ಸುವರ್ಣ ಸ್ವಾತಂತ್ರ್ಯ

ಭಾರತ ದೇಶದ ಸ್ವಾತಂತ್ರ್ಯೋತ್ಸವದ
ಸುವರ್ಣ ಹಬ್ಬವ ಮಾಡೋಣ
ಬನ್ನಿರಿ ಗೆಳೆಯರೆ ದೇಶ ಬಾಂಧವರೆ
ಸ್ವಾತಂತ್ರ್ಯವ ಕೊಂಡಾಡೋಣ

ತಿಲಕ್ ಗೋಖಲೆ ಮಹಾತ್ಮ ಗಾಂಧಿ
ಸುಭಾಷ್ ವಲ್ಲಭ ಜವಾಹರ
ಸಾವಿರ ಸಾವಿರ ದೇಶಭಕ್ತ ಜನ
ಹೋರಾಡುತ ಗಳಿಸಿದಾ ವರ

ಎಷ್ಟೋ ಜನ ಪ್ರಾಣಗಳನು ತೆತ್ತರೊ
ತಾಯಿಯ ಪಾದಕ್ಕೆ ನೈವೇದ್ಯ
ರಕ್ತದಿ ಬರೆದರೊ ತ್ಯಾಗದ ಕತೆಗಳ
ಎಲರಿಗೂ ವಂದನೆಯಾದ್ಯ

ಬ್ರಿಟಿಷರ ಬೂಟಿನ ತುಳಿತಕ್ಕೆ ಸಿಕ್ಕು
ಜೈಲಲಿ ಕೊಳೆತರೊ ಎಷ್ಟೊ ಜನಾ
ಹೆಂಡಿರು ಮಕ್ಕಳ ಮನೆಗಳ ತೊರೆದು
ನರಳಿ ಗೈದರೋ ಬಲಿದಾನ

ಅಂಥ ಎಲ್ಲ ಸ್ವಾತಂತ್ರ್ಯ ವೀರರಿಗೆ
ಅಶ್ರುತರ್ಪಣವ ಕೊಡಬೇಕು
ಅವರು ಕೊಟ್ಟ ಸ್ವಾತಂತ್ರ್ಯ ಸಂಪದವ
ಎಚ್ಚರದಲಿ ಬಳಸಲು ಬೇಕು

ಐವತ್ತು ವರುಷ ಬಂಗಾರ ಹರುಷ
ಕಳೆದುದು ಪಡೆದುದು ಏನೇನು
ಬಂಗಾರವೇನು ಬೆಳ್ಳಿಯೋ ಮಣ್ಣೋ
ಗಳಿಸಿದ್ದು ಸಾಧಿಸಿದ್ದೇನು
***

ಪ್ರತೀವರ್ಷವೂ ಮಾಡುತ ಬಂದೆವು
ಸ್ವಾತಂತ್ರ್ಯೋತ್ಸವ ಹಬ್ಬ
ಪ್ರತೀ ಸಾರಿಯು ವಿಷಾದದಿಂದಲೇ
ಕಂಡೆವು ಕವಿದಿಹ ಮಬ್ಬ

ಕಛೇರಿ ಶಾಲಾ ವಿದ್ಯಾಲಯಗಳು
ಮಕ್ಕಳ ಮೆರವಣಿಗೆಯಲಿ
ಧ್ವಜವ ಹಾರಿಸುವ ನಾಟಕ ಮಾಡುತ
ಕಳೆದೆವು ವರ್ಷಗಳಲ್ಲಿ

ಪ್ರತೀ ವರ್ಷವೂ ಕೇಳುತ ಬಂದೆವು
ಯಾರಿಗೆ ಬಂತೀ ಸ್ವಾತಂತ್ರ್ಯ
ದೀನ ದಲಿತರಿಗೆ ನೋವು ನರಳಿಕೆಯು
ಕೆಲವರಿಗಷ್ಟೇ ಸ್ವಾತಂತ್ರ್ಯ

ಘಟಸರ್ಪಗಳನು ಇಲಿ ಕಪ್ಪೆಗಳನು
ತೋಳಗಳನ್ನೂ ಕುರಿಗಳನು
ಒಂದೆ ಕೋಣೆಯಲಿ ಕೂಡಿ ಹಾಕಿದೊಲು
ಮಾಡಲು ಸ್ವತಂತ್ರ ದೇಶವನು

ಆಕಳು ಮೊಲಗಳ ಹುಲಿಸಿಂಹಗಳನು
ಒಂದೇ ಕಣದಲಿ ಹಾಕಿ
ಕೂಡಿ ಬಾಳಿ ಸಹ ಜೀವನ ಎನ್ನುತ
ತಂದರು ಸ್ವತಂತ್ರ ಬೆರಕಿ

ಕೋಟಿ ಕೋಟಿಗಳ ಕಬಳಿಸುವಂಥಾ
ಅಧಿಕೃತ ದರೋಡೆಯವರ
ಪ್ರಜಾರಾಜ್ಯವಿದು ಸೃಷ್ಟಿ ಮಾಡುತಿದೆ
ದೇಶ ಕೊಳ್ಳೆ ಹೊಡೆಯುವವರ

ಹಣವುಳ್ಳವರಿಗೆ ಸೇವೆಗೆ ನಿಂತಿವೆ
ಖಾಕೀ ಬಿಳಿ ಕರಿ ಡ್ರೆಸ್ಸು
ಹಣವಿಲ್ಲದವರ ಪಾಲಿಗೆ ಎಲ್ಲಾ
ಕಾನೂನ್ ವ್ಯವಸ್ಥೆ ಟಿಸ್ಸು

ಕಾಳಸಂತೆಗಳು ಕಪ್ಪು ದಂಧೆಗಳು
ರಾಜಾರೋಷದಿ ನಡೆದಾವೆ
ಗೂಂಡಾದಾದರು ರಾಜಕಾರಣವು
ಕೈಕೈ ಹಿಡಿದೇ ಸಾಗ್ಯಾವೆ

ಬಂಗಲೆ ಬಿಲ್ಡಿಂಗ್ ಬೆಳೆದೇ ಬೆಳೆದಿವೆ
ರಕ್ಕಸ ಬೊಜ್ಜಿನ ನಗರಗಳು
ಗೂಡೇ ಇಲ್ಲದೆ ಗೋಳಿಡುತ್ತಿದ್ದರು
ಬಡವರು ಕೊಚ್ಚೆಯ ಪ್ರಾಣಿಗಳು

ನೌಕರಿಗಳದೇ ಮಾರ್ಕೆಟ್ ಇರುವುದು
ಲಕ್ಷಲಕ್ಷಗಳ ವ್ಯಾಪಾರ
ಮದುವೆಯ ಮಾರ್ಕೆಟ್ ಮೆರೆಯುತ್ತಿರುವುದು
ಲಕ್ಷಗಳ ಬೆಲೆಯ ಗಂಡುವರ

ನೌಕರಿದಾರರ ಗುರಿಯು ಗಳಿಸುವುದು
ಅಪ್ರಮಾಣಿಕತೆ ದಾರಿ
ಎಷ್ಟೇ ಸುರಿದರೂ ಹೆಣ್ಣಿಗೆ ಉಳಿವುದು
ಹಿಂಸೆಯ ಬೆಂಕಿಯ ದಾರಿ

ಜಾತಿ ಧರ್ಮಗಳು ಮೌಢ್ಯಾಚಾರ
ಹಳೆಯ ಭೂತಗಳು ಬೆಳೆಯುತಿವೆ
ಹೊಸಯುಗದಿ ಹೊಸುತು ರೂಪವ ತಳೆದಿವೆ
ಜನಗಳ ಮತಿಯನು ಮಸಳಿಸಿವೆ

ಅಯೋಧ್ಯೆಯಲ್ಲೋ ಕಾಶ್ಮೀರದಲ್ಲೋ
ಕೆಂಪು ಚಿತ್ತಾರಗಳು ಬರೆದಾವೋ
ಬೊಂಬಾಯಿಯಲ್ಲೋ ಅಸ್ಸಾಮಿನಲ್ಲೋ
ಬಾಂಬು ರಂಗೋಲಿ ಹಾಕ್ಯಾವೋ

ಕೋಟಿ ಕೋಟಿಗಳ ಹಗರಣಗಳಲೂ
ದೇಶದ ಮುನ್ನಡೆ ಅಂತೀವೋ
ಸುವರ್ಣ ಸ್ವತಂತ್ರ ಭಾರತದಲ್ಲಿ
ತಿಪ್ಪೆಯ ಮ್ಯಾಲೇ ಕುಂತೀವೋ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುಡುಗಿ
Next post ಅನುಭವಿಸಬೇಕು

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…