ಎಳೆದೂ, ಎಳೆದೂ ಇರುಳು,
ತೂಗಿ ತಡೆದೂ ಬೆಳಗು,
ನನ್ನೀ ಕೈಹಿಡಿದವಳು
ಹಾಸಿಗೆ ಹಿಡಿದಿರಲು.
ಓಡಿಸಲಳವೇ ಚಿಂತೆ,
ಬಿಡುವೇ ಬಳಲಿಕೆಗೆ,
ನನ್ನೀ ಜೀವದ ಕಣ್ಣು
ಹಾಸಿಗೆ ಹಿಡಿದಿರಲು?
ಎಳೆದೂ, ಎಳೆದೂ….
ಭರವಸೆ ಒಂದೂ ಇಲ್ಲ;
ಅಂಜಿಕೆ ಭಯವೇ ಎಲ್ಲ.
ಕಣ್ಣಿಗೆ ನಿದ್ದೆಯೆ ಮಾರಿ;
ತೆರೆಯುವ ಕನಸೆ ವಿಕಾರಿ.
ಎಳೆದೂ, ಎಳೆದೂ….
ಕಿವಿಗೊಡು ಭಗವತ್ಕೃಪೆಯೇ,
ಕರುಣೆಯನೂಡಿಸು ನನಗೆ,
ಉಳಿದುದು ಎಲ್ಲಾ ನಿನಗೆ-
ಕಮಲೆಯನುಳಿಸಿಡು ನನಗೆ.
ಎಳೆದೂ, ಎಳೆದೂ….
– ROBERT BURNS: On Chloris being ill
*****
Latest posts by ನರಸಿಂಹಸ್ವಾಮಿ ಕೆ ಎಸ್ (see all)
- ಶ್ರೀ ಕೃಷ್ಣನಂತೊಂದು ಮುಗಿಲು - January 7, 2017
- ಸಣ್ಣ ಸಂಗತಿ - September 18, 2015
- ಪಂಪನಿಗೆ - September 11, 2015