ಇಲ್ಲಿ ಗುಲ್ಮೊಹರ್‍ ಹೂವುಗಳು ದಟ್ಟವಾಗಿ ಬೀಳುತ್ತಿವೆ.
ತಂಪಾದ ಗಾಳಿಗೆ ಮುಂಗುರುಳುಗಳೂ ಇಷ್ಟಬಂದಂತೆ ಹಾರುತ್ತಿವೆ.
ಅವಗುಂಠನ ಹಾಕಿದ ಯುವತಿಯರ ಕಣ್ಣುಗಳಾದರೋ
ಏನೋ ಹೇಳುವ ಹಾಗಿವೆ.
ಮರದ ಕೆಳಗೆ ಕುಳಿತ ಹುಡುಗನೂ ಹುಡುಗಿಯೂ
ಸುಮ್ಮಸುಮ್ಮನೆ ನಗುತ್ತಿದ್ದಾರೆ.
ಬಸ್ ನಿಲ್ದಾಣದ ಪಾನ್‌ವಾಲ ಶುದ್ಧ ದಖ್ಖಣದ ಉರ್ದುವಿನಲ್ಲಿ
ಅಸ್ಖಲಿತವಾಗಿ ಮಾತಾಡುತ್ತಿದ್ದಾನೆ.
ಇಂಥ ಆರ್ಟ್ಸ್ ಕಾಲೇಜಿನ ಹಾದಿಯಲ್ಲಿ ನಾನು
ದಿನವೂ ನಡೆಯುತ್ತೇನೆ.

ಏನು, ಇಲ್ಲಿ ಹೈದರಾಬಾದಿನ ಸೆಖೆ ಹೊಡೆಯುವುದಿಲ್ಲವೆ?
ನರಳುವುದಿಲ್ಲವೆ ಇಲ್ಲಿ ಯಾರೂ?
ಎಂದು ನೀವು ಕೇಳಬಹುದು.
ಯಾಕೆ, ನನಗೆ ಆಯ್ಕೆಯ ಸ್ವಾತಂತ್ರ್‍ಯವಿಲ್ಲವೆ?
ಅಥವಾ ಇಲ್ಲವೆ?
*****