ಯಾರು ಏನಂದರೇನು
ಯಾರಿಗೆ ಹೇಗಿದ್ದರೇನು
ಅವರವರ ಮಗು ಅವರಿಗೇ ಚೆನ್ನ
ಪುಟಿಕಿಟ್ಟ ಚೊಕ್ಕ ಚಿನ್ನ

ಮೂಗು ಮೊಂಡಾಗಿದೆಯೆಂದಿರಾ?
ಬೇಟೆಗಾರನ ಕೈಯ ಬಾಣ ಜೋಕೆ

ಕಣ್ಣು ಗುಲಗುಂಜಿಯೇ?
ದೇವರ ಮುಂದೆ ಹಚ್ಚಿಟ್ಟ ದೀಪ
ದೂರವಿರಿ

ನಕ್ಕರೆ ಭಯವೇತಕೆ?
ಮೊಗ್ಗು ಬಿರಿದರೆ ಹೂವ
ಮುಡಿದುಕೊ

ಅತ್ತರೆ ಕೆರೆ ಕೋಡಿಬಿತ್ತೆ?
ಸ್ವಾತಿ ಮುತ್ತುಗಳ ಸುರಿಮಳೆಯದು
ಬೊಗಸೆಯೊಡ್ಡು

ಮೈ ಬಣ್ಣ ಯರೆ ಮಣ್ಣೆ?
ಶ್ರೀ ಕೃಷ್ಣನ ರೂಪ ಇವನಲ್ವೆ
ಮಂಕೇ ತಿಳಿಲಿಲ್ವೆ

ಎತ್ತಿ ಮುದ್ದಾಡು!
*****