ಕೋಡುಗನ ಕೋಳಿ ನುಂಗಿತ ನೋಡವ್ವ ತಂಗಿ                    ||ಪ||

ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ದಳೆ ನುಂಗಿತ                    ||೧||

ಒಳ್ಳು ಮನಕಿಯ ನುಂಗಿ
ಬೀಸುಕಲ್ಲು ಗೂಟವ ನುಂಗಿ
ಕುಟ್ಟಲು ಬಂದ ಮುದಕಿಯ ನೊಣವು ನುಂಗಿತ                    ||೨||

ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಾಗಿರುವ ಅಣ್ಣನ ಕುಣಿಯು ನುಂಗಿ                    ||೩||

ಎತ್ತು ಜತ್ತಗಿ ನಿಂಗಿ
ಬತ್ತ ಬಾನವ ನುಂಗಿ
ಕುಂಟಿ ಹೊಡೆಯೋ ಅಣ್ಣನ ಮೇಳಿ ನುಂಗಿತ                    ||೪||

ಗುಡ್ಡ ಗಂವ್ಹರ ನುಂಗಿ
ಗಂವ್ಹರ ಇರುವೆ ನುಂಗಿ
ಗುರುಗೋವಿಂದನ ಪಾದ ಆತ್ಮ ನುಂಗಿತ                    ||೫||
*    *    *    *