ಸಾವು ಮಾರಾಟಕ್ಕಿದೆ ಇಲ್ಲಿ
ಜಗದ ಮಾರುಕಟ್ಟೆಯಲ್ಲಿ
ತಕ್ಕಡಿಯ ಒಂದು ಬದಿ
ಹಸಿವು
ಕಲ್ಲಾಗಿದೆ
ಇನ್ನೊಂದು ಬದಿ
ಗ್ರೆನೇಡುಗಳು ಹಿಟ್ಟಿನ
ಮುದ್ದೆ!

ಹೊಟ್ಟೆಯೊಳಗಿಂದಲೇ ಬೆನ್ನು ಕಾಣುವ
ಸಣ್ಣ ಕಂದಮ್ಮಗಳ ಎದೆಯ
ಗೂಡಲ್ಲಿ
ಇನ್ನೂ ಜೀವವಿದೆ
ತೂರಿ
ಆಟವಾಡುತ್ತಿವೆ ಕೈ
ಬಾಂಬುಗಳನ್ನೇ ಚೆಂಡೆಂದು

ಬತ್ತಿದ ಮೊಲೆಯ ತಾಯಂದಿರು
ಬಂದೂಕುಗಳ ಹಿಡಿದು
ಒಲೆ ಹಚ್ಚಿದರೆ
ಅನ್ನದ ಡಬರಿಯಲಿ ತಮ್ಮದೇ
ಕೂಸುಗಳು
ಕುದಿಯುತ್ತಿವೆ ಕೊತ ಕೊತ
ಸಣ್ಣ ಕರುಳು, ಬೋಟಿ, ಖಲೀಜ

ಅಂಗಳದಿ ಅಪ್ಪಂದಿರು ರಾತ್ರಿ
ಯ ಚಳಿ ಕಾಯಿಸಲು
ಹುಡುಕಬೇಕಿಲ್ಲ
ಯಾವ ಹುಲ್ಲಿನ ಬಣವೆಯನ್ನೂ
ಹಾರುವ ವಿಮಾನಗಳು ಖಂಡಿತ
ಉದುರಿಸುತ್ತವೆ ಮಿಸೈಲು
ಬಾಂಬು
ಬೆಂಕಿ ಸಹಿತ

ರಕ್ತದ ರುಚಿ ಹೊತ್ತ
ಸಾವು
ತೂಗುವ ತಕ್ಕಡಿಗೆ
ಗೆದ್ದಲು ಹಿಡಿಯುವ ದಿನ
ದೂರವಿಲ್ಲ
ಸರತಿಯಲಿ ನಿಂತವರು
ನಾವೇ
ಕೊನೆಯಲ್ಲ!
*****