ಯಾರದು, ಯಾರದು, ಯಾರದು
ತಿಳಿಯಲು ಏತಕೆ ಬಾರದು?

ಗಂಧದ ಮರದಲಿ ನಂದದ ಪರಿಮಳ
ಲೇಪಿಸಿದವರಾರು?
ಮಂದಾರದ ಹೂಬಟ್ಟಲ ಬಂಧವ
ರೂಪಿಸಿದವರಾರು – ಗಿಡದಲಿ
ಛಾಪಿಸಿದವರಾರು?

ಬೆಟ್ಟದ ಮೈಯಲ್ಲೆಲ್ಲೋ ಸಂದಿಯ
ಇಟ್ಟ ಧೀರ ಯಾರು?
ಒಂದೊಂದೇ ಹನಿ ನೀರಿನಲಿ – ನದಿ
ಹರಿಸಿದವರು ಯಾರು – ಸಾಗರ
ತೆರೆಸಿದವರು ಯಾರು?

ಹತ್ತದ ಆರದ ಕೆಂಡದ ಉಂಡೆಯ
ಬಾನಿಗಿಟ್ಟರಾರು?
ಹತ್ತುವ ಆರುವ ಶಶಿಯನು ನಭದಲಿ
ಬಿತ್ತಿದವರು ಯಾರು – ಬೆಳೆಸಿ
ಸುತ್ತಿಸುವರು ಯಾರು?

ಯಾರಾದರೂ ನೀನಾಗಿರು ಗೂಢವೆ
ಶರಣು ನಿನಗೆ ನಾವು
ಕಾಣದೆ ಇದ್ದರು ಕಾಪಾಡುವ ಹೊಣೆ
ಹೊತ್ತಿಹ ಧಣಿ ನೀನು-ನಿನಗೆ
ಸಂತತ ಋಣಿ ನಾವು
*****