Home / ಕವನ / ಕವಿತೆ / ಅಮೃತ ಸ್ವಾತಂತ್ರ್‍ಯ

ಅಮೃತ ಸ್ವಾತಂತ್ರ್‍ಯ

ಗಳಿಸಿಕೊಂಡಿಹೆವಿಂದು ಸ್ವಾತಂತ್ರ್‍ಯ ಭಾಗ್ಯವನು
ಉಳಿಸಿಕೊಳ್ಳುವೆವೇನು ಅದನು ಮುಂದಿನ್ನು?

ಜಾತಿ ಮತ ಪಂಥಗಳ ಭೇದಗಳನೆ ಹಿಡಿದು,
ರೀತಿ ನೀತಿಯ ತೊರೆದು, ಗುಣಕೆ ಮನ್ನಣೆ ತಡೆದು,
ಭೀತಿಯನ್ನೊಡ್ಡಿ ಜನತೆಯ ಹಕ್ಕುಗಳ ಕಡಿವ
ಸರ್ವಾಧಿಕಾರ ಬರೆ ಸ್ವಾತಂತ್ರ್‍ಯವೆ?

ಬಡವ ಬಲ್ಲಿದನೆಂಬ ಭೇದಗಳು ಇನ್ನುಳಿಯೆ
ಅವರಿಬ್ಬರೊಳದ್ವೇಷದುರಿ ಹೊತ್ತಿ ಬಲ್‌ಬೆಳೆಯೆ
ನಾಡೊಳು ಅಶಾಂತಿ ಅಂತಃಕಲಹಗಳು ಮೊಳೆಯೆ-
ಕಾದಾಡುವಾ ಹಕ್ಕೆ ಸ್ವಾತಂತ್ರ್‍ಯವೆ?

ಅರೆಹೊಟ್ಟೆ ತಿನ್ನುವುದೆ ನಿತ್ಯನಿಯಮವದಾಗೆ
ಇನ್ನು ಮಾರದೆ ಉಳಿಯೆ ಬಡತನದ ಬಿರುಬೇಗೆ
ಊರು ಕೇರಿಗಳೆಲ್ಲ ಭಿಕ್ಷುಕರ ಬೀಡಾಗೆ
ಸಾವು ಬದುಕಿನ ನರಕ ಸ್ವಾತಂತ್ರ್‍ಯವೆ?

ನಾಡ ಮಕ್ಕಳು ಮಂದಿ ಅಜ್ಞಾನದಲಿ ಮುಳುಗಿ
ಎಲ್ಲೊ ಹಲಕೆಲರು ಪಂಡಿತರೆನಿಸಿ ಬೆಳಗಿ
ಸ್ವಾರ್ಥಸಾಧಕರ ಪಡೆ ನಾಡೆಲ್ಲ ತಿರುಗುತಿರೆ
ಅವರ ತಾಳಕೆ ಕುಣಿಯೆ ಸ್ವಾತಂತ್ರ್‍ಯವೆ?

ಸಾಮ್ಯವಾದದ ಹೆಸರ ಹಲಗೆಯನು ಮುಂದಿಟ್ಟು
ವಿಜ್ಞಾನ ಯುಗವೆಂದು ಧರ್ಮವನು ಕಟ್ಟಿಟ್ಟು
ಪ್ರಾಚೀನ ಸಂಸ್ಕೃತಿಯ ಸುಟ್ಟು ಕರಿಬೊಟ್ಟಿಟ್ಟು
ಮುಂದುವರಿಯುವೆವೆನಲು ಸ್ವಾತಂತ್ರ್‍ಯವೆ?

ನಮ್ಮ ನಡೆ ನುಡಿ ನೋಟ ನಮ್ಮ ನಯ ನೀತಿ ನೆಲೆ
ನಮ್ಮ ನಾಡಿನ ಜ್ಞಾನ ಭಂಡಾರದತುಳ ಬೆಲೆ
ಧರ್ಮಬಾಹಿರ ಯಂತ್ರಜೀವನದಿನಾಗೆ ಕೊಲೆ
‘ನಾವು ನಾವಲ್ಲದಿಹ’ ಬದುಕು ಸ್ವಾತಂತ್ರ್‍ಯವೆ?

ತನ್ನ ನಂಬಿದ ಬೆಳಕ ಹಿಡಿದು ನಿಲಲಾಗದಿರೆ
ತನ್ನ ಕಾಣ್ಕೆಯ ಸತ್ಯ ನುಡಿಯಲನುವಿಲ್ಲದಿರೆ
ತನ್ನ ಇಚ್ಛೆಯ ಬಾಳ್ಕೆ ನಡೆಸಲೆಡೆಯಿಲ್ಲದಿರೆ
ದೊರೆತ ಸ್ವಾತಂತ್ರ್‍ಯವದು ಸ್ವಾತಂತ್ರ್‍ಯವೆ?

ದೇವನೆದುರಿನಲೆಲ್ಲ ಸರ್ವಸಮರೆನಿಸುತ್ತ
ಧರ್ಮ ನೆಲೆ ತಪ್ಪದೊಲು ಸಮತೆಯನು ಸಾಧಿಸುತ
ಇಹದ ಹಾಲಿಗೆ ಪರದ ಸಕ್ಕರೆಯ ಬೆರಸುತ್ತ
ಬಾಳಲಪ್ಪುದೆ ಅಮೃತ ಸ್ವಾತಂತ್ರ್‍ಯವಲ್ತೆ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...