ಪೃಥ್ವಿಯನೆ ಆದಿಯ ಮಾಡಿ,
ಅಪ್ಪುವಿನಲ್ಲಿ ಗೋಡೆಯನಿಕ್ಕಿ,
ಅಗ್ನಿಯನೆ ಅಪ್ಪುವಿನೊಳಗೆ ಹುದುಗಿಸಿ,
ಅಗ್ನಿಯನೆ ಬೀಸಿ, ವಾಯುವನೆ ಬೀರಿ,
ಆಕಾಶವನೆ ಹೊದಿಸಿ, ಸಹಸ್ರದಳ ಕಮಲವನೆ ಮೇಲು
ಕಟ್ಟಕಟ್ಟಿ, ಬಯಲಮಂಟಪವ ಶೃಂಗಾರವ ಮಾಡಿ,
ಒಡೆಯನಾಭರಣವ ಹಾರುತಿದ್ದೆನಯ್ಯ.
ಒಡೆಯನಾಭರಣವ ಹಾರೈಸುವದ ಕಂಡು,
ಹಡಪದಪ್ಪಣ್ಣನೆ ಕರ್ಪುರದ ಸಿಂಹಾಸನವಾಗಿ ನಿಂದರು.
ಅದಕ್ಕೆ ಚನ್ನ ಮಲ್ಲೇಶ್ವರನೆ
ಜ್ಯೋತಿರ್ಮಯಲಿಂಗವಾಗಿ ಬಂದು ನೆಲೆಗೊಂಡರು.
ಜ್ಯೋತಿರ್ಮಯ ಲಿಂಗವು ಕರ್ಪುರವು ಏಕವಾಗಿ
ಪ್ರಜ್ವಲಿಸಿ ಪರಮ ಪ್ರಕಾಶವಾಯಿತ್ತು.
ಈ ಬೆಳಕಿನಲ್ಲಿ ನಾ ನಿಜಮುಕ್ತಳಾದೆನಯ್ಯ
ಚನ್ನಮಲ್ಲೇಶ್ವರ ಅಪ್ಪಣಪ್ರಿಯ ಚನ್ನಬಸವಣ್ಣ.
*****

ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ