ಮೊನ್ನೆ Referenceಗೆಂದು Library ಹೊಕ್ಕಾಗ
ಫುಸ್ತಕಗಳು ಮೋಕ್ಷಗೊಂಡವರಂತೆ
ಅವುಗಳ ಮುಳುಮುಳು ಧ್ವನಿಕೇಳಿ
ಚಕಿತಳಾದೆ.

“ಬನ್ನಿ ಬನ್ನಿ ನಿಮಗೆ ಕಿವಿಗಳಿದ್ದರೆ
ಅವಕ್ಕೊಂದು ಆತ್ಮ ಇದ್ದರೆ
ಆತ್ಮಕ್ಕೂ ಒಂದು ಕಣ್ಣು ಇದ್ದರೆ, – ಕ್ಷಮಿಸಿ
ನಮ್ಮ ಧ್ವನಿ ಕೇಳಬೇಕೆಂದಿದ್ದರೆ ಬನ್ನಿ
ನಮ್ಮ ಧೂಳು ತುಂಬಿದ ಕಪಾಟಿನರಮನೆಗೆ”-
ಎನ್ನಬೇಕೆ ಅವು.

‘ಸಮಯ ಇಲ್ಲ’ – ನುಣುಚಿಕೊಳ್ಳದಿರಿ
ಗೊತ್ತು ಟಿ.ವಿ. ನೋಡಲೂ ನಿಮಗೆ
ಸಮಯ ಇಲ್ಲೆಂದು, ಪಾಪ!
ಮುಳುಗಿರಬೇಕು ಹಣಗಳಿಸಿ
ಕಾರು ಬಂಗ್ಲೋ ಕೊಂಡು ಆಳುಗಳನಿಟ್ಟುಕೊಳ್ಳಲು.

ನಿಮ್ಮ ಕಣ್ಣುಗಳಲಿ ನಾವಿದ್ದರೂ
ನೀವೇ ಕುರುಡಾಗುತ್ತಿರುವಿರಿ
ನಿಮ್ಮ ತಲೆಗಳಲಿ ನಾವು ಬರಬೇಕೆಂದರೂ
ನೀವೇ ದಡ್ಡರಾಗಿ ಬಿಸಿಲುಗುದುರೆಯ ಬೆನ್ನುಹತ್ತಿ
ಹಳ್ಳ ಕೆರೆಗೆ ಬೀಳುತ್ತಿರುವಿರಿ.

ಮೂಲೆಯಲಿ ಬಿದ್ದಿದ್ದರೆ ರದ್ದಿಪುಸ್ತಕಗಳು
ನೀವು ಓದತೊಡಗಿದರೆ
ಜ್ಞಾನಭಂಡಾರಿಗಳು ನಾವು
ಎಷ್ಟೊಂದು ದಿನಸಿಗಳು ನಮ್ಮಲ್ಲಿ ನೋಡಿ
ನೋಡಿದ್ದೆಲ್ಲ ಸಿಗುವ ಕೇಳಿದ್ದೆಲ್ಲಾ ಕೊಡುವ
ನಮಗೆ ಲಕ್ವಾ ಹೊಡೆಸದಿರಿ.

ಹುಳಹುಪ್ಪಡಿಗಳಾಡಲು ಪ್ರಶಸ್ಥ ಸ್ಥಳಮಾಡಿ
ಗಾಳಿಬೆಳಕಿಲ್ಲದ ಕೋಣೆಗೆ ನೂಕಿ
ಜೇಡರ ಹುಳಗಳ ಸ್ನೇಹಿತರಾಗಿ ಮಾಡಿ
ಕಣ್ಣೀರು ಹಾಕದಂತೆ ಮಾಡದಿರಿ
ನಮಗೆ ಬೇಕೊಂದು
ನಿಮ್ಮ ಸ್ನೇಹದ ಸ್ಪರ್ಶ, ಉಸಿರು.

‘ಮತ್ತೆ ಬರುವೆ’ ಎಂದೆ.
ನಮ್ಮ ತೊಳಲಾಟಕೆ ಬೇಸರಿಸಿದಿರಾ!
ಆದರೂ ನಿಮ್ಮನ್ನು ಕ್ಷಮಿಸುವದಿಲ್ಲ –
ಹೋಗಿ ನಮ್ಮ ಸ್ನೇಹಿತರು ಬಂದಿದ್ದಾರಲ್ಲಿ
(ಪುಸ್ತಕ) ಮೇಳದಲ್ಲಿ.
ವಸಂತ ಋತುವಿನ ಸಂಭ್ರಮದಂತೆ
ದಾಂಗುಡಿ ಇಟ್ಟಿದ್ದಾರಲ್ಲಿ.

‘ಚಿವುಟದಿರಿ ಅವುಗಳನು
ಕಳಿಸದಿರಿ ಮತ್ತೆ ಇಲ್ಲಿ
ಒಂದಿಷ್ಟಾದರೂ ಪ್ರೀತಿ ವಾತ್ಸಲ್ಯ ಕೊಡಿ
ನಾವು ನಿಮಗೆ ಏನೆಲ್ಲ ಕೊಟ್ಟೇವು’

ತಲೆಬಾಗಿ ವಂದಿಸಿದೆ,
ಹಾರೈಸಿದವು.
*****

Latest posts by ಲತಾ ಗುತ್ತಿ (see all)