
೧
ಹೆಜ್ಜೆ ಹೆಜ್ಜೆಗೆ ರಾಮ
ಗರ್ಜಿಸುವೆ ಶ್ರೀರಾಮ
ಮಜ್ಜೀವನದ ಪ್ರೇಮ-
ಕಜ್ಜಾಯವಿದು ರಾಮ
ಗರ್ಜಿಸುವೆ ಶ್ರೀರಾಮ !
**
ಜಗವಾಗ ಹಗೆಯಾಗೆ
ಇಗೊ ನಿನ್ನ ಗೆಳೆಯನೆಂ-
ದುಗುವ ಆ ನಗೆಯೊಡನೆ
ಹೊಳೆಯಲಾ ಮಗುವು
ಹೊಳೆಯಲಾ ಮಗುವು
ಆ ಮಗುವು ನೀನೆಂದು
ರಾಮಚಂದಿರನೆಂದು
ಪ್ರೇಮಸುಂದರನೆಂದು
ತಿಳಿಯಲೀ ಜಗವು
ತಿಳಿಯಲೀ ಜಗವು!
ಉಕ್ಕುತಿಹ ಸಾಗರನು
ನೀನೆ ಕಾಣಯ್ಯ ಮತ್-
ಪ್ರೇಮ ಸಾಗರನೆ
ಪ್ರೇಮಸಾಗರನೆ
ಉಕ್ಕಿಸುವ ಚಂದಿರನು
ನೀನೆ ತಾನಯ್ಯ ಚಿತ್-
ರಾಮಚಂದಿರನೆ
ರಾಮಚಂದಿರನೆ!
೨
ನನ್ನಂತರಂಗದ-
ಲ್ಲಂಗಾಂಗದೊಳ್ ರಂಗ
ನಿನ್ನಂತರಂಗಾಂಗ-
ಸಂಗವುಂಟು
ಸಂಗವುಂಟು
ನನ್ನ ಈ ಬಿನ್ನಪವ
ಆವ ಧಾರಿಸೈ ಅರಸೆ
ನಿನ್ನದೇ ಸಂಗಾಂಗ-
ರಂಗವುಂಟು
ರಂಗ! ಉಂಟು!
೩
ಪ್ರಲ್ಹಾದ! ಆವುದಾ ದಾರಿಯೆಲ್ಲಿ?
ಆಲ್ಹಾದ-ಜೀವದಾಧಾರಿಯಲ್ಲಿ?
ಪಲ್ಲನೀ ಜೀವದಾ ದಾನಿಯಲ್ಲಿ
ಇಲ್ಲ ಕೊನೆಮೊದಲು ಹೃತ್-ಶ್ರೇಣಿಯಲ್ಲಿ!
*****
















