ಸಂಜೆ ಹಣ್ಣಾಗಿ ಬಿಸಿಲು ಹೊನ್ನಾಗಿ
ಕರಿಮುಗಿಲು ತುದಿ ಮಿಂಚಿ ಜರಿಸೀರೆಯಾಗಿ
ನೀಲಿ ನೀರಲಿ ತೇಲಿ ಚಂದ್ರಾಮ ಬಂದ
ಬಸವಳಿದ ಲೋಕಕ್ಕೆ ಹೊಸ ಚೆಲುವ ತಂದ

ಕಣ್ಣು ಹಾರಿಸಿ ಸೊಕ್ಕಿ ನಕ್ಕವೋ ಚುಕ್ಕಿ
ನಭದಲ್ಲಿ ತೇಲಿದವು ಹಾಯಾಗಿ ಹಕ್ಕಿ;
ಕಡಲ ಮೈ ಮೇಲೆ ಅಲೆಸಾಲು ಮಾಲೆ
ಕಣ್ಣನ್ನೆ ಸೋಲಿಸಿ ಕಾಮಧನು ಲೀಲೆ

ಮರಮರದಿ ಹಕ್ಕಿ, ಒಳಗೆ ಸುಖ ಉಕ್ಕಿ
ಮಾತಿರದ ಸಂಗೀತ ಗಾಳಿಯಲಿ ಬಿತ್ತಿ
ಎಲ್ಲೆಲ್ಲು ದನಿಯೇ ಜೇನಿನ ಹನಿಯೇ
ಇಂಚರದ ಗಣಿಯಾಯ್ತು ಗಳಿಗೆಯಲಿ ಇಳೆಯೇ

ಯಾವ ಕೈ ಈ ಚೆಲುವ ಬರೆಯಿತೋ ಏನೋ
ಈ ಚೆಲುವಿನಡಿಗಿರುವ ಋತದ ಪರಿಯೇನೋ;
ಎಲೆ ಹೂವು ಮರ ಚಿಗುರು ಮಾತ್ರ ಪ್ರತ್ಯಕ್ಷ
ಇದನೆತ್ತಿ ನಿಲಿಸಿದಾ ಬೇರು ಅದೃಶ್ಶ!
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)