ಆಹಾ! ಎಷ್ಟೊಂದು ಸುಂದರ
ಇದೇ ಇದೇ ಇಂದ್ರಲೋಕ
ಇಂದ್ರನೊಡ್ಡೋಲಗ
ಕಿನ್ನರರು ಕಿಂಪುರುಷರು
ದೇವಾನುದೇವತೆಗಳು
ಮೋಡಿನೊಡಲೊಳಗೇ ಚಲಿಸುವ
ಇಲ್ಲೆಂದರಲ್ಲಿ ಅಲ್ಲೆಂದರಲ್ಲಿ
ಇಂದ್ರಸುರೀಂದ್ರ
ಊರ್ವಶಿ ರಂಭೆ ಮೇನಕೆ ತಿಲೋತ್ತಮೆಯರ
ತೋಳು ತೊಡೆ ಎದೆದಿಂಬುಗಳಿಗೊರಗಿ
ಬೆಳ್ಳಿ ಶಲ್ಯ ಬಂಗಾರದೊಡವೆ
ಮಣಿಮಾಣಿಕ್ಯ ಪಚ್ಚೆ
ಆಕಾಶತುಂಬೆಲ್ಲ ಚೆಲ್ಲಾಪಿಲ್ಲಿ
ನಡುಹಗಲಲ್ಲೇ ಕಂಡ ಇಂದ್ರನವತಾರ
ಕಿಸಕ್ಕನೆ ನಕ್ಕೆ
ಉಕ್ಕುಕ್ಕಿ ಬರುವ ಮೋಡನೊರೆ
ವೈಯಾರಿಯರ ಬೆತ್ತಲೆ ಮುಚ್ಚಿ
ಮಾನ ಉಳಿಸಿ ಎಲ್ಲೆಲ್ಲೂ ಹಾಲ್ಗಡಲು
ಮ್ಯಾಟಿನಿ ಶೋ ಶುಭಂ
ಯಂತ್ರಪಕ್ಷಿ ಇಂದ್ರನೊಡ್ಡೋಲಗ ದಾಟಿ
ಹಾರುತಿದೆ ಮುಂದೆ ಮತ್ತೊಂದು ಶೋ–
*****