ಜೂ ನೋಡಿದೆ – ನಾ
ಜೂ ನೋಡಿದೆ,
ಬೋನಿನಲ್ಲಿ ಹುಲಿ ಸಿಂಹ
ತೋಳ ನೋಡಿದೆ.
ಚೂಪು ಹಲ್ಲಿದೆ – ಸಿಂಹ
ಕೋಪವಾಗಿದೆ,
ರೋಪಿನಿಂದ ಘುರ್ ಅಂದ್ರೆ
ನಡಗತ್ತೆ ಎದೆ.
ಬಣ್ಣ ಬಣ್ಣದ – ಅಗಲ
ಪಟ್ಟೆ ಹುಲಿ ಇದೆ,
ಸಣ್ಣ ಚೂರಿಯಂಥ ಉಗುರು
ಹೆಜ್ಜೆ ಒಳಗಿದೆ.
ಕಾಳ ಹೊಟ್ಟೆಯ- ಭಾರಿ
ತೋಳ ಅಲ್ಲಿದೆ,
ಕುರೀಮರಿ ಎಲ್ಲಿ ಅಂತ
ಕದ್ದು ನೋಡ್ತಿದೆ.
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.