ಅದಿಗೊ ದೆಸೆಕೂಡುವೆಡೆ ತಿರೆಗೂರುತಿದೆ ಮುಗಿಲು
ಹೆಬ್ಬಿದಿರ ಮೆಳೆಯ ಚೆಲುವನು ತೋರಿ, ಬಿಳಲೂರಿ
ಹಬ್ಬಿರುವ ಮಹಾವಟವೃಕ್ಷದೊಲು ಹಸರಿಸುತ
ಇದೆಕೊ ಎನುತಿದೆ ನನಗೆ ಮೈಬಿಡದ ಮಿಂಚಿನೊಳು
ಕಾರೊಡಲ ಬಣ್ಣದೊಳು ತನ್ನ ಪನ್ನತಿಕೆಯನು
ಮೆರೆವ ಗುಡುಗಿನೊಳು ಗಿರಿಮೈತ್ರಿಯೊಳು ಸರ್ವಾರ್ತಿ-
ಹರಕ್ಷೀರಧಾರೆಯೊಳು ಹಿಂದೆ ತಾ ಹಿಡಿದಿಟ್ಟ
ನೂರಾರು ಕವಿಮುದಗಳೈಸಿರಿಯ ತೆರುವಂತೆ!
ಸನಿಯಕೈದಿತು ಮಳೆ, ನೆನೆನೆನೆದುದೆನ್ನ ಮೈ.
ಕುಳಿತೆಡೆಯೆ ಕುಳಿತಿಹೆನು ಚಿರಕಾಲದಭಿಲಷಿತ
ಸಲುವ ತೆರ. ಅರಿತರಾರೀ ಮೇಘವಾವ ಪಾ-
ವನ ನದೀತೀರ್ಥವನು ತಂದಿಹುದೊ, ವೇಂಗಡದ
ಮಲೆಮುಟ್ಟಿ ಬಂದಿಹುದೊ ಸೇಚನದೊಳ್ಳೆನ್ನ ಹರಸೆ
ಕರುಣೆಯೊಳು ನಿಂತೆಡೆಯೆ ಅವಭೃಹಸ್ನಾತನೆನಿಸೆ?
*****

















