ಅಷ್ಟಗಲ ಬಾಯಿ ತೆರೆದು
ಗುಂಡಿಯಿಲ್ಲದ ನನ್ನ ಪ್ಯಾಂಟ್ಸಿನ ಹಾಗೇ
ನಗಬೇಡ ನನೆದುರು ಕುಳಿತು
ಮರೆತು ಹೋದ್ದಲ್ಲ
ಜನಕ್ಕೆ ಅಗೌರವ ತೋರಿಸುತೇನೆ
ಎಂದಲ್ಲ
ಮುಖ್ಯ ಇದಕ್ಕೆ ಬಟನ್ಸೆ ಇಲ್ಲ.
ನೀ ನಗುತೀಯ!
ಹುಟ್ಟಿಬಂದಾಗ ಮಾತು ಕೊಟ್ಟದ್ದುಂಟೆ
ಪ್ಯಾಂಟ್ಸು ಹಾಕುತ್ತೇನೆ
ಬಟನ್ಸ್ ಇರಿಸುತ್ತೇನೆ ಎಂದೆಲ್ಲ?
ತಪ್ಪು ಮುತ್ತಜ್ಜ ಆಡಮನದು
ಅಲ್ಲ ಮುತ್ತಜ್ಜಿಯದೊ?
ಬಾ. ಯಾಕೆ ಈ ಮುಖವಾಡ?
ಒಂದಿಷ್ಟು ಬಂಧನರಹಿತರಾಗಿ ಓಡಾಡೋಣ
ಮನ ಬಯಸಿದಲ್ಲಿ, ಬಯಸಿದ ಹಾಗೆ.
ನೋಡುತ್ತೇನೆ ನಿನ್ನ ಸೌಂದರ್ಯ
ಅಷ್ಟು ಜೋಪಾನಿಸಿದ್ದು ಯಾವ ನಿಧಿ?
ಅಷ್ಟು ಕಾಪಾಡಿದ್ದು ಯಾವ ಕಾಮಲತೆ?
ಇಷ್ಟಕ್ಕೆ ಎಷ್ಟಯ್ಯ ಬೆಲೆ?
ಸ್ವಾಮಿ. ಮೀಟರಿಗೆ ನಲವತ್ತು!
ನನಗೆ ನಾನೇ ಕೇಳಿ ಪಡೆದ ಅಕ್ಷಯವಸನ
ಆವರಣ
ಈ ಕೌಪೀನ
ಇದು ಮನ್ವಂತರಗಳ ಮಾನಸಿಕ ದೌರ್ಬಲ್ಯದ ನಿ –
ಶಾನೆ – ನಾನೆ ಹುಟ್ಟಿಸಿಕೊಂಡ ಕೃತಕ ನಾಗರಿ –
ಕತೆಯ ಹಳೆ ಹೊಸ ಏಳುನೂರು ಬಂ –
ಧನದ ಏಕಾಧಿಪತ್ಯದ ಸಾಕ್ಷಿ. ಹಾವು
ಪರೆ ಕಳಚಿದಂತೆ ಒಂದೊಂದೆ ಜಾಡಿಸಿ
ಮಹಾವೀರನಾಗಲೆ?
ದಿಗಂಬರನಾಗಿ ಪರ್ವತದಿಂದ ಹೇಳಲೆ
ಪರ್ವತ ಗೀತೆ?
ಹೇಳಿದರೆ ವಿಷಕುಡಿಸಿ ನನ್ನ ಕೊಂದೀಯ ನೀನೆ!
*****

Latest posts by ತಿರುಮಲೇಶ್ ಕೆ ವಿ (see all)