ನಮಗೆ ಭಾವನೆಗಳಿವೆ
ರೆಂಬೆ ಕೊಂಬೆಗಳಂತೆ ಗಟ್ಟಿಯಾಗಿ ಹರಡಲು
ಬೇರುಗಳಿಲ್ಲ
ನಿಮಗೆ ಬೇರುಗಳಿವೆ
ಆದರೆ ಹರಡಲು ಭಾವನೆಗಳಿಲ್ಲ.
ನಾವು ಮೃದು ಹೃದಯಿಗಳು
ಅಂತೆಯೇ ನಮ್ಮ ತಲೆದಿಂಬುಗಳು ತೋಯುತ್ತವೆ
ನೀವು ಕಠೋರ ಹೃದಯಿಗಳು
ನಿಮ್ಮನ್ನು ಸರಾಯಿ ಅಂಗಡಿಗಳೇ ತೋಯಿಸುತ್ತವೆ.
ನೀವು ಅಧಿಕಾರದ ಅಥವಾ ನೌಕರಿಯ
ಪುಚ್ಚ ಹಚ್ಚಿಕೊಂಡು ಮೆರೆಯುತ್ತೀರಿ
ನಾವೂ ನೌಕರಿ ಮಾಡುತ್ತೇವ ಪುಚ್ಚಗಳಿಲ್ಲದೆ –
ಮನೆಯಲ್ಲಿ ಆನಂದದ ಗುಚ್ಛವೂ ಇಲ್ಲದೆ.
ನಾವು ತಾಳ್ಮೆಯಿಂದ ಕಾಯುತ್ತೇವೆ
ಆದರೆ ನೀವು ರಾಕ್ಷಸರಾಗುತ್ತೀರಿ
ಅಂತೆಯೇ –
ಕೊನೆಗೆ ನಾವು ದುರ್ಗಾ ಕಾಳಿಯರಾಗುತ್ತೇವೆ
ನೀವು ಮರ್ದಿಸಿಕೊಳ್ಳುತ್ತೀರಿ.
*****


















