ಎಣ್ಣೆಗೆಂಪಿನ ಮೇಲೆ ಹಾಲ್ಕೆನೆಯ ಲೇಪನದ
ಕೆನ್ನೆಯೇನಲ್ಲ, ಹೂ ಮೃದುತೆಯೇನಿಲ್ಲ!
ತುಟಿ ಬಹಳ ಕೆಂಪಿಲ್ಲ!  ಕಂಡೊಡನೆಯೇ ಸೆಳೆವ
ಮೆಲುನಗುವು ಅದರ ಮೇಲ್ಸುಳಿದುದೇ ಇಲ್ಲ!

ಮಾತುಗಳಲೇನಂಥ ಮಾಧುರ್ಯವೇನಿಲ್ಲ
ಬೆಡಗು ಬಿನ್ನಾಣಗಳು ಚೆಲುವಿಕೆಯು ಇಲ್ಲ!
ಕವಿಗಳೊಲಿವಂದದಲಿ ಕಂಗಳಲಿ ಮಿಂಚಿಲ್ಲ
ಕಣ್ಣೀರು ಮುತ್ತಲ್ಲ-ತಾರಕೆಯು ಅಲ್ಲ!

ಇಂತಾದರೂ ಇವನು ಏತಕಾಗೆಲ್ಲವನು
ಆಕೆಗರ್ಪಿಸಿ ಕೊರಗಿ ಕಾತರಿಸುತಿರುವ?
ಹುಚ್ಚನಿವ!  ಎನ್ನುವರು – ಅರಿವರೇ ಇದನವರು?
ಹೃದಯ ಸೆಳೆದುದೆ ನಿನಗೆ ಹಿರಿಯಲಂಕಾರ!
*****