ಹಸುಮಗಳ ನೀಲಮ್ಮ ಬಸವಗ ಶರಣೆನ್ನ|
ನಸಲಿ ಮಾರಗದ ವಡಿಯಾಗ| ಈ ಶರಣವು ಮಾಡಿ|
ಹಸಿಗಿ ಬಾಗನ್ನಿ ಗರುಡಽವ ||೧||

ಹಕ್ಕಿ ಹಸಿಗೊಯ್ಯ ಕೋಗಿಲ ಪತ್ತಽಲೊಯ್ಯ|
ಅಕ್ಕ ನಾಗಮ್ಮ ಕತೀ ನಡಿಸ| ಈ ಸೋಬಾನಾ|
ಸಾಗನೂರವರ ಮನಿಯಾಗ ||೨||

ಆರಸರ ಹೆಂಡಽರ್‍ಯಾ ಅರವತ್ತಿನ ರಾಣ್ಯರ್‍ಯಾ|
ನೀಲವಽರಣ ಬಳಿಯವರ್‍ಯಾ| ನಮ್ಮವ್ವಗಳಿರ್‍ಯಾ|
ಬೇಗ ಸೋಬನಕ ಬರಽಬೇಕ ||೩||

ಗೌಡರ ಹೆಂಡರ್‍ಯಾ ಅರವತ್ತಿನ ರಾಣ್ಯಾರ್‍ಯಾ|
ನೀಲವಽರಣದ ಬಳಿಯವರ್‍ಯಾ| ನಮ್ಮವ್ವಗಳಿರ್‍ಯಾ|
ಬೇಗ ಸೋಬನಕ ಬರಽಬೇಕ ||೪||

ಹೆಂದಽರ ಮ್ಯಾಲಲ್ಲಿ ಜೋಡೆಡ್ಡು ಗಿಣಿ ಕೂತು|
ಪಂಕನಲ್ಲಾಡಿ ನಗತಾವ| ಅವು ಮಾತಾಡ್ಯಾವ|
ಅಕ್ಕ ಭಾವಾಗ ವರನಂದ ||೫||

ಕುಂಬೀಯನೆ ಮ್ಯಾಲ ಜೋಡೆಡ್ಡ ಗಿಣಿ ಕೂತು|
ಕಂಗನಲ್ಲಾಡಿ ನಗತಾವ| ಅವು ಮಾತಾಡ್ಯಾವ|
ತಂಗಿ ಮೈದುನಗ ವರನಂದ ||೬||

ಇಟ್ಟು ಹಾಡನೆಲ್ಲ ಒತ್ತಿ ಭರಣವ ತುಂಬಿ|
ವಜ್ಜರದ ಕೀಲಿ ಜಡಽದೇವ| ಈ ನಮ್ಮಽ ಹಾಡ|
ಸೋಬನಿದ್ದಲ್ಲಿ ತಗಽದೇವ ||೭||
*****

ಫಲಶೋಭನದ ಸಂಭ್ರಮವು ಇದರಲ್ಲಿ ವರ್ಣಿಸಲ್ಪಟ್ಟಿದೆ.

ಛಂದಸ್ಸು:- ತ್ರಿಪದಿ.

ಶಬ್ದ ಪ್ರಯೋಗಗಳು:- ನಸಲಿಮಾರಗ=ನೊಸಲಮಾರ್ಗ(?) ಅರವತ್ತಿನ ರಾಣ್ಯರ್‍ಯಾ=ದೊಡ್ಡ ಮನೆತನದ ಮೂಲಕ ಮನೆಗೆಲಸವು ಮುಗಿಯುವುದಕ್ಕೆ ತಡೆವಾಗುವುದರಿಂದ ಅರವೊತ್ತಿಗೆ ಸರವೊತ್ತಿಗೆ ಊಟ ಮಾಡುವರು. ಎಡ್ಡು=ಎರಡು. ಪಂಕನಲ್ಲಾಡಿ-ಪಕ್ಕಗಳನ್ನು ಅಲುಗಿಸಿ. ಕಂಗದಲ್ಲಾಡಿ=ಗರಿಗಳನ್ನು ಅದುರಿಸಿ. ವರ=ತಕ್ಕ. ಹೆಕ್ಕಿ ಹಸಿಗೊಯ್ಯ=ಹಕ್ಕಿಗಳಿರಾ ಸೇಸೆ ಎರೆಯಿರಿ. ಕತೀ ನಡಿಸು=ಕಾರ್ಯವನ್ನು ಸಾಗಿಸು.