ಹಿಮ್ಮಾಗಿಯ ಮಾಂದಳಿರು

ರಾಜ್ಯನೀಗಿ ಪಲಿತ ಮಾಗಿ
ನಡೆದ ವಾನಪ್ರಸ್ಥನಾಗಿ;
ಹೇಽಮಂತ ತಪಸ್ಸಾರ
ಚೈತ್ರ ಗಾದಿಗಿನ್ನೂ ಬಾರ;
ಅಂಥ ಸಂಽದಿಗ್ಧ ಸಮಯ.
ಆಳ್ವರಿಲ್ಲದಿಳೆಯ ಪರಿಯ-
ನೆಂತು ಪೇಳ್ವೆ? ಬಾನೊ ಬಯಲು,
ಶಿಶಿರಶರಣವಾದ ನೆಳಲು,
ದಹನನಿಪುಣ ಕಠಿನತಪನ,
ನೀರಸತರು ನಿಬಿಡ ವಿಪಿನ,
ಹಸುರ ಹೆಸರ ಕಾಣದಿರುವ
ನೆಲವು, ಕಜ್ಜವಿಲ್ಲದಲೆವ
ಅಲಸ ತುಂಟ ಬಂಟ ಗಾಳಿ-
ಇಂತಿಳೆ ನಿರ್ವೇದ ತಾಳಿ
ಒಂದು ಬೇನೆಯೊಳಗಿರಲ್ಕೆ;
ಅಚರಜೀವ ಸೇರಿರಲ್ಕೆ
ನಿದ್ದೆ ಚಿಪ್ಪ; ತೋಪಿನೊಳಗೆ,
ರಸವಿಹೀನ ಮಾವಿನೊಳಗೆ-
ಮಧುವಿನೊಲುಮೆಗನಸು ಸುಳಿದು
ಮರದ ಜಾಡ್ಯವನ್ನು ತಿವಿದು
ತನ್ನ ಹಾಸವೊಂದನಿಳಿಸಿ
ಮಾಯವಾದ ಪರಿಯ ನೆನೆಸಿ-
ತರಳ ತಳಿರ ಗೊಂಚಲೊಂದು,
ಒಂಟಿಯಾಗಿ, ನೋಡಲೊಂದು
ಚೋದ್ಯವಾಗಿ, ಕುಣಿಯುತಿತ್ತು.
ನೋಟ ಕಟ್ಟಿತೆನ್ನನು.

ಇಂತಾ ಜಡಲೋಕದಲ್ಲಿ,
ಸುಸ್ಥಿರ ಚಿರ ಶೂನ್ಯದಲ್ಲಿ,
ತನ್ನ ಹರುಷವೊಂದನರಿತು,
ಸುತ್ತಣಂದಿನಿರವ ಮರೆತು,
ದಿಟ್ಟ ಮುಗುದ ಮಗುವಿನಂತೆ
ಭಯದ ಲೇಶವಿಲ್ಲದಂತೆ,
ವನದ ನೀರಸತ್ವ ಹರಿವ
ತೀರ ಮುನ್ನ ಎದ್ದು ನಲಿವ
ತಳಿರ ತೊಂಗಲನ್ನು ನೋಡಿ
ಮನದೊಳೊಗೆದ ಭಾವಮೋಡಿ-
ಗಿಂತು ನಾನು ರೂಪುಗೊಟ್ಟು
ನುಡಿದೆ: “ಆವ ಪಂಥ ತೊಟ್ಟು,
ಕಿಸಲಯ ಶಿಶು, ಜನ್ಮವಡೆದೆ?
ಆರ ಆಣೆಯಿಂದ ಚಿಗಿದೆ?
ಆವ ಶಿವದ ಬೇಹುಗಾರ?
ಆವ ಕಣಸಿನೋಲೆಕಾರ?
ಆವ ಜೋಯಿಸವನು ಜಗದಿ
ಸಾರ ಬಂದೆ ನೀನು ಜವದಿ?
ಸುತ್ತ ಶೂನ್ಯ ಕಾಣದೇನು?
ಶ್ರಾಂತಮೌನ ಕೇಳದೇನು?
ಇಂಥ ತಮದ ಹೊರಳಿಯಲ್ಲಿ
ಎದ್ದು ಮುದ್ದು ನಗೆಯ ಚೆಲ್ಲಿ
ನವೋದಯದ ಕಣಿಯ ನೀನು
ಸಾರೆ ವ್ಯರ್ಥವಾಗದೇನು?
ಜೋಕೆ, ಜೋಕೆ, ಚೂತಡಿಂಭ,
ನಿನ್ನ ಕಂಡರಯ್ಯೊ ಎಂಬ
ಒಬ್ಬ ಕೂಡ ಇಲ್ಲದಿಂದು
ನೀನು ನನ್ನಿ ಬೆಳಕ ತಂದು
ತಮವ ಕೆಣಕೆ ಮುಳಿವುದೇನೊ?
ನಿನ್ನ ತುತ್ತುಗೊಂಬುದೇನೊ
ವನದ ನೀರಸತ್ವ?- ಜೋಕೆ!”
ಎಂದು ಮಡಿದೊಂದು ಭಯಕೆ
ನುಡಿಯ ನೀಡಿ ನಡೆದೆನು.

ಮರುದಿನ ನಾ ತೋಪಿನೊಳಗೆ
ಹೋಗುತಿರಲು, ಮರದ ಕಡೆಗೆ
ದೃಷ್ಟಿ ಹೊರಳೆ, ಚಕಿತನಾಗಿ
ಕಂಡೆ, ಸುರುವ ಸುಂಡಿ ಹೋಗಿ
ಜೋಲು ಬಿದ್ದ ಮಾಂಽದಳಿರ.
ಹುಟ್ಟೆ, ಅರಿಯದಿದ್ದ ಸ್ಥವಿರ
ಮಾವು, ಕಂದನಳಿವನರಿತು
ಕೊರಗುವಂತೆ ತೋರುತಿತ್ತು.
ಬಂಜೆಬಾಳೆ ತನಗೆ ನಿಯತಿ-
ನಿಯಮವೆಂದು ಇದ್ದ ಪ್ರಕೃತಿ
ಇಂದು ಸತ್ವವರಿತ ಕುತ್ತು
ವನದೊಳೆದ್ದು ಕಾಣುತಿತ್ತು.
ಅರಿತ ಶೂನ್ಯ ಮರೆತ ಶೂನ್ಯ-
ಕಿಂತ ಹೆಚ್ಚು ಭೀಮಶೂನ್ಯ-
ವಾಗಿ ಭಯವ ಬೀರುತಿತ್ತು.
ನನ್ನಿತೋರೆ ತನುವ ತೆತ್ತು
ತಾರಿ ಆರಿಹೋದ ಚಿಗುರ
ಕಂಡು ನಾನು, ದುಗುಡ ಹಗುರ-
ವಾಗಲೊಂದು ಬಗೆಯ ನಗೆಯ
ನಕ್ಕು- ಭಾವವೇನೊ ಅರಿಯ-
ಲಾರೆ; ಶಕುನ ಫಲಿಸಿತೆಂದೊ,
ನಿಯತಿ ನೀತಿ ಇಂತೆ ಎಂದೊ,
ಇಂಥ ಅಳಲ ನುಡಿಯೆ ನಗೆಯೆ
ತಕ್ಕುದೆಂದೊ, ಏನೊ ಅರಿಯೆ-
ಅಂತು ನಕ್ಕು, ತಳಿರಿಗೊಂದು
ಚರಮಗೀತ ಹಾಡಲೆಂದು
ಬಯಸಿ, ಇಂತು ನುಡಿದೆ ನಾನು:

“ಹೇಽ ಮುಕ್ತ ಚೂತಸೂನು,
ಅರಿವುಗೆಟ್ಟು ಭ್ರಾಂತವಾದ,
ಕರಣವುಡುಗಿ ಶ್ರಾಂತವಾದ
ಉದಾಸೀನ ಲೋಕದಲ್ಲಿ,
ನೀರಸತ್ವದುಲ್ಬದಲ್ಲಿ
ಮಧುವು ರೂಪುಗೊಂಬ ಶುಭದ,
ನವೋದಯವು ಬೆಳೆವ ಶಿವದ,
ಸುದ್ದಿ ಸಾರೆ ತುಡಿದುಕೊಂಡು,
ಸುಪ್ತವನದಿ ಜನುಮಗೊಂಡು-

“ವಿಷಯ ಸುಖದ ಅಮಲಿನಲ್ಲೊ,
ಮುದದ ನೆಳಲ ಬೇಟೆಯಲ್ಲೊ,
ಭವದಿ ತೊಳಲಿದಳಲಿನಲ್ಲೊ,
ಅಜ್ಞಾನದ ಜಾಡ್ಯದಲ್ಲೊ,
ಬಳಲಿ ಕೆಡೆದ ಲೋಕದೊಳಗೆ –
ತಾನು ಕಂಡ ಶಿವದ ನೆಲೆಗೆ
ಪ್ರಗತಿರಥವನೆಳೆಯೆ ತುಡಿದು
ತ್ಯಾಗ ತಪದ ಹಗ್ಗ ಹಿಡಿದು
ಭೇರಿ ಹೊಡೆದು ನಿಲ್ಲುವ ಧೀರ
ಕರ್ಮಶೂರ ಕಣಸುಗಾರ
ಆತ್ಮವಂತ ಯೋಗಿಯಂತೆ,
ತಪೋವಂತ ಚಾಗಿಯಂತೆ –

“ದೂರ ದೂರ ದೂರದಲ್ಲಿ
ಪುಣ್ಯಲಬ್ಧ ದೃಷ್ಟಿಯಲ್ಲಿ
ಕಂಡ ಕಣಸ, ಮಂದಿ ಮುಂದು-
ವರಿದು ಕಾಂಬ ಮುನ್ನ, `ಇಂದು
ಭಾವಗೀತಗಳಲಿ ಹಾಡಿ
ತೋರ್ಪೆ’ನೆಂದು ಪಂಥ ಹೂಡಿ
ಭಾವಸೋಮಮತ್ತನಾಗಿ
ಬರುವ ಕವಿಗೆ ಸಾಟಿಯಾಗಿ-

“ದ್ವೇಷ ರಾಗ ರತಿಯ ನೆರೆಯ,
ಅಹಂಕಾರಕೆಸರ ಹೊರೆಯ
ಬಾಳಹೊನಲ ಸನಿಯಕಂದು
ಹಾದಿಕಾರನಾಗಿ ಬಂದು,
ತನ್ನ ತೃಷೆಯ ತಣಿಸೆ ಬಯಸಿ,
ಕೆಸರ ಕಂಡು ಕುಡಿಯ ಹೇಸಿ,
‘ಹೊನಲು ತಿಳಿದ ಮೇಲೆ ಬರುವ’
ಎಂದು ದೇವ ದಾಟಿ ನಡೆವ
ಒಂದು ಗಳಿಗೆಯೊಳಗೆ ಜಲದಿ
ಸುಳಿವ ಅವನ ನೆಳಲ ತೆರದಿ-

“ಎನ್ನ ಅರಿವ ಬಯಲಿನೊಳಗೆ
ಭಯದ ಕಾರಮುಗಿಲು ಮಸಗೆ,
ಆಸೆ ಪವನ ಬೀಸುತಿರಲು,
ಮುದದ ವಿಂಚು ಮಿಂಚುತಿರಲು,
ಅಳಲ ಗುಡುಗು ಗುಡುಗುತಿರಲು,
ಕ್ರಾಂತಿ ಶಾಂತಿಯಪ್ಪ ಮೊದಲು,
ನನ್ನ ಕವಿಯು ಹುಚ್ಚನಂತೆ
ತರುವ ಭಾವದೀಪದಂತೆ-

“ನೀರಸಾಮ್ರವನದ ಕವಿಯೆ,
ಸುಗ್ಗಿಬಿಂಬ, ಚೈತ್ರಶಿಖಿಯೆ,
ಒಂದು ಗಳಿಗೆ ಮೌನದಲ್ಲಿ
ಹಾಡುಗರೆದು, ತಿಮಿರದಲ್ಲಿ
ಬೆಳಕ ಸುಳಿಸಿ, ಶೂನ್ಯದಲ್ಲಿ
ಸುಗ್ಗಿ ಚಾಯೆ ತೋರಿ- ಇಲ್ಲಿ
ಕೊನೆಗೆ ನೊಂದು ನಂದಿಹೋದೆ,
ತಾರಿ ಆರಿ ಮಾಯವಾದೆ.
ಹೇ ರಸಾಲತರುಕಿಶೋರ,
ನನ್ನಿ ಕಾರ, ಕರ್ಮವೀರ,
ಇಂದು ನಿನ್ನ ಭೇರಿ ಹೊಳಲ
ಮುಂದೆ ಕೇಳಿ, ನಿದ್ದೆ ಇರುಳ
ಮುಸುಕನೊಗೆದು, ಜಾಡ್ಯ ಸಿಗಿದು,
ನಿನ್ನ ಗುಡಿಯನೆತ್ತಿ ಹಿಡಿದು,
ನೀನು ಕಂಡ ಕಣಸ ಕಂಡು,
ನಿನ್ನ ಹಾಡ ಹಾಡಿಕೊಂಡು,
ನವೋದಯದ ಜಯಕೆ ನಡೆವ
ವನವೆ ಇಂದು ನಿನ್ನ ಅಳಿವ
ತನ್ನ ಜಾಡ್ಯ ಮೌಢ್ಯದೊಳಗೆ
ಸಾಧಿಸಿಹುದು-ಗೊತ್ತು ನನಗೆ.
ಆದರೇನು,
ಆಮ್ರಸೂನು,
ನಿನ್ನ ಬಾಳು ಸಾರ್ಥ ಬಾಳು,
ಸಾವು ಬದುಕಿಗಿಂತ ಮೇಲು.
ನಿನ್ನ ಹುಟ್ಟಿನಿಂದ ವನದ
ಬಂಜೆಬಾಳು ಬೆಸಲೆಯಾಯ್ತು;
ನಿನ್ನ ಸಾವಿನಿಂದ ಜಗದ
ಮಾಗಿ ಸೆರೆಯು ಸಡಿಲವಾಯ್ತು;
ಇಂದು ನೀನು ಕೆಡೆದ ಇರುಳೆ
ಸುಪ್ತವನದ ಉದಯವಾಯ್ತು;
ಇಂದು ಬಿಗಿದ ನಿನ್ನ ಕೊರಳೆ
ನವೋದಯದ ಕಹಳೆಯಾಯ್ತು.
ಸೋತು ಗೆದ್ದ ಧೀರ ನೀನು!
ಸತ್ತು ಬದುಕಿದಮರ ನೀನು!
ಧನ್ಯ ನೀನು,
ಮಾನ್ಯ ನೀನು!”-

ಎಂದಾ ಜಡಲೋಕದಲ್ಲಿ
ಜಾಡ್ಯದೊಡನೆ ಸೆಣಸಿ ಹೋದ,
ಸುಸ್ಥಿರ ಚಿರ ಶೂನ್ಯದಲ್ಲಿ
ನಚ್ಚನೂಡಿ ನಂದಿಹೋದ,
ತಳಿರ ತೊಂಗಲನ್ನು ನೋಡಿ,
ಮನದೊಳೊಗೆದ ಭಾವ ಮೋಡಿ-
ಗಿಂತು ನಾನು ನುಡಿಯ ನೀಡಿ,
ಚರಮಗೀತವೊಂದ ಹಾಡಿ,

ಮನೆಗೆ ನಡೆದೆ ಮೆಲ್ಲನೆ-
ಮನದಿ ಮರುಗಿ ಮಣ್ಣನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಸುಮಗಳಽ ನೀಲಮ್ಮ
Next post ಕ್ಷಮಾಗುಣ

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…