ಬೇಗಡೆ ಬೇಗಡೆ!
ಯಾವಾಗ ಬರುವಿ ನಮ್ ಕಡೆ?
ರಾಮನ ಮಕುಟದ ಬೇಗಡೆ
ಕೃಷ್ಣನ ಕಿರೀಟದ ಬೇಗಡೆ

ಬೆಳ್ಳಂಬೆಳಗೇ ಬೆಳ್ಳಿಯ ಹಾಗೆ
ಬೆಳಗುವ ಬಿಳಿಯ ಬೇಗಡೆ
ಸೂರ್ಯೋದಯಕೆ ಚಿನ್ನದ ಹಾಗೆ
ಮಿರುಗುವ ಕೆಂಪಿನ ಬೇಗಡೆ

ಸೀತೆಯ ಮನಸನು ಆಕರ್ಷಿಸಿದ
ಮಾಯಾಜಿಂಕೆಯ ಬೇಗಡೆ
ದ್ರೌಪದಿ ಸೀರೆಯ ಅಕ್ಷಯದಂಚಿನ
ಜರಿಯಂತಿರುವ ಬೇಗಡೆ

ನಮ್ಮಯ ಪುಸ್ತಕದೊಳಗೊಂದು ಚೂರು
ಇದ್ದರೆ ಸಾಕು ಬೇಗಡೆ
ಚಿನ್ನವು ಬೇಡ ಬೆಳ್ಳಿಯು ಬೇಡ
ನಮಗೆ ಬೇಕಾದ್ದು ಬೇಗಡೆ!
*****