ರಾಕೇಶ್ ಆಸ್ಪತ್ರೆಗೆ ಅಂದು ರಜೆ ಹಾಕಿ ಸೂಟುಧಾರಿಯಾಗಿ ಸುಶ್ಮಿತಳ ಮದುವೆಗೆ ಹೊರಟು ನಿಂತನು. ಏನು ಕೊಳ್ಳಬೇಕೆಂದು ತಿಳಿಯದೆ ಬರಿಗೈಲಿ ಮದುವೆ ಮನೆಗೆ ಬಂದನು.
ಅಪರಿಚಿತರ ನಡುವೆ ತಬ್ಬಿಬ್ಬಾಗಿ ನಿಂತುಬಿಟ್ಟ. ಸುಶ್ಮಿತಳೇನೋ ಹಸೆಮಣೆಯ ಮೇಲಿದ್ದಾಳೆ. ಆದರೆ ಈ ಅನು ಎಲ್ಲಿ? ಕಣ್ಣುಗಳು ಹುಡುಕಾಟ ನಡೆಸಿದವು. ರಂಗು ರಂಗಿನ ಸೀರೆಗಳಲ್ಲಿ ಒಡವೆಗಳೆಲ್ಲ ಹೆಚ್ಚೂ ಕಡಿಮೆ ಕಳೆದೇ ಹೋಗಿರುವ ಯಾವ ಹುಡುಗಿಯರಲ್ಲಿಯೂ ಅನು ಕಾಣಲಿಲ್ಲ. ಕ್ಷಣ ಮನಸ್ಸು ನಿರಾಶೆಗೊಂಡಿತು.
“ಅರೆ ರಾಕೇಶ್, ಚೆನ್ನಾಗಿದ್ದೀಯೇನಪ್ಪಾ” ಪರಿಚಿತ ಧ್ವನಿ ಬಂದೆಡೆ ತಿರುಗಿದ. ನೀಲಾ ರಾಕೇಶ್ ನನ್ನು ದೂರದಿಂದಲೇ ಕಂಡು ಓಡೋಡಿ ಬಂದಿದ್ದಳು.
ಅವರನ್ನು ಕಂಡು ಕಣ್ಣರಳಿಸಿದ.
“ಚೆನ್ನಾಗಿದ್ದೀನಿ ಆಂಟಿ. ಅಂಕಲ್ ಬರಲಿಲ್ಲವಾ” ಎಂದ. ಅನುವೆಲ್ಲಿ ಎನ್ನುವ ಧೈರ್ಯ ಸಾಲದೆ.
ಅವನ ಒದ್ದಾಟ ಗಮನಿಸಿದ ನೀಲಳ ಸೂಕ್ಷ್ಮ ಕಣ್ಣು ಅವನ ಮನದಾಳವನ್ನು ಗ್ರಹಿಸಿಬಿಟ್ಟಿತ್ತು.
“ಅನುನಾ ಕರ್ಕೊಂಡು ಬರ್ತೀನಿ ತಾಳಪ್ಬ, ಎಲ್ಲೋ ಒಳಗೆ ಸೇರಿಬಿಟ್ಟಿದ್ದಾಳೆ” ಎಂದು ಅವನ ಮನಕ್ಕೆ ತಂಪು ನೀಡಿ ಅನುವನ್ನು ಹುಡುಕುತ್ತ ಸರಿದು ಹೋದರು. ಅತ್ತಲೇ ದೃಷ್ಟಿ ನೆಟ್ಟು ಕಾಯತೊಡಗಿದ.
“ಹಲೋ ಯಾವಾಗ ಬಂದ್ರಿ’ ಕಿವಿಗೆ ಇಂಪಾದ ಧ್ವನಿ ಬಿದ್ದಿತು. ಇತ್ತ ತಿರುಗಿದವನೆ ಅರೆಕ್ಷಣ ಸುಮ್ಮನಾಗಿಬಿಟ್ಟ. ಅನು ಏನು ತಿಳಿದಾಳೆಂಬ ಆಂಜಿಕೆಯೂ ಇಲ್ಲದೇ ನೆಟ್ಟ ನೋಟದಿಂದ ನೋಡಿಯೇ ನೋಡುತ್ತಿದ್ದಾನೆ. “ಇವಳು ಅನುನಾ” ಅನ್ನಿಸಿಬಿಟ್ಟಿತು.
ಸ್ನಫ್ ಕಲರ್ ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಾ ಸಿರಿದೇವಿಯಂತೆ ಎದುರಿಗೆ ನಿಂತಿದ್ದಾಳೆ. ಸದಾ ಹಾರಾಡುತ್ತಾ ಇದ್ದ ಕೂದಲನ್ನು ಇಂದು ಬಂಧಿಸಿ, ಮಲ್ಲಿಗೆ ಮುಡಿದಿದ್ದಾಳೆ. ಕೊರಳಲ್ಲಿ ಹವಳದ ನೆಕ್ಲೇಸ್, ಕಿವಿಯಲ್ಲಿ, ಕೈಯಲ್ಲಿ ಅಂತಹುದೇ. ತೀರಾ ತೀರಾ ಸಿಂಪಲ್ ಸರಳತೆಯಲ್ಲಿಯೂ ತಾಜಾತನ. ಗಂಡೆಂಬ ಪ್ರಾಣಿ ಒಬ್ಬ ಕಣ್ಣಿನಿಂದ ತನ್ನ ಸೌಂದರ್ಯವನ್ನು ಆರಾಧಿಸುತ್ತಾ ನೋಡುತ್ತಿದ್ದಾನೆ. ತನ್ನ ರೂಪು ಅವನಲ್ಲಿ ಉನ್ಮತ್ತತೆ ತಂದಿತ್ತಿದೆ, ಮೈಮರೆಸಿದೆ, ಊಹೂಂ ಈ ಯಾವ ಭಾವನೆಗಳೂ ಅವಳಲ್ಲಿ ಕಾಣಲೇ ಇಲ್ಲ. ಈ ಯಾವ ನೋಟವೂ ಅವಳನ್ನು ಅಲುಗಾಡಿಸಲೇ ಇಲ್ಲ. ತಳಮಳ, ರೋಮಾಂಚನ, ಪುಳಕ ಇಲ್ಲವೇ ಇಲ್ಲ. ಕೊನೆಗೆ ಗಲಿಬಿಲಿ ಕೂಡಾ ಇಲ್ಲ.
ಅವನ ಮತ್ತೆಲ್ಲವೂ ಜರ್ರೆಂದು ಇಳಿದುಹೋಯಿತು. ತನ್ನನ್ನು ಕ್ಷಣ ಸಾವರಿಸಿಕೊಂಡು ನಗುವ ಯತ್ನ ನಡೆಸಿದ. ಅದೇ ನೇರ ದೃಷ್ಟಿ. ಯಾವ ಬದಲಾವಣೆಯೂ ಕಾಣದ ಆತ್ಮೀಯ, ಸ್ನೇಹಭಾವ, ಅವೇ ನಗುಚೆಲ್ಲುವ ಕಣ್ಣುಗಳು, ಅದೇ ಮುಖಭಾವ.
ದುಡುಕಬಾರದು, ದುಡುಕಬಾರದು. ಮನಸ್ಸಿಗೆ ಎಚ್ಚರಿಕೆ ನೀಡಿ ಸಹಜವಾಗಿಬಿಟ್ಪ. ಅರೆಕ್ಷಣ ಅವನಲ್ಲಾದ ಅಲ್ಲೋಲಕಲ್ಲೋಲಕ್ಕೆ ತೆರೆ ಎಳೆದುಬಿಟ್ಪ.
“ನಾನು ಹಲೋ ಆಂದಿದ್ದು ಕೇಳಿಸಲಿಲ್ಲವಾ, ಯಾಕೆ ಲೇಟಾಗಿ ಬಂದ್ರಿ” ಹೆಣ್ಣೆಂಬ ಯಾವ ಭಾವನೆಯೂ ಇಲ್ಲದೆ ಅವನ ಪಕ್ಕ ಕುಳಿತು ಕೇಳಿದಳು. ಅವಳ ಸಾಮೀಪ್ಯ, ಮಲ್ಲಿಗೆಯ ನವಿರು ಪರಿಮಳ, ಅಸ್ವಸ್ಥತೆ ತಂದಿತು. ಎಂದಿನಂತಹ ನಿರ್ಭಾವ ಅವನಿಂದ ಕಷ್ಟವೆನಿಸಿತು. ಈ ಸಂದಿಗ್ಧತೆಯಿಂದ ಪಾರಾಗಲು ತಟ್ಟನೆ ಎದ್ದು ನಿಂತುಬಿಟ್ಪ.
“ಯಾಕೆ?” ಕಣ್ಣಿನಲ್ಲಿಯೇ ಪ್ರಶ್ನಿಸಿದಳು.
“ಅನು, ಗಿಫ್ಟೂ ತಂದಿಲ್ಲ. ಅದನ್ನೇ ಹುಡುಕ್ತಾ ಹುಡುಕ್ತಾ ಲೇಟಾಯ್ತು. ಕೊನೆಗೂ ಸೆಲೆಕ್ಷನ್ ಆಗಲೇ ಇಲ್ಲ. ಈಗ ಹೋಗಿ ತಂದುಬಿಡ್ತಿನಿ.”
“ಸೆಲೆಕ್ಷನ್ ಆಗಲಿಲ್ಲ ಅಂದ್ರೆ, ಮತ್ತೆ ಈವಾಗ ಆಗುತ್ತಾ, ನಡೀರಿ ನಾನೂ ಬರ್ತೀನಿ. ನಾನೇ ಸೆಲೆಕ್ಷನ್ ಮಾಡ್ತಿನಿ” ಎದ್ದೇಬಿಟ್ಟಳು.
ಸುಸ್ತಾಗಿ ಹೋದ ರಾಕೇಶ್ ವಿಧಿ ಇಲ್ಲದೇ “ಬನ್ನಿ” ಎನ್ನುತ್ತಾ ಮುನ್ನೆಡೆದ. ಈ ಹುಡುಗಿಗೇಕೆ ನನ್ನ ಕಷ್ಪನೇ ಅರ್ಥವಾಗಲ್ಲವಲ್ಲ. ಇಂಥ ಸುಂದರವಾದ ಹುಡುಗಿಗೆ ಹೃದಯವನ್ನು ಕೊಡೋದೇ ಆ ದೇವರು ಮರೆತುಬಿಟ್ಟಿದ್ದಾನೆ ಅಂದುಕೊಂಡ. ಅಂಗಡಿ ತಲುಪುವಷ್ಟರಲ್ಲಿ ತನ್ನ ಸಹಜತೆಗೆ ಬಂದುಬಿಟ್ಟದ್ದ.
ಗಿಫ್ಟ್ ಸೆಂಟರ್‌ನೊಳೆಗೆ ಕಾಲಿಡುತ್ತಿದ್ದಂತೆಯೇ ಅವರಿಬ್ಬರನ್ನು ಮೆಚ್ಚುಗೆಯಿಂದ ನೋಡುತ್ತಾ
“ಬನ್ನಿ ಸಾರ್, ಬನ್ನಿ ಮೇಡಂ ಏನು ಬೇಕಿತ್ತು” ಅತ್ಯಂತ ಆಸಕ್ತಿ ವಹಿಸಿದ.
“ಗಿಫ್ಟ್ ಬೇಕಿತ್ತು. ರಾಕೇಶ್ ಎಷ್ಟರೊಳಗೆ ಇರಬೇಕು” ಕೇಳಿದಳು. “ಎಷ್ಟಾದರೂ ಪರ್‍ವಾಗಿಲ್ಲ, ನಿಮ್ಗೆ ಇಷ್ಟವಾದ್ರೆ ಸಾಕು” ಎಂದ.
ಏನೇನೋ ನೋಡಿದಳು ಒಂದೂ ಮನಸ್ಸಿಗೆ ಬರಲಿಲ್ಲ. ಬೇರೆ ಅಂಗಡಿಗೆ ಹೋಗಬೇಕೆನ್ನುವಷ್ಟರಲ್ಲಿ
ಸುಂದರವಾದ ಗೌತಮ ಮೂರ್ತಿ ಕಣ್ಣಿಗೆ ಬಿತ್ತು. “ವಾಹ್ ರಾಕೇಶ್ ಎಷ್ಟು ಚೆನ್ನಾಗಿದೆ ಈ ಬುದ್ದನ ವಿಗ್ರಹ.”
“ನಿಮ್ಮ ಮನಸ್ಸಿನಂತಿದೆ. ಹೋಗಿ ಹೋಗಿ ಈ ಸನ್ಯಾಸಿಯ, ತ್ಯಾಗ ಮೂರ್ತಿಯ ಗಿಫ್ಟೇ. ಅದು ಮದುವೆಯಾಗುತ್ತಿರುವ ಹೆಣ್ಣಿಗೆ ಎಂದುಕೊಂಡ. ಆದರೆ ಮಾತನಾಡಲಿಲ್ಲ.
ಪಕ್ಕದಲ್ಲಿಯೇ ಇದ್ದ ರಾರ್ಧಾಕೃಷ್ಣ ನ ವಿಗ್ರಹವೇ ಚೆನ್ನು ಎನಿಸಿತು.
“ರಾಕೇಶ್ ಇದು ಚೆನ್ನಾಗಿದೆಯಾ” ಮತ್ತೊಮ್ಮೆ ಕೇಳಿದಳು.
“ಹಾ, ಚೆನ್ನಾಗಿದೆ. ಅದರ ಜೊತೆಗೆ ಇದನ್ನು ತೆಗೆದುಕೊಳ್ಳೋಣ. ಒಂದು ವರನಿಗೆ, ಒಂದು ವಧುವಿಗೆ” ಎಂದು ರಾಧಾಕೃಷ್ಣ ರನ್ನು ಕೈಗೆತ್ತಿಕೊಂಡ. ಎರಡನ್ನೂ ಪ್ಯಾಕ್ ಮಾಡಿಸಿ ಹೊರಬಿದ್ದರು.
ಇಬ್ಬರೂ ಕಲ್ಯಾಣ ಮಂದಿರಕ್ಕೆ ಬರುವಷ್ಟರಲ್ಲಿ ಅವರಿಬ್ಬರನ್ನು ಹುಡುಕಾಡಿ ಸೋತ ನೀಲಾ ದ್ವಾರದ ಬಳಿಯೇ ಎಲ್ಲಿ ಹೋದರೋ ಎನ್ನುತ್ತ ಕಾಯುತ್ತಾ ನಿಂತಿದ್ದಳು. ಜೋಡಿಯಾಗಿ ಜೊತೆಯಲ್ಲಿಯೇ ನಡೆದು ಬರುತ್ತಿದ್ದ ಇಬ್ಬರನ್ನು ನೋಡಿ ಆನಂದಭರಿತಳಾದಳು. ಕಣ್ಣು ಕುಕ್ಕುವ ಜೋಡಿಯನ್ನು ಹೃದಯ ತುಂಬಿಸಿಕೊಳ್ಳತೊಡಗಿದಳು. ಎಷ್ಟು ಚೆನ್ನಾಗಿದೆ ಜೋಡಿ ರತಿಮನ್ಮಥರಂತೆ ಕಾಣುತ್ತಿದ್ದಾರೆ. ಈ ಜೋಡಿ. ಶಾಶ್ವತವಾದ ಜೋಡಿಯನ್ನಾಗಿ ಮಾಡಪ್ಪ ದೇವರೇ ಎಂದು ಬೇಡಿಕೊಂಡಳು.
“ಯಾಕಮ್ಮ ಹೊರಗೆ ನಿಂತಿದ್ದೀಯಾ, ಒಳಗಡೆ ಕೂತ್ಕಬಾರದೆ” ತಾಯಿಯನ್ನು ಆಕ್ಷೇಪಿಸಿದಳು.
“ನೀನು ಕಾಣಿಸಲಿಲ್ಲವಲ್ಲ. ಹುಡುಕುತ್ತಾ ಹೊರಗೆ ಬಂದಿದ್ದೆ. ಎಲ್ಲಿ? ಹೋಗಿದ್ರಿ.”
“ರಾಕೇಶ್, ಗಿಫ್ಟ್ ತಗೊಬೇಕು ಅಂದರು. ಅದಕ್ಕೆ ಅವರ ಜೊತೆ ಹೋಗಿದ್ದೆ ಧಾರೆ ಆಗಿಹೋಯಿತಾ.”
“ಧಾರೆ ಆಗಿ ರಿಸೆಪ್ಪನ್‌ಗೆ ಕೂರಿಸಿದ್ದಾರೆ ಬಾ” ಮಗಳ ಜೊತೆ ಒಳನಡೆದಳು.
ನವವಧುವಿನ ಸಿಂಗಾರದಲ್ಲಿ ಸುಶ್ಮಿತಾ ಕಂಗೊಳಿಸುತ್ತಿದ್ದಳು. ಹುಡುಗ ಕೂಡ ಹ್ಯಾಂಡ್ ಸಮ್ ಎಂದುಕೊಂಡ ರಾಕೇಶ್.
“ಬನ್ನಿ ರಾಕೇಶ್, ಗಿಫ್ಟ್ ಕೊಟ್ಬುಬಿಡುವಿರಂತೆ. ಆಮೇಲೆ ಊಟಕ್ಕೆ ಹೋಗಬಹುದು” ಅಂತ್ಹೇಳಿ ಮೇಲೆ ಕರೆದೊಯ್ದಳು.
ಅವರಿಬ್ಬರೂ ಜೊತೆಯಾಗಿ ಬರುತ್ತಿರುವುದನ್ನು ಅಲ್ಲಿಂದಲೇ ಸುಶ್ಮಿತಾ ಗಮನಿಸಿದ್ದಳು.
ಹತ್ತಿರ ಬಂದೊಡನೆ “ಹಾಯ್ ರಾಕೇಶ್, ಮದ್ವೆ ಮನೆಗೆ ಬಂದು ಏಕಾಂತ ಅರಸಿ ಹೊರಗಡೆ ಹೋಗಿದ್ರಾ. ಇಲ್ಲೂ ಏಕಾಂತ ಬೇಕಾ” ಅವನೊಬ್ಬನಿಗೆ ಕೇಳಿಸುವಂತೆ ಸುಶ್ಮಿತಾ ಚುಡಾಯಿಸಿದಳು.
“ಶ್, ಅನು ಕೇಳಿಸ್ಕೊಂಡು ಬಿಡ್ತಾಳೆ. ಅವಳಿನ್ನೂ ಆ ಟ್ರಾಕ್ನಲ್ಲಿ ಇಲ್ಲ. ನಿಮ್ಮಷ್ಟು ಫಾಸ್ಟ್ ಅಲ್ಲಾ ನಿಮ್ಮ ಫ್ರೆಂಡ್. ನೀವು ಫ್ರೆಂಡಾಗಿರೋದೆ ದಂಡಾ. ನಿಮ್ಮ ಅರ್ಧದಷ್ಟಾದರೂ ಕಲಿಸಬಾರದಿತ್ತೇ” ನಯವಾಗಿ ದೂರಿದ.
ದೊಡ್ಡ ನಿಟ್ಟುಸಿರು ಬಿಟ್ಟು “ನನ್ನ ಕೈಲಂತೂ ಅಗಲಿಲ್ಲ. ನೀವೇ ಟ್ರೈ ಮಾಡಿ. ನಿಮ್ಮ ಟ್ರಾಕ್ಗೆ ಬಂದರೂ ಬರಬಹುದು.”
ಗೆಳೆಯನೊಂದಿಗೆ ಮಾತಾಡುತ್ತಿದ್ದ ಅಭಿ ಇತ್ತ ತಿರುಗಿ “ಸುಶ್ಮಿತಾ” ಎನ್ನುತ್ತಾ ಗೆಳೆಯನನ್ನು ಪರಿಚಯಿಸಿದ.
“ಅಭಿ. ಇವ್ರು ಡಾ|| ರಾಕೇಶ್. ನಿಮ್ಹಾನ್ಸ್‌ನಲ್ಲಿದ್ದಾರೆ. ನಮ್ಮ ಬೆಸ್ಟ್ ಫ್ರೆಂಡ್” ರಾಕೇಶ್‌ನನ್ನು ಪರಿಚಯಿಸಿದಳು.
ಅಭಿ ಕೈಹಿಡಿದು ಸ್ನೇಹದಿಂದ ಕುಲುಕಿದ. ನವದಂಪತಿಗಳಿಬ್ಬರೂ ಊಟ ಮಾಡಿಯೇ ಹೋಗಬೇಕೆಂದು ಒತ್ತಾಯಿಸಿದರು. ಅನುವನ್ನು ಯಾರೋ ನಿಲ್ಲಿಸಿಕೊಂಡು ಮಾತಾಡುತ್ತಿದ್ರಿಂದ ಮಧ್ಯದಲ್ಲಿಯೇ ನಿಂತುಬಿಟ್ಟಿದ್ದಳು.
ರಾಕೇಶ್ ಅಲ್ಲಿಗೇ ಹೋಗಿ ಅನುವಿನ ಜೊತೆಯಾದ.
ರಾಕೇಶ್‌ಗೆ ಸುಶ್ಮಿತಾಳ ತಂದೆ ತಾಯಿಯರನ್ನು ಪರಿಚಯಿಸಿದಳು. ನಂತರ ಊಟಕ್ಕೆ ಕಳುಹಿಸಿ ಕೊಟ್ಟಳು.
ರಾಕೇಶ್ ಹೊರಟು ನಿಂತಾಗ ದ್ವಾರದವರೆಗೂ ಬಂದು ಬೀಳ್ಕೊಟ್ಟಳು. ನೀಲಾಗೂ ತಿಳಿಸಿ ಸುಶ್ಮಿತಾಗೆ ಅಲ್ಲಿಂದಲೇ ಹೋಗುವೆನೆಂದು ತಿಳಿಸಿ ನಡೆದುಬಿಟ್ಟ.
ಮನಸ್ಸು ಪ್ರಪುಲ್ಲವಾಗಿತ್ತು. ಅನುವಿನ ಸಾನಿಧ್ಯ ಮದುವೆ ಮನೆಯ ಆತಿಥ್ಯ, ಸುಶ್ಮಿತಾಳ ತುಂಟತನದ ಮಾತುಗಳು, ಅವಳ ರೇಗಿಸುವಿಕೆ ಎಲ್ಲವೂ ಅನಿರ್ವಚನೀಯವಾಗಿದ್ದೇನೊ ಅವನಿಗೆ ತಂದಿತ್ತಿತ್ತು. ಇಡೀ ಪ್ರಪಂಚವೇ ಸುಂದರ ಎನಿಸಿತು. ತಕ್ಷಣವೇ ಅನುವಿನ ವರ್ತನೆ ನೆನಪಾಗಿ ಅವನಲ್ಲಿದ್ದ ವೈದ್ಯ ಜಾಗೃತನಾದ. ಅಸಹಜವಾದದ್ದೇನೋ ಅನುವಿನಲ್ಲಿದೆ. ಈ ವಯಸ್ಸಿನ ಎಲ್ಲಾ ಯುವತಿಯರಂತೆ ಅನು ಇಲ್ಲ. ಯೌವ್ವನದಲ್ಲಿರುವ ಹೆಣ್ಣು, ಒಬ್ಬ ಯೌವ್ವನದ ಗಂಡಿನೊಡನೆ ಇದ್ದಾಗ ಕಾಣಿಸಿಕೊಳ್ಳಲೇಬೇಕಾದ ವರ್ತನೆಗಳಾವವೂ ಅವಳಲ್ಲಿಲ್ಲ. ಸಹಜ, ಬಹಳಷ್ಟು ಸಹಜವಾಗಿ, ಗೆಳತಿಯೊಂದಿಗಿರುವಷ್ಟೇ ಸಹಜ, ತಾಯಿಯೊಂದಿಗಿರುವಷ್ಟು ಸಹಜ, ಒಂದು ಮಗುವಿನೊಡನಿದ್ದಷ್ಟು ಸಹಜ, ಈ ಸಹಜತೆ ಹೆಣ್ಣಿಗೆ ತಕ್ಕುದಲ್ಲ. ಈಕೆ ಆ ಶಿವಪ್ರಸಾದ್ ಬಳಲುತ್ತಿದ್ದ ಭಾವನೆಗಳಿಂದೇನಾದರೂ ಬಳಲುತ್ತಿದ್ದಾಳೆಯೋ. ಪುರುಷನ ಸ್ಪರ್ಶವಾದಾಗ ಆಕೆಯಲ್ಲಿ ಬೇರಾವುದೇ ಕಂಪನವಿಲ್ಲ. ತಾನು ತಡಮಾಡಬಾರದು. ಆದಷ್ಟು ಬೇಗ ಅವಳನ್ನು ಸಂಪೂಣಮಾಗಿ ಸ್ಟಡಿ ಮಾಡಬೇಕು. ಅದು ನಾಳೆಯಿಂದಲೇ ಪ್ರಾರಂಭವಾಗಬೇಕೆಂದು ನಿರ್ಧರಿಸಿಬಿಟ್ಟ.
ಅಂದು ಬೆಳಿಗ್ಗೆ ಅನು ಆಫೀಸಿಗೆ ಹೋದ ಮೇಲೆ ರಾಕೇಶ ಅನುವಿನ ಮನೆಗೆ ಬಂದ. ಈ ಸಮಯದಲ್ಲಿ ಮನೆಯಲ್ಲಿ ನೀಲಾ ಅಂಟಿ ಒಬ್ಬರೇ ಇರುತ್ತಾರೆಂದು ಬಲ್ಲ.
ಬೆಲ್ ಆದೊಡನೆ ಬಾಗಿಲು ತೆರೆದ ನೀಲಾ ಬಾಗಿಲುದ್ದಕ್ಕೂ ನಿಂತಿದ್ದ ರಾಕೇಶನನ್ನು ಕಂಡು ವಿಸ್ಮಿತಳಾದಳು. ಸಡಗರದಿಂದ ಒಳಗೆ ಆಹ್ವಾನಿಸಿದಳು.
ಒಳ ಬಂದು ಕುಳಿತ ರಾಕೇಶ ನೇರ ವಿಷಯಕ್ಕೆ ಹೇಗೆ ಇಳಿಯುವುದೆಂದು ತಿಳಿಯದೆ ಒದ್ದಾಡಿದ.
ಆತನ ಒದ್ದಾಟ ಗಮನಿಸಿದ ನೀಲ ಖುಷಿಗೊಂಡಳು.
ಮದುವೆ ವಿಷಯ ಮಾತನಾಡಲೇ ಬಂದಿದ್ದಾನೆ ಎಂದು ಗ್ಯಾರಂಟಿಯಾಯಿತು. ಅನುವಿನ ಮನಸ್ಸು ರಾಕೇಶ್‌ನತ್ತ ವಾಲಿರಬಹುದೇ. ನನ್ನ ಮೊರೆ ಆ ದೇವರಲ್ಲಿ ಇಷ್ಟು ಬೇಗ ಮುಟ್ಟಿಬಿಟ್ಟತೇ.
“ರಾಕೇಶ್, ಏನು ತಗೋತಿರಿ, ಕಾಫಿ, ಟೀ”
“ಯಾವುದಾದರೂ ಸರಿ, ಅನು ಆಫೀಸಿಗೆ ಹೋದ್ರಾ, ಅಂಕಲ್ ಎಲ್ಲಿ” ಏನೇನೋ ಪ್ರಶ್ನಿಸಿದ.
ಅವನ ಪೇಚಾಟ ತಿಳಿಯಿತು. ಕಾಫಿ ತಂದು ಕೈಗಿಡುತ್ತ ತಾನೇ ಮಾತು ಆರಂಭಿಸಿದಳು.
“ರಾಕೇಶ್, ಅನು ನಿಮ್ಗೆ ಒಪ್ಪಿಗೇನಾ. ನಿಮ್ಮ ಮನೆಯವರು ಒಪ್ಪಿದಾರಾ” ನೀಲಾಳೇ ವಿಷಯ ಎತ್ತಿದಾಗ ಸರಾಗವಾದ ರಾಕೇಶ.
“ಆ ವಿಷಯನೇ ಮಾತಾಡೋಕೆ ಬಂದೆ ಅಂಟಿ. ನಮ್ಮ ತಂದೆ ತಾಯಿಗೆ ಅನು ಕಂಡ್ರೆ ತುಂಬಾ ಇಷ್ಟ.”
“ನಿಮಗೆ ಇಷ್ಟ ಇಲ್ವಾ” ತಮಾಷೆ ಮಾಡಿದಳು.
“ನನಗೂ ತುಂಬಾನೇ ಇಷ್ಟಾನೇ. ಆದ್ರೆ”
“ಆದ್ರೆ, ಆದ್ರೆ ಏನು ರಾಕೇಶ್” ತಟ್ಟನೆ ಕೇಳಿದಳು.
“ನಿಮ್ಮ ಅನು ಮನಸ್ಸಿನಲ್ಲಿ ಏನಿದೆಯೋ ಅಂತ ನನಗೆ ಇದುವರೆಗೆ ತಿಳಿಯೋಕೆ ಆಗಿಲ್ಲ. ಒಬ್ಬ ಸೈಕಾಲಜಿಸ್ಟ ಆಗಿ ಹೇಳಬೇಕು ಅಂದರೆ ಅನು ನಾರ್ಮಲ್ ಅನ್ನಿಸೋಲ್ಲ” ನಿಧಾನವಾಗಿ ನುಡಿದ.
“ಹೆದರಬೇಡಿ. ಎಲ್ಲಾ ಪ್ರೀತಿಯಿಂದಲೂ ಅನು ಸಹಜವಾದ ಹುಡುಗಿನೇ. ಆದ್ರೆ, ಆಕೆ ಒಬ್ಬ ಹೆಣ್ಣಾಗಿ ಪ್ರಕೃತಿಗೆ ಸಹಜವಾಗಿ ಸ್ಪಂದಿಸುತ್ತಿಲ್ಲ ಅಂತ ನನ್ನ ಅನಿಸಿಕೆ. ಅಂದ್ರೆ… ಅಂದ್ರೆ ಒಂದು ಗಂಡಿನೊಡನೆ ಹೆಣ್ಣು ಇರಬೇಕಾದ ರೀತಿ ಇರೋಕೆ ಅವಳಿಂದ ಸಾಧ್ಯವಾಗ್ತಾ ಇಲ್ಲಾ ಅಂತಾ. ಈ ವಿಷಯದಲ್ಲಿ ನಿಮ್ಮ ಅಭಿಪ್ರಾಯ”
ಪೇಲವವಾಗಿ ಕುಳಿತುಬಿಟ್ಟಳು. ಅವಳು ಅಂದುಕೊಂಡದ್ದು ನಿಜವಾಗಿತ್ತು. ಅನುಮಾನ ಸತ್ಯವಾಗಿಬಿಟ್ಟಿತ್ತು. ಯಾವುದು ಆಗಿರಬಾರದು ಅಂತ ಸಂತೈಸಿಕೊಳ್ಳುತ್ತಿದ್ದಳೋ ಅದು ಆಗಿಯೇ ಬಿಟ್ಟಿತ್ತು.
“ಆಂಟಿ, ನೀವು ಇಷ್ಟೊಂದು ಹೆದರಿಕೊಳ್ಳುವ ಅಗತ್ಯ ಖಂಡಿತಾ ಇಲ್ಲ. ಇದೇನು ಖಾಯಿಲೆ ಅಲ್ಲ. ಯಾವುದೋ ಬೇಡದ ಘಟನೆ ಅವಳ ಸುಪ್ತ ಮನಸ್ಸಿನಲ್ಲಿ ನಿಂತು ಈ ತೆರೆ ಹಾಕಿಬಿಟ್ಟಿದೆ. ಅವಳ ಮನಸ್ಸು ಒಂದು ಹೆಣ್ಣಾಗಿ ಸ್ಪಂದಿಸೋಕೆ ಆಕೆಯನ್ನು ಬಿಡ್ತಾ ಇಲ್ಲ. ಅವಳ ಕಣ್ಣುಗಳಲ್ಲಿ ನೋವಿನ ಎಳೆ ಇದೆ. ಮನಸ್ಸು ಸದಾ ಏನನ್ನೋ ಆಲೋಚಿಸುತ್ತಾ ಇರುತ್ತೆ. ಗಂಡು ಹೆಣ್ಣು ಅನ್ನೋ ವಿಶಿಷ್ಟತೆ ಅವಳಿಗೆ ಬೇಕಾಗಿಲ್ಲ. ಪುರುಷರ ಬಗ್ಗೆ ಯಾವ ಆಕರ್ಷಣೆನೂ ಅವಳು ತೋರಿಸುತ್ತಿಲ್ಲ. ಅವರನ್ನು ಆಕರ್ಷಿಸಬೇಕು ಅನ್ನೋ ಭಾವನೆ ಕೂಡ ಆಕೆಗಿಲ್ಲ. ಅವಳ ಮನಸ್ಸು ಆ ನಿಟ್ಟಿನಲ್ಲಿ ಬೆಳೆದೇ ಇಲ್ಲ ಅನ್ನಿಸುತ್ತೆ.”
“ಆಂಟಿ, ಅಪ್ಸೆಟ್ ಆಗಬೇಡಿ. ಒಬ್ಬ ಡಾಕ್ಟ್ರರಾಗಿ ಕೇಳ್ತಾ ಇದ್ದೀನಿ. ಅನು ಹಾಗೆ ಆಗೋಕೆ ಏನೋ ಕಾರಣ ಇದೆ. ನನ್ನ ಹತ್ತಿರ ಹೇಳೋದಿಕ್ಕೆ ಅವಳು ಸಂಕೋಚಪಡಬಹುದು. ನೀವು ಆಕೆ ತಾಯಿ ಆಗಿ ಹೇಳಿ. ನಿಮಗೆ ಆಕೆ ಬಗ್ಗೆ ಎಲ್ಲಾ ಗೊತ್ತಿರಬಹುದು, ಗೊತ್ತಿರಲೇಬೇಕು. ಗಂಡಸರನ್ನು ಅವಾಯ್ಡ್ ಮಾಡೋ ಏನಾದರೂ ದುರ್ಘಟನೆ ಆಕೆ ಬಾಲ್ಯದಲ್ಲಿಯೋ ಅಥವಾ ನಂತರವೋ ನಡೆದಿತ್ತಾ.”
“ಇಲ್ಲಪ್ಪ, ಅಂತ ಯಾವ ಘಟನೆಯೂ ನಡೆದಿಲ್ಲ. ಆದ್ರೆ… ಆದ್ರೆ….” ಮುಂದೆ ಹೇಳಲಾರದೆ ಅಸಹಾಯಕತೆಯಿಂದ ನಿಲ್ಲಿಸಿಬಿಟ್ಟಳು.
“ಆಂಟಿ. ನೀವು ಏನನ್ನೊ ನನ್ನಿಂದ ಮುಚ್ಹಿಡಬಾರದು. ಅವಳನ್ನ ನಾರ್ಮಲ್ ರೀತಿಗೆ ತರಬೇಕು ಅಂತಾ ಪ್ರಯತ್ನಿಸುತ್ತಿದ್ದೇನೆ. ಆ ಪ್ರಯತ್ನ ಸಕ್ಸಸ್ ಆಗಬೇಕಾದರೆ ನಿಮ್ಮ ಸಹಕಾರ ಬೇಕೇ ಬೇಕು.”
ಎಲ್ಲವನ್ನೂ ಹೇಳಿಬಿಟ್ಟರೆ ಮುಂದೆ ರಾಕೇಶ್ ತಮ್ಮ ಬಗ್ಗೆ ನಿಕೃಷ್ಟ ಭಾವನೆ ತಾಳಿದರೆ, ಅದು ಮಗಳ ಬಗ್ಗೆ ಪರಿಣಾಮ ಬೀರಿದರೆ ಯೋಚಿಸುತ್ತಾ ಕುಳಿತುಬಿಟ್ಟಳು.
“ನೀವು ಏನು ಆಲೋಚಿಸುತ್ತಾ ಇದ್ದೀರಿ ಅಂತ ನಂಗೆ ಗೊತ್ತಾಗ್ತಾ ಇದೆ ಅಂಟಿ. ನೀವು ಹೇಳೋ ವಿಷಯ, ನಾನೀಗ ತಳೆದಿರುವ ಭಾವನೆಗಳು ನಂತರ ಅನುವಿನೆಡೆ ಬದಲಾಗಬಹುದೇ ಅನ್ನೋ ಅನುಮಾನ ನಿಜಾ ತಾನೆ.”
ಅಂಟಿ, ಅನು ಒಬ್ಬ ಅಪರೂಪದ ಹುಡುಗಿ ಅಂತ ನಂಗೆ ಚೆನ್ನಾಗಿ ಗೊತ್ತು. ಅವಳೊಂದು ಅನರ್ಘ್ಯ ರತ್ನ. ಯಾವುದೇ ಕಾರಣಕ್ಕೆ ಆ ರತ್ನವನ್ನು ನಾನು ಕಳ್ಕೋದಿಕ್ಕೆ ಬಯಸಿಲ್ಲ. ನೀವು ಹೇಳೊ ಯಾವುದೇ ವಿಷಯ ಅನು ಮೇಲೆ ನಾನಿಟ್ಟಿರುವ ಯಾವ ಭಾವನೆಗಳೂ ಬದಲಾಗುವುದಿಲ್ಲ ಅನ್ನೋ ಭರವಸೆ ಕೊಡಬಲ್ಲೆ. ಜೊತೆಗೆ ಯಾವ ಕಾರಣಕ್ಕೂ ನೀವು ಹೇಳೋ ವಿಷಯ ನನ್ನ ಎದೆಯೊಳಗೆ ಗೋಪ್ಯವಾಗಿರುತ್ತದೆ” ತುಂಬು ಭರವಸೆ ನೀಡಿದ.
“ನಿಮ್ಮ ಮಗಳಿಗೆ ಒಳ್ಳೆಯದಾಗಬೇಕು ಅಂದ್ರೆ ನೀವು ಮುಚ್ಬಿಡಬಾರದು” ಒತ್ತಾಯಿಸಿದ.
ನೀಲಾ ಹೇಳಲಾರಂಭಿಸಿದಳು. ತನ್ನ ಮತ್ತು ವಿಕಾಸನ ಸ್ನೇಹ. ತಂದೆಯ ಅನಾರೋಗ್ಯ. ಜಗದೀಶ ತನ್ನ ಬಾಳಿನಲಿ ಖಳನಾಯಕನಂತೆ ಬಂದು ತಮ್ಮ ಪ್ರೇಮವನ್ನು ಹೊಸಕಿ ಹಾಕಿದ್ದು, ತಾನು ಮತ್ತೊಬ್ಬನ ಹೆಂಡತಿಯಾದ ಮೇಲೆ ಬಂದ ವಿಕಾಸ್ ತನ್ನ ತಾಳಿಗೆ ಅಂಜಿ ಏನೂ ಹೇಳದೆ ಹೊರಟು ಹೋಗಿದ್ದು, ಆ ಕ್ಷಣದಲ್ಲಿ ಆತ ಕರೆದಿದ್ದರೆ, ತಾಳಿ ಕಿತ್ತೆಸೆದು ತಾನು ಅವನ ಹಿಂದೆ ಹೋಗಲು ಸಿದ್ಧ ವಿದ್ದದ್ದು, ಅವನ ನೆನಪಿನಲ್ಲಿಯೇ ಇದ್ದ ತನ್ನನ್ನು ಬಲವಂತವಾಗಿ ಗಂಡನ ಅಧಿಕಾರ ತೋರಿ ತನ್ನವಳನ್ನಾಗಿ ಮಾಡಿಕೊಂಡು ಅನುವಿನ ಹುಟ್ಟಿಗೂ ಕಾರಣವಾದದ್ದು, ಅನು ಬೇಗ ಈ ಭೂಮಿಗೆ ಬಂದಳೆಂದು ಅವಳ. ಹುಟ್ಟಿನ ಮೇಲೆಯೇ ಸಂಶಯ ತಾಳಿ, ಇಂದಿನವರೆಗೂ ಮಗಳೆಂದು ಒಪ್ಟಿಕೊಳ್ಳದೇ ಇದ್ದದ್ದು ಎಲ್ಲವನ್ನೂ ಹೇಳಿಬಿಟ್ಟಳು. ‘ಅಪ್ಪಾ’ ಎಂದು ಹಾತೊರೆದು ಹತ್ತಿರ ಹೋದ ತನ್ನ ಕರುಳ ಕುಡಿಯನ್ನು ಜಾಡಿಸಿ ಒದೆಯುತ್ತಿದ್ದುದು. ಮಾತು ಮಾತಿಗೂ ತನ್ನ ಪ್ರೇಮವನ್ನು ನೆನಪಿಸಿ ಹಂಗಿಸಿ, ಹಿಂಸಿಸುತ್ತಿದ್ದುದು, ಬೆಳೀತಾ ಬೆಳೀತಾ ಅನುವಿಗೆ ತಂದೆಯ ಮೇಲೆ ತಿರಸ್ಕಾರ, ದ್ವೇಷ, ಅಸಹ್ಯ ಮೂಡಿಸಿಕೊಂಡಿದ್ದು, ಈ ಅಪ್ಪ, ಆ ಪ್ರೇಮಿ ಇವರಿಬ್ಬರೇ ತಾಯಿಯ ಬಾಳು ಕಣ್ಣೀರಾಗಲು ಕಾರಣವೆಂದು ತಿಳಿದಾಗಿನಿಂದ ಗಂಡಸರೆಂದರೆ ದ್ವೇಷ, ಅಸಹ್ಯ ಜುಗುಪ್ಸೆ. ಇತ್ತೀಚೆಗೆ ದ್ವೇಷ, ಅಸಹ್ಯ ಕಡಿಮೆ ಮಾಡಿಕೊಂಡರೂ ಗಂಡೆಂದರೆ ಅಸಡ್ಡೆ ಅಲಕ್ಷ್ಯ. ತನ್ನ ಬದುಕಿನಲ್ಲಿ ಎಂದಿಗೂ ಗಂಡಿಗೆ ಸ್ಥಾನ ಕೊಡಲಾರೆ ಎಂಬ ಹಟ, ಎಲ್ಲವನ್ನೂ ಹೇಳಿಕೊಂಡು ಬಿಕ್ಕಿ ಬಿಕ್ಕಿ ಅತ್ತಳು ನೀಲಾ. ತನ್ನ ಅನುವಿನ ಹಿಂದೆ ಇಷ್ಟೊಂದು ದುರಂತವಿದೆಯೇ, ಅನು ಇಷ್ಟೊಂದು ನರಳಿದ್ದಾಳೆಯೇ, ತನ್ನ ಹುಟ್ಟನ್ನು ಸಂಶಯಿಸುವ ಅಪ್ಪ, ತನ್ನ ಇಡೀ ಬದುಕಿನಲ್ಲಿ ಅಪ್ಪನ ಪ್ರೀತಿ ವಾತ್ಸಲ್ಯವನ್ನು ಕಂಡಿಲ್ಲದ ಅನು ಅದೆಷ್ಟು ಸಂಕಟಪಟ್ಟಿದ್ದಾಳೆ. ಆ ವಾತ್ಸಲ್ಯಕ್ಕಾಗಿ ಅದೆಷ್ಟು ಹಂಬಲಿಸಿ ಸೋತು ಹೋಗಿದ್ದಾಳೆ. ಹೇಗೆ ಸಹಿಸಿಕೊಂಡಿದೆ ಆ ಪುಟ್ಟ ಹೃದಯ ಇದನ್ನೆಲ್ಲ. ಅಮ್ಮನ ದುರಂತ ಪ್ರೇಮ, ದಾಂಪತ್ಯದ ವೈಫಲ್ಯತೆ, ತಂದೆಯ ಕಠಿಣತೆ, ಹೆತ್ತಪ್ಪನ ತಿರಸ್ಕಾರ, ಅವಹೇಳನ. ಇದೆಲ್ಲ ಕಂಡ ಮನಸ್ಸು ಛಿದ್ರವಾಗದೆ ಇರುವುದೇ ಅದ್ಭುತವೆನಿಸುತ್ತಿದೆ. ಅನು ಗಟ್ಟಿ ಮನಸ್ಸಿನವಳಾದ್ದರಿಂದ ಹೀಗಾದರೂ ಇದ್ದಾಳೆ.
ಆರ್ದನಾಗಿ ಕುಳಿತುಬಿಟ್ಟ ರಾಕೇಶ. ತನ್ನೊಲವಿನ ಹುಡುಗಿಗಾಗಿರುವ ಆಘಾತವನ್ನು ಸಹಿಸದಾದ. ಅನುವಿನ ಮೇಲಿನ ಒಲವು ಮತ್ತಷ್ಟು ಹೆಚ್ಚಾಯಿತು.
ಈ ಕೂಡಲೇ ಅನುವನ್ನು ಬಾಹುಗಳಲ್ಲಿ ಬಂಧಿಸಿ, “ನಿನಗೆ ಸಿಗದೇ ಇದ್ದ ಪ್ರೀತಿ, ಪ್ರೇಮ ಎಲ್ಲವನ್ನು ಬೊಗಸೆಯಲ್ಲಿ ತುಂಬಿ ತುಂಬಿ ಕೊಡುತ್ತೇನೆ. ನೀನಿಟ್ಟ ಹೆಜ್ಜೆಯ ಗುರುತು ಅಳಿಸಿ ಹಾಕಿ ಬೆಳದಿಂಗಳ ಮಳೆ ಕರೆಯುತ್ತೇವೆ. ಹೆತ್ತಪ್ಪನಷ್ಟೆ ಪ್ರೀತಿ ಕೊಡಲು ನನ್ನ ಹೆತ್ತಪ್ಪ ಕಾಯುತ್ತಿದ್ದಾರೆ. ಹೆತ್ತಮ್ಮನ ಪ್ರೀತಿ ಮರೆಸುವ ಅಮ್ಮ ನಿನ್ನ ತನ್ನ ಮಡಿಲಿನಲ್ಲಿಟ್ಟು ಮಗುವಿನಂತೆ ಲಾಲಿಸುತ್ತಾಳೆ. ಬಂದು ಬಿಡು ಅನು. ನನ್ನ ಬಾಳಿನಲ್ಲಿ ಹೊಸ ಬೆಳಕಾಗಿ ಬಂದು ಬಿಡು ಅನು” ಎಂದೆಲ್ಲಾ ಹೇಳಬೇಕೆನಿಸಿತು.
ಆದರೆ ಅದು ಸಾಧ್ಯವಿರಲಿಲ್ಲ. ಹೇಳಿದರೆ ಅದ್ಯಾವುದನ್ನು ಅರ್ಥೈಸಿಕೊಳ್ಳಲಾರದ ನೊಂದ ಹೃದಯ ತಣ್ಣಗೆ ಇದ್ದು ಬಿಡುತ್ತದೆ. ಮೊದಲು ಆ ಹೃದಯದಲ್ಲಿ ಆಗಿರುವ ಗಾಯವನ್ನು ಸಂಪೂರ್ಣವಾಗಿ ವಾಸಿ ಮಾಡಬೇಕು. ಆ ಹೃದಯದಲ್ಲಿ ಯಾವ ಕಲೆಯ ಗುರುತೂ ಕಾಣದಂತಿರಬೇಕು. ಆಮೇಲೆ, ಆಮೇಲೆ ತನ್ನ ಪ್ರೀತಿ ಪ್ರೇಮ ಎಲ್ಲಾ.
“ಅಂಟಿ, ನಿಮ್ಮ ನಗುಮೊಗದ ಹಿಂದೆ ಇಷ್ಟೆಲ್ಲಾ ವ್ಯಥೆಯ ಕಥೆ ಇದೆ ಅಂತ ನಾನು ಖಂಡಿತಾ ಊಹಿಸಿರಲಿಲ್ಲ. ನಿಮ್ಮ ಬದುಕಿನ ಕರಾಳ ಛಾಯೆ ಅನುವಿನ ಮನಸ್ಸನ್ನು ಈ ರೀತಿ ಸಂಘರ್ಷಿಸಿದೆ ಅನ್ನೋ ಕಲ್ಪನೆ ಕೂಡ ನನಗಿರಲಿಲ್ಲ. ಎಲ್ಲವನ್ನು ಕೆದಕಿ ನಿಮಗೆ ನೋವು ಕೊಟ್ಟುಬಿಟ್ಟೆ. ಆದರೆ ಒಂದಂತೂ ನಿಜಾ ಆಂಟಿ. ನಾನೇ ನಿಮ್ಮ ಅಳಿಯ. ನಿಮ್ಮ ಮಗಳೇ ನಮ್ಮ ಮನೆಯ ಸೊಸೆ. ನಾ ಬರ್ತಿನಿ ಅಂಟಿ, ಹೊತ್ತಾಯಿತು” ಎದ್ದುಬಿಟ್ಟ. ಮೌನವಾಗಿಯೇ ಅವನನ್ನು ಬೀಳ್ಕೊಟ್ಟಳು.
ಅನು ಬಗ್ಗೆ ಮತ್ತಷ್ಟು ಸ್ಟಡಿ ಮಾಡಲು ನಿರ್ಧರಿಸಿದ. ಆಸ್ಪತ್ರೆಯಲ್ಲಿದ್ದರೂ ಅನುವಿನದೆ ಯೋಚನೆ. ಯಾರಲ್ಲಿಯೂ ಹೇಳಿಕೊಳ್ಳದಾದ. ಹೇಳದೆಯೂ ಇರದಾದ.
ಒಂದೆರಡು ದಿನಗಳು ಕಳೆದವು. ಅನುವನ್ನು ಭೇಟಿ ಮಾಡದೆಯೇ ಕಳೆದನು. ಸುಶ್ಮಿತಳನ್ನು ಒಮ್ಮೆ ಕಂಡು ಮಾತಾಡಬೇಕೆನಿಸಿತು. ಈಗವಳು ಏಕಾಂಗಿಯಾಗಿ ಸಿಕ್ಕಾಳೆಯೇ. ಏನಾದರಾಗಲಿ ಪ್ರಯತ್ನಿಸಿಯೇಬಿಡಲು ನಿರ್ಧರಿಸಿ ಫೋನ್ ಮಾಡಿದ.
ಸುಶ್ಮಿತಾ, ಅಭಿ, ಹನಿಮೂನ್‌ಗೆ ಹೊರಡುವ ತಯಾರಿ ನಡೆಸಿದ್ದರು. ಮನೆಗೆ ಬರಲು ಒತ್ತಾಯಿಸಿದಳು ಸುಶ್ಮಿತಾ. ಉತ್ಸಾಹದಿಂದ ಬಂದರೆ ಅಭಿಯೂ ಜೊತೆಯಲ್ಲಿಯೇ ನಿಂತು ಸ್ವಾಗತಿಸಿದಾಗ ಮನದಲ್ಲಿ ಅಶಾಂತಿ ಕಾಣಿಸಿತು. ಅಭಿಯ ಮುಂದೆ ಹೇಗೆ ಅನುವಿನ ಬಗ್ಗೆ ಮಾತನಾಡುವುದೆಂದು ತಿಳಿಯದೆ ಸುಮ್ಮನೆ ಕುಳಿತೇ ಇದ್ದ.
“ಬನ್ನಿ ರಾಕೇಶ್, ಮೇಲೆ ಪ್ರೈವೆಸಿ ಇರುತ್ತದೆ. ಅಲ್ಲಿಯೇ ಮಾತನಾಡೋಣ. ಅಭಿ ಪ್ಲೀಸ್, ಟೀ ಮಾಡಿ” ಎನ್ನುತ್ತಾ ಮೇಲೆ ಕರೆದೊಯ್ದಳು.
ರಾಕೇಶನ ತಳಮಳ ಅವಳಿಗರ್ಥವಾಗಿತ್ತು.
“ಈಗ್ಹೇಳಿ, ನಿಮ್ಮ ಟ್ರ್ಯಾಕ್‌ಗೆ ಅನು ಬಂದಳಾ. ನಿಮ್ಮ ಪ್ರಯತ್ನ ಎಲ್ಲಿವರೆಗೆ ಬಂತು” ಧ್ವನಿಯಲ್ಲಿ ಅದೇ ಕೀಟಲೆ.
“ನೋ ಛಾನ್ಸ್ ಸುಶ್ಮಿತಾ. ಅವಳು ನನ್ನ ಟ್ರ್ಯಾಕ್‌ಗೆ ಬರೋ ಹಾಗೆ ಕಾಣಿಸ್ತಿಲ್ಲ”
“ಸುಶ್ಮಿತಾ. ಅನು ಬಗ್ಗೆ ನಿಮ್ಮತ್ರ ತಿಳ್ಕೋಬೇಕು ಅಂತ ಇಲ್ಲಿವರೆಗೂ ಬಂದು ನಿಮ್ಮ ಮಧುಚಂದ್ರದ ಮೂಡ್ ಕೆಡಿಸುತ್ತಾ ಇದ್ದೇನೆ.”
“ಓಹ್, ರಾಕೇಶ್, ಅನುಗಾಗಿ ಅಂದ್ರೆ ನಾನು ಈ ಮಧುಚಂದ್ರ ಬಿಡೋಕು ಸಿದ್ದವಾಗಿದ್ದೀನಿ. ಕೇಳಿ ನಿಮಗೆ ಏನೇನು ಡೀಟೇಲ್ಸ್ ಬೇಕು.”
“ಅನು ನಾರ್ಮಲ್ ಆಗಿಲ್ಲ ಅಂತ ನಿಮ್ಗೆ ಅನಿಸುವುದಿಲ್ಲವೇ. ಅಂದ್ರೆ ಆಕೆಗೆ ನಿಮ್ಮಂಥ ಹುಡುಗಿಯರಿಗೆ ಇರಬಹುದಾದ ಈ ಪ್ರೇಮ, ಪ್ರೀತಿ, ಮದುವೆ ಬಗ್ಗೆ ಯಾಕೆ ಆಸಕ್ತಿ ಇಲ್ಲ. ನನ್ನಂಥ ಗಂಡು ಜೊತೆಯಲ್ಲಿದ್ದಾಗಲೂ ಅವಳ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಾಣಲ್ಲವಲ್ಲ. ಮುಂದೆ ಮದ್ವೆ ಆದ್ರೆ ಗಂಡನ ಜೊತೆ ಸರಿಯಾಗಿ ಇರ್ತಾಳಾ. ಐ ಮೀನ್ ದಾಂಪತ್ಯ ಜೀವನ ನಡೆಸುತ್ತಾಳಾ ಅಂತಾ.”
ಕೊಂಚ ಯೋಚಿಸಿದಳು. ಈ ಬಗ್ಗೆ ಏನು ಹೇಳಬೇಕೋ ಅವಳಿಗೆ ಗೊತ್ತಾಗಲಿಲ್ಲ. ಏನ್ ಹೇಳಿದ್ರೆ ಸರಿ ಏನ್ ಹೇಳಿದ್ರೆ ತಪ್ಪು ಅನ್ನೋ ದ್ವಂದ್ವ ಕಾಡೋಕೆ ಪ್ರಾರಂಭವಾಯಿತು. ಅನು ತನ್ನನ್ನು ಅಂತರಂಗದ ಗೆಳತಿಯಾಗಿ ತಗೊಂಡು ಅವಳ ಅಂತರಂಗವನ್ನೇ ಬಿಚ್ಚಿಟ್ಟಿದ್ದಾಳೆ. ಯಾರೊಂದಿಗೂ ಹೇಳಲಾರದೆ ಎಷ್ಟೋ ವಿಷಯಗಳು, ಅವಳೆದೆಯ ಕವಾಟದ ಗೌಪ್ಯತೆ ಎಲ್ಲಾ ಎಲ್ಲಾವೂ ತನಗೆ ಪಾರದರ್ಶಕ. ಆದರೆ ಅದನ್ನ ರಾಕೇಶ್ ಮುಂದೆ ಹೇಗೆ ಹೇಳುವುದು. ಅನು ಇಟ್ಟ ನಂಬಿಕೆಯನ್ನು ಹೇಗೆ ಕಳೆಯುವುದು. ಅರ್ಥವೇ ಆಗದೆ ಏನೂ ಹೇಳದಾದಳು.
“ಸುಶ್ಮಿತಾ, ಅನುವಿನ ಗೌಪ್ಯತೆಗಳೆಲ್ಲ ನನಗೆ ತಿಳಿದುಬಿಟ್ಪರೆ, ಮುಂದೇನಾಗುತ್ತೋ ಅನ್ನೋ ಆತಂಕ ಅಲ್ವೇ ನಿಮ್ಮನ್ನು ಕಾಡ್ತ ಇರೋದು. ನಾನು ಮೆಚ್ಚಿರುವ ಹುಡುಗಿ, ಮುಂದೆ ಕೈಹಿಡಿಯಬೇಕಾದ ಹುಡುಗಿ ಅನು, ನಮ್ಮಿಬ್ಬರ ಹಿರಿಯರು ಒಪ್ಪಿ ಈ ಮದ್ವೆ ನಡೆಸುವ ಸನ್ನಾಹದಲ್ಲಿದ್ದಾರೆ. ಯಾವ ಕಾರಣಕ್ಕೂ ಅನು ನನ್ನ ಹೃದಯದಿಂದ ಹೊರ ಹೋಗಲು ಸಾಧ್ಯವಿಲ್ಲ.”
“ಆದರೆ ಅನುನಾ ಒಪ್ಟಿಸೋದು ಅಷ್ಟು ಸುಲಭ ಅಲ್ಲಾ ಅವಳು ಯಾವ ಕಾರಣಕ್ಕೂ ಒಬ್ಬ ಪುರುಷ ತನ್ನ ಬಾಳಿನಲ್ಲಿ ಪ್ರವೇಶಿಸುವುದನ್ನು ಒಪ್ಪಲಾರಳು.”
“ಅದೇ, ಅದೇ ಏಕೆ ಅಂತ ನಾನು ತಿಳ್ಕೋಬೇಕಿತ್ತು. ಯಾಕೆ ಆಕೆ ಪುರುಷರನ್ನ ಅವಾಯ್ಡ್ ಮಾಡ್ತಾಳೆ. ಆಕೆ ಪುರುಷದ್ವೇಷಿಯೇ?”
“ದ್ವೇಷಿ ಅಂತನೂ ಸಂಪೂರ್ಣವಾಗಿ ಹೇಳೋಕೆ ಆಗಲ್ಲ. ಹಾಗಿದ್ದಿದ್ರೆ ಅಭಿ ಜೊತೆ ಆಗಲಿ, ನಿಮ್ಮ ಜೊತೆ ಆಗಲಿ ಸ್ನೇಹವಾಗಿ ಇರ್ತ್ತಾ ಇದ್ದಳಾ. ನನಗನ್ನಿಸುತ್ತೆ. ಪುರುಷರನ್ನು ಒಬ್ಬ ಸ್ತ್ರೀಯಾಗಿ ನೋಡಲಾರಳು ಅಂತಾ.”
“ಅಂದ್ರೆ ಪ್ರಕೃತಿ ಪುರುಷರ ಸಮಾಗಮವೇ ಬದುಕಿನ ಸಾರ್ಥಕತೆ, ಅದು” ಪ್ರಕೃತಿಯ ಸಹಜವಾದ ನಿಯಮ. ಇದ್ಯಾವುದರ ಹೊಳಹು ಆಕೆಗೆ ಬೇಕಿಲ್ಲ. ಸ್ನೇಹದ ಗಡಿ ದಾಟಲು ಯಾರಿಗೂ ಅವಕಾಶ ಕೊಡಲಾರಳು. ಪ್ರಕೃತಿಯ ವಿರುದ್ಧ ಹೋಗುವ ಹಟ ಅವಳದು. ಇಂತಹ ಮನಸ್ಥಿತಿ ಇರೋ ಎಷ್ಟೋ ಗಂಡು ಹೆಣ್ಣುಗಳಿಲ್ವೆ. ಆಜನ್ಮ ಬ್ರಹ್ಮಚಾರಿಗಳಾಗಿಯೇ ಆದರ್ಶವಾಗಿರುವುದನ್ನು ನಾವು ನೋಡ್ತಾ ಇಲ್ವಾ ರಾಕೇಶ್. ಅಂತಹ ಆದರ್ಶ ಅನುವಿಗೂ ಇರಬಹುದು.”
“ಆದರ್ಶ, ಖಂಡಿತಾ ಅಲ್ಲಾ ಸುಶ್ಮಿತಾ. ಹಿಂತೆಗೆತ.” ನಿಲ್ಲಿಸಿದ.
“ಅಧೈರ್ಯ, ಹೇಡಿತನ, ಬದುಕಿನಲ್ಲಿ ಯಾರಿಗೋ ಎಂದೋ ಏನೋ ಆಯ್ತು. ಅದು ತನ್ನ ಬಾಳಿನಲ್ಲಿ ಆಗಬಹುದು ಅನ್ನೋ ಭೀತಿ, ತನಗೆ ಪ್ರಿಯರಾದವರ ನೋವಿಗೆ ಪ್ರತಿಸ್ಪಂದಿಸಿ, ಒಡಮೂಡಿರುವ ದ್ವೇಷ, ಜುಗುಪ್ಸೆ, ಇವೇ ಇವೇ ಕಾರಣ ಸುಶ್ಮಿತಾ ಅನುವಿನ ವಿಚಿತ್ರ ನಡತೆಗೆ.”
“ಹೇಗೆ ಹೇಳ್ತೀರಾ, ಅನು ಧೈರ್ಯವಂತೆ, ಪ್ರತಿಯೊಂದನ್ನೂ ತೀವ್ರವಾಗಿ ಅಧ್ಯಯನ ನಡೆಸುವ ವಿಚಾರವಂತೆ, ಬದುಕಿನಲ್ಲಿ ಸೋಲು ಕಾಣದ ಛಲವಾದಿ, ಪ್ರತಿಯೊಂದು ಅಂಶಕ್ಕೂ ಪ್ರಾಮುಖ್ಯತೆ ನೀಡಿ ಬದುಕಿಗೆ ಅಳವಡಿಸಿಕೊಳ್ಳೋ ಬುದ್ಧಿವಂತೆ, ಬದುಕಿನಲ್ಲಿ ಮುನ್ನುಗ್ಗುವ ದಾರ್ಢ್ಯ ಆಕೆಗಿದೆ. ಇಷ್ಟೆಲ್ಲ ಇರೋ ಅನುವನ್ನು ಹೇಗೆ ಹೇಡಿ ಅಂತಿರಾ” ವಿರೋಧಿಸಿದಳು. ರಾಕೇಶನ ವಿಚಾರಸರಣಿಯನ್ನು ಒಪ್ಪದಾದಳು ಸುಶ್ಮಿತಾ.
“ನಿಜಾ. ನೀವು ಹೇಳ್ತಾ ಇರೋದೆಲ್ಲಾ ನಿಜಾ. ಆದ್ರೆ ಆ ಗುಣಗಳು ಇರೋ ಅಪೂರ್ವವಾದ ಹೆಣ್ಣು ಅನು. ಆದ್ರೆ ಎಲ್ಲರೂ ನಡೆಸುವ ಸಹಜ ಬದುಕನ್ನೇಕೆ ಆಕೆ ಒಪ್ತಾ ಇಲ್ಲ. ಇದಕ್ಕೆ ಆದರ್ಶವೇ ಕಾರಣನಾ. ಇಲ್ಲ. ಖಂಡಿತಾ ಅದಲ್ಲ ಕಾರಣ. ಹೆತ್ತ ತಾಯಿ ಬಯಸೋ ಬದುಕನ್ನ ಯಾಕೆ ಆಕೆ ಸ್ವೀಕರಿಸುತ್ತಿಲ್ಲ. ತಾಯಿ ಅಂದ್ರೆ ಪ್ರಾಣ, ಆ ತಾಯಿಗಾಗಿ ತಾನು ಏನು ಮಾಡೋಕೆ ಸಿದ್ದ ಅನ್ನೋ ಅನು, ಆ ತಾಯಿಯ ಕನಸು ನಿರೀಕ್ಷೆಗಳನ್ನು ಯಾಕೆ ನಿಜಾ ಮಾಡ್ತಾ ಇಲ್ಲ.”
“ಕಾರಣ ಇದೆ ರಾಕೇಶ್, ಕಾರಣ ಇದೆ. ನೀವು ಹೇಳಿದಂತೆ ಅನು ಆದರ್ಶದಿಂದ ತನ್ನ ಬದುಕಿನತ್ತ ವಿಮುಖಳಾಗಿಲ್ಲ. ತಾನು ಕಂಡ ಕ್ರೂರ ಸತ್ಯ ಅವಳನ್ನ ಹಾಗೆ ಮಾಡಿದೆ. ಹೇಳಿಬಿಡ್ತಿನಿ ಎಲ್ಲಾ ಹೇಳಿಬಿಡ್ತಿನಿ. ಈ ಸತ್ಯ ಗೊತ್ತಾಗಿ ನಿಮ್ಮಿಂದೇನಾದ್ರೂ ಆಕೆಯ ಬದುಕು ತಿರುವು ಪಡೆಯಬಹುದು ಅನ್ನೋ ನಿರೀಕ್ಷೆ ಕಾತರದಿಂದ ಸತ್ಯವನ್ನು ನಿಮ್ಮ ಮುಂದೆ ಇಡ್ತಿನಿ” ತನಗೆ ಗೊತ್ತಿದ್ದ ಎಲ್ಲವನ್ನು ಹೇಳತೊಡಗಿದಳು.
ವಿಷಮ ದಾಂಪತ್ಯದ ಫಲವಾಗಿ ಜನಿಸಿದ ಅನುವಿಗೆ ಸಿಗಬೇಕಾದ ಕನಿಷ್ಟ ಪ್ರೀತಿಯೂ ದೊರೆಯದೆ ತಂದೆಗೆ ಎರವಾದಳು. ತನಗೆ ದಕ್ಕದ ಪ್ರೀತಿ, ಅದರ ಹೆತ್ತಮ್ಮನಿಗಾದರೂ ಲಭ್ಯವಾಗಲಿ ಅಂತ ಆ ಪುಟ್ಟ ಹೃದಯ ಬಯಸಿತ್ತು.
“ಅಪ್ಪಾ ಯಾಕಮ್ಮ ನನ್ನ ಹತ್ರ ಮಾತೇ ಆಡಲ್ಲ. ಯಾಕೆ ನಂಗೆ ಬೈಯ್ತರೆ” ಅಂತ ಪುಟ್ಟ ಅನು ಕೇಳುತ್ತಿದ್ದರೆ ಉತ್ತರಿಸಲಾರದೆ ತತ್ತರಿಸಿ ಹೋಗುವ ನೀಲಾ
“ಅಪ್ಪನಿಗೆ ಕೋಪ ಜಾಸ್ತಿ ಪುಟ್ಬಾ. ಅದಕ್ಕೆ ರೇಗ್ತಾರೆ, ನೀನು ಅವರ ಹತ್ರ ಹೋಗಲೇಬೇಡ. ಆಗ ನಿಂಗೆ ಬೈಯ್ಯೋದೇ ಇಲ್ಲ” ಎಂದು ಸಮಾಧಾನಿಸುತ್ತಿದ್ದಳು.
“ಎದುರು ಮನೆ ರಶ್ಮಿಗೆ ಮಾತ್ರ ಅಪ್ಪ ಬೈಯಲ್ಲ. ಎತ್ಕೊಂಡು ಮುದ್ದಾಡ್ತಾ ಇರ್ತಾರೆ” ಆ ಪುಟ್ಟ ಹೃದಯಕ್ಕೆ ಅರ್ಥವಾಗಿರಲಿಲ್ಲ. ತನ್ನನ್ನ ತನ್ನ ಅಮ್ಮನನ್ನ ಬಿಟ್ಟು ಈ ಪ್ರಪಂಚದ ಎಲ್ಲರಿಗೂ ಅಪ್ಪ ಒಳ್ಳೆಯವನಲಿ ಅಂತಾ.
ಮಗಳ ಪ್ರಶ್ನೆಗೆ ನಿರುತ್ತರಳಾಗಿ ಬಿಡುತ್ತಿದ್ದಳು. ಇಂತಹ ಪ್ರಶ್ನೆ ಅವಳಿಂದ ಬಾರದಂತೆ ಗಂಡನಿಂದ ದೂರವೇ ಮಗಳನ್ನು ಇರಿಸತೊಡಗಿದಳು.
ಆ ಪುಟ್ಟ ವಯಸ್ಸಿಗೆ ಅನು ಪ್ರತ್ಯೇಕ ಕೋಣೆಯಲ್ಲಿ ಇರತೊಡಗಿದಳು. ಗಂಡ ಮನೆಯಿಂದ ಹೊರ ಹೋಗುವ ತನಕ, ಹೊರಗಿನಿಂದ ಬಂದ ಮೇಲೆ ಯಾವ ಕಾರಣಕ್ಕೂ ಅನುವನ್ನು ಹೊರಗೆ ಬರದಂತೆ ನಿರ್ಬಂಧಿಸತೊಡಗಿದಳು ನೀಲಾ.
ಪುಟ್ಟ ಕೋಣೆಯೇ ಅನುವಿನ ಪ್ರಪಂಚವಾಯಿತು. ಅಪ್ಪನನ್ನು ನೋಡದೆಯೇ ಕಾಲ ಕಳೆಯಹತ್ತಿದಳು. ಎಂದಾದರೊಮ್ಮೆ ಎದುರಾದರೂ ಪುಳಕ್ಕನೆ ತನ್ನ ಕೋಣೆಗೆ ಬಂದು ಸೇರಿಕೊಂಡು ಬಿಡುತ್ತಿದ್ದಳು. ಅಪ್ಪ ಹೋದ ಮೇಲೆ ಆ ಮನೆಯಲ್ಲಿ ಅಮ್ಮ ಮಗಳಿಬ್ಬರದೇ ಸಾಮ್ರಾಜ್ಯ. ಯಾವ ಕಾರಣಕ್ಕೂ ಮಗಳು ತಂದೆ ಪ್ರೀತಿ ಬಯಸದಂತೆ ತಾನೇ ಯಥೇಚ್ಛವಾಗಿ ಪ್ರೀತಿ ಉಣಿಸಲಾರಂಭಿಸಿದಳು. ಅಪ್ಪಾ ಎಂದಪ್ಪಿಕೊಳ್ಳಹೋದ ಮಗುವಿಗೆ ಕಾಲಿನಿಂದ ಒದ್ದು ಗಾಯಗೊಳಿಸಿದಾಗಿನಿಂದ ಅನು ಅಪ್ಪನ ಮುಖ ನೋಡಲೇ ಅಂಜುತ್ತಿದ್ದಳು.
ಹೀಗೆ ಬಾಲ್ಯ ಕಳೆದಳು. ಮೊದ ಮೊದಲು ಅಮ್ಮ ತನ್ನ ಜೊತೆಯೇ ಮಲಗಿರುತ್ತಾಳೆಂದು ನಂಬಿದ್ದ ಅನುವಿಗೆ, ತನಗೆ ನಿದ್ರೆ ಬಂದೊಡನೆಯೇ ಅಮ್ಮ ಈ ರೂಮಿನಿಂದ ಹೊರಗೆದ್ದು ಅಪ್ಪನ ರೂಮಿಗೆ ಹೋಗುತ್ತಾಳೆಂಬ ಸತ್ಯ ಕ್ರಮೇಣ ಅರ್ಥವಾಗತೂಡಗಿತು. ತನ್ನನ್ನು ತಬ್ಬಿ ಮಲಗಿಸಿ ಬಿಸಿಯ ಅಪ್ಪುಗೆಯಲಿ ಬಳಸಿ ನಿದ್ರೆ ಬರಿಸಿ ಅದೇಕೆ ಓಡಿ ಹೋಗುವಳೋ ಎಂದು ಮುನಿಸಿಕೊಳ್ಳುತ್ತಿದ್ದಳು.
ತಾನು ಹೋಗಿಯೇ ಇಲ್ಲ ಎಂದು ಸಾಧಿಸುವ ಅಮ್ಮನ ಮನಸ್ಸಿಗೆ ನೋವು ಉಂಟು ಮಾಡಬಾರದೆಂದು ಸುಮ್ಮನಾಗಿಬಿಡುತ್ತಿದ್ದಳು.
ಅದೊಂದು ದಿನ ಅಮ್ಮ ನರಳುವ ಧ್ವನಿ ಕಿವಿಗೆ ಬಿದ್ದು ಧಿಗ್ಗನೆದ್ದು ಕುಳಿತಳು. ಪಕ್ಕದಲ್ಲಿ ತಡಕಾಡಿದಳು. ಅಮ್ಮನ ಸುಳಿವಿಲ್ಲ. ನಡುಗುವ ಎದೆಯನ್ನು ಕೈಯಲಿರಿಸಿಕೊಂಡು ಭೀತಿಯಿಂದಲೇ ನಿಧಾನವಾಗಿ ಎದ್ದು ಬಾಗಿಲ ಬಳಿ ಬಂದಳು. ನೀಲಾ ಸಾಮಾನ್ಯವಾಗಿ ಹೊರ ಹೋಗುವಾಗ ಬಾಗಿಲನ್ನು ಮುಂದಿನಿಂದ ಚಿಲಕ ಹಾಕಿಯೇ ಹೋಗಿರುತ್ತಿದ್ದಳು. ಅಂದೇನಾಗಿತ್ತೋ ಬಾಗಿಲು ಹಾರು ಹೊಡೆದಿತ್ತು.
ಅಪ್ಪನ ರೂಮಿನತ್ತ ಬಂದು ಮೆಲ್ಲನೆ ಬಾಗಿಲು ತಳ್ಳಿದಳು. ಒಳಗಿನಿಂದ ಬೋಲ್ಟ್ ಹಾಕಿರಲಿಲ್ಲ. ಅಲ್ಲಿನ ದೃಶ್ಯ ಅವಳೆದೆಯನ್ನು ನಡುಗಿಸಿತು. ಬೀಭತ್ಸ, ನೋಡಬಾರದ್ದನ್ನು ನೋಡಿದ್ದಳು. ಕಾಣಬಾರದ್ದನ್ನು ಕಂಡಿದ್ದಳು. ಅಯ್ಯೋ ಬಿಟ್ಟುಬಿಡಿ ನನ್ನ. ನನ್ನ ಯಾಕೆ ಹೀಗೆ ಹಿಂಸಿಸಿ ಕೊಲ್ತಿರಾ. ನಿಮ್ಮ ದಮ್ಮಯ್ಯ ನನ್ನ ಬಿಡಿ ಅಮ್ಮ ಗೋಗರೆಯರಿತ್ತಿದ್ದಾಳೆ. ಪೈಶಾಚಿಕ ತೃಪ್ತಿಯಿಂದ ರಕ್ಕಸನಂತೆ ವಿಜೃಂಭಿಸುತ್ತಿದ್ದಾನೆ. ನಾಯಿಯಂತೆ ಸಿಕ್ಕಿದಲ್ಲಿ ಕಚ್ಚಿ ಹಿಂಸಿಸುತ್ತಿದ್ದಾನೆ. ಕಣ್ಣೀರಿಡುತ್ತಾ ನೀಲಾ ಕೈ ಕೈ ಮುಗಿಯುತ್ತಿದ್ದಾಳೆ. ಗಟ್ಟಿಯಾಗಿ ನರಳಿದರೆ ಮಗಳಿಗೆ ಎಲ್ಲಿ ಕೇಳಿತೋ ಎಂದು ಹಲ್ಲು ಕಚ್ಚಿ ನೋವು ತಡೆಯುತ್ತಿದ್ದಾಳೆ. ಕಿರುಚಬೇಡ ಎಂದು ಹೊಡೆಯುತ್ತಿದ್ದಾನೆ. ಹಿಂಸೆ, ಚಿತ್ರಹಿಂಸೆ ಅಂದ್ರೆ ಇದೇನಾ.
ಅನುವೇನು ಚಿಕ್ಕ ಮಗುವಲ್ಲ. ಎಲ್ಲಾ ಅರ್ಥವಾಗುವ ವಯಸ್ಸನ್ನು ತಲುಪಿದ್ದಳು. ಆಗಷ್ಟೆ ಬಾಲ್ಯಾವಸ್ಥೆಯಿಂದ ಯೌವನಕ್ಕೆ ಕಾಲಿರಿಸಿದ ಪುಟ್ಟ ತರುಣಿ. ಸ್ನೇಹಿತರು, ಟಿ.ವಿ., ಪುಸ್ತಕಗಳು ಹೆಣ್ಣು ಗಂಡುಗಳ ಸಂಬಂಧವನ್ನು ಅಸ್ಪಷ್ಟವಾಗಿ ತಿಳಿಸಿಕೊಟ್ಟಿದ್ದವು. ಇಂದು ಅವಳ ಹೃದಯದಲ್ಲಿ ಆ ಭೀಭತ್ಸ್ಯ ದೃಶ್ಯ ಅಚ್ಚೊತ್ತಿಬಿಟ್ಟತು. ಎನೂ ಮಗಳಿಗೆ ತಿಳಿಯಬಾರದೆಂದು ಹಲವಾರು ವರ್ಷಗಳಿಂದ ನೀಲಾ ಪ್ರಯತ್ನಿಸುತ್ತಿದ್ದಳೋ ಇಂದು ಅದೆಲ್ಲವೂ ತಿಳಿದುಬಿಟ್ಟಿತ್ತು. ಅನುವಿಗೆ, ಪ್ರತಿದಿನಾ ರಾತ್ರಿ ಈ ಭಯಾನಕ ಚಿತ್ರಹಿಂಸೆಗೆ ಗುರಿಯಾಗಿದ್ದರೂ ಬೆಳಗಾಗೆದ್ದೊಡನೆ ಅನುವಿನ ಅಮ್ಮನಾಗಿ ಓಡೋಡಿ ಬರುತ್ತಿದ್ದಳು. ತನ್ನ ನೋವಿನ ಕಿಂಚಿತ್ತಾದರೂ ಅನುಭವ ಅವಳಿಗೆ ಕಾಣಿಸದಂತಿರಲು ಶತಪ್ರಯತ್ನ ನಡೆಸಿ ಗೆಲ್ಲುತ್ತಿದ್ದಳು ಅಮ್ಮ. ಅಮ್ಮ, ನಾನೆಷ್ಟೆ ಪ್ರೀತಿಯಿಂದ ದೂರಾಗಿದ್ದೆ ಎಂಬ ಅರಿವು ಮೂಡಿಸಿ ನೋವನುಂಡು ನಲಿವಿನಿಂದಿರುತ್ತಿದ್ದ ಅಮ್ಮ ನಿನ್ನೊಳಗಿನ ವೇದನೆ ನಿಲುಕುವಂತಹುದಲ್ಲ ಅಂತ ಅರ್ಥವಾಯಿತಮ್ಮ. ತನ್ನ ರೂಮಿಗೋಡಿ ಬಂದು ಅಳು ಹೊರಗೆ ಕೇಳಿಸದಂತೆ ಬಾಯಿ ಮುಚ್ಹಿಕೊಂಡಳು.
ತಾನು ಕಂಡದ್ದೆಲ್ಲವನ್ನೂ ಅಮ್ಮನಿಗೆ ಗೊತ್ತಾಗಬಾರದೆಂದು ತನಗೆ ಗೊತ್ತಾಗಿದೆ ಎಂದು ತಿಳಿದರೆ ಅದೆಷ್ಟು ನೋಯುವಳೋ ಎಂದು ಸುಮ್ಮನಾಗಿಬಿಟ್ಟಳು.
ಒಂದೆರಡು ದಿನಗಳಾದ ನಂತರ “ಅಮ್ಮ ನೀನಿಲ್ಲೇ ಮಲಗಬೇಕು. ಯಾವ ಕಾರಣಕ್ಕೂ ಎದ್ದು ಹೋಗಬಾರದು” ಅಂತ ಹಟ ಹಿಡಿದಳು. ಮಗಳ ಮಾತಿಗೆ ಉತ್ತರಿಸಲಾರದೆ ಸೋತಳು. ರಾಕ್ಷಸ ಗಂಡ ತಾನು ಎದ್ದು ಹೋಗದಿದ್ದರೆ ಇಲ್ಲಿಗೇ ಬರಲು ಹೇಸನು. ಮಗಳಿದ್ದಾಳೆ ಎಂಬುದನ್ನು ಬೇಕಾದರೆ ಮರೆತುಬಿಡುತ್ತಾರೆ. ಅದಾಗಬಾರದು. ತನ್ನ ಹೂವಿನಂಥ ಮಗಳಿಗೆ ತನ್ನ ದುರಂತ ಬದುಕಿನ ಕ್ಷಣಗಳ ಅರಿವು ಬರಬಾರದು. ಅನುವಿಗೆ ನಿದ್ರೆ ಬಂದೊಡನೆ ಹುಲಿಯ ಬಾಯಿಗೆ ಆಹಾರವಾಗಲು ತಾನೇ ಹೊರಟು ನಿಲ್ಲುತ್ತಿದ್ದಳು.
ಒಂದಷ್ಟು ದಿನಗಳು ತಿಂಗಳುಗಳು ಕಳೆಯುತ್ತಲೇ “ಅಪ್ಪನ್ನ ಬಿಟ್ಟು ತಾವು ಬೇರೆ ಮನೆಗೆ ಹೋಗೋಣ” ಎಂದು ಕಾಡಲಾರಂಭಿಸಿದಳು.
ಮೊದ ಮೊದಲು ಗಂಭೀರವಾಗಿ ಚಿಂತಿಸದೆ ನೀಲಾ ತಾನು ಗಂಡನನ್ನು ಬಿಟ್ಟು ಹೊರಗಡಿ ಇಟ್ಟು, ಅದು ಮಗಳ ಭವಿಷ್ಯದ ಬದುಕಿನಲ್ಲಿ ಕರಾಳ ಛಾಯೆಯಾಗಬಾರದೆಂದು, ಯಾವ ಕಾರಣಕ್ಕೂ ಆ ವಿಷಯ ಮಾತನಾಡಬಾರದೆಂದು” ಅಪ್ಪಣೆ ಕೊಟ್ಟುಬಿಟ್ಟಳು.
ಇತ್ತೀಚೆಗೆ ಅನುವನ್ನು ಮತ್ತೊಂದು ವಿಚಾರ ಕಾಡಲಾರಂಭಿಸಿತ್ತು. ಅಪ್ಪನ ಎದುರು ಹೋಗುತ್ತಲೇ ಇರಲಿಲ್ಲ. “ಅಕಸ್ಮಾತ್ತಾಗಿ ಎದುರಾದಾಗ ಅಪ್ಪನ ಕಣ್ಣುಗಳಲ್ಲೇನೋ ವಿಚಿತ್ರ ಭಾವ ಕಂಡಳು. ಆತನ ದೃಷ್ಟಿ ಇಡೀ ತನ್ನ ಮೈಯನ್ನು ನೆಕ್ಕುತ್ತಿದೆಯೇನೋ ಎಂದು ಭ್ರಮಿಸಿ ಕ್ಷಣ ಸ್ತಬ್ಧಳಾದಳು. ಇದು ತನ್ನ ಭ್ರಮೆಯೋ ನಿಜವೋ ತಿಳಿಯದೆ ವ್ಯಾಕುಲಗೊಂಡಳು. ಅಂದೇ ಕೊನೆ ಮತ್ತೆಂದಿಗೂ ಆತನ ದೃಷ್ಟಿಗೆ ದೃಷ್ಟಿ ಬೆರೆಸಲಿಲ್ಲ. ಮತ್ತೆಂದಿಗೂ ಆತನ ಮುಂದೆ ಬರುವುದನ್ನು ಬಯಸಲಿಲ್ಲ. ಯಾರಲ್ಲಿಯೂ ಹೇಳಿಕೊಳ್ಳಲಾರದ ಸಂಕಟ, ದುಮ್ಮಾನ ಒತ್ತಡಗಳಿಂದ ರೋಸಿಹೋದಳು. ಅದೆಷ್ಟು ವರ್ಷಗಳ ಕಾಲ ಈ ನೋವನ್ನನುಭವಿಸಿದಳೋ, ಕೊನೆಗೊಮ್ಮ ಮನಸ್ಸಿನ ಒತ್ತಡ ಕಡಿಮೆ ಮಾಡಿಕೊಳ್ಳಲೋಸುಗ ಸುಶ್ಮಿತಳಲ್ಲಿ ಎಲ್ಲವನ್ನೂ ಹೇಳಿಕೊಂಡು ಬಿಟ್ಟಳು.
ಇದಿಷ್ಟು ಅನುವಿನ ಅಂತರಂಗದ ಅಂತರಾಳದ ಗೌಪ್ಯತೆ.
ದೀರ್ಘವಾಗಿ ಎಲ್ಲವನ್ನು ಹೇಳಿ ಸುಸ್ತಾದವಳಂತೆ ಸೋಫಕ್ಕೊರಗಿ ಅರೆಕ್ಷಣ ಕಣ್ಮುಚ್ಚಿದಳು.
ರಾಕೇಶ್ ಸುಶ್ಮಿತ ಹೇಳುತ್ತಿದ್ದದ್ದನ್ನೆಲ್ಲಾ ಕೇಳುತ್ತಾ ಕೇಳುತ್ತಾ ಚಲಿಸಿಹೋದ, ಯಾವ ಉದ್ಗಾರ ತೆಗೆಯಲು ಅವನಿಂದಾಗಲಿಲ್ಲ. ನೀಲಾ ಮುಚ್ಚಿಟ್ಟ ವಿಷಯವನ್ನು ಸುಶ್ಮಿತಾ ಬಿಚ್ಚಿಟ್ಟಿದ್ದಳು. ಗೊತ್ತಿತ್ತು ಅವನಿಗೆ ಇಂತಹ ಯಾವುದೋ ದುರ್ಘಟನೆ ಸೂಕ್ಷ್ಮ ಮನಸ್ಸಿನ ಮೇಲೆ ಅಚ್ಚೊತ್ತಿದೆ. ಅದು ಗಟ್ಟಿಯಾಗಿ ಶಾಶ್ವತವಾಗಿ ಅಂತರಂಗದಲ್ಲಿ ನೆಲೆ ನಿಂತುಬಿಟ್ಟಿದೆ. ಹಾಗೆಂದೇ ಆ ಮನಸ್ಸು ಮಧುರ ಭಾವುಕತೆಗಾಗಲಿ, ತೀವ್ರ ಸಂವೇದನೆಗಳಿಗಾಗಲಿ ಅವಕಾಶ ನೀಡದೆ, ಅವಳ ಹೆಣ್ತನವನ್ನೇ ಮುಚ್ಚಿಹಾಕಿಬಿಟ್ಟಿದೆ. ಅಲ್ಲಿ ಸ್ಪರ್ಶಕ್ಕಾಗಲಿ, ಸಾಮೀಪ್ಯಕ್ಕಾಗಲಿ ಸ್ಪಂದನ ಸಾಧ್ಯವೇ ಇಲ್ಲ. ಅವಳೆದೆಯಲ್ಲಿ ಅನುರಾಗದ ಅಲೆಗಳೇಳದು ಬಯಕೆಗಳ ಉಬ್ಬರವಿರದು, ಕನಿಷ್ಟ ಆಕರ್ಷಿಸಲು ಸಾಧ್ಯವಾಗದು. ಅರ್ಥವಾಯಿತವನಿಗೆ ಅನುವಿನ ತುಮುಲಗಳು ಅರ್ಥವಾಯಿತವನಿಗೆ, ಅನುವಿನ ಜಡತ್ವ, ಅರ್ಥವಾಯಿತವನಿಗೆ ಅನುವಿನ ವಿಕರ್ಷಣೆ.
ಅವನನ್ನು ಆಲೋಚಿಸಲು ಬಿಟ್ಟು ಸುಶ್ಮಿತಾ, “ಅಭಿ ಅಂತಾ ಕೂಗಿದಳು. ಕೆಲಸದ ಹುಡುಗಿಯೊಂದಿಗೆ ಟ್ರೇನಲ್ಲಿ ಕಾಫಿ, ಬಿಸ್ಕತ್ತುಗಳನ್ನಿರಿಸಿಕೊಂಡು ಮಟ್ಟಲೇರಿ ಮೇಲೆ ಬಂದ.
ಸುಶ್ಮಿತಾಳ ಸೂಚನೆಗಾಗಿ ಕಾಯುತ್ತಿದ್ದನೇನೋ. ಹಾಗಾಗಿ ಅವರಿಬ್ಬರ ಮಾತಿನ ನಡುವೇ ಬಾರದೆ, ಸುಶ್ಮಿತಾ ಕರೆದಾಗ ಅಭಿ ಮೇಲೆ ಬಂದ. ಆತನ ಕಾಮನ್‌ಸೆನ್ಸ್ ರಾಕೇಶನಿಗೆ ಬಹು ಮೆಚ್ಚುಗೆಯಾಯ್ತು.
“ಕಾಫಿ ತಗೊಳ್ಳಿ” ಕಪ್ ನೀಡಿ, ಸುಶ್ಮಿತಾಗೂ ನೀಡಿ ತಾನೂ ಒಂದನ್ನ ಕೈಗೆತ್ತಿಕೊಂಡು ಅಲ್ಲಿಯೇ ಕುಳಿತ.
“ರಾಕೇಶ್, ಒಂದು ವಿಷಯ ಗೊತ್ತಾ. ಅಭಿಗೂ ಅನು ಕಂಡ್ರೆ ತುಂಬಾ ಇಷ್ಟ ಇತ್ತು. ಆದರೆ ಅನು ಯಾವ ಕಾರಣಕ್ಕೂ ತನ್ನ ಬದುಕಿನಲ್ಲಿ ಒಬ್ಬ ಪುರುಷನ ಪ್ರವೇಶ ಒಪ್ಪಲಾರೆ ಅಂತ ನಿರಾಕರಿಸಿಬಿಟ್ಟಳು. ಇದೊಂದು ಗುಣ ಬಿಟ್ಟರೆ ಅನು ಅಪ್ಪಟ ಚಿನ್ನನೇ. ನಾನು ಅಭಿನಾ ಇಷ್ಟಪಡ್ತಾ ಇರೋ ವಿಷಯ ತಿಳ್ಕೋಂಡು ನಮ್ಮಿಬ್ಬರ ಮದ್ವಗೆ ಸೇತುವೆಯಾದಳು. ಈ ಕೃತಜ್ಞತೆಯೇ ನನ್ನ ಸದಾ ಅವಳ ಋಣಿಯಾಗಿಸಿದೆ.”
“ಅಭಿ, ರಾಕೇಶ್‌ಗೆ ಅನು ಮೇಲೆ ತುಂಬಾ ಮನಸ್ಸಿದೆ. ಇಬ್ಬರ ಹಿರಿಯರು ಇವರಿಬ್ಬರ ಮದುವೆಯ ಗ್ರೀನ್ ಸಿಗ್ನಲ್ಗಾಗಿ ಕಾಯ್ತ ಇದ್ದಾರೆ. ಆದರೆ ನಿನಗಾದ ಅನುಭವವೇ ರಾಕೇಶ್‌ಗೂ ಆಗ್ತ ಇದೆ. ಆದರೂ ಸೋತುಬಿಟ್ರೆ. ಅದು ಅನೂಗೆ ಆಗೋ ನಷ್ಟ.”
“ನೋ, ಹಾಗಾಗಬಾರದು ರಾಕೇಶ್. ಅನು ತುಂಬ ಒಳ್ಳೇ ಮನಸ್ಸಿನ ಹುಡುಗಿ. ನಿಮ್ಮಂತ ಮನಸ್ಸಿನ ಹುಡುಗ ಅವಳ ಕೈ ಹಿಡಿದ್ರೆ ನಿಜಕ್ಕೂ ಆ ಬದುಕು ಹೂವಿನ ಹಾಸಿಗೆ ಆಗುತ್ತೆ. ನಿಮ್ಮ ಪ್ರಯತ್ನ ಕೈ ಬಿಡಬೇಡಿ. ಹೇಗಾದರೂ ಅವಳನ್ನು ಒಲಿಸಿಕೊಳ್ಳಿ. ಅವಳ ಮನಸ್ಸನ್ನು ಭಾವನೆಗಳನ್ನು ಬದಲಾಯಿಸಿ” ತುಂಬು ಮನಸ್ಸಿನಿಂದ ನುಡಿದ.
“ಅವರು ಅದೇ ಪ್ರಯತ್ನದಲ್ಲಿದ್ದಾರೆ ಅಭಿ. ಅದಕ್ಕೆ ನಮ್ಮ ಹೆಲ್ಪ್ ಕೇಳ್ತಾ ಇದ್ದಾರೆ.”
“ಯಾವ ಹೆಲ್ಪ್ ಬೇಕಾದ್ರೂ ಮಾಡೋಕೆ ನಾವು ಸಿದ್ದ ರಾಕೇಶ್. ಒಟ್ಟಿನಲ್ಲಿ ನಿಮ್ಮ ಪ್ರಯತ್ನ ಯಶಸ್ವಿಯಾಗಿ ಅನು ಮಿಸಸ್ ರಾಕೇಶ್ ಆಗಬೇಕು. ಅದೇ ನಮ್ಮಿಬ್ಬರ ಆಸೆ.”
“ಥ್ಯಾಂಕ್ಸ್. ಆ ಭರವಸೆ ನನಗಿದೆ. ನಾನೊಬ್ಬ ಸೈಕಾಲಜಿಸ್ಟ್ ಆಗಿ ಹೇಳ್ತಾ ಇದ್ದೀನಿ. ಅವಳ ಮನಸ್ಸಿಗೆ ಮುಟ್ಚಿರೊ ಮುಸುಕನ್ನು ಸರಿಸಿ ಈ ರಾಕೇಶ್ ಅನುವನ್ನು ತನ್ನ ಪ್ರೀತಿ ಬಲೆಯಲ್ಲಿ ಬಂಧಿಸುತ್ತಾನೆ ಅಂತಾ.”
“ಬೆಸ್ಟ್ ಆಫ್ ಲಕ್ ರಾಕೇಶ್” ಅಭಿ ಸುಶ್ಮಿತಾ ಒಟ್ಟಿಗೆ ಹೇಳಿದರು.
ರಾತ್ರಿ ಹನ್ನೊಂದು ಗಂಟೆಯಾಗಿದೆ. ಅವತ್ತಷ್ಟೆ ಅವನ ಕೈಗೆ ಮೊಬೈಲು ಫೋನ್ ಸೇರಿತ್ತು. ಯಾವಾಗ ಬೇಕೊ ಆವಾಗ ಅನುವಿನ ಜೊತೆ ಮಾತಾಡಬಹುದು ಅನ್ನುವ ಕಾರಣನೂ ಸೇರಿಸಿ ಮೊಬೈಲ್ ಕೊಂಡಿದ್ದ.
ಅನುಗೆ ರಿಂಗ್ ಮಾಡಿದ. ಫೋನ್ ಹೊಡೆದುಕೊಳ್ಳತೊಡಗಿತು. ಅಷ್ಟು ಹೊತ್ತಿನಲ್ಲಿ ಯಾರಪ್ಪ ಅಂತ ನಿದ್ರೆಗಣ್ಣಿನಲ್ಲಿಯೇ ಹೊರ ಬಂದು ಫೋನೆತ್ತಿದಳು.
ಅತ್ತಲಿಂದ ರಾಕೇಶ್ “ಹಲೋ ಅನು, ಡಿಸ್ಪರ್ಬ್ ಆಯಿತಾ. ಇವತ್ತು ಮೊಬೈಲ್ ಫೋನ್ ಬಂತು. ನಿಮ್ಮ ನೆನಪಾಯ್ತು. ಅದಕ್ಕೆ ಮಾಡಿದೆ.”
“ಹೌದೇ, ಹಾಗಾದರೆ ನಂಬರ್ ಹೇಳಿ ಅದಕ್ಕೆ ಮಾಡ್ತಿನಿ” ಉತ್ತರವಾಗಿ ನಂಬರ್ ಬರೆದುಕೊಳ್ಳತೊಡಗಿದಳು.
ಫೋನಿಟ್ಟು “ಒಳಬಂದು ಮೊಬೈಲನ್ನು ಕೈಗೆತ್ತಿಕೊಂಡಳು. “ಟ್ರಿನ್ ಟ್ರಿನ್” ಎನ್ನತೊಡಗಿತು.
“ಈ ಟೆಕ್ನಾಲಜಿಗೆ ನಾವು ಎಷ್ಟೊಂದು ಥ್ಯಾಂಕ್ಸ್ ಹೇಳಬೇಕು ಅಲ್ವಾ, ಅನು.”
“ಯಾಕೆ” ಪ್ರಶ್ನಿಸಿದಳು.
“ಯಾವಾಗ ಬೇಕು ಅಂದ್ರೆ ಅವಾಗ, ಯಾರಿಗೆ ಬೇಕು ಅಂದ್ರೆ ಅವರಿಗೆ ಈ ರೀತಿ ಫೋನ್ ಮಾಡಿ ಮಾತಾಡಬಹುದಲ್ಲ ಅದಕ್ಕೆ.”
“ಓಹ್ ಆದಕ್ಕಾ, ಏನ್ ವಿಷಯ ಫೋನ್ ಮಾಡಿದ್ದು”
ಥೂ ಈ ಮುದ್ದು ಹುಡುಗಿಗೆ ಹೇಗಪ್ಪಾ ಅರ್ಥ ಮಾಡಿಸಲಿ ಎಂದುಕೊಂಡು
“ಏನಿಲ್ಲಾ ಸುಮ್ನೆ ಮಾಡಿದೆ. ನನ್ನ ನಂಬರ್ ತಗೊಳಿ. ನಾನೇ ಮಾಡಬೇಕು ಅಂತಾ ಕಾಯಬೇಡಿ. ನೀವೂ ಮಾಡ್ತಾ ಇರಿ. ಇಡಲಾ, ಗುಡ್‌ನೈಟ್” ನಂಬರ್ ಹೇಳಿ ಫೋನಿಟ್ಟುಬಿಟ್ಟ.
ಯಾವುದೇ ಅನುಮಾನ ಬಂದಿಲ್ಲ ಎಂದುಕೊಂಡ. ನೀಲಳಿಗೆ ಹೇಳಿ ತಾನೇ ಅನುವಿಗೆ ಮೊಬೈಲ್ ಕೊಡಿಸಿದ್ದ. ಮೊಬೈಲ್ ಇದ್ದರೆ ಸಂಪರ್ಕಿಸಲು ಸುಲಭವೆಂದು. ಹೇಗಾದರೂ ಸರಿ ಮಗಳು ಮದುವೆಗೆ ಒಪ್ಪಿದರೆ ಸಾಕೆಂದು ತುದಿಗಾಲಲ್ಲಿ ನಿಂತಿದ್ದಳು ನೀಲಾ. ರಾಕೇಶ್ ತಿಳಿಸಿದೊಡನೆ ಮೊಬೈಲ್ ಖರೀದಿಸಿದಳು.
“ನನಗ್ಯಾಕಮ್ಮ ಮೊಬೈಲ್” ಅಂತ ಅಚ್ಚರಿ ವ್ಯಕ್ತಪಡಿಸಿದ್ದಳು ಅನು.
“ನೀನೆಲ್ಲಿದ್ದರೂ ನಿನ್ನ ಜೊತೆ ಮಾತನಾಡಬಹುದಲ್ಲ ಅದಕ್ಕೆ. ನೀನೋ ಒಂದೊಂದು ಸಲ ಏನೂ ಹೇಳದೆ ಲೇಟಾಗಿ ಮನೆಗೆ ಬರ್ತೀಯ. ಆಗ ನನಗೆಷ್ಟು ಆತಂಕ ಗೊತ್ತಾ? ಅದಕ್ಕೆ ನನ್ನ ಟೆನ್ಷನ್ ಕಡಿಮೆ ಮಾಡಿಕೊಳ್ಳೋಕೆ ಈ ಮಾರ್ಗ.”
“ಸರಿ, ಸರಿ, ನೀನಂತೂ ಒಂದೊಂದು ಸಲ ಹೇಗೇಗೋ ಆಡ್ತೀಯ. ನಾನೇನು ಸಣ್ಣ ಮಗುವೇ, ನೀನು ಹೀಗೇ ಆಡ್ತಾ ಇರು ಈ ಮನೇನೇ ಬಿಟ್ಟು ಎಲ್ಲಾದರೂ ಹೋಗಿಬಿಡ್ತೀನಿ.”
“ಅನೂ… ” ಜೋರಾಗಿ ಚೀರಿದಳು.
“ಬಾಯಿಮಾತಿಗೂ ಹೀಗೆಲ್ಲ ಹೇಳಬೇಡ. ನೀನೇನಾದ್ರೂ ಈ ಮನೆ ಬಿಟ್ಟು ಹೋಗೋದೇ ಆದ್ರೆ ಅದು ನಿನ್ನ ಗಂಡನ ಜೊತೆ ಮಾತ್ರ. ಹೀಗೆಲ್ಲ ಮಾತಾಡಿ ನನ್ನ ನೋಯಿಸಬೇಡ.” ಗದ್ಗದಿತಳಾದಳು.
“ಅಮ್ಮಾ, ನಿನ್ನ ಬಿಟ್ಟು ನಾನು ಹೋಗ್ತೀನೇನಮ್ಮ, ಸುಮ್ನೆ ನಿನ್ನ ರೇಗಿಸೋಣ ಅಂತ ಅಂದೆ. ನನಗೆ ನಿನ್ನ ಬಿಟ್ರೆ ಮತ್ಯಾರಮ್ಮ ಇದ್ದಾರೆ. ಟೆನ್ಶನ್ ತಗೋಬೇಡ. ನಿಂಗೋಸ್ಕರ ತಾನೇ ಈ ಮನೆ ನರಕ ಆದ್ರೂ ಇರೋದು.” ನೀಲಳ ಭುಜಕ್ಕೊರಗಿದಳು.
ಮನೆ ಬಿಟ್ಟೋಗೋ ಸುದ್ದಿ ಎತ್ತಬೇಡ ಅಂತೇನೋ ನೀಲಾ ಹೇಳಿದ್ದಳು. ಆದರೆ ಸಂದರ್ಭ ತಾನಾಗೇ ಬಂದೇಬಿಟ್ಟಿತು.
ಅಂದು ಬೆಳಿಗ್ಗೆ ಅನು ತಿಂಡಿ ತಿನ್ನುತ್ತಾ ಕುಳಿತಿದ್ದಾಳೆ. ಜಗದೀಶ ನೇರವಾಗಿ ಆಲ್ಲಿಗೆ ಬಂದು ಅನುವಿನ ಎದುರು ಕುಳಿತುಕೊಂಡ.
ನೀಲಾ ಅವನಿಗೂ ತಿಂಡಿ ತಂದಿತ್ತಳು.
ತಿಂಡಿ ತಿನ್ನುತ್ತಾ ಜಗದೀಶ, “ನೀಲಾ, ಸ್ವಾಮಿನಾಥನ ಮನೆಯವ್ರಿಗೆ ಫೋನ್ ಮಾಡಲಾ, ಮದ್ವೆ ಯಾವಾಗ ಇಟ್ಕೊಳ್ಳೋಣ ಅಂತಾ?” ಪ್ರಶ್ನೆ ನೀಲಾಳಿಗೆ, ಉತ್ತರ ಬರಬೇಕಾಗಿದ್ದು ಅನುವಿನಿಂದ. ಏನಂತ ಹೇಳಲಾರದೆ ನೀಲಾ ಅನುವಿನ ಮುಖ ನೋಡಿದಳು.
ತಾಯಿಯ ಸಂದಿಗ್ಧತೆಯ ಅರಿವಾಗಿ,
“ಅಮ್ಮ, ನಂಗೆ ಈಗ್ಲೆ ಮದ್ವೆ ಮಾಡ್ಕೊಳ್ಳೋ ಯೋಚ್ನೆ ಇಲ್ಲ. ಹಾಗಂತ ಸ್ವಾಮಿನಾಥ್ ಅಂಕಲ್ಗೆ ಹೇಳಿಬಿಡಮ್ಮ.”
“ಮದ್ವೆ ಯಾವಾಗ ಅಂತ ನಿರ್ಧಾರ ಮಾಡಬೇಕಾದವನು ನಾನು. ಅವರವರ ಇಷ್ಟಕ್ಕೆ ಕುಣಿಯೋಕೆ ಬಿಡೋನಲ್ಲ ಈ ಜಗದೀಶ.” ರೇಗಿದ.
“ಅಮ್ಮ, ಮದ್ವೆ ಆಗಿ ಗಂಡನ ಜೊತೆ ಬಾಳಬೇಕಾದವಳು ನಾನು. ನನಗಿಷ್ಟ ಇಲ್ಲ ಅಂದಮೇಲೆ ಯಾರೂ ನನ್ನ ಒತ್ತಾಯ ಮಾಡಿ ಒಪ್ಟಿಸೋಕೆ ಆಗಲ್ಲ.” ತಾನೂ ಜೋರಾದಳು ಅನು.
“ಹಾಗಾದ್ರೆ ಯಾಕೆ ಅವನ ಜೊತೆ ಅಲೀಬೇಕು, ಮಧ್ಯರಾತ್ರೀಲೆಲ್ಲಾ ಫೋನ್ ಮಾಡಬೇಕು? ಏನಂತ ತಿಳ್ಕೊಂಡಿದಾಳೆ ನಿನ್ನ ಮಗಳು ನನ್ನ. ಯಾರೂ ಹೇಳೋರು ಕೇಳೋರು ಇಲ್ಲ ಅಂತಾನ? ನೀಲಾ ಕೊನೇ ಸಲ ಹೇಳ್ತಾ ಇದ್ದೀನಿ, ಮದ್ವೆ ಯಾವಾಗ ಇಟ್ಕೊಳ್ಳೋಣ ಅಂತಾ.” ಸಹನೆಯಿಲ್ಲದೆ ನುಡಿದ.
“ರೀ, ನೀವು ಸ್ವಲ್ಪ ಸುಮ್ನೆ ಇರ್ತ್ತೀರಾ, ಅವಳನ್ನ ನಾನು ಒಪ್ಟಿಸುತ್ತೇನೆ.” ಗಂಡನನ್ನು ಸಮಾಧಾನಿಸಲೆತ್ನಿಸಿದಳು.
“ಏನಮ್ಮ ನೀನು ಒಪ್ಟಿಸುವುದು. ನನ್ನ ಏನಂತ ತಿಳ್ಕೋಂಡಿದೀರಾ ಇಬ್ಬರೂ, ಸಣ್ಣ ಮಗು ಅಂತಾನೆ? ನನ್ನ ಬದುಕಿನ ಬಗ್ಗೆ ನನಗೆ ನಿರ್ಧಾರ ತಗೊಳ್ಳೋ ಸ್ವಾತಂತ್ರ್ಯ ಇಲ್ಲವಾ? ನನ್ನ ಬದುಕು ನಿಮ್ಮ ನಿರ್ಧಾರದ ಮೇಲೆ ಅವಲಂಬಿತವಾಗಬೇಕಾ? ಇಡೀ ನಿನ್ನ ಬದುಕನ್ನ ನೋಡಿಯೂ ನಾನು. ಆ ಮದುವೆ ಅನ್ನೋ ಉರುಳಿಗೆ ಜೋತು ಬೀಳಬೇಕಾ? ನೋಡು ಇವತ್ತು ಸ್ಪಷ್ಟವಾಗಿ ಹೇಳ್ತಾ ಇದ್ದೀನಿ. ನಾನು ಮದ್ವೆ ಮಾಡ್ಕೋಳಲ್ಲ. ನನಗ್ಯಾವ ಗಂಡುಗಳನ್ನು ಹುಡುಕುವ ಶ್ರಮ ಯಾರಿಗೂ ಬೇಡ.”
“ನೋಡಿದೆಯೇನೇ ನಿನ್ನ ಮಗಳ ಮಾತಾ? ಮದ್ವೇನೇ ಆಗಲ್ಲವಂತೆ. ಹಾಗಿದ್ದ ಮೇಲೆ ಆ ಹುಡುಗನ ಜೊತೆ ಯಾಕೆ ಸುತ್ತಾಡ್ತಾ ಇದ್ದಾಳೆ. ಅವರ ಮನೆಗೆ ಯಾಕೆ ಹೋಗ್ತಾಳೆ, ಅರ್ಧ ರಾತ್ರಿಯೆಲ್ಲ ಯಾಕೆ ಫೋನಿನಲ್ಲಿ ಅವರ ಜೊತೆ ಮಾತಾಡ್ತಾಳೆ?” ಕಣ್ಣು ಕೆಂಪಾಗಿಸಿಕೊಂಡು ಸಿಟ್ಟಿನಿಂದ ನುಡಿದ.
“ಅಮ್ಮಾ, ರಾಕೇಶ್ ನನ್ನ ಫ್ರೆಂಡ್ ಅಷ್ಟೆ. ಮತ್ತೇನು ಕಲ್ಪಿಸಿ ಮಾತಾಡುವುದು ಬೇಡ. ಇನ್ಯಾವತ್ತೂ ಈ ವಿಚಾರ ಯಾರೂ ಕೂಡ ನನ್ನ ಹತ್ರ ಮಾತಾಡಬೇಡಿ.” ಎದ್ದು ಹೊರಡಲನುವಾದಳು. ಆ ದಿವ್ಯ ನಿರ್ಲಕ್ಷ್ಯ ಅವನನ್ನು ಕೆಣಕಿತು. ತನ್ಮುಂದೆ ಮಾತಾಡುವಷ್ಟು ಬೆಳೆದು ನಿಂತಿದ್ದಾಳಾ? ಎಷ್ಟು ಕೊಬ್ಬು, ಅವಳನ್ನ ಅವಳಷ್ಟಕ್ಕೆ ಬಿಟ್ಟಿದ್ದೇ ದೊಡ್ಡ ತಪ್ಪಾಗಿದೆ. ಹೀಗೇ ಬಿಟ್ಟರೆ ಯಾರ ಜೊತೆನಾದ್ರೂ ಓಡಿಹೋಗಿ ತನಗೆ ಕೆಟ್ಟ ಹೆಸರು ತರುವುದಂತೂ ಗ್ಯಾರಂಟಿ. ಅಮ್ಮನಂತೆ ಮಗಳು.
“ಏಯ್ ನಿಂತ್ಕೋ, ನನ್ನ ಏನಂತ ತಿಳ್ಕೊಂಡಿದೀಯ? ನನ್ನ ಮಾತು ಅಂದ್ರೆ ಅಷ್ಟೊಂದು ಅಲಕ್ಷ್ಯಾನ? ನಾಯಿ ಹಾಗೆ ಬಿದ್ದಿರಬೇಕಾದವಳು ನೀನು. ಆದ್ರೂ ನಿಮ್ಮ ಅಮ್ಮನ ಮುಖ ನೋಡಿಕೊಂಡು ಈ ಮನೇಲಿ ನಿಂಗೊಂದು ಸ್ಥಾನ ಕೊಟ್ಟಿದ್ದೀನಿ. ಮರ್ಯಾದೆಯಾಗಿ ನಾನು ಹೇಳಿದಂತೆ ಕೇಳಿ ಆ ಸ್ಥಾನಾನ ಉಳಿಸಿಕೋ.” ನೇರವಾಗಿ ಅನುವನ್ನೇ ಉದ್ದೇಶಿಸಿ ಹೇಳಿದ.
ಅದು ತನಗಲ್ಲ ಎನ್ನುವಂತೆ ನಿರ್ಲಕ್ಷಿಸಿ ಹೊರಟುನಿಂತಳು. ಈ ರಾಮಾಯಣಗಳಾವುವೂ ಅವಳಿಗೆ ಬೇಕಿರಲಿಲ್ಲ. ಅಪ್ಪನೊಂದಿಗೆ ಮಾತನಾಡಲು ಮನಸ್ಸಿಲ್ಲದೆ, ತನ್ನನ್ನ ಅರ್ಥ ಮಾಡಿಕೊಳ್ಳುವುದು ಅಮ್ಮನಿಂದಲೂ ಸಾಧ್ಯವಾಗ್ತಾ ಇಲ್ಲವಲ್ಲ ಅಂತ ಬೇಸರಿಸಿಕೊಂಡು ಹೊರಡಲನುವಾದಳು.
ಈ ನಿರ್ಲಕ್ಷ್ಯ ಸಹಿಸದಾದನು. ಇದು ಅವನ ಆತ್ಮಾಭಿಮಾನಕ್ಕೆ ಧಕ್ಕೆ ಎನಿಸಿತು. ಹೆಂಡತಿಯೇ ತಾನು ಹೇಳಿದಂತೆ ಕೇಳಿಕೊಂಡು ಬಿದ್ದಿರುವಾಗ ಚೋಟುದ್ದ ಇರುವ ಇವಳಿಗೆ ತನ್ನನ್ನು ಎದುರಿಸುವ ಧೈರ್ಯವೇ!
ಕ್ಷುದ್ರ ನಾದ. ಕೆಟ್ಟ ಕೋಪದಿಂದ ತತ್ತರಿಸಿದ. ಮುಖ ಕೆಂಪಾಯಿತು. ಕಣ್ಣುಗಳು ಬೆಂಕಿಯನ್ನು ಉಗುಳಿದವು.
“ನೀನೂ ಯಾವನ ಜೊತೆನಾದ್ರೂ ಓಡಿಹೋಗೋಕೆ ಸಿದ್ಧವಾಗಿದೀಯ, ನಿನ್ನಮ್ಮನ ರಕ್ತ ತಾನೇ ನಿನ್ನ ಮೈಯಲ್ಲಿ ಹರಿತಾ ಇರುವುದು. ಇವತ್ತೂ ಯಾವನ್ನೋ ನೆನೆಸಿಕೊಂಡೇ ಬದುಕ್ತಾ ಇದ್ದಾ ಆ ಮಹಾತಾಯಿಯ ಮಗಳೇ ಅಲ್ಲವಾ ನೀನು. ನೀನು ನೀನು ನನ್ನ ಮಗಳಾಗಿದ್ರೆ ಅಪ್ಪ ಅನ್ನೋ ಗೌರವ ಕೊಡ್ತಿದ್ದೆ. ನನ್ನ ಮಾತನ್ನ ಕೇಳ್ತಾ ಇದ್ದೆ. ನೀನು ನೀನು ಹಾದರಕ್ಕೆ ಹುಟ್ಟಿದವಳು ಅಂತಾ ಪ್ರೂವ್ ಮಾಡ್ತಾ ಇದ್ದೀಯ.”
“ಮಿಸ್ಟರ್ ಜಗದೀಶ್, ನಿಮ್ಮದೂ ಒಂದು ನಾಲಿಗೇನಾ? ನನ್ನನ್ನ ನೋಡಿದ್ರೂ ನಿಮ್ಗೆ, ನಾನು ಯಾರಿಗೆ ಹುಟ್ಟಿದೀನಿ ಅಂತಾ ಅರ್ಥವಾಗಲ್ವಾ? ನಿಮ್ಮ ಕಣ್ಣು ಕುರುಡಾ. ನಿಮ್ಮ ರೂಪಾನಾ ಹೊತ್ಕಂಡು ಹುಟ್ಟಿರೋ ಮಗಳ ಮೇಲೂ ನಿಮಗೆ ಸಂಶಯ. ನೀವು ಮನುಷ್ಯರಲ್ಲ,” ಥರಥರ ನಡುಗುತ್ತ ಹೇಳಿದಳು. ಹುಚ್ಚು ಆವೇಶದಿಂದ ತತ್ತರಿಸುತ್ತಿದ್ದಳು. ಯಾವತ್ತು ಯಾವತ್ತೂ ಹೀಗೆ ನೇರವಾಗಿ ತನ್ನೊಂದಿಗೆ ಮಾತಾಡಿರಲಿಲ್ಲ. ಇಂದು ನೇರವಾಗಿಯೇ ಹೇಳಿಬಿಟ್ಪಾಗ ತಡೆದಾದಳು. ರೋಷದಿಂದ ಕೆನ್ನೆಗೆ ಜೋರಾಗಿ ಬಾರಿಸಿದ ಜಗದೀಶ.
“ನನ್ನನ್ನ ಹಾಗೆನ್ನುವಷ್ಟು ಅಹಂಕಾರಾನ? ನಾನು ಹೇಳಿದಂತೆ ಕೇಳಿಕೊಂಡು ಬಿದ್ದಿದ್ರೆ ಮಾತ್ರ ಈ ಮನೇಲಿ ಜಾಗ. ಇಲ್ಲದಿದ್ದರೆ ಇನ್ನೊಂದು ಕ್ಷಣಾನೂ ನೀನು ನನ್ನ ಮನೆಯಲ್ಲಿರಕೂಡದು. ಹೊರಟುಹೋಗು. ಮತ್ತೆ ನಿನ್ನ ಅನಿಷ್ಟ ಮುಖಾನ ಹೊತ್ತುಕೊಂಡು ಈ ಮನೆಗೆ ಬರಬೇಡ.” ರಭಸವಾಗಿ ಅನುವನ್ನು ತಳ್ಳಿದನು.
ಗಾಬರಿಯಿಂದ ನೀಲ, “ಅನು, ಅವರ ಮಾತು ಕೇಳಬೇಡ ನೀನು. ಹೊರಟುಹೋಗು ಆಫೀಸಿಗೆ. ಸಂಜೆ ಹೊತ್ತಿಗೆ ಕೂಲಾಗಿರ್ತಾರೆ.” ಈ ತಿರುವು ಪಡೆದ ಸನ್ನಿವೇಶ ಅವಳನ್ನು ಕಂಗಾಲುಗೊಳಿಸಿತು.
ಗಂಡನಡೆಗೆ ತಿರುಗಿ, “ನೀವು ಸುಮ್ನಿರಿ. ಅವಳು ಮೊದಲೇ ಸೂಕ್ಷ್ಮ ಸ್ವಭಾವದವಳು. ರ್‍ಯಾಶಾಗಿ ಮಾತನಾಡಬೇಡಿ. ನೀನು ಹೊರಡು ಅನು. ಮತ್ತೆ ಮಗಳಿಗೆ ತಿರುಗಿ ಕೈಹಿಡಿದು ಹೊರತಂದಳು. ಕೈಮುಗಿದು ಅನುವನ್ನು ಬೇಡಿದಳು.
“ಅನು, ಮನಸ್ಸು ಕೆಡಿಸ್ಕೋಬೇಡ. ಈ ತಾಯಿಗಾಗಿ ಸಹಿಸಿಕೋ.” ಮನಸ್ಸೆಲ್ಲಾ ಶೂನ್ಯವನ್ನಾವರಿಸಿತು. “ಅಮ್ಮ, ಇನ್ನೆಷ್ಟು ದಿನ ಈ ಯಾತನೆ, ಅಪಮಾನ, ನೋವು, ನನಗಿಷ್ಟ ಇಲ್ಲಾ ಅಂತೀನೀ. ನಿನ್ನ ಗಂಡ ನನ್ನ ಮದ್ವೆಗಾಗಿ ಒತ್ತಾಯಿಸುತ್ತಾ ಇದ್ದಾರೆ. ಬೇಕು ಅಂತಾ ನನ್ನ ಹರ್ಟ್ ಮಾಡ್ತಾ ಇದ್ದಾರೆ.” ಅಪಮಾನದಿಂದ ಕಣ್ಣೀರು ಕೆನ್ನೆಗೆ ಹರಿದಿತ್ತು.
“ಇಲ್ಲಾ ಕಣೆ ಅನು. ಅವರಿಗೆ ನಿನ್ನ ಮದುವೆ ಮಾಡಬೇಕು ಅನ್ನೋ ಆಸೆ ಇದೆ ಕಣೋ. ನೀನೊಪ್ಪಲಿಲ್ಲ ಅನ್ನೋ ನಿರಾಸೆಯಲ್ಲಿ ಅವರು ಈ ರೀತಿ ಮಾತಾಡ್ತಾ ಇದ್ದಾರೆ ಅನು. ನೀನು ಇದನ್ನ ಸೀರಿಯಸ್ಸಾಗಿ ತಗೋಬೇಡ. ಈ ಮನೆ ಅವರೊಬ್ಬರಿಗೇ ಅಲ್ಲ. ನಿಮ್ಮ ತಾತನಿಗೆ ಸೇರಬೇಕಾದದ್ದು. ತಾತನ ಆಸ್ತಿ, ಮೊಮ್ಮಗಳಿಗೆ ತಾನೇ. ಇದು ಸಂಪೂರ್ಣವಾಗಿ ನಿನ್ನದು. ನಿನ್ನೆ ಮನಸ್ಸಿನಿಂದ ಅವರಾಡಿದ ಮಾತುಗಳನ್ನೆಲ್ಲ ಕಿತ್ತುಹಾಕು. ನಿನ್ನ ಇಲ್ಲಿಂದ ಕಳಿಸೋ ಹಕ್ಕು ಅವರಿಗಿಲ್ಲ ಕಣೋ.” ಜೋರಾಗಿ ಅತ್ತುಬಿಟ್ಟಳು.
“ಅಮ್ಮಾ, ನೋಡು ಬೀದಿ ಬಾಗಿಲಲ್ಲಿ ಹೀಗೆ ಅತ್ರೆ ನೋಡಿದವರು ಏನು ಅಂದುಕೊಳ್ಳುತ್ತಾರೆ. ನೀನು ಹೋಗು ಒಳಗೆ. ನಂಗೆ ಟೈಮಾಯ್ತು.” ಹೊರಟುಬಿಟ್ಟಳು.
ಆಫೀಸಿಗೆ ಹೋಗುವ ಮನಸ್ಸಾಗಲಿಲ್ಲ. ಸುಮ್ಮನೆ ಕೈನಿ ಓಡಿಸುತ್ತಲೇ ಇದ್ದಳು. ಅದೆಷ್ಟು ದೂರ ಬಂದಳೋ ಅವಳಿಗೆ ತಿಳಿಯದು. ಬಿಸಿಲು ಪ್ರಖರವಾಗಿ ಕಣ್ಣಿಗೆ ಹೊಡೆಯುವಂತಿದೆ. ಈ ಪಯಣ ನಿಲ್ಲಲೇಬಾರದು. ತಾನು ಚಲಿಸುತ್ತಲೇ ಇರಬೇಕು. ಕಣ್ಮುಂದೆ ಏನೂ ಕಾಣದು. ಶೂನ್ಯ, ವಿಚಿತ್ರವಾದ ಶೂನ್ಯ ಮಾತ್ರ. ಇಡೀ ಪ್ರಪಂಚವೆಲ್ಲ ದುಃಖ, ದುಗುಡದಿಂದ ತುಂಬಿಹೋಗಿರುವಂತಹ ಭಾವ, ಶೋಕದ ಬೆಟ್ಟ ಏರುತ್ತಿರುವ ಭಾವ, ದುಃಖದ ತಪ್ಪಲಲ್ಲಿ ಮಿಂದಂಥ ಭಾವ, ಇದ್ದಕ್ಕಿದ್ದಂತೆ ನೋವು ಉಲ್ಬಣಗೊಂಡಿತು. ಕಣ್ಣು ತುಂಬಿ ದಾರಿ ಕಾಣದಂತಾಯಿತು. ಅಲ್ಲೊಂದು ದೊಡ್ದ ಮರ ಅದರ ಕೆಳಗೆ ಕೈನಿ ನಿಲ್ಲಿಸಿದಳು.
ಮರದ ಬುಡದಲ್ಲಿ ಕುಳಿತು ಬಿಕ್ಕಿ ಬಿಕ್ಕಿ ಅಳಹತ್ತಿದಳು. ಇಡೀ ಜೀವನದಲ್ಲಿ ಸುರಿಸಬೇಕಾದ ಕಣ್ಣೀರೆಲ್ಲವೂ ಇಂದೇ ಸೋರಿಹೋಗುತ್ತಿದೆ. ಸುತ್ತಲಿನ ಪರಿವೆ ಇಲ್ಲ.
ಎಷ್ಟು ಸಹಿಸಬೇಕು, ಇನ್ನೆಷ್ಟು ಸಹಿಸಬೇಕು, ನನ್ನ ನೋವು, ನನಗಾಗಿರುವ ಅನ್ಯಾಯ, ಹೆತ್ತ ತಂದೆಯಿಂದಲೇ ಕೇಳಬೇಕಾದ ಅಸಹ್ಯಕರ ನುಡಿಗಳು, ಅಮ್ಮನ ಅಸಹಾಯಕತೆ, ಎಂದಿಗೆ ಕೊನೆ. ಇವಕ್ಕೆಲ್ಲ ಕೊನೆಯೇ ಇಲ್ಲವೇ? ಅಳುತ್ತಲೇ ಇದ್ದಾಳೆ. ಆ ದುಃಖಕ್ಕೆ ಅಂತ್ಯವೇ ಇಲ್ಲವೇನೋ ಎನಿಸುವಷ್ಟು ದುಃಖಿಸುತ್ತಿದ್ದಾಳೆ. ಅಂತಶಕ್ತಿ ಪಾತಾಳಕ್ಕೆ ಉಡುಗಿಹೋದ ಅನುಭವ ಸುತ್ತಲಿನ ಅಸಾಧ್ಯ ಮೌನ, ಸ್ಥಿತಿಲಯವನ್ನು ಸ್ಥಗಿತಗೊಳಿಸಿದಂಥ ಭಾವ.
ತಾನೆಂತಹ ಹತಭಾಗ್ಯೆ. ತನ್ನದೆಂತಹ ಹೀನ ಅದೃಷ್ಟ. ಅಳುವುದನ್ನು ನಿಲ್ಲಿಸಿ ಶೂನ್ಯದೊಡನೆ ದೃಷ್ಟಿ ನೆಟ್ಟಿದ್ದಾಳೆ. ಏನಾಗಿದೆ, ಏನಾಗುತ್ತಿದೆ ಎಂಬ ಅರಿವಿಲ್ಲದ ಭಾವ, ಭಾವಶೂನ್ಯಳಾಗಿ ಮಂಕಾದ ಮನಸ್ಥಿತಿ. ಅಭಿವ್ಯಕ್ತಿಯ ತೀವ್ರ ಅಭಾವ, ಆಳ ಆಳಕ್ಕೆ ಇಳಿದು ಸೂಕ್ಷ್ಮತೆಗಳನ್ನೆಲ್ಲ ಹೊರಗೆಳೆಯುವ ಅಂತಶಕ್ತಿಯ ಮೂರ್ತ ಸ್ವರೂಪದ ಆಕ್ರಮಣಕ್ಕೊಡ್ದಿದ ನಿರ್ಭಾವ.
ಅದೆಷ್ಟು ಹೊತ್ತು ಕುಳಿತಿದ್ದಳೋ. ಏಳಲೇ ಮನ ಬಾರದು. ಇವತ್ತೇ ತನ್ನ ಬದುಕಿನ ಅಂತ್ಯವಾಗಬೇಕೆಂಬ ಉತ್ಕಟ ಭಾವದಿಂದ ಹೊರಬರಲು ಪ್ರಯತ್ನ ನಡೆಸಿ ವಿಫಲಳಾದಳು. ವಿವಶತೆ ಅವಳನ್ನಾವರಿಸಿತ್ತು.
“ಯಾರವ್ವ ನೀನು, ಯಾಕೆ ಇಲ್ಲಿ ಕೂತಿದೀಯ.” ದನ ಕಾಯುತ್ತಿದ್ದ ಮುದುಕನ ಪ್ರಶ್ನೆಗೆ ಬೆಚ್ಚಿ ಇಹಕ್ಕೆ ಬಂದಳು.
“ಏನವ್ವ ಮನೇಲಿ ಜಗಳ ಮಾಡ್ಕೊಂಡು ಬಂದಿದ್ದೀಯ.” ಎಷ್ಟು ಚೆನ್ನಾಗಿ ಹೇಳ್ತಾ ಇದ್ದಾನೆ ಈ ಮುದುಕ! ಬೆರಗಿನಿಂದ ನೋಡಿದಳು.
“ಹೋಗವ್ವ ಏಟೊತ್ತಾಯ್ತು. ಹೆತ್ತಮ್ಮ ಕಾಯ್ತಾ ಇರ್ತಾಳೆ. ಮನಸ್ಸನ್ನ ಇಂಗೆಲ್ಲ ಕೆಡಿಸ್ಕೋಬಾರದು ಕಣವ್ವ.” ಎಲ್ಲವನ್ನು ತಿಳಿದವನಂತೆ ನುಡಿದ.
ನಿಧಾನವಾಗಿ ಮೇಲೆದ್ದು ಹೆಜ್ಜೆ ಕಿತ್ತು ಕಿತ್ತು ಹಾಕಿದಳು. ಮೊಬೈಲ್ ಹೂಡೆದುಕೊಂಡಿತು. ಮಾತನಾಡುವ ಮನಸ್ಸಿಲ್ಲದೆ ಆಫ್ ಮಾಡಿಬಿಟ್ಟಳು.
ಅಲ್ಲಿಂದ ಸೀದಾ ಬಂದವಳೇ ಗಾರ್ಡನ್ ಹೋಟೇಲಿನ ಮುಂದೆ ಗಾಡಿ ನಿಲ್ಲಿಸಿ, ಯಾರಿಗೂ ಕಾಣಿಸದಂತಹ ಮೂಲೆ ಹುಡುಕಿ ಕುಳಿತಳು.
ಕೂಲ್ ಡ್ರಿಂಕ್ಸ್ ಆರ್ಡರ್ ಮಾಡಿ ಯೋಚಿಸುತ್ತಾ ಕುಳಿತೇ ಇದ್ದಾಳೆ. ತಾನು ಈ ಊರೇ ಬಿಡಬೇಕು. ಈ ಅಮ್ಮ ಬರಲಿ ಬಿಡಲಿ, ತಾನಂತೂ ತನ್ನ ಮನಶ್ಸಾಂತಿಗಾದರೂ ಇಲ್ಲಿಂದ ದೂರ ಹೋಗಬೇಕು. ಕರುಳಿನ ಸೆಳೆತ ಹೆಚ್ಚಾದರೆ ಅಮ್ಮ ನನ್ನ ಹಿಂದೆ ಬಂದೇ ಬರುತ್ತಾಳೆ. ಗಂಡ ಅನ್ನೋ ಸೆಂಟಿಮೆಂಟೇ ಜಾಸ್ತಿ. ಆದರೆ ಗಂಡನ ಜೊತೆಯಲ್ಲಿಯೇ ಉಳಿದುಬಿಡಲಿ.
ಅಭಿ, ಸುಶ್ಮಿತಾರೂ ಆಫೀಸು ಬಿಡ್ತಾ ಇದ್ದಾರೆ. ವಿದೇಶಕ್ಕೆ ಹಾರುತ್ತಿದ್ದಾರೆ. ಇನ್ನು ಆ ಆಫೀಸಿನಲ್ಲಿರುವುದು ಬೇಸರವೇ, ತಾನೇಕೆ ಬಾಂಬೆನೋ ಡೆಲ್ಲಿನೋ ಸೇರಬಾರದು. ಅವಕಾಶಗಳು ಸಾಕಷ್ಟಿವೆ. ಅಮ್ಮನಿಗಾಗಿ ಎಲ್ಲವನ್ನೂ ದೂರ ಮಾಡಿದ್ದೆ. ತಕ್ಷಣವೇ ಸೋನಿಯ ನೆನಪಾಯಿತು. ಹಿಂದೊಮ್ಮೆ ನಿನ್ನಂಥ ಬ್ರಿಲಿಯಂಟ್‌ಗೆ ಒಳ್ಳೇ ಫ್ಯೂಚರ್ ಇದೆ ಬಾ ಎಂದು ಕರೆದಿದ್ದಳು. ತಾನೇ ನಿರಾಕರಿಸಿದ್ದೆ. ಈಗ ಪ್ರಯತ್ನಿಸಿದರೆ, ಮೊಬೈಲ್ ತೆಗೆದು ನಂಬರ್ ಒತ್ತಿದಳು. ಆ ಕ್ಷಣವೇ,
ಅಲ್ಲಿಂದ ಹಾರ್ದಿಕ ಉತ್ತರ, “ಕೆಲಸ ಖಾಲಿ ಇದೆ. ಇಂದೇ ಬೇಕಾದರೂ ಬರಬಹುದು.” ಆಶ್ವಾಸನೆ ದೊರೆತು ನಿರಾಳವಾದಳು.
ಕೂಲ್ ಡ್ರಿಂಕ್ಸ್ ಹೀರುತ್ತಲೇ ಅಮ್ಮನನ್ನು ಎದುರಿಸುವುದು ಹೇಗೆಂದು ಚಿಂತಿಸತೊಡಗಿದಳು. ಈ ಬಾರಿ ಸೋಲಬಾರದು. ಸೆಂಟಿಮೆಂಟ್‌ಗೆ ಯಾವ ಬೆಲೆ ಕೊಡಬಾರದು. ನನ್ನ ಯೋಗ್ಯತೆ ಏನೆಂದು ಅಪ್ಪನಿಗೆ ಗೊತ್ತು ಮಾಡಿಸಲೇಬೇಕು. ಹಟ ತೊಟ್ಟಳು. ನೇರವಾಗಿ ಮನೆಗೆ ಬಂದಳು. ಬಾಂಬೆಗೋಗುವ ವಿಚಾರ ತಿಳಿಸಿದಳು.
“ಅಮ್ಮ, ಇವತ್ತೊಂದು ತೀರ್ಮಾನವಾಗಲೇಬೇಕು.” ಮೊದಲೇ ಹೆದರಿದ್ದ ನೀಲಾ ಮತ್ತಷ್ಟು ಹೆದರಿದಳು.
ಬಿಳಿಚಿಹೋಗಿದ್ದ ತಾಯಿಯ ಮೋರೆ ನೋಡಿ ವಿಹ್ವಲಳಾಗಿ, “ಅಮ್ಮ, ನನ್ನ ಅರ್ಥ ಮಾಡ್ಕೋ. ನಾ ಇಲ್ಲಿಯೇ ಇದ್ದರೆ ನನ್ನ ಬದುಕು, ನನ್ನ ಕನಸುಗಳೆಲ್ಲ ಕೊಳೆತುಹೋಗುತ್ತವೆ. ನಾನೇನಾಗಬೇಕು ಅಂತ ಇದ್ದೇನೋ ಅದಾಗೋಕೆ ನಿನ್ನ ಸೆಂಟಿಮೆಂಟ್ಸು ಅಡ್ಡಿ ಮಾಡ್ತಾ ಇದೆ. ನನ್ನನ್ನ ಇನ್ನೂ ಸಣ್ಣ ಮಗು ಥರಾ ಟ್ರೀಟ್ ಮಾಡೋದನ್ನ ಬಿಟ್ಟುಬಿಡಮ್ಮ. ನಾನೀಗ ಬೆಳೆದಿದ್ದೇನೆ. ಇನ್ನಷ್ಟು ಬೆಳೀಬೇಕಾಗಿದೆ. ನಿನ್ನ ತಾಯ್ತನದ ಕಟ್ಟೆ ಕಟ್ಟಿ ನನ್ನ ಅದ್ರಲ್ಲಿ ಬಂಧಿಸೋಕೆ ಪ್ರಯತ್ನ ಪಡಬೇಡ. ಈ ಮನೆಯಲ್ಲಿಯೇ ಇದ್ದು ಬಿಟ್ಟರೆ ನಾನು ನಾನು ಏನಾದ್ರೂ ಮಾಡ್ಕೊಂಡು ಪ್ರಾಣ ಕಳ್ಕೋತೀನೇನೋ ಅನ್ನೋ ಭಯ ನನ್ನ ಇತ್ತೀಚೆಗೆ ಕಾಡ್ತಾ ಇದೆ. ಒಂದಷ್ಟು ದಿನ ನನ್ನ ಹೊರಗೆ ಹೋಗೋಕೆ ಬಿಡು. ನಿನ್ನ ಮಡಿಲಿನ ತಂಪಿನಲ್ಲಿಯೇ ಬೆಳೆದ ನನ್ನ ಒಂದಿಷ್ಟು ಹೊರಗಿನ ಸೂರ್ಯನ ಶಾಖ ತಗೊಳ್ಕೋಲಿಕೆ ಬಿಡು. ಈ ಜಗತ್ತು ಏನು ಅಂತ ನಾನು ನೋಡಬಾರದೆ, ನೀನು, ನಿನ್ನ ಗಂಡ ಇಷ್ಟೇನಾ ನನ್ನ ಬದುಕು, ಅದು ಬಿಟ್ಟರೆ ನನ್ನ ಮದುವೆ ಇಷ್ಟೆ. ಇದಿಷ್ಟಕ್ಕೆ ನಾನು ಬಿ.ಇ. ಓದಬೇಕಿತ್ತಾ, ಇದಿಷ್ಟಕ್ಕೆ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಓದಿ ರ್‍ಯಾಂಕ್ ಪಡೀಬೇಕಿತ್ತಾ? ನನ್ನ ಪ್ರತಿಭೆ ಏನು ಅಂತಾ ನಾಲ್ಕಾರು ಜನಕ್ಕೆ ಗೊತ್ತಾಗಬಾರದಾ ಅಮ್ಮ, ಪ್ಲೀಸ್, ನನ್ನ ಬಿಟ್ಟುಕೊಡು. ನೀನು ಬಂದುಬಿಡು. ಈ ಮನೆ, ನಿನ್ನ ಗಂಡ, ಈ ನರಕ ಎಲ್ಲದರಿಂದ ಬಿಡುಗಡೆ ಸಿಗುತ್ತೆ. ನಿನ್ನಾ ಸುಖವಾಗಿಟ್ಬುಕೊಳ್ಳುತ್ತೇನೆ. ಬಂದುಬಿಡು ನನ್ನ ಜೊತೆ.”
ಅಷ್ಟು ಮಾತಾಡಿದ್ರೂ ನೀಲಾ ಒಂದೂ ಮಾತಾಡಲಿಲ್ಲ. ಅವಳೆದೆ ಕಲ್ಲಾಗಿತ್ತು. ಹೆಬ್ಬಂಡೆಯಾಗಿತ್ತು. ಈ ಬಾರಿ ಮಗಳನ್ನು, ಉಳಿಸಿಕೊಳ್ಳುವ ಚೈತನ್ಯ ತನಗಿಲ್ಲ ಎನ್ನುವುದು ಮನದಟ್ಬಾಗಿತ್ತು. ನೋವನ್ನೇ ಹೊತ್ತು ಉಂಡವಳಿಗೆ ಈ ನೋವೇನು ಹೊಸೆದೆ ಭರಿಸುವಷ್ಟು ಎದೆ ಭದ್ರವಾಗಿತ್ತು.
ಮಗಳ ನೆಮ್ಮದಿಗಾಗಿ ಈ ಅಗಲುವಿಕೆ ಅನಿವಾರ್ಯವಾಗಿದೆ. ಆದರೆ ಅಷ್ಟೊಂದು ದೂರದಲ್ಲಿ ಕರುಳಿನ ಕುಡಿ ಒಂಟಿಯಾಗಿ ಹೇಗಿರುವಳೋ ಎಂಬ ಕಲ್ಪನೆಯಲ್ಲಿಯೇ ಅಸ್ವಸ್ಥಳಾದಳು. ಭೋರೆಂದು ಅತ್ತಳು.
ಈ ಬಾರಿ ಕಣ್ಣೀರಿಗೆ ಕರಗಬಾರದೆಂಬ ದೃಢ ನಿರ್ಧಾರ ಅನುವಿನದು. ತಾಯಿಯ ಮುಂದೆಯೇ ಬಟ್ಟೆ ಪ್ಯಾಕ್ ಮಾಡತೊಡಗಿದಳು.
“ಒಬ್ಬಳೇ ಅಲ್ಲಿವರೆಗೂ ಹೋಗ್ತೀಯಾ ಅನು?”
ಕಿವಿಗೆ ಜೇನು ಸುರಿದಂತಾಗಿ ಸರ್ರೆನೇ ಇತ್ತ ತಿರುಗಿ “ಅಮ್ಮಾ ಮೈ ಸ್ವೀಟ್ ಮಮ್ಮಿ ಹೀಗಿರಬೇಕು ಅಮ್ಮಾ ಅಂದ್ರೆ…” ಮುದ್ದಾಡಿದಳು.
“ನೀನು ಬರ್ತೀಯಾ ನನ್ನ ಕಳಿಸೋಕೆ?” ಅಂದಳು.
“ಇಲ್ಲ ನಿಮ್ಮಪ್ಪಂಗೆ ಹೇಳಲಾ?” ಅದು ಆಗದ ಮಾತು ಎಂದು ಗೊತ್ತಿದ್ದರೂ ಕೇಳಿದಳು.
“ಅಪ್ಪಾ, ಯಾರಮ್ಮಾ ನಂಗಿರೋ ಅಪ್ಪಾ?” ಮುಂದೆ ಏನೋ ಹೇಳಲು ಹೋದವಳು ಜೀವವೇ ಇಲ್ಲದಂತಿರೋ ನೀಲಾಳ ಮೋರೆ ನೋಡಿ ಸುಮ್ಮನಾಗಿಬಿಟ್ಟಳು. ರಾಕೇಶನಿಗೆ ಹೇಳಲಾ ಎಂದಾಗಲೂ ಅನು ಬೇಡವೆಂದುಬಿಟ್ಟಳು.
ಎಲ್ಲವಮ್ನ ಸಿದ್ಧಪಡಿಸಿಕೊಂಡು ಹೊರಡಲು ನಾಲ್ಕಾರು ದಿನವೇ ಹಿಡಿಯಿತು. ಟ್ರೈನ್ನಲ್ಲಿ ಬುಕಿಂಗ್ ಮಾಡಿಸಬೇಕು ಅಂದುಕೊಳ್ಳುವಷ್ಟರಲ್ಲಿ ರಾಕೇಶ ಬಂದು ಇಳಿದ.
ತಾನು ಬಾಂಬೆಗೆ ಕಾನ್ಫರೆನ್ಸ್ ಗಾಗಿ ಹೋಗುತ್ತಿರುವುದಾಗಿ ತಿಳಿಸಿದಾಗ ನೀಲಾ
“ಅನು ಕೂಡಾ ಹೋಗ್ತಾ ಇದ್ದಾಳೆ. ಜೊತೆಯಲ್ಲಿಯೇ ಕರ್ಕೊಂಡು ಹೋಗ್ತೀರಾ?” ಎಂದುಬಿಟ್ಟಳು.
ಈ ವಿಷಯ ರಾಕೇಶ್‌ಗೆ ಅನು ಫೋನ್ ಮಾಡಿ ತಿಳಿಸಿದ್ದಳು.
“ಅದಕ್ಕೆ ಬಂದೆ ಅಂಟಿ. ಅನುಗೂ ಸೇರಿಸಿ ಟಕೇಟ್ ಬುಕ್ ಮಾಡಿಸಿದ್ದೇನೆ. ಅಮ್ಮ, ಅಪ್ಪಾ ಕೂಡಾ ಬರ್‍ತಾ ಇದ್ದಾರೆ. ಅವರಿಗೂ ಒಂದ ಜಾಲಿ ಟ್ರಿಪ್.”
“ಹೌದೇ, ಈಗ ನನ್ನದ ಭಾರ ಇಳೀತು ನೋಡಿ. ನಿಮ್ಮ ತಂದೆ ತಾಯಿನೂ ಜೊತೆಯಲ್ಲಿರ್ತಾರೆ ಅಂದ್ರೆ ನಾನು ನಿಶ್ಚಿಂತೆಯಾಗಿಬಿಡ್ತೀನಿ”
ಅನುಷಾ ಬಾಂಬೆಗೆ ಹೋಗಿಯೇ ಹೋಗುತ್ತೇನೆ ಎಂದು ಹಟ ಹಿಡಿದ ಕೂಡಲೇ ನೀಲಾ ರಾಕೇಶ್‌ಗೆ ಫೋನ್ ಮಾಡಿ ಮನೆಯಲ್ಲಿ ನಡೆದ ವಿಷಯದ ಬಗ್ಗೆ ತಿಳಿಸಿ ತನ್ನ ಅಳಲು ತೋಡಿಕೊಂಡಳು.
ಹೋದಷ್ಟು ದಿನ ಅನು ಹೊರಗೆ ಹೋಗಲಿ, ಮನೆಯ ವಾತಾವರಣದಿಂದ ದೂರ ಇದ್ದಷ್ಟು ಒಳ್ಳೆಯದು. ಒಂದಷ್ಟು ದಿನ ಜೊತೆಯಲ್ಲಿಯೇ ಇದ್ದು ಸ್ಟಡಿ ಮಾಡಬೇಕು. ಅವಳಿಗೆ ಗೊತ್ತಾಗದ ರೀತಿ ಒಂದೆರಡು ಎಕ್ಸ್‌ಪೆರಿಮೆಂಟ್ ಮಾಡಬೇಕು ಅವಳ ಮನಸ್ಸಿನ ಮೇಲೆ ಅಂತ ಅಂದುಕೊಂಡಿದ್ದ. ಅವಕಾಶ ತಾನಾಗಿಯೇ ಕೂಡಿಬಂದಿದೆ.
ಏನಾದರೂ ನೆವ ಹಾಕಿ ನಾನು ಹೊರಡ್ತೀನಿ ಎಂದಿದ್ದ.
ಅದಕ್ಕೆ ಸರಿಯಾಗಿ ಅದೇ ಸಮಯದಲ್ಲಿ ಬಾಂಬೆಯಲ್ಲಿ ಮೆಡಿಕಲ್ ಕಾನ್ಫರೆನ್ಸ್ ನಡೆಯುತ್ತಿದ್ದದು ನೆವ ಸಾಕಾಯಿತು. ರಾಕೇಶ್ ಏನೂ ಆ ಕಾನ್ಫರೆನ್ಸ್‌ನಲ್ಲಿ ಭಾಗವಹಿಸುವ ಅಗತ್ಯ ಇರಲಿಲ್ಲ. ಆದರೂ ಅನುವಿಗಾಗಿ ಹದಿನೈದು ದಿನ ರಜೆ ಪಡೆದು ಹೊರಟುನಿಂತ. ಇವನು ಹೋಗ್ತಾ ಇದ್ದಾನೆ ಅಂತ ತಿಳಿದು ಅವನ ಅಪ್ಪ, ಅಮ್ಮ ಕೂಡಾ ಹೊರಟುನಿಂತರು. ಸ್ವಾಮಿನಾಥನ ತಂಗಿ ಇರುವುದು ಬಾಂಬೆಯಲ್ಲಿಯೇ. ಈ ನೆವದಲ್ಲಿಯಾದರೂ ತಂಗಿಯನ್ನು ಕಂಡು ಒಂದಷ್ಟು ದಿನ ಆಕೆಯ ಮನೆಯಲ್ಲಿದ್ದು ಬರಲು ಸ್ವಾಮಿನಾಥನ್ ಉತ್ಸುಕರಾಗಿ ಕುಸುಮರನ್ನು ಹೊರಡಿಸಿದರು. ಅಂತೂ ರಾಕೇಶ್ ಫ್ಯಾಮಿಲಿಯವರು ಅನುವಿನ ದೆಸೆಯಿಂದ ಬಾಂಬೆಗೆ ಪಯಣಿಸುವಂತಾಯಿತು.
ಅವರೆಲ್ಲರ ಜೊತೆ ಸಿಗ್ತಾಯಿದೆ ಅಂತ ಅನು ಕೂಡಾ ಸಂತಸಗೊಂಡಳು. ಮೊದಲೇ ಆ ಸುಂದರ ಸಂಸಾರದ ಬಗ್ಗೆ ಅವಳಿಗರಿವಿಲ್ಲದೆ ಯಾವುದೋ ರೀತಿಯ ಅಕ್ಕರೆ, ಆಸಕ್ತಿ ಬೆಳೆದಿತ್ತು. ಒಂದು ದಿನದ ಅವರ ಕಂಪನಿಯೇ ಅದೆಷ್ಟು ಹರುಷ, ಮನಸ್ಸಿಗೆ ಮುದ ತಂದಿತು. ಈಗ ಮತ್ತಷ್ಟು ದಿನಗಳು ಅವರ ಜೊತೆ ಕಳೆಯುವ ಅವಕಾಶ ಸಿಕ್ಕಿರುವುದು, ಇಂದಿನ ಅವಳ ಮನಸ್ಥಿತಿಯಲ್ಲಿ ಚೇತೋಹಾರಿಯಾಗಿತ್ತು. ಅವಳ ನಿಲುವಿಗೆ ಗೆಲುವು ತಂದಿತ್ತು. ಸಡಗರ ತಂದಿತ್ತು. ಅಪ್ಪನಿಂದಾಗಿ ಅಮ್ಮನ ಮನ ನೋಯಿಸಿ ತಾನೀಗ ಹೊರಟು ಆಕೆಯ ಹೃದಯದಲ್ಲಿ ದೊಡ್ಡ ಗಾಯವನ್ನೇ ಮಾಡಿದ್ದೇನೆಂಬ ಕಲ್ಪನೆ ಸ್ಪಷ್ಟವಾಗಿಯೇ ಇತ್ತು. ಇನ್ನು ಒಂಟಿಯಾಗಿ ಹೋಗುತ್ತಿರುವ ಬಗ್ಗೆ ಇಲ್ಲದ ಧಾವಂತಪಟ್ಟು, ಮನಸ್ಥಿತಿಯನ್ನು ಏರುಪೇರು ಮಾಡಿಕೊಂಡು ಎಲ್ಲಿ ಅನಾರೋಗ್ಯ ತಂದುಕೊಳ್ಳುತ್ತಾಳೋ ಎಂಬ ಆತಂಕ ಮನದಲ್ಲಿ ಮನೆ ಮಾಡಿತ್ತು. ಮನೆಯ ಪರಿಸ್ಥಿತಿ ಸರಿಯಾಗಿ ಇದ್ದರೆ ತಾನೇಕೆ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಿದ್ದೆ. ಎಲ್ಲಾ ಮಕ್ಕಳಿಗೂ ಇರುವ ಭಾಗ್ಯ ತನಗಿದೆಯೇ, ಸಧ್ಯ ರಾಕೇಶ ಫ್ಯಾಮಿಲಿ ತಮ್ಮೊಂದಿಗೆ ಹೊರಡುತ್ತಿರುವದು ಅಮ್ಮನಿಗೆ ಖುಷಿ ತರಿಸಿದೆ. ಸಮಾಧಾನದಿಂದಲೇ ತನ್ನನ್ನು ಕಳುಹಿಸುತ್ತಿದ್ದಾಳೆ. ರಾಕೇಶನಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ಅತನ ಬಗ್ಗೆ ಕೃತಜ್ಞತೆಯ ಮಹಾಪೂರವೇ ಹರಿಯಿತು.
ಮಗಳು ಹೊರಟುನಿಂತಾಗ ಕಣ್ತುಂಬಿ ಬಂತು. ಮಗಳ ತಲೆ ಮೇಲೆ ಅಕ್ಷತೆ ಹಾಕಿ ಆಶೀರ್ವದಿಸಿ, ಗಂಡನ ಜೊತೆ ಹೊರಟುನಿಂತ ಮಗಳನ್ನು ಬೀಳ್ಕೊಡಬೇಕಾಗಿದ್ದ ಸನ್ನಿವೇಶ ಈಗ ಕಣ್ಣೆದುರು ಇರಬೇಕಾಗಿತ್ತು.
ಆದರೆ ಮನೆಯನ್ನು ತೊರೆದು ನಿಂತ ಮಗಳು, ಎಲ್ಲೋ ಹೇಗೋ ಆ ಬೃಹತ್ ನಗರದಲ್ಲಿ ಒಂಟಿಯಾಗಿ ಬದುಕಿನ ನೆಲೆ ಅರಸಿ ಹೊರಡುತ್ತಿರುವ ಮಗಳಿಗೆ ಹರಸಿ ತಾನೀಗ ಬೀಳ್ಕೋಡಬೇಕಾಗಿದೆ. ಅಪ್ಪನ ಆಸ್ತಿಗೆಲ್ಲ, ತಾತನ ಆಸ್ತಿಗೆಲ್ಲಾ ಏಕೈಕ ವಾರಸುದಾರಳಾದ ತನ್ನ ಕಂದ ಇದೀಗ ನಿಲ್ಲುವ ನೆಲೆಗಾಗಿ ಎತ್ತಲೋ ಹರಿದಾಡುತ್ತಿದೆ. ಇಂತಹ ಪರಿಸ್ಥಿತಿ ಯಾವ ಕರುಳಕುಡಿಗೂ ಬಾರದಿರಲಿ. ತಾಯಿ ಹೃದಯ ಅತ್ತು ಚೀರಾಡುತ್ತಿದೆ.
ಒಳಗಿನ ವೇದನೆ, ಸಂಕಷ್ಟ, ಕೋಲಾಹಲ, ಹಾಲಾಹಲಗಳನ್ನೆಲ್ಲಾ ಮುಚ್ಚಿಟ್ಟುಕೊಂಡು ಗೆಲುವಿನ ನಗೆ ತೋರುತ್ತಾ ಬೀಳ್ಕೊಡುತ್ತಿದ್ದಾಳೆ. ರೈಲಿನ ಬಾಗಿಲುದ್ದಕ್ಕೂ ಜೊತೆಯಾಗಿ ನಿಂತು ಕೈಬೀಸುತ್ತಿದ್ದ ಜೋಡಿಯನ್ನು ಕಣ್ತುಂಬಾ, ಮನಸ್ಸಿನ ತುಂಬಾ ತುಂಬಿಕೊಂಡು ಕೈಬೀಸುತ್ತಿದ್ದಾಳೆ. ಇನ್ನು ತಾನಿನ್ನು ಇರಲಾರೆ ಎಂಬಂತೆ ಕಣ್ಣೀರು ಉಕ್ಕಿ ಹರಿಯುತ್ತಿದೆ. ಇದೇ ಮೊದಲ ಬಾರಿ ಮಗಳನ್ನು ಇಷ್ಟೊಂದು ದೂರ ಕಳುಹಿಸುತ್ತಿರುವುದು ಹೃದಯವೇ ಬಾಯಿಗೆ ಬಂದಂತಾಗಿದೆ. ಹೇಳುವ ಎಚ್ಚರಿಕೆಗಳನ್ನೆಲ್ಲ ಹೇಳಿ ಆಗಿದೆ. ಸ್ವಾಮಿನಾಥನ್ ದಂಪತಿಗಳಿಗೆ ರಾಕೇಶನಿಗೂ ಪದೇ ಪದೇ ಮಗಳ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸುವಂತೆ ಕೇಳಿಕೊಂಡಾಗಿದೆ. ಅವರೂ ತುಂಬಾ ಆಶ್ವಾಸನೆ ಇತ್ತಿದ್ದಾರೆ. ಅದರಂತೆ ನಡೆದುಕೊಳ್ಳುವ ಹೃದಯವಂತ ಜನರವರು ಎಂಬುದನ್ನು ಬಲ್ಲಳು. ಆದರೂ ಆದರೂ ಹೆತ್ತುಕರುಳು ಮಿಸುಕಾಡುತ್ತಿದೆ. ಹೃದಯ ವಿಲಿವಿಲಿ ಒದ್ದಾಡುತ್ತಿದೆ. ರೈಲು ಹೊರಟು ಮುಂದೆ ಮುಂದೆ ಸಾಗುತ್ತಿದ್ದರೆ ಎದೆಯ ಗುಂಡಿಗೆ ಸ್ತಂಭವಾಗುವಂತಿದೆ. ಹೆತ್ತ ಹೊಟ್ಟೆಗೆ ಕಿಚ್ಚು ತಗುಲಿದೆ. ಒಮ್ಮೆ ಬಿಕ್ಕಿ ಸಂಭಾಳಿಸಿಕೊಂಡಳು. ಎಲ್ಲೋ ಕಂದ ಸುಖವಾಗಿರಲಿ, ನೆಮ್ಮದಿಯಾಗಿರಲಿ ಹೆತ್ತೊಡಲು ಹಾರೈಸಿತು.
“ಇತ್ತ ಅನುವಿನ ಸ್ಥಿತಿಯೂ ಬೇರೇನೂ ಆಗಿರಲಿಲ್ಲ. ನೀಲಾಳದೆ ಮನಸ್ಥಿತಿಯಿಂದ ಕಂಗೆಟ್ಟುಬಿಟ್ಟಿದ್ದಾಳೆ. ಅವಳೆದೆಯಲ್ಲೂ ಅಗ್ನಿಪರ್ವತ. ಅಮ್ಮ ನನಗಾಗಿ ಉಸಿರು ಹಿಡಿದಿದ್ದಳು. ನನಗಾಗಿ ಬದುಕುತ್ತಿದ್ದಳು. ತನ್ನ ಸಾನಿಧ್ಯದಲ್ಲಿ ಎಲ್ಲಾ ನೋವನ್ನೂ ಮರೆಯುತ್ತಿದ್ದಳು. ಈಗ ಈಗ ಬಿಕ್ಕಿದಳು. ತಾನು ಸ್ಚಾರ್ಥಿ, ತಾನು ತನ್ನ ಮನಸ್ಸಿನ ನೆಮ್ಮದಿಗಾಗಿ ಆ ತಾಯಿ ಹೃದಯವನ್ನು ನೋಯಿಸುತ್ತಿದ್ದೇನೆ. ಕರುಣಾಮಯಿ ಅಮ್ಮನಿಂದ ದೂರಾಗಿ ತಾನು ಪಡುವ ನೆಮ್ಮದಿ ಇಲ್ಲಿ ಅಮ್ಮ ಸದಾ ತನಗಾಗಿ ಕೊರಗುತ್ತಿರುತ್ತಾಳೆ, ಹಂಬಲಿಸುತ್ತಿರುತ್ತಾಳೆ ಎಂದು ಅರಿವಿರುವ ತಾನು ಅದೆಷ್ಟರಮಟ್ಟಿಗೆ ತನ್ನ ಸಾಧನೆಯಲ್ಲಿ ಯಶಸ್ವಿಯಾಗಬಲ್ಲೆ. ಇಲ್ಲಾ, ಇಲ್ಲಾ ಸಾಧ್ಯವಿಲ್ಲ. ತಾನು ವಾಪಸ್ಸು ಹೋಗಿಬಿಡುತ್ತೇನೆ. ಆ ಅಪ್ಪಾ ಏನಾದರೂ ಅಂದುಕೊಳ್ಳಲಿ, ಅಮ್ಮನನ್ನು ಬಿಟ್ಟು ತನ್ನಿಂದ ಇರಲು ಸಾಧ್ಯವೇ ಇಲ್ಲ. ಅಮ್ಮಾ, ಅಮ್ಮಾ ಚಿಕ್ಕ ಮಗುವಿನಂತೆ ಉಸುರಿದಳು.
ಅವಳ ವೇದನೆ, ನೋವು. ನಿರಾಶೆ ರಾಕೇಶನಿಗೆ ಅರಿವಾಗಿತ್ತು. ಮೆಲ್ಲನೆ ಭುಜ ಬಳಸಿ ಭುಜ ತಟ್ಟಿದ. ನೂರು ಮಾತು ಮಾಡಲಾರದ ಸಮಾಧಾನ ಆ ಒಂದು ಸ್ಪರ್ಶದಿಂದ ಉಂಟಾಯಿತು. ತನ್ನವರಾರೂ ಇಲ್ಲಾ ಎಂಬ ಭಾವನೆ ಆ ಕ್ಷಣದಲ್ಲಿ ದೂರಾಯಿತು. ತನ್ನ ಹಿತೈಷಿ, ಗೆಳೆಯ, ಹೃದಯವಂತನ ಸ್ನೇಹವಿದೆ. ಆತನ ಆತ್ಮೀಯತೆ ಇದೆ. ತಾಯಿಯ ಅಗಲಿಕೆಯ ನೋವಮ್ನ ಸ್ವಲ್ಪವಾದರೂ ಮರೆಯುವ ಶಕ್ತಿ ಇದೆ. ಆ ಸ್ನೇಹಕ್ಕೆ ಅತನ ಹಾಗೂ ಆತನ ಹೆತ್ತವರು ತನ್ನ ಹಿತವನ್ನು ಕೋರುವ ಬಂಧುಗಳು ಇಷ್ಟಾದರೂ ಇದೆಯಲ್ಲ. ದೂರದೂರಿಗೆ ಹೋಗುತ್ತಿರುವ ಆತಂಕ, ಅಪರಿಚಿತ ಪರಿಸರವನ್ನೆದುರಿಸುವ ದುಗುಡ, ಹೆತ್ತತಾಯಿಯಿಂದ ಪರಿಚಿತ ವಾತಾವರಣದಿಂದ ದೂರಾಗುತ್ತಿರುವ ದುಮ್ಮಾನ ಸ್ವಲ್ಪ ಸ್ವಲ್ಪವೇ ಕಡಿಮೆಯಾಗತೊಡಗಿ, ಅವನ ಭುಜದ ಮೇಲೆ ತಲೆಯಿಟ್ಟು ಕ್ಷಣ ಕಣ್ಮುಚ್ಚಿದಳು. ಹಿತವಾದ ಗಾಳಿ ಬೀಸುತ್ತಿತ್ತು. ಅದೆಷ್ಟು ಹೊತ್ತು ನಿಂತಿದ್ದರೋ. ಹೃದಯಕ್ಕೇನೋ ಸಾಂತ್ವನ ಸಿಕ್ಕಿತ್ತು ಅನುವಿಗೆ. ಅನುವನ್ನು ಬದಲಾಯಿಸಬಲ್ಲ ಎಂಬ ಭರವಸೆ ಸಿಕ್ಕಿತ್ತು ರಾಕೇಶನಿಗೆ. ಪರಸ್ಪರ ಸಿಕ್ಕಿರುವುದನ್ನು ಬಿಡಲಾರದ ಸ್ಥಿತಿ ತಲುಪಿದ್ದರು ಇಬ್ಬರೂ. ಈ ಕ್ಟಣ ಹೀಗೇ ಇರಬಾರದೇ ಎನಿಸಿತು ರಾಕೇಶನಿಗೆ.
ಅನು ಪೂರ್ತಿ ಸಪ್ಪೆಯಾಗಿಬಿಟ್ಟಿದ್ದಳು. ತಾನು ಮಾಡಿದ್ದು ಸರಿಯೋ ತಪ್ಪೋ ಮನ ಸದಾ ವಿಶ್ಲೇಷಣೆಯಲ್ಲಿ ಮುಳುಗಿರುತ್ತಿತ್ತು. ತಮ್ಮ ನಗೆಚಾಟಿಕೆಯಿಂದ ಸದಾ ಉಲ್ಲಾಸದಾಯಕ ವಾತಾವರಣ ನಿರ್ಮಾಣ ಮಾಡಿ ಅನುವನ್ನು ಅತ್ತ ಸೆಳೆಯಲು ಸ್ವಾಮಿನಾಥನ್ ಪ್ರಯತ್ನಿಸುತ್ತಿದ್ದರು. ಎಷ್ಟು ಬೇಗ ಅವರ ಹಾಸ್ಯಕ್ಕೆ ನಕ್ಕು ಮನವನ್ನು ತಿಳಿಗೊಳಿಸುತ್ತಿದ್ದಳೋ, ಅಷ್ಟೇ ಬೇಗ ಕಳೆದುಹೋಗಿ ಬಿಡುತ್ತಿದ್ದಳು. ಕಿಟಕಿಯ ಪಕ್ಕ ಕುಳಿತು ಓಡುತ್ತಿರುವ ಗಿಡ, ಮರಗಳಲ್ಲಿ ಕಣ್ಣು ಕೀಲಿಸಿಬಿಡುತ್ತಿದ್ದಳು. ಮನದ ದುಗುಡ ಅವರಾರಿಗೂ ಕಾಣಬಾರದೆಂಬ ಅವಳ ಉಪಾಯ ಒಮ್ಮೊಮ್ಮೆ ಫಲಿಸುತ್ತಿರಲಿಲ್ಲ. ಕುಸುಮಳೋ, ಸ್ವಾಮಿನಾಥನ್‌ರೋ, ರಾಕೇಶನೋ ಮಾತಿಗೆಳೆಯುತ್ತಿದ್ದರು. ಅವಳನ್ನು ಅವಳೆಷ್ಟಕ್ಕೆ ಬಿಡದೆ ತಮ್ಮೊಳಗೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ಡರು.
ಅನುವನ್ನು ತಮ್ಮ ಮಗನಿಗಾಗಿ ನೋಡಿ ಬಂದಿದ್ದೆಂಬ ಅಂಶವನ್ನು ಮರೆತಂತೆ ಸ್ವಾಮಿನಾಥನ್ ಹಾಗೂ ಕುಸುಮ ನಟಿಸುತ್ತಿದ್ದರು. ಅವಳ ಬದುಕಿನ ಅಸಂತೋಷದ ವಿಷಯಗಳೆಲ್ಲವೂ ಅವರಿಗೆ ರಾಕೇಶನಿಂದ ತಿಳಿದಿತ್ತು. ಈ ಮಗು ಅದೆಷ್ಟು ಸಂಕಟ ಅನುಭವಿಸಿದೆ, ತನ್ನದಲ್ಲದ ತಪ್ಪಿಗೆ ಏನೇನು ಶಿಕ್ಷೆ ಅನುಭವಿಸಿದೆ ಎಂಬುದರೆಲ್ಲದರ ವ್ಯಥೆಯ ಕಥೆ ಅರಿವಾಗಿ ಅವಳ ಮೇಲಿನ ಪ್ರೀತಿ, ಮಮತೆ, ವಿಶ್ವಾಸ ಮತ್ತಷ್ಟು ಹೆಚ್ಚಾಗುತ್ತಿತ್ತು. ಯಾವ ಕಾರಣಕ್ಕೂ ಅನು ತಂದೆಯ ಪ್ರೀತಿಗೆ ಎರವಾದ ಮಗಳು ಎಂಬುದನ್ನು ತೋರಿಸಿಕೊಳ್ಳದೆ ತಮ್ಮ ಕೈಲಾದಷ್ಟು ಪಿತೃವಾತ್ಸಲ್ಯವನ್ನು ನೀಡಲು ಸ್ವಾಮಿನಾಥನ್ ಬಯಸುತ್ತಿದ್ದರು. ಸ್ಚಾಭಿಮಾನಿ ಅನು ಅದನ್ನು ನೇರವಾಗಿ ಸ್ವೀಕರಿಸಲಾರದೆ ಒದ್ದಾಡುತ್ತಿದ್ದಳು. ಅವಳ ಅಂತರಂಗದ ನೋವು ಬಲ್ಲವರಾಗಿದ್ದರೂ, ಅವಳ ಒಳತೋಟಿಯ ಅರಿವಿದ್ದರೂ, ಮಾಮೂಲು ಪರಿಸ್ಥಿತಿಯಲ್ಲಿ ಇರುವಂತೆಯೇ ಇದ್ದು ಬಿಟ್ಟರು. ಒಟ್ಟಿನಲ್ಲಿ ಅನು ತಮ್ಮ ಸೊಸೆಯಾಗಿ ತಮ್ಮ ಮನೆಯವರಲ್ಲಿ ಒಬ್ಬಳಾಗಿ ರಾಕೇಶನ ಪ್ರೇಮದಾತ್ರಮಯದಲ್ಲಿ, ತಮ್ಮ ವಾತ್ಸಲ್ಯದ ನೆಲೆಯಲ್ಲಿ ಎಲ್ಲವನ್ನೂ ಮರೆತು ನಗುನಗುತ್ತಿದ್ದರೆ ಸಾಕು ಎಂದು ಹಾರೈಸುತ್ತಿದ್ದರು.
ಇವರೆಲ್ಲರಿಗೂ ನೋವಾಗಬಾರದೆಂದು ಆದಷ್ಟು ಪ್ರಸನ್ನತೆಯಿಂದಿರಲು ಯತ್ನಿಸುತ್ತ ಆ ಪ್ರಯತ್ನದಲ್ಲಿ ಯಶಸ್ವಿಯಾಗಲು ಕಷ್ಟಪಡುತ್ತಿದ್ದಳು. ಒಮ್ಮೊಮ್ಮೆ ತನ್ನಲ್ಲಿಯೇ ಆಳಕ್ಕಿಳಿದುಬಿಡುತ್ತಿದ್ದಳು. ಅಲ್ಲಿ ಯಾರಿದ್ದಾರೆ ಎಂಬುದನ್ನು ಕೂಡಾ ಮರೆತು ತನ್ನ ಆಲೋಚನೆಗಳಲ್ಲಿ ಬಂಧಿಯಾಗಿಬಿಡುತ್ತಿದ್ದಳು. ಈ ಮನಸ್ಸಿನ ಹೋರಾಟಗಳಿಂದಾಗಿ ನಿದ್ರೆ ಎಂಬುದೇ ಬಳಿಯಲ್ಲಿ ಸುಳಿದಿರಲಿಲ್ಲ.
ಕುಸುಮ ಕಿಟಕಿ ಬಳಿ ಕುಳಿತ್ತಿದ್ದರು. ಅವರು ಮಧ್ಯಾಹ್ನ ಸಾಕಷ್ಟು ನಿದ್ರಿಸಿದ್ದರಿಂದ ಆರಾಮವಾಗಿ ವಾಕ್ಮನ್ ಹಾಕಿಕೊಂಡು ತಮಗಿಷ್ಟವಾದ ಹಾಡಿನಲ್ಲಿ ತಲ್ಲೀನರಾಗಿದ್ದರು. ಸ್ವಾಮಿನಾಥನ್ ಮಲಗುವ ಸಿದ್ದತೆ ನಡೆಸಿದರು. ರಾಕೇಶ್ ಏನೋ ಓದುತ್ತಿದ್ದ. ಒಂಟಿಯಾಗಿದ್ದ ಅನುಗೆ ತೂಕಡಿಗೆ ಆರಂಭವಾಗಿತ್ತು. ಕಣ್ಮುಚ್ಚಿದರೆ ಏನೇನೋ ನೆನಪಾಗಿ ನಿದ್ರೆ ಬಾರದೆ ಹಿಂಸೆ ಎನಿಸುತ್ತಿತ್ತು. ಇನ್ನೆರಡು ರಾತ್ರಿ ಹೀಗೆ ತಾನು ನಿದ್ರೆಗೆಟ್ಟರೆ ಕಾಯಿಲೆ ಮಲಗುವುದೇ ಗ್ಯಾರಂಟಿ ಎಂದುಕೊಂಡು ಬಲವಂತವಾಗಿ ನಿದ್ರಿಸಲು ಯತ್ನಿಸಿದಳು. ಹಟಮಾರಿ ನಿದ್ರೆ ಅವಳ ಬಳಿ ಬಾರದೆ ಅಟವಾಡಿಸುತ್ತಿತ್ತು.
ಹಾಡು ಕೇಳುತ್ತಾ ಒಳ್ಳೆ ಲಹರಿಯಲ್ಲಿದ್ದ ಕುಸುಮ ಅನುವಿನ ಒದ್ದಾಟ ಗಮನಿಸಿದರು. ತಮ್ಮ ತೊಡೆ ಮೇಲೆ ತಲೆ ಇಟ್ಟು ಮಲಗುವಂತೆ ಸಂಜ್ಞೆ ಮಾಡಿ. ತಾವೇ ಅವಳನ್ನು ಮಡಿಲಿಗೆಳೆದುಕೊಂಡರು. ಹಿತವಾದ ಮಡಿಲ ಸ್ಪರ್ಶ, ಓಡುತ್ತಿರುವ ರೈಲಿನ ಶಬ್ದ ಜೋಗುಳ ಹಾಡಿದಂತಾಗಿ ರೈಲಿನ ಕುಲುಕು, ತೊಟ್ಟಿಲಲ್ಲಿದ್ದಂತೆನಿಸಿ ನಿಧಾನವಾಗಿ ಕಣ್ಮುಚ್ಚಿದಳು. ತಮ್ಮ ಕೈಗಳಿಂದ ಅವಳ ಮುಂಗೂದಲನ್ನು ತಳ್ಳಿ ನಯವಾಗಿ ಕನ್ನೆ ಸವರಿದರು. ಆ ಮಾತೃವಾತ್ಸಲ್ಯದ ಸವಿ ನೀಲಾಳನ್ನು ನೆನಪಿಸಿತು. ತನ್ನ ಹೆತ್ತಮ್ಮನ ಮಡಿಲಿನಲ್ಲಿಯೇ ಮಲಗಿದ್ದಂತೆ ಭಾಸವಾಗಿ ಯಾವ ಸಂಕೋಚವೂ ಇಲ್ಲದೆ ನಿದ್ರಿಸಿದಳು. ಎರಡು ರಾತ್ರಿಗಳಿಂದ ಬೇರೆ ಇಲ್ಲ. ಏನೇನೋ ಆಲೋಚನೆಗಳಿಂದ ಮೈ ಮನಸ್ಸು ಬಳಲಿಹೋಗಿತ್ತು. ಕುಸುಮರ ಮಡಿಲಿನಲ್ಲಿ ಹಾಯಾಗಿ ನಿದ್ರೆ ಮಾಡತೊಡಗಿದಳು.
ಇಡೀ ರಾತ್ರಿ ಭಂಗಿ ಬದಲಿಸದೆ ತನ್ಮಯಳಾಗಿ ನಿದ್ರಿಸುತ್ತಿದ್ದಾಳೆ. ಸುಖವಾದ ಆ ನಿದ್ದೆ ನೋಡಿ ಕುಸುಮಗೆ ಎಚ್ಚರಿಸಲು ಮನ ಬಾರದೆ, ಹಾಗೆಯೇ ಕುಳಿತುಬಿಟ್ಟರು. ತಾವು ಸ್ವಲ್ಪ ಅಲ್ಲಾಡಿದರೂ ಅನು ಎಲ್ಲಿ ಎಚ್ಚೆತ್ತಾಳೋ ಎಂದು ಅಲ್ಲಾಡದೆ ಹಿಂದಕ್ಕೊರಗಿ ನಿದ್ರಿಸಲೆತ್ನಿಸಿದರು. ಅದು ಯಾವಾಗ ನಿದ್ರೆ ಬಂದಿತೋ.
“ಅಂಟಿ, ಅಂಟಿ, ನೀವು ಮಲಗಿಕೊಳ್ಳಿ” ಅನು ಎಚ್ಚರಿಸಿದಾಗಲೇ ಎಚ್ಚರವಾಗಿತ್ತು.
ಇಡೀ ರಾತ್ರಿ ತಾನು ಕುಸುಮಳ ತೊಡೆಯ ಮೇಲೆ ಸಣ್ಣ ಮಗುವಿನಂತೆ ಮಲಗಿ ಆ ಹಿರಿಯ ಜೀವಕ್ಕೆ ತೊಂದರೆ ಕೊಟ್ಟಿದ್ದಕ್ಕಾಗಿ ಸಂಕೋಚಿಸಿದ್ದಳು ಅನು.
“ಅಂಟಿ, ನನ್ನ ಏಳಿಸಬಾರದಿತ್ತಾ, ಪಾಪಾ ಇಡೀ ರಾತ್ರಿ ನೀವು ಕೂತ್ಕೊಂಡೇ ಇದ್ರೆ, ನಿಮ್ಮ ತೊಡೆ, ಕಾಲುಗಳು ಏನಾಗಿರಬೇಡ. ನನಗೆಂತಹ ಕೆಟ್ಟ ನಿದ್ರೆ. ಎಚ್ಚರವೇ ಇಲ್ಲ. ಆಗಲೇ ಬೆಳಗಾಗ್ತಿದೆ ನೋಡಿ. ಇನ್ನು ಸ್ವಲ್ಪ ಹೊತ್ತಾದರೂ ಕಾಲು ನೀಡಿಕೊಂಡು ಆರಾಮಾಗಿ ಮಲಗಿ” ಧ್ವನಿಯಲ್ಲಿ ಪಶ್ಚಾತ್ತಾಪ ತುಂಬಿ ತುಳುಕುತ್ತಿತ್ತು.
“ಈಗೇನಾಯ್ತು ಅನು, ಪಾಪ ಎರಡು ರಾತ್ರಿಯಿಂದ ನಿದ್ರೆ ಮಾಡಿಲ್ಲ. ಹಾಯಾಗಿ ಮಗುವಿನಂತೆ ನಿದ್ರಿಸ್ತಾ ಇದ್ದೀಯಾ. ಏಳಿಸೋಕೆ ಮನಸ್ಸೇ ಬರಲಿಲ್ಲ ಕಣಮ್ಮ. ನಿಂಗೆ ನಿದ್ರೆ ಚೆನ್ನಾಗಿ ಬಂತಲ್ಲ ಬಿಡು, ಬೆಳಗಾಗ್ತ ಇದೆ. ಇನ್ನರ್ಧ ಗಂಟೇಲಿ ಟ್ರೈನ್ ನಿಲ್ಲುತ್ತೆ. ತಿಂಡಿ ತಿಂದ ಮೇಲೆ ಮಲಗಿದರಾಯ್ತು.”
ಮಲಗಲೊಪ್ಪದೆ ಕುಳಿತೇ ಇದ್ದರು ಕುಸುಮ. ಈ ಹಿರಿಯ ಚೇತನವನ್ನು ನೋಡಿಯೇ ನೋಡಿದಳು. ತಾಯಿ ನೆನಪ ಮರೆಸುವ ಹಿತವಾದ ವ್ಯಕ್ತಿತ್ವ. ಗೌರವದಿಂದ ಎದೆ ತುಂಬಿ ಬಂತು.
ಟ್ರೈನ್ ನಿಂತೊಡನೆ ಏಳಲುಹೋದ ಕುಸುಮ ಕಾಲುಗಳು ಹಿಡಿದುಕೊಂಡಂತಾಗಿ ನಿಲ್ಲಲು ಕಷ್ಟಪಟ್ಟರು. ತಾನೇ ಕೈನೀಡಿ ಆಧರಿಸಿ ಹಿಡಿದುಕೊಂಡ ಅನು,
“ನೋಡಿದ್ರಾ, ನನ್ನಿಂದಾಗಿ ನಿಮ್ಮ ಕಾಲುಗಳು ಹೇಗಾಗಿವೆ ಅಂತಾ?” ಪಶ್ಚಾತ್ತಾಪವಿತ್ತು ಧ್ವನಿಯಲ್ಲಿ.
“ಯಾಕೆ ಅನು ಅಷ್ಟೊಂದು ನೊಂದುಕ್ಕೊಳ್ತಿಯಾ. ನನ್ನ ಮಗಳೇ ಆಗಿದ್ದರೆ ನೀನು, ನಾ ಹೀಗೆ ಮಾಡ್ತಿರಲಿಲ್ಲವಾ? ನಿಮ್ಮಮ್ಮನ ತೊಡೆ ಮೇಲೆ ಮಲಗಿದ್ದರೆ ಇಷ್ಟೊಂದು ವ್ಯಥೆ ಪಡ್ತಾ ಇದ್ಯಾ? ಯಾಕೆ ನನ್ನ ದೂರದವಳು ಅಂದ್ಕೊಳ್ತೀ? ನೀನು ನನ್ನ ಮಗಳಿದ್ದ ಹಾಗೆ” ಅವಳ ತಲೆ ಸವರಿದರು. ಈ ಮಮತೆಯಿಂದಾಗಿ ಅನುವಿನ ಮನಸ್ಸು ಒಂದಿಷ್ಟು ನಿರಾಳವಾಯಿತು. ತಾನಿನ್ನು ಹೀಗೆ ಸಂಕೋಚಿಸದೆ ಇದ್ದು ಬಿಡಬೇಕು ಎಂದುಕೊಂಡಳು.
ಬಾಂಬೆ ತಲುಪಿದರು. ಸ್ಟೇಷನ್ನಿಗೆ ತಂಗಿ ಹಾಗೂ ತಂಗಿಯ ಗಂಡ ಬಂದು ತಮಗಾಗಿ ಕಾಯುತ್ತಿರುವುದನ್ನು ರೈಲಿನೂಳಗಿಂದಲೇ ಸ್ವಾಮಿನಾಥನ್ ಕಿಟಕಿಯಿಂದ ಕುತ್ತಿಗೆ ಹೊರಹಾಕಿ,
“ಹಾಯ್ ಅಂಜು, ಹಾಯ್ ಮಾಲಿ.” ಸಣ್ಣಗೆ ಕೂಗಿದರು.
ರೈಲಿನ ವೇಗ ನಿಧಾನವಾಗುತ್ತಲೇ ಸಣ್ಣ ಮಕ್ಕಳಂತೆ ಹೊರಗೋಡಿದರು. ತಂಗಿಯನ್ನು, ಭಾವನನ್ನು ಅಪ್ಪಿ ಸಂತೋಷಿಸಿದರು. ಲಗೇಜುಗಳ ಸಮೇತ ರಾಕೇಶ್, ಅನು, ಕುಸುಮ ನಿಧಾನವಾಗಿ ರೈಲಿನಿಂದಿಳಿದರು.
ವನಮಾಲಿ ಓಡಿಹೋಗಿ ಕುಸುಮನಿಂದ ಲಗೇಜ್ ತೆಗೆದುಕೊಂಡು ಅನುವಿನೆಡೆಗೆ ನೋಡುತ್ತಾ ಜೋರಾಗಿ ಹೇಳಿದರು “ಯಾರು ಈ ರಾಜಕುಮಾರಿ, ಯಾವ ರಾಜ್ಯದಿಂದ ಕದ್ದು ಕೊಂಡು ಬರ್ತಾ ಇದ್ದೀರಿ?” ಕುಸುಮಳ ಕಿವಿಯಲ್ಲಿ “ಆಗ್ಲೇ ಮಗನಿಗೆ ಜೋಡಿ ಹುಡುಕಿ ಆಯ್ತ?” ಪಿಸುಗುಟ್ಟಿದರು.
“ನಿಂಗೆ ಹೆಣ್ಣುಮಕ್ಕಳಿಲ್ಲ ಅಂತಾ ಸದಾ ಅಳ್ತಾ ಇದ್ತೀಯಲ್ಲಾ ಅದಕ್ಕೆ ದತ್ತು ಕೊಡೋಣ ಅಂತಾ ನಮ್ಮೂರಿನಿಂದ ಕರ್ಕೊಂಡು ಬಂದಿದೀವಿ.” ಸ್ವಾಮಿನಾಥನ್ ಹಾಸ್ಯ ಮಾಡಿದರು.
ತಟ್ಟನೆ ಲಗೇಜ್ ಕೆಳಗಿರಿಸಿ ಅನುವಿನತ್ತ ಬಂದು “ಮೈ ಸ್ವೀಟ್ ಚೈಲ್ಡ್, ಎಂಥ ಬ್ಯೂಟಿಪುಲ್ ಮಗಳ್ನ ಕೊಡ್ತಾ ಇದ್ದೀಯಲ್ಲಾ, ಥ್ಯಾಂಕ್. ಗಾಡ್.” ಎನ್ನುತ್ತಾ ನಯವಾಗಿ ತುಟಿ ಒತ್ತಿದರು ಹಣೆಯ ಮೇಲೆ.
ಈ ಅನಿರೀಕ್ಷಿತ ಸ್ವಾಗತದಿಂದ ತೀವ್ರ ಮುಜುಗರಕ್ಕೊಳಗಾದ ಅನು ಸಂಕೋಚದಿಂದ ಮುದುಡಿಹೋದಳು.
ಅಷ್ಟರಲ್ಲಿ ಅಂಜು “ಅಣ್ಣಾ ನಿನ್ನ ತಮಾಷೆ ನೀನು ಇನ್ನು ಬಿಟ್ಟಿಲ್ಲ. ಮೊಮ್ಮಗ ಬರೋ ಹಾಗಾದರೂ ಇನ್ನು ಹುಡುಗಾಟ ನಿಂಗೆ. ಮಾಲಿನೂ ಸರಿಯಾಗಿದ್ದಾರೆ ನಿನ್ನ ಜೊತೆಗೆ. ಪಾಪ ಆ ಮಗು ಏನು ತಿಳ್ಕೋಬೇಕು ಬಾ ಅನು ಈ ಕಡೆ ಇವರಿಬ್ಬರೂ ಸೇರಿದ್ರೆ ಒಂಚೂರು ಸೀರಿಯಸ್ನೆಸ್ ಇರುವುದಿಲ್ಲ.” ರೇಗಿದರು.
ಅನು ಬರುವ ವಿಷಯ ಗೊತ್ತಿತ್ತು ಅಂಜುಗೆ. ‘ಅಳಿಯನೇ’ ಎಂದು ರಾಕಿಯನ್ನು ತಬ್ಬಿಕೊಂಡರು ವನಮಾಲಿ. ಆದರೂ ವನಮಾಲಿ ಅನುವಿನ ಬೆನ್ನು ಬಿಡಲಿಲ್ಲ. ಅನು ಬೇಟಿ ಅನುಬೇಟಿ ಅಂತಾ ಸದಾ ಅವಳೊಂದಿಗೆ ಮಾತನಾಡಲು ಶುರು ಹಚ್ಚಿಕೊಂಡು ಬಿಡುತ್ತಿದ್ದರು. ಮನೆ ತಲುಪುವಷ್ಟರಲ್ಲಿ ಅನು ವನಮಾಲಿಯ ಮಗಳೇ ಆಗಿಬಿಟ್ಟಿದ್ದಳು. ಮೊದಲು ಕಾರಿಳಿದ ವನಮಾಲಿ, ಗೇಟಿನ ಬಳಿ ನಿಂತಿದ್ದ ಚಿತ್ತರಂಜನ್‌ಗೆ, “ಚಿತ್ತು ನೋಡು ನಿಮ್ಮಾವ ನಿಂಗೆ ಅಂತ ಏನು ಪ್ರಜೆಂಟೇಷನ್ ತಂದಿದ್ದಾರೆ ಅಂತಾ.” ಕೂಗಿದರು.
“ಅನು ಬೇಟಿ ಬಾಯಿಲ್ಲಿ” ಎಂದು ಅವಳನ್ನು ಎಳೆದುಕೊಂಡು, “ತಂಗಿ ಬೇಕು ಅಂತಾ ಸದಾ ಕೊರಗ್ತಾ ಇದ್ದಿಯಲ್ಲ ನೋಡು, ನಿಂಗೆ ತಂಗಿ ಬಂದಿದ್ದಾಳೆ.” ಕೈಹಿಡಿದೇ ಚಿತ್ತರಂಜನ್ ಬಳಿ ಬಂದರು.
“ಹಾಯ್ ಸಿಸ್ಟರ್, ಈ ಮನೆಗೆ ಸುಸ್ವಾಗತ.” ಹಾರ್ದಿಕವಾಗಿ ನಗುತ್ತಾ ಎರಡು ಕೈ ಚಾಚಿ ತಲೆ ಬಾಗಿದ.
ರಾಕೇಶ್ ಎಲ್ಲವನ್ನು ನೋಡುತ್ತಾ ಎಂಜಾಯ್ ಮಾಡುತ್ತಿದ್ದ. ಇಷ್ಟೊಂದು ಹಾರ್ದಿಕ ಸ್ವಾಗತ ಅನುವಿಗೆ ಸಿಕ್ಕಿದ್ದು, ಮಾವ, ಮಗಳೆಂದು ಕರೆಯುತ್ತಿದ್ದುದು ಅವನಿಗೆ ಹರ್ಷ ತಂದು, ಅನು ಇದೇ ಪರಿಸರದಲ್ಲಿ ಕೆಲವು ದಿನಗಳಿದ್ದರೆ ಅವಳ ಮನಸ್ಥಿತಿ ಸಾಮಾನ್ಯವಾಗಬಹುದೆಂದು ಊಹಿಸಿದ.
ಅವರು ಬರುತ್ತಾರೆಂದು ತಿಂಡಿಯ ತಯಾರಿಯಲ್ಲಿದ್ದ ಸೊಸೆ ಮಾಯಾ ಇವರ ಗದ್ದಲ ಕೇಳಿ ಹೊರ ಬಂದಳು.
“ನಿನ್ನ ನಾದಿನಿ ಬಂದಿದ್ದಾಳೆ ನೋಡು.” ವನಮಾಲಿ ಅನುವನ್ನು ಸೊಸೆಗೂ ಅಷ್ಟು ಸಡಗರದಿಂದ ಪರಿಚಯಿಸಿದರು. ಬಂದವರಿಗೆಲ್ಲ ತಿಂಡಿಯಾಯಿತು. ಮೇಲಿನ ಕೋಣೆಗಳನ್ನು ಅವರಿಗಾಗಿ ಬಿಟ್ಟುಕೊಡಲಾಯಿತು. ಲಗೇಜ್ ಎಲ್ಲಾ ಮೇಲಿಟ್ಟರು ಕೆಲಸದವರು.
ಸ್ನಾನ, ಒಂದಿಷ್ಟು ನಿದ್ರೆ, ಎಲ್ಲ ಆದ ಮೇಲೆಯೇ ಅವರು ಕೆಳಗಿಳಿದು ಬಂದಿದ್ದು
ಇಷ್ಟೊಂದು ಆತ್ಮೀಯ ಸ್ವಾಗತವನ್ನು ಅನು ನಿರೀಕ್ಷಿಸಿಯೇ ಇರಲಿಲ್ಲ. ಹೇಗೋ ಏನೋ ಎಂಬ ತಳಮಳದಲ್ಲಿದ್ದಳು. ಬಂದಕೂಡಲೇ ಮಗಳ ಸ್ಥಾನ ಸಿಕ್ಕಿದ್ದನ್ನು ಕಂಡು ಸಂಕೋಚಿಸಿದ್ದಳು. ಇದೆಲ್ಲವೂ ರಾಕೇಶನ ಚಿತಾವಣೆ ಎಂದು ಅವಳಿಗೆ ಗೊತ್ತಾಗುವಂತೆಯೇ ಇರಲಿಲ್ಲ.
ಮಧ್ಯಾಹ್ನ ಊಟಕ್ಕೆ ಕುಳಿತಾಗ ರಾಕೇಶ್, ಅನುವಿನ ಕೆಲಸದ ಬಗ್ಗೆ ತಿಳಿಸಿದ. ಅವಳ ಓದು, ಅನುಭವ ತಿಳಿದುಕೊಂಡ ಚಿತ್ತರಂಜನ್. “ನಮ್ಮಲ್ಲಿಯೇ ಕೆಲಸ ಇದೆ, ಇಲ್ಲೇ ಯಾಕೆ ಸೇರ್ಕೊಬಾರದು.” ಸಲಹೆ ನೀಡಿದ.
ತಾನು ಈಗಾಗಲೇ ಗೆಳತಿಗೆ ತಿಳಿಸಿಬಿಟ್ಟಿರುವುದಾಗಿ ಹೇಳಿದಳು.
“ಸರಿ ನೋಡೋಣ. ಅದು ಯಾವ ಕಂಪನಿ, ಎಷ್ಟು ಸ್ಯಾಲರಿ ಕೊಡ್ತಾರೇ? ಎಲ್ಲಾ ಡೀಟೈಲ್ಸ್ ತಿಳಿದುಕೊಂಡು ನಂತರ ಈ ಬಗ್ಗೆ ಯೋಚನೆ ಮಾಡಿದರಾಯ್ತು.” ರಾಕೇಶ್ ಹೇಳಿದ.
ಸಮ್ಮತಿ ಎನ್ನುವಂತೆ ತಲೆಯಾಡಿಸಿದಳು. ಸೋನಿಗೆ ಫೋನ್ ಮಾಡಿ ಎಂದು ಬರಬೇಕೆಂದು ಕೇಳಿದಳು.
“ನಾಳೆಯೇ ಬಂದುಬಿಡು.” ತಿಳಿಸಿದಳು.
ಬೆಳಿಗ್ಗೆ ಹೊರಟಾಗ ರಾಕೇಶ್ ಕೂಡ ಜೊತೆಯಲ್ಲಿ ಹೊರಟ. ತಮ್ಮ ಕಾರೊಂದನ್ನು ಡ್ರೈವರ್ ನೊಂದಿಗೆ ಕರೆದೊಯ್ಯಲು ವ್ಯವಸ್ಥೆ ಮಾಡಿದ ಚಿತ್ತರಂಜನ್.
ಅಲ್ಲಿಗೆ ತಲುಪಿ ಅನುವನ್ನು ಸೋನಿಯ ವಶಕ್ಕೊಪ್ಪಿಸಿ, ಇನ್ನೊಂದು ಗಂಟೆಯಲ್ಲಿ ಬರ್ತೀನಿ ಅಂತ ಅದೆಲ್ಲಿಗೊ ಹೊರಟು ನಿಂತ.
ಸೋನಿ ಎಲ್ಲವನ್ನು ಕೇಳಿಸಿಕೊಂಡಳು. ಚಿತ್ತರಂಜನ್ ನೀಡಿದ ಆಫರ್ ಬಗ್ಗೆ ಕೂಡಾ ತಿಳಿದು,
“ಅನು ನಮ್ಮ ಕಂಪನಿಗಿಂತ ಚಿತ್ತರಂಜನ್ ಕಂಪನಿ ತುಂಬಾ ದೊಡ್ದದು. ಇಲ್ಲಿಗಿಂತ ಅಲ್ಲಿ ಫ್ಯೂಚರ್ ಚೆನ್ನಾಗಿರುತ್ತದೆ. ದೊಡ್ಡ ಆಲದ ಮರದ ನೆರಳೇ ನಿನಗೆ ಸಿಕ್ಕುವಂತಿರುವಾಗ ಈ ಪುಟ್ಟ ನೆರಳಿನ ಅಗತ್ಯ ನಿಂಗಿಲ್ಲ. ನೀ ಬರದೇ ಇದ್ರೂ ಏನೂ ನಾನು ತಿಳ್ಕೋದಿಲ್ಲ. ನಂಬಾಸಿಗೆ ಏನೋ ಹೇಳ್ತೀನಿ. ನೀನು ಅಲ್ಲಿಗೆ ಸೇರಿಕೊಂಡರೆ, ಮುಂದೆ ನಾನು ಕೂಡ ಅಲ್ಲಿಯೇ ಟ್ರೈ ಮಾಡಬಹುದು. ಅಂತಹ ಕಂಪನೀಲಿ ಕೆಲ್ಸ ಸಿಗುವುದೇ ದೊಡ್ದ ಅದೃಷ್ಟ ಅನು.”
ಸಮಸ್ಯೆ ಬಿಡಿಸಿಬಿಟ್ಟಳು ಸೋನಿ. ರಾಕೇಶ್ ಬಂದ ಮೇಲೂ ಅದೇ ಅಭಿಪ್ರಾಯ ತಿಳಿಸಿದಳು.
“ಒಳ್ಳೆಯದೇ ಆಯ್ತಲ್ಲ ಅನು. ನಮ್ಮ ಚಿತ್ತು ತುಂಬಾ ಒಳ್ಳೆಯ ಹುಡುಗ. ಆತನ ಕೈ ಕೆಳಗೆ ಕೆಲ್ಸ ಮಾಡ್ತಿನಿ ಅಂದ್ರೆ ನಮ್ಗೂ ಯಾವುದೇ ಆತಂಕವಿರುವುದಿಲ್ಲ. ನೀವು ಮನೆಯಲ್ಲಿದ್ದಷ್ಟು ಸೇಫ್, ಏನಂತೀರಾ?”
“ಒಪ್ಕೋತಾಳೆ ಬಿಡಿ. ಕೈತುಂಬಾ ಸಂಬಳ, ಇಲ್ಲಿಗಿಂತಲೂ ಹೆಚ್ಚಿನ ಅನುಕೂಲ ಯಾರಿಗುಂಟು ಯಾರಿಗಿಲ್ಲ.”
ಗೆಳತಿಯ ಸಲಹೆಯನ್ನೇ ಅನು ಒಪ್ಪಿಬಿಟ್ಟಳು. ಮೊದಲ ನೋಟಕ್ಕೆ ಚಿತ್ತರಂಜನ್‌ನ ವೃಕ್ತಿತ್ವದರಿವಾಗಿತ್ತು. ಅತನ ಕೈಕೆಳಗೆ ತಾನು ಕೆಲಸದಲ್ಲಿದ್ದರೆ ತನ್ನ ಉಜ್ವಲ ಪ್ರೊಫೆಶನ್‌ಗೆ ಅಡ್ಡಿಯಿಲ್ಲ. ಮನೆಯ ಜನರಿದ್ದಂತೆ ಇದ್ದಾರೆ. ಉಪಯುಕ್ತ ಮಾರ್ಗದರ್ಶನ ಅವರಿಂದ ಸಾಧ್ಯ ಎಂದುಕೊಂಡಳು.
“ಅಲ್ಲಿಗೆ ಪ್ರಾಬ್ಲಂ ಸಾಲ್ವ್ ಆಯ್ತು. ನಾವು ಬರ್ತೀವಿ.” ಸೋನಿಗೆ ಗುಡ್‌ಬೈ ಹೇಳಿ ಹೊರಟರು.
ಮನೆಗೆ ಬಂದೊಡನೆ ಈ ಸುದ್ದಿ ತಿಳಿಸಿದಾಗ ಚಿತ್ತರಂಜನ್ “ನಿಮ್ಮಂಥ ಬ್ರಿಲಿಯಂಟ್, ಗುಡ್ ವರ್ಕರ್ ನಮ್ಮ ಕಂಪನಿಗೆ ತುಂಬಾ ಅವಶ್ಯಕವಿದೆ. ನಿಮ್ಮ ತೀರ್ಮಾನದಿಂದ ನನಗೆ ತುಂಬಾ ಲಾಭವಾಗಿದೆ.” ತುಂಬು ಮನಸ್ಸಿನಿಂದ ನುಡಿದ.
ಸ್ವಾಮಿನಾಥನ್ ಆಗಲೇ ಅನು ಬುದ್ಧಿವಂತಿಕೆ, ಒಳ್ಳೆ ಕೆಲಸಗಾರ್ತಿ ಎಂದೆಲ್ಲಾ ತಿಳಿಸಿದ್ದರು.
“ಆದರೆ ಒಂದು ಕಂಡಿಷನ್ ಅನುಷಾರವರೇ.” ಚಿತ್ರರಂಜನ್ ಹೇಳಿದಾಗ, ಅನುವಿನ ಕಣ್ಣುಗಳು ಅಗಲವಾದವು, ಕೊಂಚ ಆತಂಕವೂ ಇಣುಕಿತು.
“ಅದು… ಈ ಮನೆಯಲ್ಲಿಯೇ ಇರಬೇಕು. ಅವಳಿಗಾಗಿ ಮಾಡುವ ಖರ್ಚನ್ನು ಅವಳ ಸಂಬಳದಲ್ಲಿ ಹಿಡಿದುಕೊಳ್ಳಲಾಗುವುದು.” ವನಮಾಲಿ ಆ ಕಂಡಿಷನನ್ನು ಘೋಷಿಸಿ ಬಿಟ್ಟಾಗ, ಏನಪ್ಪ ಕಂಡಿಷನ್ ಅಂತ ಆತಂಕಗೊಂಡಿದ್ದ ಅನು, ದೊಡ್ಡ ಆತಂಕದಿಂದ ಪಾರಾದಂತೆ ಸಮಾಧಾನದ ಉಸಿರು ಬಿಟ್ಟಳು.
“ಆದ್ರೆ ಸರ್ ಅದು… ನಾನು ಹಾಸ್ಪೇಲಿನಲ್ಲಿರುತ್ತೇನೆ.”
“ನೊ, ನೋ, ನಿನ್ನ ನನ್ನ ಮಗಳು ಅಂತಾ ನಾನು ಒಪ್ಟಿಕೊಂಡಿರುವಾಗ, ನಿನ್ನ ಹೇಗಮ್ಮ ಹಾಸ್ಟಲಿನಲ್ಲಿ ಯಾರೂ ಇಲ್ಲದವರಂತೆ ಬಿಡುವುದು. ನೋಡು ನಿಂಗೇನು ನಾವು ಫ್ರೀಯಾಗಿ ಊಟ, ತಿಂಡಿ ಲಾಡ್ಜು ಕೊಡೋದಿಲ್ಲ. ನಿನ್ನ ಸಂಬಳದಲ್ಲಿ ಹಿಡ್ಕೋತೀವಿ.” ವನಮಾಲಿಯ ಮಾತಿಗೆ ಏಕೋ ಅನು ಒಪ್ಪದಾದಳು. ಅದನ್ನು ಬಾಯಿ ಬಿಟ್ಟು ಆಡದಾದಳು. ಆದರೆ ಆಡದೆ ವಿಧಿಯಿರಲಿಲ್ಲ.
“ಅದು ಹಾಗಲ್ಲ ಸರ್, ನಾನು ನಿಮ್ಮ ಕಂಪನೀಲಿ ಕೆಲ್ಸ ಮಾಡ್ತಾ ನಿಮ್ಮ ಮನೆಯಲ್ಲಿಯೇ ಇರೋದು ಅಷ್ಟು ಚೆನ್ನಾಗಿರಲ್ಲ. ಜೊತೆಗೆ ನನ್ನ ತಾಯಿ ಬರ್‍ತಾ ಇರ್ತಾರೆ. ನಮ್ಗೆ ಪ್ರೈವೆಸಿ ಬೇಕು.” ನಿಧಾನವಾಗಿ ಬಿಡಿಸಿ ಬಿಡಿಸಿ ಹೇಳಿದಳು. ಬೇಸರವಾದರೂ ತೋರಿಸಿಕೊಳ್ಳದೆ, “ಹಾಸ್ಟಲ್ ಬೇಡ.” ಕಂಪನಿಯದೆ ಕ್ವಾರ್ಟಸ್ ಇದೆ. ಆದ್ರೆ ವಾರಕ್ಕೊಂದು ಬಾರಿಯಾದರೂ ಈ ಮನೆಗೆ ಬರ್‍ತಾ ಇರಬೇಕು. “ಮಗಳಿಲ್ಲ ಅನ್ನೋ ಕೊರತೇ ನೀಗಿಸಬೇಕು.” ಭಾವುಕರಾದರು ವನಮಾಲಿ.
ಸ್ವಾಭಿಮಾನಿ ಅನು ಒಪ್ಪಲಾರಳೆಂಬ ಸತ್ಯ ರಾಕೇಶ್‌ಗೆ ಗೊತ್ತಿತ್ತು.
“ನಾಳೆಯಿಂದಲೇ ಡ್ಯೂಟಿಗೆ ಜಾಯಿನ್ ಆಗಬಹುದು” ಎಂದ ಚಿತ್ತರಂಜನ್.
ರಾತ್ರಿ ಮಲಗಿದ್ದ ಅನುವಿಗೆ ತುಂಬಾ ಹೊತ್ತು ನಿದ್ರೆ ಬರಲಿಲ್ಲ. ನೆನಪುಗಳು ತಿದಿ ಒತ್ತಿದ ಹಾಗೆ ಅವಳ ಅಂತರಂಗವನ್ನು ಒತ್ತುತ್ತಿದ್ದವು. ಒಂದೆಡೆ ಸಂತಸ, ಒಂದೆಡೆ ನೋವು, ಅಮ್ಮ ಅಲ್ಲಿ ನಾನಿಲ್ಲದೆ ನನ್ನ ನೆನಪಿನಲ್ಲಿ ಹೇಗೆ ದುಃಖಿಸುತ್ತಿದ್ದಾಳೊ, ಮೈಯೆಲ್ಲಾ ಹಿಂಡಿದಂತೆ ನೋವು, ಏನೋ ನಿಶ್ಶಕ್ತಿ, ದಾಹ ದಾಹ ತುಂಬಾ ದಾಹ, ಅಮ್ಮ ಎಲ್ಲಿದ್ದೀಯಾ ಬಂದುಬಿಡು. ಆ ರಾಕ್ಷಸ ಗಂಡನ ಜೊತೆ ಆ ಬದುಕೇಕೆ? ಬಂದುಬಿಡಮ್ಮ. ನೀ ಬಾರದಿದ್ದರೆ ನಾನಿಲ್ಲಿ ಅಶಾಂತಿಯಿಂದ ನರಳಿ ನರಳಿ ಸತ್ತುಬಿಡುತ್ತೇನೆ. ಅಮ್ಮಾ ಅಮ್ಮಾ ಕನವರಿಕೆ ಜೋರಾಯಿತು. ಮೈಮೇಲೆ ಪ್ರಜ್ಞೆ ಇಲ್ಲ. ಎಲ್ಲಿದ್ದೇನೆ ಏನಾಗುತ್ತದೆ ಅರಿವಿಲ್ಲ.
ಕಣ್ಣುಬಿಟ್ಬಾಗ ಸುತ್ತಲೂ ಮನೆಯ ಜನರು ತಾನು ಎಲ್ಲಿದ್ದೇನೆ ಎಂದು ತಿಳಿಯದಂತಹ ಪರಿಸ್ಥಿತಿ. ಎಲ್ಲರನ್ನು ಮಿಕಿಮಿಕಿ ನೋಡಿದಳು ನಿಧಾನವಾಗಿ ವಾಸ್ತವಕ್ಕೆ ಬಂದಳು.
“ಅನು ಏನಾಗ್ತಾ ಇದೆಯಮ್ಮ. ನೋಡು ನಾನು ಕುಸುಮ ಆಂಟಿ” ಕಕ್ಕುಲತೆಯಿಂದ ತುಸು ಹತ್ತಿರ ಬಂದು ವಿಚಾರಿಸಿದಳು.
“ಏನಾಗಿದೆ ನಂಗೆ, ನೀವೆಲ್ಲ ಯಾಕೆ ಗಾಭರಿಯಾಗಿದ್ದೀರಿ” ಒಂದೂ ಅರ್ಥವಾಗದೆ ಪ್ರಶ್ನಿಸಿದಳು.
“ಅನು ಮಾತಾಡಿ ಆಯಾಸ ಮಾಡ್ಕೊಬೇಡ, ರಾತ್ರೆ ನಿಂಗೆ ಹೈ ಫೀವರ್. ತಕ್ಷಣ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ವಿ. ಈಗ ನೋಡು ಸಂಜೆ ಐದುಗಂಟೆ ಇಷ್ಟೊತ್ತಿನವರೆಗೂ ನಿಂಗೆ ಪ್ರಜ್ಞೆ ಇರಲಿಲ್ಲ. ಅಮ್ಮ ಅಮ್ಮ ಅನ್ನೋದೊಂದೇ ಮಾತು ನಿಮ್ಮಮ್ಮನ ಬಿಟ್ಟು ಬಂದಿರೋದು ನಿನ್ನ ಮನಸ್ಸಿಗೆ ತುಂಬ ಆಘಾತ ಆಯ್ತು ಅನ್ನಿಸುತ್ತೆ, ಟೆನ್‌ಶನ್‌ಗೆ ನಿಂಗೆ ತುಂಬಾ ಜ್ವರ, ನಾವಂತೂ ತುಂಬಾ ಗಾಬರಿ ಪಟ್ಟಿ. ನೀನು ಕಣ್ಣ ಬಿಟ್ಟ ಮೇಲೆಯೇ ನಮಗೆ ಜೀವಬಂದಿದ್ದು.
ರಾಕೇಶ್ ಹೇಳಿದ್ದನ್ನಲ್ಲ, ಅರ್ಥೈಯಿಸಿಕೊಳ್ಳಲಾಗಲೇ ಇಲ್ಲಾ. ಜ್ವರ, ಟೆನ್‌ಷನ್, ಅಮ್ಮ ಇವಷ್ಟೆ ಮನಸ್ಸಿನೊಳಗೆ ಇಳಿದಿದ್ದು.
ಸಂಪೂರ್ಣ ಗುಣವಾಗುವ ತನಕ ಅನು ಆಸ್ಪತ್ರೆಯಲ್ಲಿಯೇ ಉಳಿಬೇಕಿತ್ತು. ಆ ನಿಸ್ಸಾಹಾಯಕ ಸ್ಥಿತಿಯಲ್ಲಿ ಅವಳನ್ನು ಅತ್ಮಂತ ಕಾಳಜಿಯಿಂದ ನೋಡಿಕೊಂಡರು ಎಲ್ಲರೂ. ರಾಕೇಶನಂತು ಆಸ್ಪತ್ರೆ ಬಿಟ್ಟು ಅಲ್ಲಾಡಲಿಲ್ಲ. ಟೈಂಗೆ ಸರಿಯಾಗಿ ಮಾತ್ರೆ ತಿನ್ನಿಸುವುದು, ಗಂಜಿ ಕುಡಿಸುವುದು ಎಲ್ಲವನ್ನು ತುಂಬು ಪ್ರೇಮದಿಂದ ನಿಸ್ವಾರ್ಥ ಭಾವದಿಂದ ತನ್ನ ಕರ್ತವ್ಯವೆಂಬಂತೆ ಮಾಡುತ್ತಿದ್ದುದ್ದನ್ನೇ ಹನಿಗಣ್ಣಾಗಿ ನೋಡುತ್ತಿದ್ದಳು ಅನು ಯಾವ ಜನ್ಮದ ಋಣ ಇದು, ಯಾಕೆ ಹೀಗೆ ನನ್ನ ಸೇವೆ ಮಾಡಿ ಋಣದ ಭಾರ ಹೊರಿಸುತ್ತಾ ತಾನು ಇದ್ದಾರೆ. ಯಾವ ರೀತಿಯ ಬಂಧು ನನಗಾಗಿ ಈ ಕಕ್ಕುಲಾತಿ ಏಕೆ, ನಾನೇನಾಗಬೇಕು ಇವರಿಗೆ, ಯಾವುದನ್ನು ಆಡಲಾರದೆ ಅವನಿಂದ ಸೇವೆ ಮಾಡಿಸಿಕೊಳ್ಳುತ್ತಿದ್ದಳು.
ಆಸ್ಪತ್ರೆಯಿಂದ ಬಂದಳು ಅನು. ರಾಕೇಶ್ ಊರಿಗೆ ಹೊರಟು ನಿಂತ “ಅಪ್ಪ ಅಮ್ಮ ಇನ್ನೊಂದು ತಿಂಗಳು ಇರುತ್ತಾರೆ. ಏನೇನೋ ಆಲೋಚನೆ ಮಾಡಿ ಮತ್ತೇ ಜ್ವರ ಬರಿಸಿಕೊಳ್ಳಬೇಡ. ಪೂರ್ತಿ ನಿಶ್ಯಕ್ತಿ ಕಡಿಮೆ ಆದ ಮೇಲೆ ಕೆಲಸಕ್ಕೆ ಹೊರಡು, ಅದಕ್ಕೆ ಮುಂಚೆ ಹೊರಟರೆ ನನ್ನಾಣೆ ಇದೆ” ಹೊರಡುವ ಮುನ್ನ ಅನುವಿಗೆ ಹೇಳಿದಾಗ ಯಾವುದೋ ನಿರಾಶಭಾವದಿಂದ ತಲೆತಗ್ಗಿಸಿ ಕುಳಿತು ಬಿಟ್ಟಿದ್ದಾಳೆ. ಏನೋ ಕಳೆದು ಹೋಗುತ್ತಿರುವ ಭಾವ. ಯಾವುದೋ ಹಿತವಾದದೊಂದು ವಸ್ತು ದೂರಾಗುತ್ತಿರುವ ಭಾವ ಏನೆಂದೇ ಕ್ಷಣಗಳು ಅರ್ಥವಾಗಲಿಲ್ಲ.
ಇದೇನೆಂದೇ ಅವಳ ಹೃದಯಕ್ಕೆ ಸ್ಪಷ್ಟತೆ ಸಿಗಲಿಲ್ಲ, ಆತ್ಮೀಯರನ್ನು ಬೀಳ್ಕೊಡುವಾಗ ಈ ತಳಮಳ ಸಹಜವೆಂದು ಭಾವಿಸಿದಳು. ಅಮ್ಮನನ್ನು ಬಿಟ್ಟು ಬರುವಾಗಲೂ ಇಂತಹುದೇ ಮನಸ್ಥಿತಿಯಲ್ಲವೇ ತನಗಿದ್ದುದು. ತನ್ನನ್ನೇ ಸಾಂತ್ವನಿಸಿಕೊಂಡು ಭಾರವಾದ ಮನದಿಂದಲೇ ಬೀಳ್ಕೊಟ್ಟಳು.
ಅಮ್ಮನಿಗೆ ತಾನಿಲ್ಲಿ ಹುಶಾರು ತಪ್ಟಿದ್ದನ್ನು ಹೇಳಬೇಡಿ ಎಂದು ಮೊದಲೇ ಹೇಳಿಬಿಟ್ಟಿದ್ದಳು. ಈಗ ನಿಶ್ಚಿಂತೆಯಿಂದ ಹೊಸ ಉದ್ಯೋಗದ ಕಲ್ಪನೆಯಲ್ಲಿ ವಿಹರಿಸತೊಡಗಿದಳು.
ಒಂದೆಂಟು ದಿನಗಳು ಇಲ್ಲಿಂದಲೇ ಡ್ಯೂಟಿಗೆ ಹೋಗುತ್ತಿದ್ದಳು. ನಂತರ ಕ್ವಾರ್ಟಸ್‌ಗೆ ಶಿಫ್ಟ್ ಆದಳು. ಏನನ್ನೂ ಹೊಂದಿಸಿಕೊಳ್ಳುವಂತಿರಲಿಲ್ಲ. ಅಗತ್ಯತೆಗೆ ತಕ್ಕಂತೆ ಎಲ್ಲವೂ ಇತ್ತು. ಸಾಮಾನು ತಂದು ಅಡುಗೆ ಮಾಡಿಕೊಳ್ಳುವುದಷ್ಟೆ ಏನೋ ಸ್ವಾತಂತ್ರ, ಏನೋ ಹಗುರತೆ, ಇಡೀ ಮನೆಯ ತುಂಬಾ ಹರಿದಾಡಿದಳು. ತಾನೇ ಅಡುಗೆ ಮಾಡಿ ತಿನ್ನುವ ಸಂಭ್ರಮ, ತನಗಿಷ್ಟ ಬಂದಂತೆ ಇರುವ ಸ್ವಚ್ಛಂದ ಅವಕಾಶ, ಹೀಗಿರು ಹಾಗಿರು ಎಂದು ಹೇಳುವರಿಲ್ದೆ ತನ್ನದೇ ಸಾಮ್ರಾಜ್ಯ ನಿಜಕ್ಕೂ ಈ ಹೊಸ ಅನುಭವದಿಂದ ಪುಳಕಿತಳಾದಳು
ಸ್ವಾಮಿನಾಥನ್ ದಂಪತಿಗಳ ಬಲವಂತಕ್ಕೆ ಅವರೊಂದಿಗೆ ನಾಲ್ಕಾರು ದಿನ ಟೂರ್ ಹೊರಡಲೇ ಬೇಕಾಯಿತು. ಒಂದು ದಿನ ಒಂದೊಂದು ಕಡೆ ಎಂಬಂತೆ ಇಡೀ ಬಾಂಬೆಯನ್ನು ಸುತ್ತಿದರು. ಆ ಇಳಿ ವಯಸ್ಸಿನಲ್ಲಿಯೂ ಪರಸ್ಪರ ಅನ್ಯೋನ್ಯತೆ, ಅನುರಾಗ ಆದರ ತುಂಬಿಕೊಂಡ ದಂಪತಿಗಳು ಮದುವೆ, ಗಂಡ, ಸಂಸಾರ ಇವೆಲ್ಲದರ ಬಗ್ಗೆ ಅನು ಕಟ್ಟಿಕೊಂಡಿದ್ದ ಬಲವಾದ ಕೋಟೆಯ ಬುಡವನ್ನು ಸ್ವಲ್ಪವೇ ಅಲುಗಾಡಿಸಿದರು.
ಬುದ್ಧಿ ಬಂದಾಗಿನಿಂದಲೂ ಕಂಡ ತಂದೆ ತಾಯಿಯರ ವರ್ತನೆ ಅವಳ ಮನದಲ್ಲೊಂದು ಕಲ್ಪನೆ ಅಚ್ಚು ಹಾಕಿಬಿಟ್ಟಿತು. ಅದೇ ಸಂಸಾರವೆಂದರೆ ಅದೆ ದಾಂಪತ್ಯವೆಂದರೆ ಎಂದು ಅಸಹ್ಯಿಸಿಕೊಳ್ಳುತ್ತಿದ್ದಳು.
ಆದರೆ ಸ್ವಾಮಿನಾಥ್ ಪ್ರತಿಕ್ಷಣ ಮಡದಿಯ ಬಗ್ಗೆ ತೋರುವ ಒಲವು ಕಾಳಜಿ, ಜನ್ಮ ಜನ್ಮಾಂತರದ ಸಂಬಂಧವಿದು ಎಂಬ ಧನ್ಕತೆಯ ಭಾವ, ಆ ವಯಸ್ಸಿನಲ್ಲಿಯೂ ಕೋರುವ ರಸಿಕತೆ, ಹೆಜ್ಜೆ ಊರಿದರೆ ಸವೆದಾಳೆಂಬ ಆತಂಕ, ಸದಾ ಜೊತೆಯಲ್ಲಿ ಇದ್ದು ಪತ್ನಿಯ ಬಯಕೆಗಳನ್ನೆಲ್ಲ ಈಡೇರಿಸುವುದೇ ತಮ್ಮ ಪರಮದ್ಯೇಯ ಎಂಬಂತೆ ವರ್ತನೆ ಅಬ್ಬಾ ಹೀಗಿರಲು ಸಾಧ್ಯವೇ ಎನಿಸಿತು.
ಅಭಿ, ಸುಶ್ಮಿತರ ನೆನಪಾಯ್ತು. ತನ್ನನ್ನು ಮರೆತು ಸುಶ್ಮಿತಳೊಂದಿಗೆ ಆದಷ್ಟು ಹತ್ತಿರವಾಗಿ ಬಿಟ್ಟಿದ್ದಾನೆ. ಅದೇನು ಪ್ರೀತಿ ಅದೇನು ಅನುರಾಗ ಪತ್ನಿಯಾದ ಕೂಡಲೇ ಇಷ್ಟೊಂದು ನಿಕಟತೆ ಸಾಧ್ಯವೇ ಎನಿಸಿವಂತಹ ಉತ್ಕಟತೆ. ಹುಚ್ಚು ಪರಿ ಎನಿಸಿತ್ತು ಆಗ.
ಅದರೆ ಇಲ್ಲಿ ಸ್ವಾಮಿನಾಥನ್ ಕುಸುಮರ ದಾಂಪತ್ಯದ ಬಾಳು ಮಾಗಿ ಹಣ್ಣಾದ ಪಕ್ವತೆಯಲ್ಲೂ ಅಷ್ಟೊಂದು ಉತ್ಸಾಹ, ಒಲವು ಬತ್ತದ ಆಸಕ್ತಿ, ಈ ಅಪರೂಪದ ಜೋಡಿ ಕಾಣುತ್ತಾ ಮನ ಉಲ್ಲಾಸದ ಮಡುವಾಯಿತು. ರಾಕೇಶ್ ಹೋದೊಡನೆ ಆವರಿಸಿದ ಖಿನ್ನತೆ ದೂರಾಯಿತು. ವಿಚಿತ್ರ ಹಗುರತೆ. ಖಾಲಿ ಖಾಲಿಯಾಗಿದ್ದ ಮನಸ್ಸಿನ ತುಂಬಾ ರಾಕೇಶನ ನೆನಪುಗಳು ರಾಕೇಶನ ನೆನಪಾದೊಡನೆ ಫೋನ್ ಮಾಡಬೇಕಿತು ಎನಿಸಿ, ಈಗ ಬೇಡ ರಾತ್ರೆ ಒಬ್ಬಳೇ ಇರುವಾಗ ಮಾಡಬೇಕು ಎಂದುಕೊಂಡು ರಾಕೇಶನೊಂದಿಗೆ ಮಾತನಾಡುವ ಬಯಕೆಯನ್ನು ಹತ್ತಿಕ್ಕಿದಳು.
ಸಂಸಾರ ದಾಂಪತ್ಯ, ಮದುವೆ ಈ ಬಗ್ಗೆ ತಾಳಿದ್ದ ಧೋರಣೆಗಳೆಲ್ಲಾ ಮೃದುವಾಗುತ್ತಿವೆ ಎನಿಸಿತು. ವನಮಾಲಿ ಅಂಜುರವರ ಸಂಬಂಧ, ಒಬ್ಬರಿಗೊಬ್ಬರು ಕೊಡುವ ಗೌರವ, ವಯಸ್ಸಾಗಿದೆ ಎಂಬ ಭಾವವೂ ಯಾವ ತೋರದ ಹರೆಯದ ಜೋಡಿಗಳಂತೆ ಸದಾ ಜೊತೆಯಾಗಿಯೇ ಇರಬೇಕೆನ್ನುವ ಭಾವ ಇವೇ ಅವಳ ಮನಸ್ಸಿನ ಆಳದಲ್ಲಿ ನೆಲೆಯಾಗತೊಡಗಿದವು.
ತನ್ನಮ್ಮನ ಸಂಸಾರವೊಂದೇ ಹಾಗಿರುವುದು ಎಂಬ ಅನಿಸಿಕೆ ಬಲಿಯತೊಡಗಿತು. ಸ್ವಾಮಿನಾಥನ್ ಬಾಂಬೆಗೆ ಬಂದಾಗ ತಾನೊಬ್ಬಳೇ ರೂಮಿನಲ್ಲಿ ಮಲಗಲು ಹೆದರಿಕೆ ಇಲ್ಲಾ ತಾನೆ ಎಂದು ಕೇಳಿ, ತಾನು ಇಲ್ಲವೆಂದಾಗ, ನಿಮ್ಮಾಂಟಿ ನೋಡು ಅನು, ಯಾವಾಗಲೂ ಒಬ್ಳೇ ಮಲಗಿಲ್ಲ, ಒಬ್ಳೆ ಮಲಗಿಕೊಳ್ಳೋಕೆ ತುಂಬಾ ಭಯ ಅಂತೆ, ಸದಾ ನಾನಿರಬೇಕು ನಿಮ್ಮಾಂಟಿಗೆ” ಎನ್ನುತ್ತಾ ಹೆಂಡತಿಯತ್ತ ನೋಡಿ ರಸಿಕತೆಯಿಂದ ಕಣ್ಣೂಡೆದಿದ್ದನ್ನು ಕಂಡಿದ್ದಳು.
“ಥೂ ಸುಮ್ನಿರಿ ಆ ಮಗು ಮುಂದೆಲ್ಲ ಹಾಗೆಲ್ಲ ಮಾತಾಡಬೇಡಿ” ಎಂದು ಕೆಂಪಾಗಿ ನಾಚಿ ನುಡಿದಿದ್ದರು. ಗಂಡನ ಸಾಮಿಪ್ಯಕ್ಕಾಗಿ ಸದಾ ಹಂಬಲಿಸುವ ಕುಸುಮ ಅರೆಕ್ಷಣ ಗಂಡನಿಂದ ಅಗಲಿರಲು ಬಯಸುತ್ತಿರಲಿಲ್ಲ. ಸ್ವಾಮಿನಾಥ್ ಅಂಕಲ್ ಕೂಡ ಅಷ್ಟೆ ತಮ್ಮ ಕಣ್ಣೆದಿರಿನಿಂದ ಕುಸಮ ಆಂಟಿ ದೂರಾಗುವುದನ್ನು ಸಹಿಸುತ್ತಿರಲಿಲ್ಲ. ಊರಲ್ಲಿ ಅದು ಹೇಗೆ ಆಫೀಸಿನ ವೇಳೆಯಲ್ಲಿ ದೂರ ಇರುತ್ತಿದ್ದರೊ ನೆನಸಿಕೊಂಡು ನಗು ಬಂತು ಅನುವಿಗೆ.
ರಾತ್ರೆ ರಾಕೇಶಗೆ ಫೋನ್ ಮಾಡಿದಳು. ಅವನೊಂದಿಗೆ ಮಾತನಾಡಿದ ನಂತರ ಒಂದಿಷ್ಟು ನೆಮ್ಮದಿ ನಿರಾತಂಕದ ಭಾವ ಉದಯಿಸಿತು. ಫೋನ್ ಅಮ್ಮಂಗೂ ಮಾಡಬೇಕು ಅಂದುಕೊಂಡು ಅಲ್ಲಿಗೂ ಮಾಡಿದಳು.
ಅತ್ತಲಿಂದ ನೀಲಾಳ ಅಳು ತುಂಬಿದ ಸ್ವರ, ಗಾಭರಿಯಾದಳು
“ಅನು ಹೇಗಿದ್ದಿಯಾ”ನಾನು ಚೆನ್ನಾಗಿದ್ದೀನಿ ನೀನು ಹೇಗಿದ್ದಿಯಾ” ಆತಂಕ ಒಡಮೂಡಿತ್ತು.
“ನಾನ್ಯಾವತ್ತು ಚೆನ್ನಾಗಿರ್ತೀನಿ ಅನು” ಬಿಕ್ಕಿದಳು.
“ಅಮ್ಮ ಏನಾಯ್ತಮ್ಮ, ಅಪ್ಪ ಏನಾದ್ರೂ ಅಂದ್ರ” ಒತ್ತಾಯಿಸಿದಳು.
“ನಿಂಗೆ ಫೋನ್ ಮಾಡೋದಾಗಲಿ ನಿನ್ನ ನೋಡೋದಾಗಲಿ ಮಾಡಬಾರದಂತೆ ಈ ಮನೆ ಪಾಲಿಗೆ ಮಗಳು ಸತ್ತು ಹೋಗಿದ್ದಾಳೆ ಅಂದ್ರೆ ನಾನು ಹ್ಯಾಗಮ್ಮ ಸಹಿಸಲಿ” ಸ್ತಬ್ಧಳಾದಳು ಅರೆ ಕ್ಷಣ. ತಕ್ಷಣವೇ ಚೇತರಿಸಿಕೊಂಡು “ಆಮ್ಮ ಇನ್ನು ಯಾಕೆ ಆ ನರಕದಲ್ಲಿರೋಕೆ ಬಯಸುತ್ತಿಯಾ, ಬಂದು ಬಿಡಮ್ಮ. ನನಗೆ ಅಂತನೇ ಒಂದು ಮನೆ ಕೊಟ್ಟಿದ್ದಾರೆ ಕೈ ತುಂಬಾ ಸಂಬಳ ಬರ್ತಾ ಇದೆ. ಇನ್ನೂ ಅಲ್ಲೆ ಇದ್ದು ಅನುಭವಿಸಬೇಕಾ” ಬೇಡಿಕೊಂಡಳು.
“ಬಂದು ಬಿಡ್ತಿನಿ ಅನು, ನಂಗೂ ಸಾಕಾಗಿ ಹೋಗಿದೆ. ಈ ಗಂಡ ಸಂಸಾರದಿಂದ ನಂಗೂ ಬಿಡುಗಡೆ ಬೇಕಾಗಿದೆ” ಅವಳ ಮಾತೆ ಕಿವಿಗೆ ಅಮೃತ ಧಾರೆ ಎರೆದಂತಾಗಿ
“ಮತ್ಯಾಕೆ ತಡ, ಬಂದು ಬಿಡು” ಎಂದಳು ತಾಯಿ ಬರುವೆನೆಂಬ ಆಶ್ವಾಸನೆಯೇ ಅವಳ ಉತ್ಸಾಹಕ್ಕೆ ಗರಿಮೂಡಿಸಿತ್ತು. ಅಮ್ಮನ್ನ ಕೊಂಚವೂ ನೋಯಿಸದಂತೆ ಇಟ್ಟುಕೊಳ್ಳಬೇಕು, ಅಲ್ಲಿ ಕಷ್ಟ ಪಟ್ಟದ್ದು ಸಾಕು, ಕೊನೆಯವರೆಗೂ ಅಮ್ಮನಿಗಾಗಿ ನಾನು, ನನಗಾಗಿ ಅಮ್ಮ ಎಂಬುವಂತಿರಬೇಕು ಎಂದೆಲ್ಲ ಕನಸು ಕಾಣುತ್ತಾ ಇಡೀ ರಾತ್ರಿ ಕಳೆದಳು.
ನೀಲಾ ಅಲ್ಲಿಂದ ಹೊರಟಿರುವುದಾಗಿ ಫೋನ್ ಮಾಡಿದಳು. ರೈಲು ಟಿಕೇಟ್ ಸಿಗಲಿಲ್ಲವಾದ್ದರಿಂದ ಬಸ್ಸಿನಲ್ಲಿಯೇ ಬರುತ್ತಿದ್ದೇನೆ ಗಾಭರಿಯಾಗಬೇಡ ಅಂತ ತಿಳಿಸಿದಳು.
ತಾಯಿಯನ್ನು ಬರಮಾಡಿಕೊಳ್ಳುಲು ಸಡಗರದಿಂದ ಸಿದ್ದವಾಗ ತೊಡಗಿದಳು.
ಸ್ವಾಮಿನಾಥನ್ ಅಂಕಲ್ ಗೆ ಕುಸುಮ ಆಂಟಿಗೆ ವನಮಾಲಿ ಅಂಜು ಚಿತ್ತರಂಜನ್ ಎಲ್ಲರ ಬಳಿಯೂ ಸಾರಿಕೊಂಡು ಬರುತ್ತಿದ್ದಾಳೆ ತಾಯಿ ಬರುತ್ತಿರುವ ವಿಷಯವನ್ನು ಸ್ವರ್ಗದ ನಿಧಿ ಸಿಕ್ಕಷ್ಟು ಸಂತೋಷದಲ್ಲಿರುವ ಅನುವನ್ನೇ ನೋಡಿ ಬೆರಗಾಗುತ್ತಿದ್ದಾರೆ ಅಲ್ಲಿಯವರು.
ಈ ಸಡಗರದ ನಡುವೆ ರಾಕೇಶನ ಫೋನ್ ಬಂದಿತು. “ತಕ್ಷಣವೇ ಹೊರಟು ಬಾ. ಜೊತೆಗೆ ಅಪ್ಪ ಅಮ್ಮನನ್ನು ಕರೆದು ತಾ, ನೀಲಾ ಅಂಟಿ ಇದ್ದ ಬಸ್ಸು ಆಕ್ಸಿಡೆಂಟಾಗಿದೆ” ಎಂದು.
ಕುಸಿದು ಹೋದಳು ಅನು. ಯಾರನ್ನು ತನ್ನ ಬದುಕಿನ ಸರ್ವಸ್ವವೆಂದು ಕೊಂಡಿದ್ದಳೋ ಆ ಜೀವ ಈಗ ಸಾವು ಬದುಕಿನ ಮಧ್ಯೆ ತೂಗಾಡುತ್ತಿದೆ ಎಂಬುದನ್ನು ನಂಬದಾದಳು. ಗರಬಡಿದಂತಾಗಿ ಬಿಟ್ಟಿದೆ ಅವಳಿಗೆ.
ಸ್ವಾಮಿನಾಥನ್ ಕುಸುಮ ಅನುವಿನೊಂದಿಗೆ ಹೊರಟುನಿಂತರು. ರಾಕೇಶ್ ಪೋನ್ ಮಾಡಿ ಎಲ್ಲವನ್ನೂ ತಿಳಿಸಿದ್ದ. ಪ್ಲೇನ್ ಟಕೇಟ್ ದೊರೆಯಿತು. ಅನುವನ್ನು ಸಮಾಧಾನಿಸುವ ಶಕ್ತಿ ಇಲ್ಲದೆ ಅವರಿಬ್ಬರೂ ಮೌನಕ್ಕೆ ಶರಣಾದರು. ಅವರ ಬರುವಿಕೆಗಾಗಿ ರಾಕೇಶ್ ನಿಲ್ದಾಣದಲ್ಲಿ ಕಾಯುತ್ತಿದ್ದ. ನೀಲಾಳಿಗಾದ ದುರಂತ ಅನುವಿನ ಅರಿವಿಗೆ ಬಂದೊಡನೆ ಚಲಿಸಿ ಹೋದಳು. ಸೀದಾ ಮನೆಗೆ ಬಂದು ಬಿಟ್ಟಳು. ಜಗದೀಶ ಮನೆಯಲ್ಲಿಯೇ ಇದ್ದಾನೆ. ಪರಿಸ್ಥಿತಿಯ ಅರಿವಿಲ್ಲ ಅಪ್ಪನ ಕಂಡೊಡನೆ ಸಿಡಿಲ ಬುಗ್ಗೆ ಯಾದಳು ಆತನ ಕಾಲರ್ ಹಿಡಿದು ಜಗ್ಗಿ ಮಾತು ಶುರುಮಾಡಿದಳು.
“ಅಪ್ಪ ನಾನು ನಿನ್ನ ಮಗಳು ಅನ್ನೋ ಸತ್ಯ ನಿಂಗೆ ಚೆನ್ನಾಗಿ ಗೊತ್ತಿತ್ತು. ಆದರೂ ಅಮ್ಮನನ್ನು ಹಿಂಸಿಸಿದೆ. ಅಮ್ಮನ ಹೃದಯದಲ್ಲಿ ನಿಂಗೆ ಯಾವತ್ತೂ ಸ್ಥಾನ ಸಿಗಲಿಲ್ಲ. ಸ್ಥಾನ ಪಡೆಯೋಕೆ ನೀನು ಪ್ರಯತ್ನಿಸಲಿಲ್ಲ. ಅಮ್ಮನ ಹೃದಯದಲ್ಲಿ ಮನಸ್ಸಿನಲ್ಲಿ ವಿಕಾಸ್ ಇದ್ದಾರೆ ಅಂತ ನಿಂಗೆ ಚೆನ್ನಾಗಿ ಗೊತ್ತಿತ್ತು. ನಿನ್ನನ್ನ ನಂಬಿ ಅಮ್ಮ ಮೋಸ ಹೋದಳು. ಅಮ್ಮನ ನಂಬಿಕೆಗೆ ವಂಚನೆ ಮಾಡಿದೆ ಅವಳ ಪ್ರೇಮಕ್ಕೆ ದ್ರೋಹ ಬಗೆದೆ. ಅದೂ ಸಾಲದು ಅಂತಾ ಅವಳನ್ನು ಪ್ರತಿ ದಿನ ಪ್ರತಿ ಕ್ಷಣ ಚಿತ್ರವಧೆ ಮಾಡ್ತ ಇದ್ದೆ. ಅವಳು ಯಾವತ್ತೂ ವಿಕಾಸ್‌ನ ಮರೆಯೋದು ಸಾಧ್ಯವಾಗದ ಹಾಗೆ ಪ್ರತಿದಿನ ವಿಕಾಸ ವಿಷಯ ತೆಗಿತಿದ್ದೆ. ಹಳೆಯದನ್ನ ಮರೆತು ನಿನ್ ಜೊತೆ ಸಂಸಾರ ಮಾಡೋಕೆ ಅಮ್ಮ ನಡೆಸಿದ ಪ್ರಯತ್ನಗಳೆಲ್ಲವನ್ನು ನೀನು ಛಿದ್ರ ಮಾಡ್ತ ಇದ್ದೆ. ನಿನ್ನದೆ ಅಂಶ ಹೊತ್ಕೊಂಡು ಹುಟ್ಟರೋ ನನ್ನನ್ನು ದ್ವೇಶಿಸಿದೆ ಅಮ್ಮನ್ನ ಹಿಂಸಿಸೋ ಭರದಲ್ಲಿ ನನ್ನನ್ನು ಮಗಳು ಅನ್ನೋದೇ ಮರೆತು ಬಿಟ್ಟೆ. ತಂದೆಯಿಂದ ಸಿಗಬಹುದಾದ ಸುಖದಿಂದ ನನ್ನ ವಂಚಿಸಿದೆ. ತಂದೆ ಮಗಳ ಭಾಂದವ್ಯವನ್ನ ಹಾಳು ಮಾಡಿಬಿಟ್ಟೆ ನಿಂಗೆ ಖಂಡಿತಾ ಒಳ್ಳೆಯದು ಆಗಲ್ಲ ನೀನು ಪಾಪಿ, ನೀನು ಮನುಷ್ಯ ಅಲ್ಲ, ನಿನ್ನ ಮುಖ ನೋಡೊ ನಂಗೆ ಅಸಹ್ಯವಾಗುತ್ತೆ ಹೋರಟುಹೋಗು ನನ್ನ ಮುಂದೆ ನಿಲ್ಲಬೇಡ. ಈ ಬದುಕಿನಲ್ಲಿ ನಂಗಿದ್ದ ಏಕೈಕ ಬಂಧು ಅಮ್ಮ, ನನಗವಳೆ, ಅಪ್ಪಾ, ಸಂಗಾತಿ ಎಲ್ಲಾ ಅವಳೇ ಆಗಿದ್ದಳು. ನಾನು ಈಗ ಅನಾಥೆ ಆಗಿ ಬಿಟ್ಟೆ ನಂಗ್ಯಾರು ಇಲ್ಲಾ ಈ ಪ್ರಪಂಚದಲ್ಲಿ ನಾನು ಒಂಟಿ ನಾನು ಒಂಟಿ” ಭೋರೆಂದು ಅಳತೊಡಗಿದಳು ಅನು, ಹೆದರಿಹೋದ ಜಗದೀಶ.
“ಅನು, ನಾನು ತಪ್ಪು ಮಾಡಿದ್ದೀನಿ ನಿಜಾ ಆದ್ರೆ ಅವಳನ್ನು ಕಳ್ಕೋಳ್ಳೊ ಅಷ್ಟೂ ಕ್ರೂರಿ ಏನಲ್ಲ ಅನು ನಿಮ್ಮಮ್ಮನ್ನ ಎಲ್ಲಿದ್ರೂ ಹುಡುಕಿ ನಿನ್ನ ಮುಂದೆ ನಿಲ್ಲಿಸುತ್ತೇನೆ. ನನ್ನ ಮಾತು ನಂಬು ಅನು, ನೀಲಾ ಸತ್ತಿರುವ ವಿಷಯವೇ “ತಿಳಿಯದ ಜಗದೀಶ ಅಂಗಲಾಚಿದ. ಜಗದೀಶನನ್ನೇ ಕೂರ್ರವಾಗಿ ದಿಟ್ಟಿಸಿದಳು. “ಎಲ್ಲಿಂದ ಹುಡುಕಿಕೊಂಡು ಬರ್ತಿಯಾ. ಸತ್ತು ಮಣ್ಣಿನಲ್ಲಿ ಮಲಗಿರೋ ನನ್ನ ಅಮ್ಮನಿಗೆ ಜೀವನ ಕೊಡ್ತಿಯಾ, ಈ ಬದುಕಿನಿಂದ ಅಲ್ಲಾ, ಈ ಪ್ರಪಂಚದಿಂದಲೇ ದೂರಾಗಿರೋ ಅಮ್ಮನನ್ನು ತಂದು ನನ್ನ ಮುಂದೆ ನಿಲ್ಲಿಸ್ತಿಯಾ, ಆಶಕ್ತಿ ನಿಂಗಿದೆಯಾ ಹೇಳು” ಅವನ ಕೊರಳ ಪಟ್ಟಿ ಹಿಡಿದು ಹುಚ್ಚಿಯಂತೆ ಎಳೆದಾಡಿದಳು. ಕಲ್ಲಾಗಿ ಹೋದ ಥರಥರನೆ ನಡುಗಿ ಹೋದ. “ಅನು, ಕಂಟ್ರೋಲ್ ಯುವರ್ ಸೆಲ್ಸ್, ನೀನು ಹೀಗೆ ಆಡಿದ್ರೆ ನಿಮ್ಮಮ್ಮ ವಾಪಸ್ಸು ಬರ್ತಾಳಾ, ಕೂಲ್ಡೌನ್” ರಾಕೇಶ್ ಸಮಾಧಾನಿಸಿದ.
“ನೀಲಾ, ನೀಲಾ ಬದುಕಿಲ್ಲವಾ, ನನ್ನ ಬಿಟ್ಟು ನೀಲಾ ಹೋಗಿ ಬಿಟ್ಬಾಳಾ, ಇಲ್ಲಾ, ಇಲ್ಲಾ ಅವಳು ಸತ್ತಿಲ್ಲ, ಅವಳು ಸಾಯಲ್ಲ, ಅನುನ ಬಿಟ್ಟು ಅವಳು ಖಂಡಿತಾ ಸಾಯಲ್ಲ, ಮಗಳ ಹತ್ತಿರ ಹೋಗ್ತಿನಿ ಅಂತಾ ಅವಳು ಹೋಗಿದ್ದು ನಾನು ಖಂಡಿತಾ ಅವಳನ್ನು ಓಡಿಸಲಿಲ್ಲ. ನನ್ನನ್ನು ನಂಬು ಅನು, ರಾಕೇಶ್ ನೀವಾದ್ರೂ ನನ್ನನ್ನು ನಂಬಿ, ನೀಲಾ ಸತ್ತಿಲ್ಲ ಅಂತಾ ಹೇಳಿ ಪ್ಲೀಸ್ ರಾಕೇಶ್”
“ಸಮಾಧಾನ ಮಾಡಿಕೊಳ್ಳಿ ಜಗದೀಶ್ ಬಾಂಬೆಗೆ ಹೊರಟ ನೀಲಾ ಆಂಟಿ ಇದ್ದ ಬಸ್ಸು ಆಕ್ಸಿಡೆಂಟಾಯ್ತು. ಅದರಲ್ಲಿ ಇದ್ದ ಎಲ್ಲಾ ಪ್ರಯಾಣಿಕರು ಅಲ್ಲೆ ಜಲಸಮಾಧಿ ಆದ್ರೂ. ಎಷ್ಟು ಹೆಣಗಳು ತೇಲಿ ಹೋಗಿದ್ದಾವೆ. ಯಾರೂ ಬದುಕಿರುವ ಸಾಧ್ಯತೇ ಖಂಡಿತ ಇಲ್ಲ. ಆಂಟಿ ಋಣ ಇಷ್ಟೆ ಇತ್ತು. ಧೈರ್ಯತಂದು ಕೊಳ್ಳಿ, ಅನುವನ್ನು ಸಮಾಧಾನಿಸಿ, ಅವಳನ್ನು ಈ ಪರಿಸ್ಥಿತಿಲಿ ನಿಯಂತ್ರಿಸೋದೆ ಕಷ್ಟವಾಗಿದೆ. ಪ್ಲೀಸ್ ಅಂಕಲ್”
ಸೋತು ಸೊಪ್ಪಾದ ಜಗದೀಶ್ ಅಲ್ಲಿಯೇ ಕುಕ್ಕರಿಸಿದ ಇದನ್ನು ಆತ ಬಯಸಿರಲಿಲ್ಲ. ನಿರಾಶೆ ಹತಾಶೆ ದುಃಖ ನೋವು ಕಾಡಿ ಹಿಂಸಿಸಲಾರಂಭಿಸಿದವು. ಸದಾ ಗೆಲುವು ತನ್ನದೆಂದು ವಿಜೃಂಭಿಸುತ್ತಿದ್ದ ಜಗದೀಶ ಇಂದು ಸೋತು ಸುಣ್ಣವಾಗಿದ್ದಾನೆ. ಯಾರನ್ನು ಹಿಂಸಿಸಿ, ನೋಯಿಸಿ, ವಿಕೃತ ಸಮಾಧಾನ ಪಡೆಯುತ್ತಿದ್ದನೋ ಆ ನೀಲಾ ಈಗಿಲ್ಲ. ನೀಲಾಳೇ ಇಲ್ಲವೆಂದ ಮೇಲೆ ಅವಳಿಗಾಗಿಯೇ ತನ್ನನ್ನು ಸಹಿಸುತ್ತಿದ್ದ ಅನು ನನ್ನ ಪಾಲಿಗೆ ಉಳಿಯುವಳೇ. ಇಲ್ಲಾ ಇಲ್ಲಾ ಅವಳನ್ನು ಉಳಿಸಿಕೊಳ್ಳುವ ಅರ್ಹತೆಯಾಗಲಿ, ಯೋಗ್ಯತೆಯಾಗಲಿ ನನಗಿಲ್ಲ. ನಾನು ನಿಜವಾಗಿಯೂ ಒಂಟಿಯಾಗಿ ಬಿಟ್ಟೆ. ಹೆತ್ತ ಮಗಳನ್ನು ನಾನೇ ದೂರವಿಟ್ಟೆ. ಈಗ ಕರೆದರೆ ಹತ್ತಿರ ಬರುತ್ತಾಳೆಯೇ ಯಾವ ಮೊಗಹೊತ್ತು ಮಗಳೇ ಬಾ ಎನ್ನಲಿ, ಅಯ್ಯೋ ನೀಲಾ” ಮೌನವಾಗಿಯೇ ಕಣ್ಣೀರಿಡುತ್ತ ಹಲುಬಿದ. ತಿರಸ್ಕಾರವಾಗಿ ಅವನೆಡೆ ನೋಡಿದ ಅನು “ರಾಕೇಶ್ ನಾನು ಬರ್ತೀನಿ ಈ ಮನೆಯಲ್ಲಿ ಇನ್ನೊಂದು ಕ್ಷಣ ಇರಲಾರೆ. ಅಮ್ಮನಿಲ್ಲದ ಈ ಮನೆ ಮನೇನಾ, ಅವಳಿಂದ ನರಕದಂತಿರೋ ಈ ಮನೆ ನನ್ನ ಪಾಲಿಗೆ ಸಹನೀಯವಾಗಿತ್ತು. ಆ ತಾಯಿನೇ ಇಲ್ಲವೆಂದ ಮೇಲೆ ನಾ ಯಾಕೆ ಇಲ್ಲಿರಬೇಕು ನಾ ಬರ್ತೀನಿ” ಅಲ್ಲಿಯೇ ಬಿದ್ದಿದ್ದ ಸೂಟ್ ಕೇಸ್ ಕೈಗೆತ್ತಿಕೊಂಡು ಹೊರಡಲನುವಾದಳು.
“ಅನು ಪ್ಲಿಸ್ ದುಡುಕಬೇಡ. ನಿಂಗಾಗಿರೋ ನಷ್ಟ ಏನು ಅಂತಾ ನಂಗೊತ್ತು. ಆದರೆ ನಿರ್ದಯಿಯಾಗಬೇಡ. ಪಶ್ಚಾತ್ತಾಪಕ್ಕಿಂತ ಬೇರೆ ಶಿಕ್ಷೆ ಇಲ್ಲ ಅಂತಾರೆ. ಈಗಾಗಲೇ ಆ ಶಿಕ್ಷೆನ ನಿಮ್ಮ ಅಪ್ಪ ಅನುಭವಿಸುತ್ತಾ ಇದ್ದಾರೆ. ಹೆಂಡತಿನಾ ಕಳ್ಕೊಂಡು ದುಃಖದಲ್ಲಿರೋ ಅವರನ್ನು ಈ ಪರಿಸ್ಥಿತೀ ನೀನು ಬಿಟ್ಟೋಗಬಾರದು. ಮಗಳಾಗಿ ನೀನು ಮಾಡಬೇಕಾದ ಕರ್ತವ್ಯ ನೀನು ಮಾಡಲೇಬೇಕು. ನಿನ್ನನ್ನ ಮಗಳು ಅಂತ ಅವರು ಬಹಿರಂಗವಾಗಿ ಒಪ್ಪಿಕೊಂಡು ನಿನಗೆ ಸಿಗಬೇಕಾದ ಪಿತೃವಾತ್ಸಲ್ಯವನ್ನು ಅವರು ನಿನಗೆ ಕೊಡದೆ ಇರಬಹುದು. ಆದರೆ ತಂದೆಯಾಗಿ ಒಬ್ಬ ಮಗಳಿಗೆ ಏನೇನು ಮಾಡಬೇಕೋ ಆ ಕರ್ತವ್ಯವನ್ನೆಲ್ಲ ಮಾಡಿದ್ದಾರೆ. ಅಂತಹ ಕರ್ತವ್ಯ ನಿನಗೂ ಇದೆ ಅಲ್ವಾ. ಪ್ರೀತಿಯಿಂದ ಅಲ್ಲದೆ ಇದ್ದರೂ ಕರ್ತವ್ಯದ ದೃಷ್ಟಿಯಿಂದಲಾದರೂ ಅದನ್ನ ನೀನು ನಿರ್ವಹಿಸಲೇಬೇಕು. ಅದು ನಿನ್ನ ಧರ್ಮ ಕೂಡ” ನಿಧಾನವಾಗಿ ಮನಕ್ಕೆ ನಾಟುವಂತೆ ನುಡಿದ.
“ರಾಕೇಶ್ ಏನು ಹೇಳ್ತ ಇದ್ದಿರಾ ನೀವು”
“ಇರೋ ವಿಷಯವನ್ನೆ ಹೇಳ್ತಾ ಇದ್ದಿನಿ ಅನು. ಮಗಳಾಗಿ ನೀನು ನಿರ್ವಹಿಸಬೇಕಾದ ಕರ್ತವ್ಯ ನಿರ್ವಹಿಸು, ಜಗದೀಶ ಅಂಕಲ್‌ನ ಒಂಟಿಯಾಗಿ ಬಿಟ್ಟು ಹೋಗಬೇಡ. ನನ್ನ ಮಾತಿಗೆ ಬೆಲೆ ಕೋಡ್ತೀಯಾ ಅಂತಾ ಭಾವಿಸುತ್ತೇನೆ” ಗಂಭೀರವಾಗಿ ಹೇಳಿದ.
ಅರೆಕ್ಷಣ ಒದ್ದಾಡಿ ಹೋದಳು ಅನು ಚಡಪಡಿಕೆ ಹೆಚ್ಚಾಯಿತು. ಸುಮ್ಮನೇ ಕುಳಿತು ಬಿಟ್ಟಳು.
“ದಟ್ಸ್ ಗುಡ್ ನಾ ಬರ್‍ಲಾ. ಬೆಳಗ್ಗೆ ಬರ್ತೀನಿ, ನಿನ್ನ ಕೈ ತಿಂಡಿ ರುಚಿ ನೋಡಬೇಕು ನಾಳೆ ಇಲ್ಲಿಯೇ ನಂಗೆ ತಿಂಡಿ, ಬರ್‍ಲಾ” ಕೈ ಬೀಸಿ ಹೊರಟು ಬಿಟ್ಬಾ.
ದಿಗ್ಭ್ರಾಂತಳಾಗಿ ಅಳಲೂ ಆಗದೆ ಕುಳಿತೇ ಇದ್ದಾಳೆ.
ನೀಲಾ ಸಾವಿನಿಂದ ಪತ್ಚಾತ್ತಾಪದ ಪಾಪ ಭೀತಿ ಕಾಡತೊಡಗಿತು ಜಗದೀಶನಿಗೆ ಮಗಳನ್ನು ಎದುರಿಸಲಾರದ ಸಂಕಟ ಒಂದೆಡೆ ಹೆಂಡತಿಯ ಸಾವು ಒಂದೆಡೆ ಕಾಡಿ ಜರ್ಜರಿತಗೊಳಿಸಿತು. ಮಗಳ ಮುಂದೆ ತಲೆ ಎತ್ತಿ ನಿಲ್ಲುವ ಮನೋಸ್ಥೈರ್ಯವಿಲ್ಲದ ಜಗದೀಶ ಸದಾ ರೂಮಿನೊಳಗೆ ಇದ್ದು ಬಿಡುತ್ತಿದ್ದ. ತನ್ನಿಂದಲೇ ನೀಲಾ ಸತ್ತಿದ್ದು, ತಾನೇ ಪರೋಕ್ಷವಾಗಿ ನೀಲಾಳ ಸಾವಿಗೆ ಕಾರಣ ಎಂಬ ಭಾವ ಅವನನ್ನು ಇಂದು ಕೊಲ್ಲತೊಡಗಿತು. ಜೊತೆಗೆ ಮಗಳ ತಿರಸ್ಕಾರದ ನೋಟ ಬೇರೆ, ಊಟ ತಿಂಡಿ ಯಾವುದೂ ಬೇಡವಾಯ್ತು.
ಅಮ್ಮನಿಲ್ಲದ ಮನೆ ಮನೆಯೇ ಅನಿಸುತ್ತಿಲ್ಲ. ಇಲ್ಲೇಕೆ ಇರಬೇಕು ಯಾರಿಗಾಗಿ ಇರಬೇಕು ಎಂದು ಕೊಂಡವಳು ರಾಕೇಶ್‌ನ ಮಾತುಗಳಾವವೂ ಸರಿಕಾಣದೆ ಹೊರಟುನಿಂತಳು. ರಾಕೇಶಗೆ ಹೇಳಿದರೆ ತಾನೇ ತನ್ನನ್ನು ತಡೆಯುವುದು ಎಂದು ಆತನಿಗೆ ತಿಳಿಸದೆ ಏರ್ ಟಕೇಟ್ ಬುಕ್ ಮಾಡಿದಳು. ಅಪ್ಪನಿಗೆ ತಿಳಿಸುವ ಗೋಜಿಗೂ ಹೋಗದೆ ಕೊನೆಯದಾಗಿ ಮನೆಯನ್ನು ಕಣ್ತುಂಬ ತುಂಬಿಕೊಂಡು ಹೊರಟುಬಿಟ್ಟಳು.
ಅನು ತನ್ನ ಮನೆಗೆ ಬಂದು ಬಿಟ್ಟಳು. ಅಮ್ಮ ಬರುತ್ತಾಳೆಂದು ಸಡಗರದಿಂದ ಇಡೀ ಮನೆಯನ್ನೇ ಶೃಂಗರಿಸಿದ್ದಳು. ಅಮ್ಮನೊಡನೆ ಈ ಮನೆಯಲ್ಲಿ ಬದುಕುವ ಕನಸು ಕಂಡಿದ್ದಳು. ಅಮ್ಮನ ಮಡಿಲ ಸೇರಿ ಆಕೆಯ ಕೈ ಕೂಸು ತಾನಾಗುತ್ತೇನೆಂದು ಕೊಂಡಿದ್ದಳು. ಏನಾಯ್ತು ತಾ ಕಂಡ ಕನಸೆಲ್ಲ, ಏನಾಗಿ ಹೋಯ್ತು ತನ್ನ ಬದುಕು ಬಿಕ್ಕಳಿಸಿ ಬಿಕ್ಕಳಿಸಿ ಅತ್ತಳು, ಕಲ್ಲು ಕರಗಿಸುವ ರೋಧನಕ್ಕೆ ಸ್ಪಂದಿಸುವವರಾರು ಅಲ್ಲಿರಲಿಲ್ಲ. ಅಳುತ್ತಲೇ ಇದ್ದಾಳೆ. ಬೆಲ್ ಆದ ಶಬ್ದ ಇಹಕ್ಕ ತಂದಿತು.
ಕಣ್ಣೊರೆಸಿಕೊಂಡ ಅನು ಬಾಗಿಲು ತೆರೆದರೆ ಯಾರೊ ಅಪರಿಚಿತ ವ್ಯಕ್ತಿ “ಒಳ ಬರಬಹುದೆ” ಕನ್ನಡ ನುಡಿ.
“ಬನ್ನಿ” ಕರೆದಳು.
ಒಳಗಡಿ ಇಟ್ಟ ಆತ “ಅನು ಅಲ್ವೆ ನೀನು” ಪ್ರಾರಂಭದಲ್ಲಿಯೇ ಏಕವಚನ.
“ಹೌದೆಂದು ಗೊಣಗಾಡಿದಳು.”
“ನಾನಾರೆಂದು ಅಂತಾ ಗೊತ್ತಾಯ್ತ” ಇದೇನು ಪ್ರಶ್ನೆ ಎನಿಸಿತು.
ಯಾರು ಎಂದೇಳದೆ ಹೇಗೆ ಗೊತ್ತಾಗಬೇಕು ಮುಖ ಭಾವದಲ್ಲಿಯೇ ಅರ್ಥಮಾಡಿಕೊಂಡ,
“ನಾನು ವಿಕಾಸ” ಮೆಲ್ಲನುಡಿದ
ಅದುರಿ ಬಿದ್ದಳು. ಕ್ಷಣ ಬೆಂಕಿ ಕಾರಿದವು ಕಣ್ಣು. ಈತನೇ ಅಲ್ಲವೇ ತನ್ನಮ್ಮನ ದುರಂತ ಬದುಕಿಗೆ ಕಾರಣನಾದವನು. ಈತನ ನೆನಪಿನಿಂದಲೇ ಅಮ್ಮ ಸದಾ ನೋವನುಂಡವಳು ಈತನಿದ್ದ ಎಂದಲ್ಲವೇ ಅಪ್ಪ ಅಮ್ಮನನ್ನು ಕಾಡಿ ಹಿಂಸಿಸಿ, ತನ್ನನೆಂದೂ ಮಗಳೆಂದು ಒಷ್ಟಿಕೊಳ್ಳದೇ ಹೋದದ್ದು.
“ಅನು ಏನು ಯೋಚ್ನೆ ಮಾಡ್ತ ಇದ್ದಿಯಾ, ನೀಲಾ” ನೀಲಾ ಶಬ್ದ ಕಿವಿಗೆ ಬಿದ್ದೊಡನೆ
“ಇನ್ನೆಲ್ಲಿ ನೀಲಾ, ನನ್ನಮ್ಮ ನಿಮ್ಮ ನೆನಪಿನಿಂದಲೇ ತನ್ನ ಬಾಳು ಹಾಳು ಮಾಡಿಕೊಂಡಳು. ಕೆಟ್ಟ ಬದುಕು ಕಂಡಳು ಈಗ ಈಗ ಈ ಮಗಳೂ ಕೂಡ ಬೇಡ ಅಂತ ನನ್ನಿಂದ ದೂರ ದೂರ ಹೋಗಿಬಿಟ್ಟಳು” ಜೋರಾಗಿ ಅತ್ತಳು.
“ಅನು ಏನು ಹೇಳ್ತಾ, ಇದ್ದಿಯಾ, ನೀಲಾ ಎಲ್ಲೂ ಹೋಗಿಲ್ಲ ನನ್ನ ಹತ್ರ ಇದ್ದಾಳೆ”
ನಿಮಗೆ ಹುಚ್ಚ ಎಂಬಂತೆ ನೋಡಿದಳು.
“ಹೇಗೆ ಇರೋಕೆ ಸಾಧ್ಯ. ಅಮ್ಮ ಇದ್ದ ಬಸ್ಸು ಜಲಸಮಾಧಿ ಆಯ್ತು ಎಲ್ಲರೂ ಜಲಸಮಾಧಿ ಆಗಿಬಿಟ್ಟಿದ್ದಾರೆ. ಆ ಬಸ್ಸಿನಲ್ಲಿದ್ದವರೊಬ್ಬರೂ ಉಳಿದಿಲ್ಲ, ಅಮ್ಮ ಅಮ್ಮ” ಬಿಕ್ಕಿದಳು.
“ಅನು ನಿಮ್ಮಮ್ಮನಿಗೆ ಏನೂ ಆಗಿಲ್ಲ ನಿಮ್ಮಮ್ಮ ಆ ಬಸ್ಸೇ ಹತ್ತಲಿಲ್ಲ. ನಾನು ಬೆಂಗಳೂರಿಗೆ ಹೋಗಿದ್ದೆ. ಆಕಸ್ಮಿಕವಾಗಿ ನೀಲಾ ನನ್ನ ಕಣ್ಣಿಗೆ ಬಿದ್ದಳು. ಬಾಂಬೆಗೆ ಹೋಗ್ತಾ ಇರೋ ವಿಷಯ ತಿಳಿತು. ನಾನೂ ಇಲ್ಲಿಗೆ ಹೊರಟಿದ್ದೆ. ನನ್ನ ಕಾರಿನಲ್ಲಿಯೇ ಕರ್ಕೊಂಡು ಬಂದೆ. ಇಲ್ಲಿಗೆ ಬಂದು ನಿನಗೆ ಫೋನ್ ಮಾಡಿದಾಗ ನೀನು ಬೆಂಗಳೂರಿಗೆ ಹೋದೆ ಅಂತ ಗೊತ್ತಾಯಿತು. ನೀನು ಬರೋತನಕ ನಮ್ಮನೆಯಲ್ಲಿಯೇ ಉಳ್ಕೊಂಡಿದ್ದಾಳೆ.” ನಂಬದಾದಳು. ಇದು ನಿಜವೇ ದಿಗ್ಭ್ರಾಂತಳಾಗಿ ಕುಳಿತು ಬಿಟ್ಟಳು.
ಪತಿಯೊಡನೆ ಸಂಘರ್ಷ ನಡೆಸಿ ಇನ್ನೆಂದಿಗೂ ಈತನೊಡನೆ ಬಾಳಬಾರದೆಂದು ನಿರ್ಧರಿಸಿಯೇ ನೀಲಾ ಮಗಳ ಜೊತೆಗೂಡಲು ಹೊರಟ್ಟಿದ್ದಳು. ಇಷ್ಟು ದಿನ ಗಂಡನನ್ನು ತೊರೆಯದಿರಲು ಕಾರಣಗಳಿದ್ದವು. ಅದು ಅನುವಿನ ಭವಿಷ್ಯ. ಎಲ್ಲಿ ತನ್ನ ಮುರಿದ ದಾಂಪತ್ಯ ಅನುವಿನ ಬಾಳಿನ ಮೇಲೆ ಪರಿಣಾಮ ಬೀರಿತೋ ಎಂಬ ಹೆದರಿಕೆ, ಜಗದೀಶನ ಹಿಂಸೆ, ಅಪಮಾನ ಎಲ್ಲವನ್ನು ತಾಳ್ಮೆಯಿಂದ ಸಹಿಸುವಂತೆ ಮಾಡಿತ್ತು.
ಆದರೆ ಅನುವಿಗಾಗಿ ರಾಕೇಶ್‌ನಂತ ಉತ್ತಮ ಸಂಬಂಧ ಬಂದದ್ದು ಅನು ಮದುವೆಗೆ ಒಪ್ಪದಿದ್ದರೂ, ಅವಳನ್ನು ಒಪ್ಪಿಸುವ ಸಾಹಸ ಮಾಡುತ್ತಿದ್ದದು, ಆತನ ಒಳ್ಳೆಯತನ ಆತನ ಹೆತ್ತವರ ಒಳ್ಳೆಯತನ ಇವೆಲ್ಲ ಕಂಡ ಮೇಲೆ ತನ್ನ ಬಾಳಿನ ದುರಂತಗಳನ್ನೆಲ್ಲ ಕೇಳಿಯೇ ಹೆತ್ತಮಗನಂತೆ ಸಂತೈಸಿ, ಅನುವನ್ನು ಕೈ ಹಿಡಿಯುವ ವರ ತಾನೇ ಎಂದು ಭರವಸೆ ಮೂಡಿಸಿದ್ದೂ, ಮಗಳ ಭವಿಷ್ಯದಲ್ಲಿ ಒಳ್ಳೆಯ ದಿನಗಳು ಬಂದಿರುವುದು ಇವೆಲ್ಲವೂ ಗಂಡನನ್ನು ಬಿಟ್ಟು ಬರಲು ಕಾರಣವಾದವು. ಮಗಳು ಮತ್ತೆ ಇಲ್ಲಿಗೆ ಬರುವುದಾಗಲಿ, ಅವಳೊಂದಿಗೆ ಮಾತನಾಡುವುದಾಗಲಿ, ಮಾಡಬಾರದೆಂದು ಕಟ್ಟಪ್ಪಣೆ ಕೊಡಿಸಿ ಬಿಟ್ಟಾಗ ನೀಲಾ ತಡೆಯದಾದಳು. ಅವಳ ಜೀವವೇ ಮಗಳು, ಅವಳ ಸರ್ವಸ್ವವೇ ಮಗಳು ಆ ಸರ್ವಸ್ವದೊಂದಿಗೆ ಸಂಪರ್ಕ ಕಡಿದು ಹಾಕೆಂದರೆ ಆ ಮಾತೃ ಹೃದಯ ಕೇಳಿತೇ, ಅನುವಿನ ಮದುವೆಯ ತನಕವಾದರೂ, ಈ ಸಂಸಾರದ ನಾಟಕದಲ್ಲಿ ಪಾತ್ರವಾಗಿರಲು ಬಯಸಿದ್ದಳು. ಆದರೆ ಅಲ್ಲಿಯವರೆಗೂ ಪಾತ್ರ ನಿರ್ವಹಿಸುವ ಅವಕಾಶ ಕೊಡದಂತೆ ಜಗದೀಶ ಆಕೆಯ ಮನಸ್ಸನ್ನು ಪ್ರಚೋದಿಸಿ ಕಲ್ಲು ಮಾಡಿದ. ಇನ್ನವನ ಸಹವಾಸ ಸಾಕೆಂದು ಹೊರಟು ಬಿಟ್ಟಳು.
ವೇದನೆಯ ಮೂಟೆ ಹೊತ್ತಂತೆ ಕುಳಿತ ನೀಲಳನ್ನು ಕಾರಿನಲ್ಲಿ ಹೋಗುತ್ತಿದ್ದ ವಿಕಾಸ ಗಮನಿಸಿದ. ಅನುಮಾನವಾಯಿತು, ನೀಲಾ ಹೌದೇ ಅಲ್ಲವೇ ಎಂದು ಮತ್ತೊಮ್ಮೆ ಖಚಿತ ಪಡಿಸಿಕೊಳ್ಳುವಷ್ಪರಲ್ಲಿ ನೀಲಾ ಕುಳಿತಿದ್ದ ಅಟೋ ಗ್ರೀನ್ ಸಿಗ್ನಲ್ ಕಂಡೂಡನೆ ಮುಂದೋಡಿತು. ಕಂಡಿದ್ದು ಅರೆ ಕ್ಷಣ ಮಾತ್ರ ಆದರೂ ಆ ಹೃದಯ ಅವಳು ನೀಲಾನೇ ಅಂತ ಗುರುತಿಸಿಬಿಟ್ಟಿತು. ತಕ್ಷಣವೇ ಆಟೋವನ್ನು ಹಿಂಬಾಲಿಸುವಂತೆ ಡ್ರೈವರ್ ಗೆ ಸೂಚನೆ ಇತ್ತ.
ಬಸ್ ಸ್ಟಾಂಡ್ ತಲುಪಿ ನೀಲಾ ಲಗೇಜ್‌ನೊಂದಿಗೆ ಇಳಿಯುತ್ತಿದ್ದಳು ವಿಕಾಸ ಒಂದೇ ಉಸುರುಗೆ ಓಡಿದ
“ನೀಲಾ, ನೀಲಾ.” ಅವಳಿಗೆ ಕೇಳಿಸಲೇ ಇಲ್ಲಾ
“ಸ್ಫೂರ್ತಿ, ಸ್ಫೂರ್ತಿ” ಮತ್ತೊಮ್ಮೆ ಕೂಗಿದ. ಸರಕ್ಕನೇ ತಲೆ ಎತ್ತಿದಳು. ಕಾಲುಗಳು ತಟಸ್ಥವಾದವು. ವಿಕಾಸ ವಿಕಾಸ ಪಿಸು ನುಡಿಯಿತು. ಅದೆಷ್ಟು ಕಾಲವಾಗಿತ್ತು ಈ ಪದ ಕಿವಿಗೆ ಬಿದ್ದು. ಹೂಮಳೆಗರೆದಂತಾಯಿತು.
ಅಷ್ಟರಲ್ಲಿ ಹತ್ತಿರ ಬಂದು ಬಿಟ್ಟ ವಿಕಾಸ, ಉದ್ವಿಗ್ನನಾಗಿದ್ದ . “ನೀಲಾ, ನೀಲಾ ಇಷ್ಟು ವರ್ಷ ಎಲ್ಲಿ ಮರೆಯಾಗಿ ಹೋಗಿದ್ದಿ. ನನ್ನ ಸ್ಪೂರ್ತಿ ನೋಡೋಕೆ ನನಗಿಷ್ಟು ವರ್ಷ ಬೇಕಾಯಿತಾ? ಏಕೆ ಹೀಗೆ ಆಗಿ ಹೋಗಿದ್ದಿಯಾ ನೀಲಾ ರಸ ಹಿಂಡಿದ ಕಬ್ಬಿನಂತೆ.” ಉದ್ವೇಗ, ಹರ್ಷ, ನೋವು ಕಣ್ಣೀರಾಗಿ ಕೆನ್ನೆಯ ಮೇಲೆ ಇಳಿಯತೊಡಗಿತು.
ಈ ಅನಿರೀಕ್ಷಿತ ತಿರುವಿನಿಂದ ನೀಲಾ ಮೂಕಳಾಗಿ ಹೋಗಿದ್ದಳು. ಇನ್ನೆಂದೂ ತಾನು ವಿಕಾಸನನ್ನು ನೋಡಲಾರೆ ಎಂದು ಕೊಂಡಿದ್ದಳು. ಅದು ಈ ಸಮಯದಲ್ಲಿ ವೈವಾಹಿಕ ಎಲ್ಲಾ ಸಂಬಂಧಗಳನ್ನು ಕಳಚಿ ವಿರಾಗಿಣಿಯಂತೆ ಹೊರಟಿದ್ದ ಈ ಸ್ಥಿತಿಯಲ್ಲಿ ವಿಕಾಸ ಸಿಗಬೇಕೆ ದೈವವೇ ತನ್ನ ಸ್ಥಿತಿ ತಿಳಿಸಿ ವಿಕಾಸನನ್ನು ಕಳುಹಿಸಿಕೊಟ್ಟಿತೇ. ಕಣ್ಣುಗಳು ಮಿಂಚಿದವು. ಹೃದಯ ವೀಣೆ ಮಿಡಿಯಲಾರಂಭಿಸಿತು.
ಅದೇ ಅನುರಾಗ ತುಂಬಿದ ನೋಟ, ಬದಲಾಗಿಲ್ಲ, ಎದೆಯೊಳಗೆ ನಕ್ಷತ್ರಗಳ ಮಿಂಚು ಹರಿದಾಡಿತು. ಏನನ್ನೂ ಬಾಯಿ ಬಿಟ್ಟು ಹೇಳಿದಿದ್ದರೂ ನೀಲಾಳ ಎಲ್ಲಾ ಭಾವನೆಗಳನ್ನು ಕಣ್ಣಿನಲ್ಲಿಯೇ ಓದಿ ತಿಳಿದುಕೊಂಡ ವಿಕಾಸ. ಎನನ್ನು ಕೇಳಲಿಲ್ಲ ಎದೆ ತುಂಬಿ ಹೋಗಿತ್ತು.
“ನೀಲಾ ಬಾ ನನ್ನ ಕಾರಿನಲ್ಲಿ ಕುತ್ಕೊಂಡು ಮಾತನಾಡೋಣ ಈಗ ಎಲ್ಲಿಗೆ ಒಬ್ಳೆ ಹೋಗ್ತಾ ಇದ್ದಿಯಾ, ನಿನ್ನ ಗಂಡ ಎಲ್ಲಿ” ಪ್ರಶ್ನಿಸಿದ.
“ಬಾಂಬೆಗೆ ಹೋಗ್ತಾ ಇದ್ದೀನಿ ವಿಕಾಸ್. ನನ್ನ ಮಗಳು ಅಲ್ಲಿ ಕೆಲಸದಲ್ಲಿದ್ದಾಳೆ?”
“ಓಹ್ ಮಗಳಿದ್ದಾಳಾ ಏನು ಹೆಸರು” ಮೆಲ್ಲನೆ ಕೇಳಿದ
“ಹೂಂ, ಅನುಷ ಬಿ.ಇ ಮಾಡಿದ್ದಾಳೆ.”
“ನಾನೂ ಬಾಂಬೆಯಲ್ಲಿಯೇ ಇರೋದು ನೀಲಾ, ಇಲ್ಲಿ ನನ್ನ ಶಿಪ್ಯನ ಆರ್ಟ್ ಎಗ್ಸಿಬಿಷನ್ ಇತ್ತು. ಮುಗಿಸಿ ವಾಪಸ್ಸು ಹೋಗ್ತಾ ಇದ್ದೆ. ಕಾರಿನಲ್ಲಿಯೇ ಹೋಗೋಣ ಬಾ” ಲಗೇಜ್ ಕೈಗೆ ತೆಗೆದುಕೊಂಡ.
ಮರುಮಾತಾಡದೆ ತಲೆಯಾಡಿಸಿದಳು. ದಾರಿಯುದ್ದಕ್ಕೂ ತನ್ನ ಬದುಕಿನ ಚಿತ್ರಣವನ್ನು ತೆರೆದಿಡುತ್ತಾ ಹೋದಳು. ತನ್ನ ಸ್ಫೂರ್ತಿಯ ಬದುಕು ಹೀಗಾಗಲು ತಾನೇ ಕಾರಣವಲ್ಲವೇ ಎಂದು ತೀವ್ರವಾಗಿ ನೊಂದು ಕೊಳ್ಳುತ್ತಾ, ಎಲ್ಲವನ್ನು ಕೇಳಿದ ವಿಕಾಸ್. ಮದುವೆಯ ಬಂಧನವನ್ನು ಕಳಚಿ ಕರುಳ ಕುಡಿಯ ಬಳಿ ಹೋಗುತ್ತಿರುವದನ್ನು ಕೇಳಿ ಅವನೆಡೆ ಒದ್ದಾಡಿತು. ಹೇಗಿದ್ದ ನೀಲಾ ಹೇಗಾಗಿದ್ದಾಳೆ. ಈಗ ಮಗಳೊಬ್ಬಳೇ ಬದುಕಿಗಿರುವ ಏಕೈಕ ಆಸರೆ. ಅವಳೂ ಮದುವೆಯಾಗಿ ಬಿಟ್ಟರೆ ನೀಲಾ ಒಂಟಿ ತನ್ನಂತೆ ಒಂಟಿ.
ತನ್ನ ಬದುಕಿನದನ್ನು ಬಿಚ್ಚಿಟ್ಪ ವಿಕಾಸ. ನೀಲಾಳ ಮನೆಯಿಂದ ಹೊರಟ ವಿಕಾಸ, ಕಷ್ಟ ಪಟ್ಟು ಕಲ್ಕತ್ತೆಯಲ್ಲಿನ ಚಿತ್ರಕಲೆಯ ಅಧ್ಯಯನ ಮುಗಿಸಿದ. ಆದರೆ ಅವನಿಂದ ಮತ್ಯಾವುದೇ ಕಲಾ ಕೃತಿ ರಚನೆ ಸಾಧ್ಯವಾಗಲಿಲ್ಲ. ಗೆಳೆಯನ ಮಾರ್ಗದರ್ಶನದಂತೆ ಬಾಂಬೆಗೆ ಬಂದು ಅಲ್ಲಿನ ಕಲಾಶಾಲೆಯಲ್ಲಿ ಶಿಕ್ಷಕನಾಗಿ ಸೇರಿಕೊಂಡು, ಇದುವರೆಗೂ ಒಂಟಿಯಾಗಿಯೇ ಸ್ಫೂರ್ತಿಯ ನೆನಪಿನಲ್ಲಿಯೇ ಕಾಲಕಳೆಯುತ್ತಿರುವುದನ್ನು ತಿಳಿದು ನೀಲಾ ದ್ರವಿಸಿ ಹೋದಳು. ವಿಕಾಸ ಮದುವೆ ಇಲ್ಲದೆ ತನ್ನನೆನಪಿನಲ್ಲಿಯೇ ಉಳಿದು ಬಿಟ್ಟಿದ್ದಾನೆ. ನನಗಾಗಿ ಇಡೀ ಬಾಳನ್ನು ವ್ಯರ್ಥಮಾಡಿಕೊಂಡಿದ್ದಾನೆ. ಆತನ ಈ ತ್ಯಾಗಕ್ಕಾಗಿ ನಾನೇನು ಕೊಡ ಬಲ್ಲೆ. ಈಗಲೂ ಕೂಡ ಈ ಸ್ಫೂರ್ತಿ ನಿನ್ನವಳು ವಿಕಾಸ್. ಆದರೆ ಈ ವಯಸ್ಸಿನಲ್ಲಿ ನಿನ್ನ ಸೇರಿ ಮಗಳ ಮುಂದೆ ಕುಬ್ಜಳಾಗುವ ಬಯಕೆ ನನಗಿಲ್ಲ ವಿಕಾಸ್ ನನ್ನ ಈ ಪ್ರೇಮ ಒಲವು ಮಗಳ ಬಾಳಿಗೆ ಮುಳ್ಳಾಗುವುದನ್ನು ಸಹಿಸಲಾರೆ. ಮೊದಲು ನನ್ನ ಕರುಳ ಕುಡಿ, ನಂತರ ನೀನು, ನಿನ್ನ ಪ್ರೇಮ, ವಿಕಾಸ. ಆದರೆ ಏನೆಂದೂ ನುಡಿಯದ ನೀಲಾ ಮೌನದ ಗೊಂಬೆಯಾಗಿಬಿಟ್ಟಿದ್ದಾಳೆ. ವಿಕಾಸನ ಸಾನಿಧ್ಯ ಅವಳಲ್ಲಿ ಪರವಶತೆ ತಂದಿಟ್ಟಿದೆ ಎಲ್ಲವನ್ನು ವಿಕಾಸನಿಂದ ತಿಳಿದ ಅನು ಅಮ್ಮನನ್ನು ಕಾಣಲು ಓಡೋಡಿ ಬಂದಳು.
ಅಮ್ಮನನ್ನು ಕಂಡೊಡನೆ ಅನು ಬಿಗಿದಪ್ಟಿ ಕಣ್ಣೀರು ಸುರಿಸಿದಳು. ಆ ದೈವ ಕೊನೆಗೂ ತನ್ನನ್ನು ಮೋಸ ಮಾಡಲಿಲ್ಲ. ಎಂಬ ಸತ್ಯದ ಅರಿವಾಗಿ ಕಾಣದ ದೈವಕ್ಕೆ ನಮಸ್ಕರಿಸಿದಳು.
“ಪೋನ್ ಯಾಕಮ್ಮ ಮಾಡಲಿಲ್ಲ” ಎಂದಾಗ ಶಾಶ್ವತವಾಗಿ ಆ ಮನೆ ಬಿಟ್ಟು ಬಂದಿರುವಾಗ ಪೋನ್ ಮಾಡೋಕೆ ಮನಸ್ಸು ಬರಲಿಲ್ಲ. ನಿನ್ನ ಮೊಬೈಲ್ಗೆ ಪೋನ್ ಮಾಡಿದರೆ ರೆಸ್ಪಾನ್ಸ್ ಇರಲಿಲ್ಲ. ಅದನ್ನು ತಾನೇ ಆಫ್ ಮಾಡಿಟ್ಟಿದ್ದು ನೆನಪಾಯಿತು.
ರಾಕೇಶ್‌ನನ್ನು ತಕ್ಷಣ ಬರುವಂತೆ ಪೋನ್ ಮಾಡಿದಳು. ಅನು ವಿಷಯವೇನು ತಿಳಿಸಲಿಲ್ಲ.
ವಿಕಾಸ ದಿನಾ ಬಂದು ಹೋಗುತ್ತಿದ್ದ. ವಿಕಾಸ ಬಂದಾಗಲೆಲ್ಲ ಅಮ್ಮನ ವಿಚಿತ್ರ ಚಡಪಡಿಕೆ, ಕಳೆ ಏರುತ್ತಿದ್ದ ಮೋರೆ, ನಡೆಯಲ್ಲಿರುತ್ತಿದ್ದ ಸಂಭ್ರಮ ಇವೆಲ್ಲ ಏನನ್ನೋ ತಿಳಿಸುತ್ತಿತ್ತು ಅನುವಿಗೆ.
ಅಮ್ಮನ ನೆನಪಲ್ಲಿಯೇ ಇಡೀ ಬದುಕನ್ನು ಒಂಟಿಯಾಗಿಯೇ ಕಳೆಯುತ್ತಿರುವ ವಿಕಾಸ್, ಗಂಡ ಇದ್ದು ಒಂಟಿಯಾಗಿರುವ ಅಮ್ಮ ಇವರಿಬ್ಬರ ಬಗ್ಗೆ ಏನೋ ಅಲೋಚನೆ ಮೊಳೆಯುತ್ತಿತ್ತು.
ರಾಕೇಶ್ ಬಂದೊಡನೆ ತನ್ನಲ್ಲಾಗುತ್ತಿದ್ದ ಅಂದೋಲನ, ಏನೆಲ್ಲವನ್ನೂ ತಿಳಿಸಿಬಿಡಬೇಕೆಂದು ತೀರ್ಮಾನಿಸಿಕೊಂಡು ಬಿಟ್ಟಳು.
ನೀಲಾ ಬದುಕಿರುವ ವಿಷಯ ತಿಳಿದ ರಾಕೇಶ್‌ಗೆ ನಿಜಕ್ಕೂ ಸಂತೋಷವಾಗಿತ್ತು ತನ್ನ ಪ್ರೀತಿಯ ಹೃದಯದ ಹೆತ್ತ ಕರುಳು ಜೀವಂತವಾಗಿರುವುದು, ತನ್ನ ಪ್ರೀತಿಯ ಹುಡುಗಿ ಆನಂದದಿಂದಿರುವುದು ಎಲ್ಲವೂ ಹಿತತಂದಿತು. ಅನುವಿನ ಮನದಾಳದ ಆಲೋಚನೆಗಳಲ್ಲ ಹೊರಬಂದವು.
“ರಾಕೇಶ್, ವಿಕಾಸ್ ಮತ್ತು ಅಮ್ಮ ಈಗಲೂ ಒಬ್ಬರನೊಬ್ಬರೂ ಪ್ರೀತಿಸ್ತಾ ಇದ್ದಾರೆ. ಇಂತಹ ಪ್ರೀತಿಗೆ ವಯಸ್ಸಿನ ಅಡ್ಡಿ ಇಲ್ಲಾ ಅಂತ ನಂಗೆ ಗೊತ್ತಾಗಿದೆ. ಈಗ್ಲೂ ಯಾಕೆ ಆ ಪ್ರೇಮ ಸಫಲತೆಯನ್ನು ಕಾಣಬಾರದು ರಾಕೇಶ್. ಅದು ತಪ್ಪು ಅನ್ನೊ ಭಾವದಲ್ಸಿ ಒಬ್ಬರನೊಬ್ಬರು ನಿಯಂತ್ರಿಸಿ ಕೊಳ್ತಾ ಇದ್ದಾರೆ. ಅದು ತಪ್ಪಲ್ಲ ಅಂತ ನಾವು ಮನದಟ್ಟು ಮಾಡಿದ್ರೆ ಹೇಗೆ. ಅಪ್ಪನಿಗೆ ಡೈವರ್ಸ್ ಕೊಟ್ಟು ಅಮ್ಮ ಯಾಕೆ ವಿಕಾಸ್ ಆಂಕಲ್‌ನ ಮದ್ವೆ ಆಗಬಾರದು.”
ಒಂದರ ಹಿಂದೊಂದು ಊಹಿಸಲಾರದ ತಿರುವುಗಳು ಅನಿರೀಕ್ಷಿತಗಳು ಅನುವಿನ ಆಲೋಚನೆ ತಪ್ಪಿಲ್ಲವೆನಿಸಿತು. ನೀಲಾಳ ಬಾಳಿನಲ್ಲಾದ ನೋವೆಲ್ಲವನ್ನು ಬಲ್ಲ ರಾಕೇಶ್ ತುಂಬು ಹೃದಯದಿಂದ ಅವಳ ಸಲಹೆಯನ್ನು ಮೆಚ್ಚಿ ಒಪ್ಟಿದ.
ಅವರು ಒಪ್ಟಿಕೊಳ್ಳಬೇಕಲ್ಲ ಅನುಮಾನ ತಲೆಹಾಕಿತು. “ಒಪ್ತಾರೆ, ನಾವು ಬಲವಂತ ಮಾಡಿ ಒಪ್ಟಿಸಿದರೆ ಖಂಡಿತಾ ಒಪ್ತಾರೆ, ಮೊದ್ಲು ಅಪ್ಟನಿಂದ ಅಮ್ಮ ಡೈವರ್ಸ್ ಪಡಿಬೇಕು. ಆ ನಂತರ ನಾನೇ ನಿಂತು ಮದ್ವೆ ಮಾಡಿಸ್ತಿನಿ ರಾಕೇಶ್, ಹೀಗಾದ್ರೂ ನಮ್ಮಮ್ಮನ ಬಾಳಿನಲ್ಲಿ ಹೊಸ ಸೂರ್ಯ ಉದಯಿಸಿ ಬೆಳಕು ನೀಡಲಿ” ಎಂದಾಶಿಸಿದಳು.
ಇಬ್ಬರ ಮುಂದೆ ಈ ವಿಷಯ ಎತ್ತಿದಾಗ ಮೊದ ಮೊದಲು ಹಿಂಜರಿದರು. ನೀಲಾ ಅಂತೂ ಒಪ್ಟಲೇ ಇಲ್ಲಾ.
ರಾಕೇಶ್‌ನೇ ಕೊನೆಗೆ “ಆಂಟಿ ಇದು ಖಂಡಿತಾ ತಪ್ಪಲ್ಲ. ನೀವು ಬಯಸಿದಾತನೊಂದಿಗೆ ಬದುಕಿನ ಅಂತ್ಯದ ದಿನಗಳನ್ನಾದರೂ ಕಳಿಬೇಕು, ಇದರಿಂದ ನಿಮ್ಮಿಬ್ಬರಿಗೂ ಸಂತೋಷ, ನೆಮ್ಮದಿ ಸಿಗುತ್ತೆ ನಿಮ್ಮ ಪ್ರೇಮ ಈಗಲಾದರೂ ಸಫಲತೆಯನ್ನು ಪಡೆಯಲಿ” ಮನಃಫೂರ್ವಕವಾಗಿ ಒತ್ತಾಯಿಸಿದ.
“ಹೌದು ಅಮ್ಮ ನೀನು ನೊಂದಿದ್ದು ಸಾಕು. ನರಕ ಅನುಭವಿಸಿದ್ದು ಸಾಕು. ನಿನ್ನ ನಗು ಕಾಣೋಕೆ ನಾನು ಕಾಯ್ತ ಇದ್ದೀನಿ ಅಮ್ಮ. ಅದು ನನ್ನ ಅಸೆ ಕೂಡ. ನೊಂದು ಬೆಂದಿರೊ ನಿನ್ನ ವಿಕಾಸ್ ಅಂಕಲ್ ಹೂವಿನಂತೆ ನೋಡ್ಕೋತಾರೆ ಅಂತ ನಂಗೊತ್ತು. ಪ್ರೀತಿಗೆ ಪ್ರೇಮಕ್ಕೆ ವಯಸ್ಸು ಮುಖ್ಯ ಅಲ್ಲಮ್ಮ ನೀನು ಹಿಂಜರಿಯಬೇಡ ನೀನ್ಯಾವ ತಪ್ಪೂ ಮಾಡ್ತಾ ಇಲ್ಲಾ, ಪ್ಲೀಸ್ ಒಪ್ಕೋಮ್ಮ” ಬೇಡಿದಳು. ಕಾಡಿದಳು, ಕಣ್ಣೀರು ಹರಿಸಿದಳು. ಪ್ರೇಮದ ಸಳೆತ, ಮಗಳ ಬಲವಂತ, ರಾಕೇಶ್ ನ ಒತ್ತಾಸೆ ಹೊಸ ಬದುಕನ್ನು ಸ್ವಾಗತಿಸಲು ನೀಲಾ ಒಪ್ಪಿಬಿಟ್ಟಳು. ಒಂದೆರಡು ದಿನ ಕಳೆದವು.
“ನಾನು ಬಂದ ಕೆಲಸ ಆಯ್ತಲ್ಲಾ ಅನು. ಇನ್ನು ನಾನು ಹೊರಡ್ತೀನಿ” ರಾಕೇಶ್ ಹೇಳಿದಾಗ ಅನು ಪೆಚ್ಚಾಗಿ ಬಿಟ್ಟಳು. ರಾಕೇಶ್ ಈಗ ಹೋದರೆ ಮತ್ತೆಂದೂ ಬರಲಾರನೇನೊ ಎಂದೆನಿಸಿ ಕಂಗೆಟ್ಟು ಕುಳಿತು ಬಿಟ್ಟಳು. ಊರಿನಿಂದ ಹೊರಟಾಗಿನಿಂದಲೂ ತನ್ನ ಜೊತೆಯಲ್ಲಿ ಗೆಳೆಯನಾಗಿ ತನ್ನೊಂದಿಗೆ ಇದ್ದಾನೆ. ಆಸ್ಪತ್ರೆಯಲ್ಲಂತೂ ಹೆತ್ತ ತಾಯಿಯ ಮಮತೆ ತೋರುತ್ತಾ ಶುಶ್ರೂಶೆ ಮಾಡಿದ್ದಾನೆ. ಅವನು ತೋರಿದ ಆತ್ಮೀಯತೆ, ಪ್ರೀತಿಗೆ ತಾನೇನು ಕೊಡಬಲ್ಲೆ. ಏಕೋ ಅವನು ಹೊರಟು ನಿಂತಿರುವಾಗ ಶೂನ್ಯವೇ ಆವರಿಸಿಬಿಟ್ಚಿದೆ. ಏನೋ ಕಳೆದು ಕೊಂಡಂತ ಭಾವ ಹೃದಯದ ಭಾಗವೊಂದು ಕಳಚಿಹೋದಂತ ವೇದನೆ ಯಾಕೆ ಹೀಗಾಗುತ್ತಿದೆ.
“ಅನು ಅಳ್ತಾ ಇದ್ದಿಯಾ ಯಾಕೆ ಮತ್ತೆ ಅಮ್ಮನ ನೆನಪಾ” ಇಲ್ಲವೆನ್ನುತ್ತಾ ತಲೆಯಾಡಿದಳು.
“ಮತ್ಯಾಕೆ ಅಳ್ತಾ ಇದ್ದಿಯಾ’
“ನೀವು ಹೋಗ್ತಿನಿ ಅಂದ್ರೆ ಏನೋ ಕಳ್ಕೊಂಡಂಗೆ ಆಗ್ತಾ ಇದೆ. ನೀವು ಸದಾ ನನ್ನ ಜೊತೆಯಲ್ಲಿ ಇರಬೇಕು ಅನ್ನಿಸುತ್ತಾ ಇದೆ” ಕಂಪಿಸುತ್ತಾ ತಲೆತಗ್ಗಿಸಿಯೇ ನುಡಿದಳು. ಮನದೊಳಗಿನ ಸಂಭ್ರಮ ನಗೆಯಾಗಿ ಹರಿಯಿತು ರಾಕೇಶ್‌ಗೆ.
“ಯಾಕೆ ಯಾಕೆ ಹಾಗೆನ್ನಿಸುತ್ತಿದೆ ಅನು” ಹತ್ತಿರ ಬಂದು ಪಿಸುನುಡಿದ, ಎದೆಯೊಳಗಿನ ಭಾವನೆಗಳು ಅರ್ಥ ತಿಳಿಯಲಾರದೆ ಅನು ‘ಗೊತ್ತಿಲ್ಲ’ ಎಂದು ಕಂಪಿಸಿದಳು.
ತಗ್ಗಿಸಿದ್ದ ತಲೆಯನ್ನು ನಿಧಾನವಾಗಿ ಮೇಲೆತ್ತಿದಳು. ನೋಟ ಪ್ರಜ್ವಲವಾಗಿತ್ತು. ವಿಚಿತ್ರ ಕಾಂತಿ ಹೊರಹೊಮ್ಮುತ್ತಿತ್ತು. ಮೊಗ ನಸುಗೆಂಪಾಗಿತ್ತು. ಕಪ್ಪು ಕತ್ತಲೆಯಲ್ಲಿ ಮಿಂಚೊಂದು ಸುಳಿದಂತಾಯ್ತು ರಾಕೇಶನಿಗೆ ಇಷ್ಟು ಬೇಗ ಕಲ್ಲರಳಿ ಹೂವಾಗುವುದನ್ನು ನೀರಿಕ್ಷಿಸಿರಲಿಲ್ಲ. ಬರಡು ಹೃದಯದಲಿ ಜೀವನದಿ ಉಕ್ಕೇರುವುದನ್ನು ಕಲ್ಪಿಸಿರಲಿಲ್ಲ.
‘ಅನೂ’ ಮತ್ತೂ ಹತ್ತಿರ ಸರಿದ ಅಪ್ಯಾಯಮಾನವಾದ ಕರೆ ಕೇಳಿ ಉನ್ಮತ್ತತೆಯಲ್ಲಿ ‘ಹೂಂ’ ಎಂದಳು.
ಹೂ ಬಳಸುವಂತೆ ಬಳಸಿ ಎದೆಗೊರಗಿಸಿಕೊಂಡ, ಅವ್ಯಕ್ತ ಭಾವದಲ್ಲಿ ತೇಲಿಹೋದಳು ಏನಾಗುತ್ತಿದೆ ಎಂದರಿಯದೆ ಮೈಮರೆತಳು. ಆ ದಿವ್ಯ ಗಳಿಗೆಯಲ್ಲಿ ತನ್ನಲ್ಲಾದ ಸಂವೇದನೆ ಸ್ಪಂದನಗಳ ಅಲೆಯ ಹೊಡೆತಗಳಿಗೆ ಸಿಕ್ಕ ಮಧುರಾನುಭೂತಿಯಿಂದ ನರಳಿದಳು.
“ಅಬ್ಬಾ ಇವತ್ತು ಈ ಬದುಕು ಸಾರ್ಥಕತೆಯನ್ನು ಪಡೆಯಿತು. ನನ್ನ ಇಷ್ಟು ದಿನದ ಶ್ರಮದ ತಳಮಳ. ಅಶಾಂತಿಗೆ ನಾಂದಿ ಕಂಡ. ಅನು ಐಲವ್ ಯೂ. ಇಂತ ದಿನ ಬಂದೇ ಬರುತ್ತೆ ಅಂತ ನಂಗೊತ್ತಿತ್ತು. ನಿನ್ನೆದೆಯ ಕಲ್ಲು ಕರಗಿ ಅಲ್ಲಿ ಹೂ ಅರಳುವ ಸಮಯಕ್ಕಾಗಿ ಅದೆಷ್ಟು ದಿನ ತಿಂಗಳು ವರ್ಷಗಳು ಕಾಯಬೇಕಾಗುತ್ತದೆಯೋ ಎಂದು ಚಿಂತಿಸುತ್ತಿದ್ದೆ. ನನ್ನ ನಿರೀಕ್ಷೆಗಳೆಲ್ಲಾ ಒಂದು ವೇಳೆ ಸುಳ್ಳಾಗಿ ಬಿಟ್ಟರೆ ಎಂಬ ಭಯ ಕಾಡಿ ನನ್ನ ಹಿಂಸಿಸುತ್ತಿತ್ತು. ಕೊನೆಗೂ ನನ್ನ ನಿರಾಶೆ ಮಾಡದೆ ನನ್ನ ಬದುಕಿಸಿ ಬಿಟ್ಟೆ ಅನು” ಮನದಾಳದಲ್ಲಿದ್ದನ್ನೆಲ್ಲ ರಾಕೇಶ್ ಹರಿಯಬಿಟ್ಪ. ಪ್ರೇಮವೆಂದರೆ ಇದೇ, ಅನುರಾಗವೆಂದರೇ ಇದೇ ಎಂದು ತಿಳಿಸಿಕೊಟ್ವ. ಆ ಹೊಸ ಸ್ಪರ್ಶದಲ್ಲಿ ಕರಗಿಹೋದಳು. ಅವನೆದೆಯ ಕಾವಿನಲ್ಲಿ ತನ್ನ, ರಾಕೇಶನ ನಡುವಿನ ಈ ಹೊಸ ಅನುಬಂಧದ ಹೆಸರೇನೆಂದು ತಿಳಿದು “ರಾಕೇಶ್ ಇದು ಹೇಗೆ ಸಾಧ್ಯವಾಯ್ತು ನಾ ಹೇಗೆ ಬದಲಾದೆ” ಅಸ್ಪಷ್ಟವಾಗಿ ತೊದಲಿದಳು.
“ಅನು ನೀನು ಕೂಡ ಒಬ್ಬ ಹೆಣ್ಣು ನಿನ್ನಲ್ಲಿಯೂ ಕೂಡ ಪ್ರತಿ ಮನುಪ್ಯನಲ್ಲಿ ಇರಬೇಕಾದ ಎಲ್ಲಾ ಭಾವತರಂಗಗಳಿದ್ದವು. ಆದರೆ ನೀನಿದ್ದ ಪರಿಸರ ನಿನ್ನನ್ನು ಕೆಲವು ಭಾವನೆಗಳಿಂದ ದೂರಾಗಿಸಿದ್ದವು. ನಿಮ್ಮಮ್ಮನ ನೋವು ನಿನ್ನ ಹತಾಶೆಗೊಳಿಸಿತ್ತು. ನೋವೆಂದರೆ ಬದುಕು, ಬದುಕೆಂದರೆ ನೋವು ಎಂಬ ಭಾವ ನಿನ್ನೆದೆಯಲ್ಲಿ ಅಚ್ಚೊತ್ತಿ ಬಿಟ್ಟವು. ಮಧುರಾನುಭೂತಿಯ ಸ್ಪರ್ಶ ನಿನಗಾಗಿರಲಿಲ್ಲ.
ನಿನ್ನ ಸುಪ್ತ ಮನಸ್ಸಿನಲ್ಲಿ ಒಂದಾಸೆ ಇತ್ತು. ನಿನ್ನಮ್ಮನನ್ನು ಈ ನರಕದಿಂದ ದೂರ ಕರೆದೊಯ್ದ, ಕೊನೆತನಕ ನೋಡಿಕೊಳ್ಳಬೇಕೆಂದು ಮದುವೆಯಾಗಿ ಬಿಟ್ಟರೆ ಆ ಆಸೆಗೆಲ್ಲಿ ಸಂಚಕಾರವಾದೀತೋ ಎಂದು ಮಾನದಾಳದಿಂದಲೇ ಮದುವೆ ಬಗ್ಗೆ ವಿರೋಧಿಸಿಕೊಂಡೆ ಗಂಡನಾದಾತ ತಾಯಿಯನ್ನು ತಾನು ಸುಖವಾಗಿರಿಸಿ ಕೊಳ್ಳಲು ಅಡ್ಡಿ ಮಾಡಿದರೆ ಎಂಬ ಆತಂಕವೇ ನಿನ್ನ ಮದುವೆ ದ್ವೇಶಕ್ಕೆ ಮುಖ್ಯ ಕಾರಣ. ಜೊತೆಗೆ ನೀ ಕಂಡಿದ್ದ ದಾಂಪತ್ಯವೆಂದರೆ ನಿಮ್ಮಮ್ಮನದು. ಆ ವಿರಸ ದಾಂಪತ್ಯ ಗಂಡು ಹೆಣ್ಣಿನ ಸಂಬಂಧದ ಬಗ್ಗೆ ವಿಕೃತ ಭಾವನೆಗಳನ್ನು ಗಂಡು ಹೆಣ್ಣಿನ ಸಮಾಗಮದ ಬಗ್ಗೆ ಅಸಹ್ಯಸಿಕೊಳ್ಳುತ್ತಿದ್ದೆ. ಜುಗುಪ್ಸೆಗೊಳುತ್ತಿದ್ದೆ. ಮುಂದೆ ಕೆಲವು ದಾಂಪತ್ಯ ಜೀವನವನ್ನು ಕಂಡಾಗ ನಿನ್ನ ಅನಿಸಿಕೆ ಬದಲಾಯಿತು. ದಾಂಪತ್ಯ ಜೀವನದಲ್ಲೂ ಒಲವು, ಮೆಚ್ಚುಗೆ, ಸರಸ, ಗೌರವ ಇರುವುದನ್ನು ಕಂಡೆ ಇದೂ ಕೂಡ ನಿನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿದವು.
ಎಲ್ಲದಕ್ಕಿಂತ ಹೆಚ್ಚಾಗಿ ನಿಮ್ಮಮ್ಮ ತನ್ನ ಹೃದಯದಲ್ಲಿ ಅರಾಧಿಸಿದ್ದ ವೃಕ್ತಿ ಆಕೆಯ ನೆನಪಿನಿಂದಲೇ ಇಡೀ ಬಾಳನ್ನು ಕಳೆಯುತ್ತಿರುವುದು, ಅಲ್ಲಿ ನಿನ್ನ ತಾಯಿ, ಇಲ್ಲಿ ವಿಕಾಸ್ ಪರಸ್ಪರರಿಗಾಗಿ ಒದ್ದಾಡುತ್ತಿದ್ದದು ಪ್ರೇಮದ ಬಗ್ಗೆ ನೀ ತಿಳಿದಿದ್ದ ಧೋರಣೆ ಕರಗುತಿತ್ತು. ಅದೇ ಮನಸ್ಸು ಅ ಪ್ರೇಮದ ಸಾಪಲ್ಯಕ್ಕಾಗಿ ಚಿಂತಿಸಿ, ಪ್ರೇಮಿಗಳಿಬ್ಬರನ್ನು ಸೇರಿಸುವ ಪ್ರಯತ್ನ ನಡೆಸುವಂತೆ ಮಾಡಿತು. ನನ್ನ ಸಲಹೆಯೂ ಅದಕ್ಕೆ ಪೂರಕವಾಗಿದ್ದುದು ನಿನ್ನಲ್ಲಿ ಮತ್ತಷ್ಟು ಧೈರ್ಯ ತುಂಬಿತು. ನಿನ್ನ ಎಲ್ಲಾ ಆಸೆಗಳನ್ನು ಗೌರವಿಸುತ್ತಾನೆಂದು ನನ್ನ ಬಗ್ಗೆ ವಿಶ್ವಾಸ ಬೆಳೆಸಿಕೊಂಡೆ, ತಾಯಿಯ ಬಗೆಗಿದ್ದ ಆತಂಕ ದೂರವಾಗಿ ಅಕೆ ತನ್ನವನೊಂದಿಗೆ ನೆಮ್ಮದಿಯಾಗಿರುತ್ತಾಳೆಂಬ ಭಾವನೆಯೇ ನಿನ್ನಲ್ಲಿ ಚೈತನ್ಯ ತಂದಿತು. ಇದೇ ಚೈತನ್ಯ ನಿನ್ನ ಬದಲಾಗುವಂತೆ ಮಾಡಿತು ಅನು” ಎಲ್ಲವನ್ನು ಅವಳ ಮನಸ್ಸಿಗೆ ನಾಟುವಂತೆ ನುಡಿದ.
“ಇದರಲ್ಲಿ ನಿಮ್ಮ ಪಾತ್ರವೂ ಅಪಾರ ಅಲ್ಲವೇ ಬಾವಿಯೊಳಗಿನ ಕಪ್ಪೆಯಂತಿದ್ದ ನನ್ನ ಮನಸ್ಸನ್ನು ಈ ವಿಶಾಲ ಜಗತ್ತಿನೊಳಗೆ ತಂದು ಬದುಕು ಹೀಗೂ ಇರಬಹುದೆಂದು ಪಂಚಯಿಸಿದ್ದು ನೀವೇ ಅಲ್ಲವೇ” ಭಾವ ಪರವಶಳಾದಳು.
“ಈ ಹೂ ಮನಸ್ಸಿನ ಹುಡುಗಿಯ ಮನಸ್ಸು ಕದಿಯಲು ಇಷ್ಟೆಲ್ಲಾ ಮಾಡಬೇಕಾಯಿತು. ಅನು ಈ ಸಂತೋಷದ ವಿಷಯವನ್ನು ಮೊದಲು ಹೆತ್ತವರಿಗೆ ತಿಳಿಸೋಣ ಅನು.”
ಹೂಗುಟ್ಟಿದಳು ಅದೇ ಮತ್ತಿನಲಿ.
*****
ಮುಕ್ತಾಯ