ಮಧುವನದ ಮಂದಾರ ಸೌಗಂಧ ಶ್ರೀಪೂರ
ಇಳಿಸಿದೆಯ ನನ್ನೆದೆಯ ಮೌನಭಾರ;
ಸುಖದಲ್ಲಿ ಮರೆತಿರಲು ದುಃಖದಲಿ ನಕ್ಕಿರಲು
ಹೊರಳಿ ನೋಡಿದರಿತ್ತ ಚಂದ್ರತಾರಾ.
ಹಗಲುಗನಸಿನ ಚಿತ್ರ ಕುರುಳ ಸುರುಳಿಯ ಪತ್ರ
ಬರೆದು ಮುಗಿಸಿವೇಸೊ ರಾಶಿರಾಶಿ;
ಪ್ರೀತಿಪೂರದ ತೀರ್ಥಯಾತ್ರೆ ಗೈಯುತಿರಲು
ಬೆಳಗಿ ಬಂದಿತು ನನ್ನ ಹೃದಯ ಕಾಶಿ.
ಇರುಳಿನಲಿ ಹೊಸ ಮಳೆಯ ಸೆಳಕೊಂದು ಸುರಿದಿರಲು
ಮುಂಜಾವಿನಲಿ ನಕ್ಕು ನಲಿನ ಹೂವು;
ಪಕಳೆ ಪಕಳೆಯ ಬಿಡಿಸಿ ಮಾಧುರ್ಯ ಹೊರಸೂಸಿ
ತುಂಬಿ ಬದುಕುವ ಜೀವಕಿಲ್ಲ ಸಾವು.
*****

















