ತಾಯಿ ನೆಲವ ಒಮ್ಮೆಯೂ ಸೋಕದೆ
ಬಣ್ಣ ಬಣ್ಣದ ಬೋಗುಣಿಗಳಲ್ಲಿ ಬೆಳೆದು
ಅಲ್ಲಲ್ಲ, ಷೋಕಿಗೆ ಶಿಸ್ತಿನಿಂದ ಬೆಳೆಸಲ್ಪಟ್ಟು
ತಾಯಿಬೇರೂ ಕತ್ತರಿಸಿಕೊಂಡು

ಅತ್ತಿತ್ತ ಎಲ್ಲೆಂದರಲ್ಲಿ ಕೊಂಬೆ ಚಾಚದೇ
ಜೈಲಿನ ಖೈದಿಯಂತೆ
ಇದ್ದೂ ತಿನ್ನಲಾಗದ ರೋಗಿಷ್ಟ ಶ್ರೀಮಂತನಂತೆ
ಒಂದೇ ಗುಟುಕು ಅನ್ನ ನೀರು
ಮೇಲಿಲ್ಲ ಪುಷ್ಟಿಭರಿತ ಖೀರು.

ಇಷ್ಟಿಷ್ಟೇ ಎಂದು ಅಳತೆ ಮಾಡಿ
ತಲೆ-ಬಾಲ ಬೋಳಿಸಿಕೊಂಡು
ಕುಟುಕು ಜೀವ ಹಿಡಿದು

ಯಾರ್‍ಯಾರಿಗೆ ಎಷ್ಟೆಷ್ಟೋ
ಹೂ-ಹಣ್ಣು-ನೆರಳು ಕೊಡಬಹುದಿದ್ದ
ದೈತ್ಯ ಮರ,
ಈಗ ದೀನವಾಗಿ ನಿಂತು
ಒಂದೊಂದೇ ಹೂ ಹಣ್ಣು ಹಡೆಯುತ್ತದೆ
ಆಗೆಲ್ಲೋ ಈಗೆಲ್ಲೋ!
ಅದರ ಮೇಲೇ ಎಲ್ಲರ ಅಚ್ಚರಿಯ ಕಣ್ಣು!

ವಿಶ್ವಸುಂದರಿ ಸ್ಪರ್ಧೆಗೆ
ಡಯಟ್ ಮಾಡಿ
ಸ್ಲಿಮ್ ಆಗಿ ಟ್ರಿಮ್ ಮಾಡಿಸಿಕೊಂಡು ಬೆಳೆದ
ವಯಸ್ಸು ಮೀರಿದ
ಬುಡ್ಡ ಅಂಗವಿಕಲ ಸುಂದರಿ
ಬೋನ್ಸಾಯ್ ರಾಣಿ!
*****