ಏಳಿರಿ ಏಳಿರಿ, ಬಲುಬೇಗ, ಬೆಳಗಾಯಿತು ಏಳಿರಿ ಬೇಗ |
ಖೂಳರ ಭಾರವನಿಳಿವುದಕೆ ಮೇಳಾಗಿ ನಡೆಯಿರಿ ನೀವೀಗ|
ಬಿಳಿಯರಮದವನು ತೆಗ್ಗಿಸುತೆ, ಗೆಳೆಯರರವರನು ಮಾಡುತ್ತೆ |
ತಿಳಿಸುತೆ ನಮ್ಮಯ ಸಂಸ್ಕ್ರತಿಯ, ಗಳಪದೆ ಮುಂದಡಿಹಾಕುತ್ತೆ |
ಬಳವನು ನೂರ್ಮಡಿ ಹೆಚ್ಚಿಸುತೆ ಖಳತನದಿಂದತಿ ದೂರಿರುತೆ |
ಬಳರಹಿತರ ನೀವ್ಕಾಯುತ್ತೆ, ಬಳಯುತ ರಾಜ್ಯವಕಟ್ಟುತ್ತೆ |
ಬೆಳೆಗಳ ಹೇರಳ ಬೆಳೆಯುತ್ತೆ, ಬಳಕಿಪ ಬಡತನವೋಡಿಸುತೆ |
ತಿಳುವಿನ ಜೋತಿಯ ಬೆಳಗುತ್ತೆ ಥಳಥಳಕೀರ್ತಿಯ ಹಬ್ಬಿಸುತೆ |
ಹಾಳ್ವೆಸನಂಗಳ ದೂಡುತ್ತೆ, ಬಾಳನು ಸುಖಮಯ ಮಾಡುತ್ತೆ |
ಗೋಳನು ಪೆಣ್ಣಳ ದೂರುತ್ತೆ, ಮೇಳದ ಬಾಳನು ಮಾಡುತ್ತೆ |
ಆಳಿನ ಬುದ್ಧಿಯ ನಡಗಿಸುತ್ತೆ, ಅಳಿಯನ ಠೀವಿಲಿ ಮೆರೆಯುತ್ತೆ |
ಆಳರಸರ ಕೃತಿ ಮರೆಯುತ್ತೆ, ಆಳಲು ರಾಜ್ಯವ ಮುಂಬರುತೆ |
ಗಳಗಳನಳುವಿಕೆ ಕಳೆಯುತ್ತೆ, ಮಳಲಲಿ ಎಂಣೆಯ ತೆಗೆಯುತ್ತೆ |
ಬಿಳಿಯರ ದುರ್ಗುಣತ್ಯಜಿಸುತ್ತೆ, ಎಳೆಯರ ಸದ್ಗುಣಬೀರುತ್ತೆ |
ಘಳಿಲನೆ ಕಾರ್ಯವ ಮಾಡುತ್ತೆ, ತಳಮಳಿಸದ ಮನ ಮೆರೆಯುತ್ತೆ |
ಕೂಳಿನ ಶೆಳೆತಕೆ ಬೀಳದಲೆ, ತೋಳನ ಸ್ವಾರ್ಥವ ಕಲಿಯದಲೆ |
ಮೇಳಿಸಿನಡೆ ಬಾಳ್ಬೆಳಗುವದು, ಏಳಿರಿ ನಡೆಯಿರಿ ಮುಂದೀಗ ||
*****

















