ಬರವಣಿಗೆಯ ಮೊದಲ
ಅಕ್ಷರ
ಗುರುವಿಲ್ಲದೇ ಕಲಿತ
ಮಂತ್ರ
ತಿದ್ದುವ
ಉರು ಹೊಡೆಯುವ
ಮರೆಯುವ
ಮಾತೇ ಇಲ್ಲ

ಸೊನ್ನೆ
ಒಂದು ಬಿಡಿ
ಹತ್ತು ಜೊತೆ
ನೂರು ಮಾತು

ಸೊನ್ನೆ
ಇರುವಷ್ಟು ಮುಂದೆ
ಹೆಚ್ಚು ತಾಕತ್ತು ಹಿಂದೆ

ಭೂಮಿ
ಚುಕ್ಕಿ
ಸೂರ್ಯ
ಸೊನ್ನೆಯ ಘನವೀರ್ಯ

ಸೊನ್ನೆ
ಜೀವದ ಆದಿ
ಸಂಭ್ರಮದ ತಾಣ
ಸೃಷ್ಟಿಯ ನಿರಂತರ
ಕುಲುಮೆ

ಬಿಂದು
ಕೂಡಿ
ಕಳೆದರೂ ಬದಲಾಗದು
ಸೊನ್ನೆ
ಅಂಕೆ
ಬೇರಾದರೂ
ಒಂದರಿಂದ ಒಂಭತ್ತು

ಕೃಷ್ಣನ ಬಾಯೊಳಗಿನ
ಬ್ರಹ್ಮಾಂಡ
ನೀರ ಮೇಲಣ
ಗುಳ್ಳೆ
ಅಲ್ಲಮನ ಸಂಪಾದನೆ

ಸರಳ ರೇಖೆಯೇ
ಬಾಗಿ
ಸುತ್ತು ಬಂದರೆ
ವೃತ್ತ

ಬೆಡಗಿನ
ಬೆಳಕಿನ ಚಿತ್ತ
*****