ಉದ್ದದಾಡಿಯ ಕೆಂಗಣ್ಣಿನ
ಮಂತ್ರವಾದಿ ಇದ್ದಾನೆ
ಹಾಗೆಯೇ, ಅದೆಷ್ಟೊ ವರ್ಷಗಳಿಂದ
ಮುಪ್ಪಿಲ್ಲ ಸಾವಿಲ್ಲ
ಕುಡಿದು ಬಿಟ್ಟಿದ್ದಾನೆ
ದೇವಲೋಕದ ಅಮೃತ
ಏಳು ಸಾಗರದಾಚೆ ಅದೆಲ್ಲಿಯೋ
ಉಸಿರಾಡುತ್ತಿದೆಯಂತೆ ಪ್ರಾಣಪದಕ
ಹುಡುಕಿ ಕೊಲ್ಲಲಾರದೆ, ನರಳಿವೆ
ನರಳುತ್ತಲೇ ಇವೆ ಮೈ ಮನಸ್ಸು
ಹುಡುಕ ಹೊರಟ ಧೀರರ
ಹಾದಿ ಸಾಗುವುದೇ ಇಲ್ಲಾ
ಮಂತ್ರವಾದಿಯ ಪ್ರಾಣ ಪದಕ
ದಕ್ಕುವುದೇ ಇಲ್ಲ
ಹಿಡಿಯೊಳಗೆ ಪ್ರಾಣ
ಉಡಿಯೊಳಗೆ ತ್ರಾಣ
ಕ್ರೂರತೆಯ ಅಟ್ಟಹಾಸ
ಸಾವಿಲ್ಲದ ವಿಕಟಟ್ಟಾಹಾಸ
ಬೆಟ್ಟಗುಡ್ಡ ನೆಲದಲ್ಲೆಲ್ಲ
ಹುಡುಕಾಟವೇ ಹುಡುಕಾಟ
ಸಿಕ್ಕಿದವರಿಗೆಲ್ಲ ವಶೀಕರಣದ ಕಾಟ
ದಕ್ಕುವ ತನಕ ಗಿಳಿ ಮಾಡುವ
ಕಾಯಕ
ಕೆಂಪು ಕೊಕ್ಕಿನ ಮುದ್ದುಗಿಳಿಗೆ
ಪಂಜರವೇ ನಿತ್ಯ
ಕೊನೆಗೆ ಎಲ್ಲವೂ ಅಪಥ್ಯ
ರೆಕ್ಕೆ ಪುಕ್ಕ ಕತ್ತಿರಿಸಿದ ಗಿಳಿ
ಈಗ ಮಂತ್ರವಾದಿಯ ಬಳಿ
ಸಾವಿಲ್ಲದ ಮನೆಯ ಸಾಸುವೆ
ಉಂಟು ಇಲ್ಲಿ
ಸತ್ತರೂ ಸಾಯಲಾರದ
ಜೀವವಿದ್ದರೂ, ಜೀವಂತಿಕೆ ಇಲ್ಲದ
ಸಾವಿರಾರು ಗಿಳಿಗಳ ಹಿಂಡು,
ನರಳುತ್ತಲೇ ಇವೆ ಅಲ್ಲಿ
*****