂಪವನು ತೋರ್ದೆ’!

‘ಕೇಳೇಕಾದಶರುದ್ರ ವಜ್ರದೇಹಿಯ ತೆರದಿ
ಬೆದರನಾರಗು ಜಗದಿ, ರಕ್ಕಸರಿಗೂ;
ಹುಟ್ಟುವಳು ಧನ್ಯಳಿಹೆ, ನೀಕೊರಗದಿರುವಿದಕೆ
ಘೋರತಪ ಕೊನೆಗೊಳಿಸು, ಬೆದರದಿರು ಹೋಗು’!

‘ಕೇಳೆನ್ನ ಪ್ರಿಯಸುತೆ, ಕೂತಿರೇ ಧ್ಯಾನದಲಿ
ದೃಢಮನದಿ, ನಿಜತಪದಿ, ಘನವಾದಿಯಾಗಿ;
ಕಣ್ಣೆರಡು ಮುಚ್ಚಿಡುತ, ಬೋಗಸೆಯನ್ನೊಡ್ಡಿಡುತ
ಧಾನ್ಯಸ್ಥಳಾಗುನೀ ದೈನ್ಯಮತಿಯಾಗಿ.’

ಎಂದು ಸುತನುದಯದಾ ನಂಬುಗೆಯ ಬೀಜವನು
ಅಂಜನಿಯ ಸಮ್ಮುಖದೊಳಿಡುತ ಈಶ್ವರನು
ಥಟ್ಟನರೆ ಕ್ಷಣದೊಳಗೆ ಮಿಂಚಿ ಮರೆಯಾದನಾ
ಶಂಕರನು ಸಾನಂದ ಸುಖವೀಯುವವನು!

ಯೋಗಾಸನದಿ ನಿದ್ರೆ, ಬೊಗಸೆ ಬೇಡಿಕೆ ಮುದ್ರೆ-
ಯಿಂದ ಪರಮಾನಂದ ಶೃದ್ದೆಯಲಿ ಭದ್ರೆ,
ಗಿರಿಯ ಕಂದರದಲ್ಲಿ ಸ್ವರೂಪಾನಂದದಲಿ
ಇರಿತಳಂದದಿ ಮಂದಗಮನೆ ಚೆಲ್ವಾಧರೆ!

ಶೋಭಿಸುವ ಆ ಚೈತ್ರ ಶುದ್ದ ಪೂರ್ಣಮಿಯ ದಿನ
ಅರುಣೋದಯ ಸಮಯದಲ್ಲಿ ಸರಿಯಾಗಿ;
ನಿಶೆ ಹರಿದು ಉಷೆಚೆಲ್ಲಿ ಎಳರವಿಯ ತಂಗದಿರು
ಭೂರಮೆಯ ಹೃತ್ಪಠದ ಕಾಂತಿಯನು ಮಿಗಿಸಿ.

ಧೀರಸತಿ ಆ ಸಮಯದಲ್ಲಿ ಮಾರುತಿಯನ್ನು
ಪ್ರಸವಿಸುತ ಭೂತಲದಲ್ಲೊಂದು ಶೋಭನೆಯ
ಬೀರುತಾ ಕೃತ ತ್ರೇತಾ ದ್ವಾಪರಕೆ ಹೆಸರಾಂತ
ಕಲಿವೀರನನ್ನಡೆದ ಪುಣ್ಯಮಣಿ ಧನ್ಯ!

ದಿನವಂದು ಶಾಂತಿಯಲಿ ನವಗ್ರಹವು ಅದರದರ
ತಾಣದಲಿ ರಂಜಿಸಿತು ತಾರೆಗಳು ನಭದಿ,
ತರುಲತಾ ತಳಿರೆದ್ದು ಉದ್ಯಾನ ಹೂವರಳಿ
ಖಗಮೃಗವು ನಲ್ಮೆಯಿಂದೋಡಾಡಿ ಸುಖದಿ!

ಇರ್ದೊಡೀ ಪ್ರಕೃತಿಯು ಹೊಸಕಳೆಯಿಂದೀ ತೆರದಿ
ವಾನರನ ರೂಪದಲ್ಲವತರಿಸಿ ಜಗದೆ
ಮಾರುತಿಯು ಹನುಮಂತ ಘನವಂತನೆಂದೆನಿಸಿ
ದಿವ್ಯ ತೇಜಸ್ವಿ ಶರೀರದಿಂದುದಿಸೆ!

ಅಂಜನಿಯ ಸಿರಿವದನ ಸಂತಸದ ಹಿರಿಹಿಗ್ಗು
ಶ್ರೀರಾಮೋದ್ಭವಕೆ ಆ ಕೌಸಲ್ಯೆಯಂತೆ;
ಧೀರ ಸತಿಯುತ್ಸಾಹ ಜಗಕೆ ಪುತ್ರೋತ್ಸವವು,
ಕಣ್ಮನದ ಕಾಂಕ್ಷೆ ಬಂದೊಡಮೂಡಿದಂತೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೨೯
Next post ಸ್ನಾನಕ್ಕೆ ಬಂದ ಚಂದ್ರ

ಸಣ್ಣ ಕತೆ

 • ಮುಗ್ಧ

  ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

 • ಕನಸುಗಳಿಗೆ ದಡಗಳಿರುದಿಲ್ಲ

  ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

 • ಕ್ಷಮೆ

  ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

 • ಕಳ್ಳನ ಹೃದಯಸ್ಪಂದನ

  ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

 • ಮೌನರಾಗ

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…