Home / ಕವನ / ಕವಿತೆ / ಕಾಬೂಲಿವಾಲಾ

ಕಾಬೂಲಿವಾಲಾ

ಅಂದು –
ಉದ್ದನೆಯ ದಾಡಿ ತಲೆಗೆ ಸಡಿಲಾದ ಪೇಟಾ
ಕಂದುಬಣ್ಣದ ದೊಗಲೆ ಜುಬ್ಬಾ
ಹೆಗಲ ಮೇಲಿನ ಕೋಲಿನ ಅಂಚಿಗೆ
ತೂಗಾಡುವ ಬುಟ್ಟಿಗಳು
ಬದಾಮ್ ಪಿಸ್ತಾ ಕಲ್ಲುಸಕ್ಕರೆ ಒಂದೆಡೆ
ಮತ್ತೊಂದೆಡೆ ಉಪ್ಪುಪ್ಪಿನ ಕಡಲೇಬೀಜಗಳು
ನನಗಿನ್ನೂ ಚೆನ್ನಾಗಿ ನೆನಪಿದೆ
ಅತನೇ ಕಾಬೂಲಿವಾಲಾ ಎಂದು.
ಕಾಬೂಲು ಕಂದಹಾರ ಸುತ್ತಾಡಿ
ಹೆಂಡತಿ ಮಕ್ಕಳನು ಬಿಟ್ಟು
ಹೊಟ್ಟೆಪಾಡಿಗಾಗಿ ಇಲ್ಲಿಗೆ ಬಂದಿದ್ದವನೂ ಎಂದು-
ಅದೇ ಅದೇ ನನ್ನ ಮದುವೆಯ ದಿನದಂದು
ಬೆಳೆದ ತನ್ನ ಮಗಳ ನೆನೆದು ಕಣ್ಣೀರು ತುಂಬಿ
ಕಾಬೂಲಿಗೆ ಮರಳಿದವನೂ ಎಂದು.

ಇಂದು –
ಕಾಬೂಲಿವಾಲಾ,
ಈಗ ಇದೆಲ್ಲಾ ಏನಾಗುತ್ತಿದೆ ನಿನ್ನ ನಾಡಿನಲ್ಲಿ
ಅಮೇರಿಕದ ವ್ಯಾಪಾರಿಮಳಿಗೆಯಡಿ
ಭಯೋತ್ಪಾದಕ ಪಾತಕಿಗಳಿಗೆ ಸಿಲುಕಿ ಸತ್ತ
ಸಾವಿರಾರು ಅತ್ಮಗಳ ಶಾಪ.
ಕಾಬೂಲು ಕಂದಹಾರಗಳ ತುಂಬೆಲ್ಲ ಗುಂಡುರಾಶಿಗಳ ಸುರಿಮಳೆ
ಭೂಮಿಯೂ ನಡುಗಿ ಭ್ರೂಣಗಳು ಪಾತಿಸುತ್ತಿರುವದು,
ಮುಖ ಪಾದ ಕಾಣಿಸಿದ್ದಕ್ಕೆ
ಹಾಡೇ ಹಗಲು ಹೆಂಗಸರನು ಕೊಂದು
ಧರ್ಮಾಂಧತೆಯಲಿ ಮೆರೆದ ತಾಲಿಬಾನ್ ತಲೆಹಿಡುಕರು
ಮುಗ್ಧತೆಯಲಿ ಕಕ್ಕಾಬಿಕ್ಕಿಯಾಗಿ ಬಿಕ್ಕುವ
ತೊಟ್ಟಿಕ್ಕುವ ಕಣ್ಣೀರು ಕಥೆಗಳು.

ಈಗ-
ಜಗಗೆಲ್ಲ ಬಯಸುವ ಕ್ರೂರಿಗಳನು ಹಿಮ್ಮೆಟ್ಟಿಸಲು
ನೀನು ಹೆಗಲಿಗೆ ಬಂದೂಕು ಏರಿಸಿದ್ದು ತಪ್ಪೇನಿಲ್ಲ,
ಸುಕ್ಕುಗಟ್ಟಿದ ನಿನ್ನ ಹಣೆಯ ಗೆರೆಗಳ ತುಂಬ ಬೆವರು
ಅದರೊಳಗೆ ಮೆತ್ತಿದ ಭೂಮಿಯ ದುರಂತ ಧೂಳು
ಸಾವು ನೋವಿನ ವ್ಯಥೆಯ ಹಾಡುಗಳಿಗೆ
ಕೊನೆ ಎಂದು? ಹೇಗೆ?

ಪ್ರೀತಿವಿಶ್ವಾಸತೆಗೆ ಏನೆಲ್ಲ ಗೆಲ್ಲುವ ಶಕ್ತಿ ಇದೆ
ಗಾಂಧಿ ಹೇಳಿದ್ದು, ಅಂದು ನೀನೂ ಹೇಳಿದ್ದೆ, ನೆನಪಿಸಿಕೋ-
ಕಲ್ಲು ಸಕ್ಕರೆ ಪ್ರೀತಿಯಿಂದ ಕೊಡುತ್ತಿದ್ದ ನಿನ್ನ ಕೈ
ಈಗ ಬಂದೂಕು ಹಿಡಿದದ್ದು
ತಪ್ಪೋ ಒಪ್ಪೋ ಒಂದಿಷ್ಟು ಯೋಚಿಸು
ಯಾರೋ ಮಾಡುವ ತಪ್ಪಿಗೆ
ಯಾರ್ಯಾರೋ ಅನುಭವಿಸುವ ತಳಮಳ.

“ಖಂಡಿಸಬೇಕಾಗಿದೆ ಯುದ್ಧ ಕೊಲೆ
ಬೆಳೆಸಿಕೊಳ್ಳಬೇಕಾಗಿದೆ ನಾಗರಿಕತೆ.
ಎಂದೇ ಟ್ಯಾಂಕರು ಬಂಕರು ಬಂದೂಕು
ಮಿಸೈಲ್ಸ್‌ಗಳ ಕ್ರೂರ ತಲೆಗಳ ತುಂಬೆಲ್ಲ
ಪ್ರೀತಿವಿಶ್ವಾಸಗಳ ಕಲ್ಲು ಸಕ್ಕರೆ ತುಂಬಿಸಿ
ಭಯೋತ್ಪಾದಕರಿಗೆ ಸವಾಲೊಡ್ಡಿದರೆ
ಶಾಂತಿ ನೆಲೆಸೀತು ನಮ್ಮ ನಿಮ್ಮೆಲ್ಲರ ನಾಡುಗಳಲಿ”
******
(ರವೀಂದ್ರನಾಥ್ ಟ್ಯಾಗೂರ ಅವರ ಕಥೆ “ಕಾಬೂಲಿವಾಲಾ” ನೆನಪಿಸಿಕೊಂಡು, ಈಗ ಕಾಬೂಲಿವಾಲಾ ಉತ್ತರ ಮೈತ್ರಿಕೂಟದಲ್ಲೊಬ್ಬ ಎಂದೇ ತಿಳಿದುಕೊಂಡು ಅವನೊಂದಿಗೆ ಒಂದೆರಡು ಮಾತುಗಳು)
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...