ನಾನು ನಾನು ಎಂಬ ಮಾಯೆ
ಏಳುವುದೆಲ್ಲಿಂದ?
ಎಲ್ಲವನೂ ಅಲ್ಲಾಡಿಸಿ
ಹಾಯುವುದೆಲ್ಲಿಂದ?
ಬುದ್ಧಿಯೇ ವಿದ್ಯೆಯೇ
ಜೀವ ಹೊದ್ದ ನಿದ್ದೆಯೇ,
ನೆಲ ಜಲ ಉರಿ ಗಾಳಿಯಿಂದ
ಎದ್ದು ಬಂದ ಸುದ್ದಿಯೇ?
ನಾನು ಎಂಬ ಹಮ್ಮಿಗೆ
ತನ್ನದೆ ನೆಲೆ ಎಲ್ಲಿ?
ಯಾವುದೊ ಬೆಳಕನು ಕನ್ನಡಿ
ಪ್ರತಿಫಲಿಸಿದೆ ಇಲ್ಲಿ.
ನಾನೇ ಆ ಬೆಳಕೇ
ಬೆಳಕಿನ ಕಿರಿ ತುಣುಕೇ?
ನಾ ಹಾಯಲೇಬೇಕು ನನ್ನ
ಮೂಲದ ನಿಜ ಬಲಕೆ.
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.