ನಂಬಿದವರ ಎಂದೆಂದೂ ಕಾಯುವ ಗೋವಿಂದ
ಬಿಡಿಸು ದಾಸಿ ಮೀರೆಯ ಲೋಕದ ಸುಳಿಯಿಂದ.
ನಾಮದೇವ ಗೃಹದ ಮುಂದೆ ಚಪ್ಪರವನು ಕಟ್ಟಿದೆ
ಧನ್ನಾಭಕ್ತನ ಹೊಲದಲಿ ಬೆವರ ಸುರಿಸಿ ಬಿತ್ತಿದೆ,
ಕರಮಾಬಾಯಿ ನೀಡಿದ ಖಿಚಡಿಯೆಲ್ಲ ತಿಂದೆ
ಭಕ್ತ ಕಬೀರನ ಮನೆಯ ಎತ್ತು ಹೊಡೆದು ತಂದೆ?
ಸವಿಯಿತ್ತೇ, ರುಚಿನೋಡಿ ಶಬರಿ ಆಯ್ದ ಬೋರೆ
ಹಿತವಿತ್ತೇ ಸುದಾಮನ ತಂಡುಲದ ಸೇವೆ,
ಕುಬ್ಜೆ ಕೊಟ್ಟ ಹೂವು ಗಂಧ ಪ್ರಿಯವಾಯಿತೆ ಹೇಗೆ
ಆ ಭಕ್ತಿಗೆ ನೇರವಾಯ್ತೆ ವಕ್ರ ದೇಹ ಮೋರೆ?
ಎಷ್ಟು ಕರೆಯಬೇಕೊ ನಿನ್ನ, ಕೇಳಿಸದೇ ಕಿವುಡ?
ಎಷ್ಟು ಹಾಡಿ ಕುಣಿದರೂ ಕಾಣಿಸದೇ ಕುರುಡ?
ಇಷ್ಟು ಕ್ರೂರಮನವು ಏಕೆ ಹೇಳೋ ಗಿರಿಧರನೆ?
ಈ ಮೀರಾ ಮೇಲೆ ತೋರೊ ಒಂದೇ ಹನಿ ಕರುಣೆ
*****