Home / ಕಥೆ / ಕಾದಂಬರಿ / ಸಂಗಪ್ಪನ ಸಾಹಸಗಳು – ೧೨

ಸಂಗಪ್ಪನ ಸಾಹಸಗಳು – ೧೨

ಭೂದಾನದ ವಿಷಯಕ್ಕೆ ಬಂದು ಭೂಸುಧಾರಣೆ ಸಂಗತಿ ತಿಳಿಸಿದ್ದಾಯ್ತು. ಈಗ ಅನೇಕರಿಗೆ ಗೊತ್ತಾಗಿದೆ `ಸಂಗಪ್ಪನ ಭೂಸುಧಾರಣೆ’ ಹೇಗಾಯ್ತು ಅಂತ. ಆದರೆ ಅದಕ್ಕೆ ಯಾರೇನೂ ಮಾಡಲಿಲ್ಲ. ಈ ಮಾದರಿ ಮನುಷ್ಯನನ್ನು ಇನ್ನೂ ಅನೇಕರು ಅನುಸರಿಸಿದರು. ಆದ್ದರಿಂದಲೇ ಹೇಳಿದ್ದು ಗಾಂಧೀಗುಡಿಯ ಸಂದರ್ಭದಷ್ಟು ಪ್ರಚಾರ, ಪ್ರಸಿದ್ಧಿ ಈ ವಿಷಯದಲ್ಲಿ ಸಿಕ್ಕಿರಲಿಲ್ಲ ಅಂತ. ಗಾಂಧೀಗುಡಿ ಕಟ್ಟಿಸಿದ್ದು ಅವನೊಬ್ಬನೇ. ‘ಸಂಗಪ್ಪನ ಭೂಸುಧಾರಣೆ’ ಅನುಸರಿಸಿದೋರು ಅನೇಕರು. ಆದ್ದರಿಂದ ಪ್ರಸಿದ್ಧಿ ಹಂಚಿಹೋಯ್ತು.

ಇದೀಗ ಭೂದಾನದ ಏರ್ಪಾಡು ಮಾಡಬೇಕಂತ ಯೋಚನೆ ಬಂದಾಗ ಶಾನುಭೋಗರು ಅಷ್ಟು ಉತ್ಸಾಹ ತೋರಿಸಲಿಲ್ಲ. “ಇಷ್ಟೆಲ್ಲ ಮಾಡಿದ್ದಾಗಿದೆ. ಅದನ್ನು ಯಾಕೆ ಬಿಡಿ ಸಾವ್ಕಾರ್ರೆ, ಒಟ್ಟು ಫಲಿತಾಂಶ ಒಂದೇ ತಾನೆ?” – ಎಂದರು. “ಅದೇ ನಿಮ್ಮ ತಪ್ಪು ವಿಚಾರ ನೋಡ್ರಿ. ಮಾಡೋದೆಲ್ಲ ಮಾಡ್ತಾ ಇದ್ರೇ ನಾವು ಬದ್ಕೋಕೆ ಸಾಧ್ಯ; ಇಂಥದಕ್ಕೆಲ್ಲ ಬೇಜಾರು ಮಾಡ್ಕಬಾರ್ದು” – ಸಂಗಪ್ಪ ತನ್ನ ಫಿಲಾಸಫಿಯ ತುಣುಕು ಪ್ರಕಟಿಸಿದ. “ಅಂತೂ ನಾನ್ ಹೇಳ್ದಂತೆಯೇ ಆಯಿತು, ನನ್ನ ತಲೇನ ಮೀರುಸ್ತಿದೆ ನಿಮ್ಮ ತಲೆ” ಎಂದು ಶಾನುಭೋಗರು ತಲೆ ಕೆರೆದುಕೊಂಡಾಗ ಸಂಗಪ್ಪ ಇಲ್ಲ ಅನ್ನದೆ “ನಿಮ್ಮ ತಲೇನೂ ಬೇಕು ಸ್ವಾಮಿ, ಎಷ್ಟು ತಲೆ ಇದ್ರೆ ಅಷ್ಟೂ ಒಳ್ಳೆದು. ಈಗ ನೋಡಿ, ಈ ಸಾರಿ ಭೂ ಸುಧಾರಣೆ ಥರಾ ಮಾಡಲ್ಲ. ನಿಜವಾಗ್ಯೂ ದಾನ ಮಾಡ್ತೀನಿ ಐದಾರು ಜನಕ್ಕೆ ಯೋಗ್ಯರಿಗೆ ದಾನ ಮಾಡ್ಬೇಕು ನೋಡಿ ನಮ್ಮ ಸಂಪ್ರದಾಯದ ಪ್ರಕಾರ. ಮೊದಲು ನಿಮಗೆ ಎರಡು ಎಕರೆ ಭೂದಾನ ಮಾಡ್ತೇನೆ. ದಾನ ಕೊಡುವಾಗ ಬ್ರಾಹ್ಮಣರಿಗೆ ಮೊದಲ ಸ್ಥಾನ. ಉಳಿದವರಿಗೂ ಕೊಡ್ತೇನೆ. ಇಲ್ದೇ ಇದ್ರೆ ದಾನ ಪೂರ್ತಿ ಆದಂಗಾಗಲ್ಲ ಈ ಕಾಲ್ದಾಗೆ” – ಎಂದು ವಿವರಿಸಿದ.

ತಮಗೆ ನಿಜವಾಗೂ ಜಮೀನು ಸಿಗೋದು ತಿಳಿದು ಶಾನುಭೋಗರ ಸಂತೋಷಕ್ಕೆ ಪಾರವೇ ಇಲ್ಲ; ಅವರು ಉತ್ಸಾಹದಿಂದ ಹೇಳಿದರು: “ಹಿಂದೆ ನಮಗೆ ಆಗ್ರಹಾರಾನೆ ಬಿಟ್ಟುಕೊಡ್ತಿದ್ದರು. ಎಂಥ ಕಾಲ ಅದು! ಈಗ ಹುಟ್ಟಿರೋ ನಾವು ಪುಸ್ತಕದಲ್ಲಿ ಓದಿ ಸುಖ ನೆಕ್ಕಬೇಕು; ಅಷ್ಟೆ. ಏನೋ ನಿಮ್ಮಂಥ ಪುಣ್ಯಾತ್ಮರು ಈ ಕಲಿಗಾಲ್ದಲ್ಲೂ ಬದ್ಕಿರೋದ್ರಿಂದ ನನಗೆ ಎರಡು ಎಕರೆ ನೀರಾವರೀನೆ ಸಿಗುತ್ತೆ ಅಂತ ಗೊತ್ತು.”

‘ಎಲಾ ಶಾನುಭೋಗ’ ಎಂದುಕೊಂಡರೂ ಸಂಗಪ್ಪ ಹೇಳಿದ: ‘ಹಾಗೇ ಆಗ್ಲಿ ಬಿಡಿ ಸ್ವಾಮಿ, ಒಂದ್ ಕೆಲ್ಸಾ ಮಾಡಾನ, ಭೂಸುಧಾರಣೆ ಪ್ರಸಂಗದಿಂದ ಒಳಗೊಳಗೇ ವಿರೋಧ ಬೆಳೆಸಿಕಂಬ್ತಿರೋರು ಇದ್ದಂಗೆ ಕಾಣ್ತಾರೆ. ಅಂಥವ್ರನ್ನೆ ಈ ಪುಂಡು ಪೋಕ್ರಿ ಹುಡುಗ್ರು ಎತ್ತಿಕಟ್ಟೋದು, ಅಂಥವ್ರ್‌ದು ಒಂದು ಪಟ್ಟಿ ಮಾಡಿ. ಐದು ಅಲ್ದಿದ್ರೆ ಹದಿನೈದು ಆಗಲಿ; ನಿಮಗೆ ನೀರಾವರಿ ಕೊಡ್ತೀನಿ. ಅವ್ರಿಗೆ ಎರಡೆರಡು ಎಕ್ರೆ ಖುಷಿ ಕೊಟ್ರಾಯ್ತು.”

“ಅದ್ಸರಿ, ಈಗ ಭೂದಾನದ ವ್ಯವಸ್ಥೆ ಹೇಗೆ ಅಂತ ನೀವು ನೇರವಾಗಿ ಪನ್ನೀರಾಶ್ರಮದ ವಿನೋದಾನಂದರನ್ನೇ ಕಂಡು ಕರ್ಕೊಂಡು ಬಂದ್ರೆ ಹೇಗೆ? ಅಂದ್ರೆ ಅವ್ರಿಗೆ ಮೊದಲೇ ಹೇಳಿರಬೇಕು – ನಿಮ್ಮ ವಶಕ್ಕೆ ಭೂದಾನ ಮಾಡ್ತೇವೆ. ನಮ್ಮೂರಿನ ಕಡು ಬಡವರ ಪಟ್ಟಿ ಕೊಡ್ತೇವೆ; ತಾವು ದಯಪಾಲಿಸಬೇಕು. ನಮ್ಮ ಆಯ್ಕೆ ಬಗ್ಗೆ ನಂಬಿಕೆ ಇಲ್‌ದಿದೆರ ತನಿಖೆ ಮಾಡಿಯೇ ದಯಪಾಲಿಸಿ – ಅಂತ. ಏನಂತೀರಿ?”

“ನೀವಂದ್ಮೇಲೆ ಇನ್ನೇನಂಬಾಣ ನಾನು. ಎಲ್ಲಾ ಹಂಗೇ ಮಾಡಾಣ. ಪನ್ನೀರಾಶ್ರಮದೋರ್ಗೆ ಭೂದಾನ ಮಾಡೋದು. ಅವ್ರಿಂದ ನಮ್ಮೂರವ್ರಿಗೆ ಮಾಡ್ಸೋದು. ಅಲ್ಲ ಶಾನುಭೋಗರೆ, ಪನ್ನೀರಾಶ್ರಮ ಅಂತ ಯಾಕೆ ಹೆಸರಿಟ್ಟರು?”

“ಅದೇ ನೋಡಿ ಎಷ್ಟು ಅರ್ಥಪೂರ್ಣವಾಗಿದೆ! ಅಲ್ಲಿಗೆ ಪ್ರವೇಶ ಮಾಡಿದರೆ ಸಾಕು, ಪನ್ನೀರು ಸಿಂಪಡಿಸಿದಂತೆ ಪನ್ನೀರಲ್ಲಿ ಸ್ನಾನ ಮಾಡ್ದಂತೆ! ಮನಸ್ಸು ಪನ್ನೀರಾದಂತೆ! ಹೀಗೆ ಅಲ್ಲಿಯ ಧ್ಯೇಯ, ಧೋರಣೆ, ನಡೆ, ನುಡಿ ಎಲ್ಲಾ ಪನ್ನೀರು ಅಂದ್ರೆ ಪನ್ನೀರೆ!”

“ಅವರು ಕುಡಿಯೋದು?”

“ಬಾವೀ ನೀರೇ ಕುಡೀತಾರೆ, ಪನ್ನೀರು ಅನ್ನೋದ್ರ ಭಾವಾರ್ಥ ಮುಖ್ಯ. ಒಟ್ಟು ತಾತ್ಪರ್ಯ ಮುಖ್ಯ…”

“ಅದಿರ್ಲಿ ನನ್‌ಮ್ಯಾಲ್ ಪದ್ಯ ಬರುದ್ರೇನ್ರಿ?”

ಶಾನುಭೋಗರ ನಾಲಿಗೆ ತಡವರಿಸಿತು; ಆ – ಊ… ಅಂತಾನೆ ತಕ್ಷಣ ಮಾತು ಜೋಡಿಸಿದರು: “ನೋಡಿ ನಿಮಗೆ ಹೇಳೇ ಇಲ್ಲ. ಮರ್ತೇ ಬಿಟ್ಟಿದ್ದೆ. ಹೇಗಾಯ್ತು ಗೊತ್ತ ಮೊನ್ನೆ. ಒಂದು ಖಂಡಕಾವ್ಯಾನೆ ಬರ್ದಿದ್ದೆ ನಿಮ್ಮ ಮೇಲೆ…”

“ಅದ್ಯಾಕ್ರಿ ಬರುದ್ರಿ? ನಾನು ಮಾಂಸ, ಖಂಡ ತಿನ್ತೀನಿ ಅಂತ ಎಲ್ರಿಗೂ ಸಾರೋಕೇನ್ರಿ…?”

“ಹಾಗಲ್ಲ ಸಾವ್ಕಾರ್ರೆ, ಖಂಡಕಾವ್ಯ ಅಂದ್ರೆ ಮಹಾಕಾವ್ಯಕ್ಕಿಂತ ಚಿಕ್ಕದು…”

“ಮತ್ತೆ ಚಿಕ್ಕದು ಯಾಕ್ ಬರುದ್ರಿ? ನನ್ ಸೈಜ್ ಚಿಕ್ಕದಾದ್ರೆ ನನ್ ಮ್ಯಾಲ್ ಬರ್ಯೋದು ಚಿಕ್ಕದೆ ಆಗ್ಬೇಕಾ? ಮೊದ್ಲು ದೊಡ್ಡದೇ ಬರೀರಿ.”

“ಬರ್ಯೋಣ ಮಹಾಕಾವ್ಯಾನೇ ಬರ್ಯೋಣ. ಅದಕ್ಕೆ ಸರ್ಯಾಗಿ ಕವಿ ಸನ್ಮಾನ ಆಗ್ಬೇಕಲ್ಲ?”

“ಎಷ್ಟ್ರಿ ನಿಮ್ಮ ರೇಟು? ಬಿಸಾಡ್ತೀನಿ, ಬರೀರಿ”

“ಬರ್ಯೋಣ ಸ್ವಾಮಿ. ಈಗ ವಿಷಯ ಕೇಳಿ, ಖಂಡಕಾವ್ಯ ಬರ್ದಿದ್ರೆ ಅದನ್ನು ಯಾರೊ ಕದ್ದು ಬಿಡೋದ? ಆ ಪುಂಡು ಹುಡುಗರದೇ ಈ ಕೆಲ್ಸಾ ಅಂತ ನನ್ನ ಊಹೆ. ಇದನ್ನು ಹೇಳೋದೆ ಮರ್ತಿದ್ದೆ ನೋಡಿ” ಎಂದು ಒಂದು ಸುಳ್ಳು ಬಿಟ್ಟರು ಶಾನುಭೋಗರು.

“ಹಂಗ್ ಮಾಡಿದ್ರೇನ್ರಿ, ಮೊದ್ಲೆ ಯಾಕ್ ಹೇಳ್ಲಿಲ್ಲ?”

“ಹೇಗಿದ್ರೂ ಮಹಾಕಾವ್ಯ ಬರೆಯೋಣ ಅಂತಿದ್ದೀನಲ್ಲ.”

“ಸರಿ ಹಂಗ್ಮಾಡ್ರಿ, ಜಲ್ದ್ ಬರೀರಿ, ಮರ್ತ್ ಬಿಡ್‌ಬ್ಯಾಡ್ರಿ ಅಮ್ಯಾಲೆ.”

“ನೀವು ಇದ್ರ ಯೋಚನೇಲಿ ಭೂದಾನದ ವಿಷಯ ಮರ್ತುಬಿಡಬೇಡಿ.”

ತಕ್ಷಣ ಸಂಗಪ್ಪ ಭೂದಾನದ ವಿಷಯಕ್ಕೆ ಬಂದ “ನಾಳೀಕೆ ಹೊರಟೆ ನೋಡಿ ಪನ್ನೀರಾಶ್ರಮಕ್ಕೆ” ಎಂದ.
* * *

ಪನ್ನೀರಾಶ್ರಮಕ್ಕೆ ಸಂಗಪ್ಪ ಬಂದಾಗ ಹೊರಗಡೆ ಇದ್ದವರು ಕೇಳಿದ್ರು “ಯಾರ್
ಬೇಕು?”

“ಇಲ್ಲಿಗೆ ಬಂದ್‌ಮ್ಯಾಲೆ ಇನ್ ಯಾರ್‌ಬೇಕು? ವಿನೋದಾನಂದರೇ ಬೇಕು.”

“ವಿನೋದಾನಂದರಾ?”
“ಇನ್ನೇನು ನೀವು ಬೇಕು ಅನ್ಬೇಕಾ?” – ಎಂದ ಅಸಹನೆಯಿಂದ.

“ಏನಿದು ನಿಮ್ಮ ಮಾತು ಹೀಗಿದೆ! ಈ ಆಶ್ರಮದ ವಾತಾವರಣಕ್ಕೆ ಕಾಲಿಟ್ಟ ಕೂಡಲೇ ಎಂಥ ಪಾಪಿಯೂ ಪುಣ್ಯಶಾಲಿಯಾಗುತ್ತಾನೆ. ಗಿಡಗವೂ ಗಿಳಿಯಂತಾಗುತ್ತೆ; ಹಾವು ಮುಂಗುಸಿಗಳು ಜೊತೆಯಲ್ಲಿ ವಾಸಿಸುತ್ತವೆ; ಆನೆ, ಸಿಂಹ ಜೊತೆಯಲ್ಲಿರುತ್ತವೆ. ಪನ್ನೀರಾಶ್ರಮ ಅಂದರೇನು ಸಾಮಾನ್ಯವೆ? ಇಲ್ಲಿ ಕಟುತ್ವಕ್ಕೆ, ಕಟುಕತ್ವಕ್ಕೆ ಕಿಂಚಿತ್ತೂ ಸ್ಥಳವಿಲ್ಲ. ಮಾತಿನಲ್ಲೂ ಹಿಂಸೆಯಿರಕೂಡದು. ಇರುವುದಿಲ್ಲ. ಪನ್ನೀರಾಶ್ರಮದ ಪಾವಿತ್ರ್ಯ ಈ ರೀತಿಯಿರುವಾಗ ನಿಮ್ಮ ಮಾತಿನಲ್ಲೇಕೆ ಈ ಗಡಸು? ಈ ಅಸಹನೆ?”

ಈ ನಾಟಕೀಯ ಶೈಲಿಯ ಮಾತಿಗೆ ಸಂಗಪ್ಪ ಬೆರಗಾದ. ಏನಾದರೂ ಹೇಳಲೇಬೇಕಲ್ಲ ಎಂದು ಯೋಚಿಸಿ ಹೇಳಿದ: “ಹೌದು ಸ್ವಾಮಿ, ನೀವು ಹೇಳ್ತಿರೋದು ನಿಜ ಅನ್ನುಸ್ತೈತೆ ನಂಗೂನು. ನೋಡಿ ಈಗ ಒಳಗೆ ಏನೋ ಬದಲಾವಣೆ ಆಗ್ತಾ ಐತೆ. ಅದೇನೋ ಒಂಥರಾ ಅನುಭವ ಆಗ್ತಾ ಐತೆ. ನನ್ನ ಮಾತು ಮೃದುವಾಗ್ತಾ ಐತೆ. ಈಗ ನೋಡಿ ಕೇಳ್ತೇನೆ… ಗಂಟಲು ಸರಿಮಾಡಿಕೊಂಡು ಮೃದುತ್ವವನ್ನಾರೋಪಿಸಿ ಕೊಂಡು ಕೇಳಿದ: “ವಿನೋದಾನಂದರ ದರ್ಶನಕ್ಕಾಗಿ ಬಂದಿದ್ದೇನೆ ಸ್ವಾಮಿ. ಅವರ ದರ್ಶನ ನನಗೆ ಸಿಗುವಂತೆ ಕರುಣಿಸ್ತೀರಾ ದಯವಿಟ್ಟು?”

ಈಗ ಆ ವ್ಯಕ್ತಿ ಗಡುಸಾದ: “ಏನವರ ದರ್ಶನ ಅಂದ್ರೆ ಸುಮ್ ಸುಮ್ಮನೆ ಆಗಿಬಿಡುತ್ತೇನ್ರಿ? ಮೊದಲೇ ಬರ್ಕೊಳ್ಳಬೇಕು; ಒಪ್ಪಿಗೆ ತಗೋಬೇಕು; ದಿನ ನಿಗದಿ ಮಾಡಿಕೊಂಡು ಬರಬೇಕು. ದಾರೀಲಿ ಹೋಗೋ‌ರ್ನೆಲ್ಲ ಭೇಟಿ ಮಾಡೋದಿಕ್ಕೆ ನಮ್ಮ ವಿನೋದಾನಂದರಿಗೇನು ಬೇರೆ ಕೆಲಸವಿಲ್ಲವೆ?”

“ಹಾಗಂದರೆ ಹೆಂಗೆ ಸ್ವಾಮಿ? ನಾನು ಸಾವ್ಕಾರ್ ಸಂಗಪ್ಪ ಅಂತ…”

“ಓ… ಎಲ್ಲೋ ಕೇಳಿದ ಹಾಗಿದೆಯಲ್ಲ…?”

“ಹ್ಞಾ, ಅವನೇ ನಾನು. ಅದೇ ಗೇಣಿದಾರರಿಗೆ ಸ್ವಂತ ಇಚ್ಛೆಯಿಂದ ಜಮೀನು ಬಿಟ್ಟುಕೊಟ್ಟೋನು; ಗಾಂಧೀಗುಡಿ ಕಟ್ಟಿಸಿದೋನು…”

“ನೆನಪಿಗೆ ಬಂತು, ನೆನಪಿಗೆ ಬಂತು ಬಿಡಿ, ಅಲ್ಲ ಗಾಂಧೀ ಗುಡಿ ಕಟ್ಟಿಸಿದ ಮೇಲೆ ನಮ್ಮ ವಿನೋದಾನಂದರ್ದೂ ಯಾಕೆ ಕಟ್ಟಿಸಬಾರದು?”

“ಕಟ್ಟಿಸೋಣ, ಕಟ್ಟಿಸೋಣ. ಅವರೂ ಸಾಯಲಿ ಕಟ್ಸೋಣ” – ಸಂಗಪ್ಪ ಧಾರಾಳವಾಗಿ ಆಶ್ವಾಸನೆ ನೀಡಿದ.

“ಏನ್ರಿ ನೀವಂತಿರೋದು?” – ಆಶ್ರಮದ ವ್ಯಕ್ತಿ ಹೌಹಾರಿದ; ಸಹನೆ ಕಳೆದುಕೊಂಡು ಗರ್ಜಿಸಿದ; “ನಮ್ಮ ವಿನೋದಾನಂದರ ಸಾವನ್ನು ಬಯಸೋದೆ ನೀವು? ನಿಮ್ಮ
ನಾಲಗೆಗೆ ಹುಳ ಬೀಳಲಿ.”

ಸಂಗಪ್ಪ ತಬ್ಬಿಬ್ಬಾದ; ಬದುಕಿದ್ದಾಗಲೇ ಪೂಜೆ ಮಾಡೋದು ಗುಡಿ ಕಟ್ಟಿ ಪೂಜೆ ಮಾಡೋದು ಸರಿಯಲ್ಲವೇನೋ ಅಂತ ಭಾವಿಸಿ ಹಾಗೆಂದಿದ್ದ. ಆದರೆ ಆಮೇಲೆ ನೆನಪಿಗೆ ಬಂತು ಬದುಕಿದ್ದಾಗಲೇ ಪೊಟೋ ಹಾಕಿ ಬಾಬಾಗಳ ಪೂಜೆ ಮಾಡೋಲ್ಲವಾ? ಗುಡಿ ಕಟ್ಟಿಸಿದ್ರೇನಂತೆ?… ಇದನ್ನೇ ವಿವರಿಸಿದ.

“ಏನೋ ಬಾಯಿತಪ್ಪಿ ಗೊತ್ತಿಲ್ಲದೆ ಅಂದೆ. ಈಗೇನಾಯ್ತು ಗುಡಿ ಕಟ್ಟಿಸಿದರಾಯ್ತು. ಈಗ ವಿನೋದಾನಂದರನ್ನು ಮಾತಾಡಿಸಬೇಕಲ್ಲ?”

“ಅವರನ್ನು ಮಾತಾಡ್ಸೋಕೆ ಸಾಧ್ಯವಿಲ್ಲ ಈಗ. ಯಾಕೇಂದ್ರೆ ಅವರು ಇನ್ನೊಂದು ತಿಂಗಳವರೆಗೆ ಮೌನ ವ್ರತ. ಯಾರೊಂದಿಗೂ ಮಾತಾಡೊಲ್ಲ. ಏನಾದ್ರೂ ಇದ್ದರೆ ಸನ್ನೆ ಮಾಡ್ತಾರೆ; ಇಲ್ಲವೆ ಬರೆದು ತಿಳುಸ್ತಾರೆ.”

“ಏನೇ ಆದ್ರೂ ನಾನು ಅವರನ್ನು ನೋಡ್ಬೇಕು. ಭೂದಾನ ಮಾಡ್ಬೇಕೂಂತಿದ್ದೀನಿ.”

“ಸಾವ್ಕಾರ್ ಸಂಗಪ್ಪನವರಿಗೆ ಇಲ್ಲ ಅನ್ನೋಕಾಗುತ್ತೆಯೆ? ಇರಿ, ಬಂದೆ” ಎಂದು
ಹೇಳಿ ಒಳ ಹೋಗಿ ವಾಪಸ್ ಬಂದು “ಕರೀತಿದಾರೆ ಹೋಗಿ” ಎಂದರು.

ಸಂಗಪ್ಪ ಭಯ ಭಕ್ತಿಯಿಂದ ಒಳಹೋದ. ಬಿಳಿ ಗಡ್ಡ, ಮೀಸೆ ಕೂದಲಿನ ಕನ್ನಡಕಧಾರಿ ವಿನೋದಾನಂದರನ್ನು ಕಂಡು ಕೈಮುಗಿದ. ಕುಳಿತುಕೊಳ್ಳುವಂತೆ ಸನ್ನೆ ಮಾಡಿದಾಗ
ಕೂತ.

ವಿನೋದಾನಂದರು ಕನ್ನಡಕದ ಸಂದಿಯಲ್ಲಿ ನೋಡಿ ಆಶೀರ್ವದಿಸುವಂತೆ ಕೈ ಎತ್ತಿ ಆಮೇಲೆ ಎದೆ ಮುಟ್ಟಿಕೊಂಡು, ಕಣ್ಣು ಮುಚ್ಚಿ ಹಲ್ಲು ಬಿಟ್ಟರು. ಸಂಗಪ್ಪನಿಗೆ ಏನೂ ಅರ್ಥವಾಗಲಿಲ್ಲ. ಕರೆತಂದ ವ್ಯಕ್ತಿಯ ಕಡೆ ನೋಡಿದರು: ಆತ ವಿವರಿಸಿದ: “ನಿಮ್ಮಂಥವರನ್ನು ನೋಡಿ ಮನಸ್ಸಿಗೆ ಮಹದಾನಂದವಾಗಿದೆ ಅಂತ ಅವರು ಹೇಳ್ತಿದಾರೆ.”

ಆಗ ಸಂಗಪ್ಪ ತಾನೂ ಕೈ ಎತ್ತಿ ಎದೆ ಮುಟ್ಟಿಕೊಂಡು, ಕಣ್ಣುಮುಚ್ಚಿ ಹಹ್ಹಹ್ಹ ಎಂದು ದೊಡ್ಡದಾಗೇ ನಕ್ಕ.

ವಿನೋದಾನಂದರಿಗೆ ಕಸಿವಿಸಿಯಾಯಿತು, ಮುಖ ಸಿಂಡರಿಸಿಕೊಂಡು ಯಾಕಿದೆಲ್ಲ ಎಂಬಂತೆ ಕೈಯಲ್ಲಿ ಸನ್ನೆ ಮಾಡಿದರು. ವಿನೋದಾನಂದ ಶಿಷ್ಯ ವಿವರಿಸಿದ: “ಯಾಕಿದೆಲ್ಲ ಅಂತ ಕೇಳ್ತಿದಾರೆ?”

ಸಂಗಪ್ಪ ವಿವರಿಸಿದ: “ನಾನೂ ಅದೇ ಹೇಳಿದ್ದು – ನಿಮ್ಮಂಥವರನ್ನು ನೋಡಿ ಮನಸ್ಸಿಗೆ ಮಹದಾನಂದವಾಗಿದೆ ಅಂತ.”

ಶಿಷ್ಯ ತಲೆ ಚಚ್ಚಿಕೊಂಡ: ಸಂಗಪ್ಪ ತಕ್ಷಣ ಕೇಳಿದ: “ಹಾಗೆ ತಲೆ ಚಚ್ಕಂಡ್ರೆ ಏನರ್ಥ ಈ ಆಶ್ರಮದಲ್ಲಿ?”

ಶಿಷ್ಯನಿಗೆ ಸಿಟ್ಟು ಬಂತು. “ಹುಡುಗಾಟ ಆಡ್ಬೇಡಿ ನೀವು ಮಾತಾಡಿ ಪರವಾಗಿಲ್ಲ. ನಮ್ಮ ಗುರುಗಳು ಮಾತ್ರ ಮಾತಾಡಲ್ಲ ಅಷ್ಟೆ ತಿಳೀತಾ?” ಎಂದ.

ಸಂಗಪ್ಪ “ಹಂಗೇ ಆಗ್ಲಿ” ಎಂದು ‘ಶಾಂತಂ ಪಾಪಂ’ ಎಂಬಂತೆ ಕೆನ್ನೆಗೆ ಏಟು ಹಾಕಿಕೊಂಡು ತಾನು ಬಂದ ಉದ್ದೇಶವನ್ನು ವಿವರಿಸಿದ.

ವಿನೋದಾನಂದರು ನಸುನಗುತ್ತ ಮೂರ್ನಾಲ್ಕು ಸಾರಿ ತಲೆದೂಗಿದರು. ಆಶೀರ್ವದಿಸುವಂತೆ ಕೈ ಎತ್ತಿದರು. ತಕ್ಷಣ ಚಪ್ಪಾಳೆ ತಟ್ಟಿದರು.

ಸಂಗಪ್ಪ ಬೆಪ್ಪಾಗಿ ಶಿಷ್ಯನ ಮುಖ ನೋಡಿದ. ಶಿಷ್ಯ ವಿವರಿಸಿದ; ನಮ್ಮ ಗುರುಗಳು ನಸುನಕ್ಕಿದ್ದಕ್ಕೆ ಅರ್ಥ ಹರ್ಷವಾಗಿದೆ ಅಂತ ತಲೆದೂಗಿದ್ದು – ಮೆಚ್ಚುಗೆ, ಕೈ ಎತ್ತಿದ್ದು – ಒಳ್ಳೆಯ ಕೆಲಸಕ್ಕೆ ಆಶೀರ್ವಾದ. ಇನ್ನು ಚಪ್ಪಾಳೆ ತಟ್ಟಿದ್ದು ಬಹಳ ಮುಖ್ಯವಾದ್ದು; ಇವರು ಅಪರೂಪಕ್ಕೊಮ್ಮೆ ಮಾಡುವ ಕೆಲಸ ಅದು…”

ಸಂಗಪ್ಪ ನೆಟ್ಟ ಕಣ್ಣು ನೆಟ್ಟಂತೆ ಬಿಟ್ಟ ಬಾಯಿ ಬಿಟ್ಟಂತೆ ಕೂತಿದ್ದಾಗ ಶಿಷ್ಯ ಮುಂದುವರೆಸಿದ: “ತುಂಬಾ ಸಂತೋಷದ ಜೊತೆಗೆ ಸಂಪೂರ್ಣ ಒಪ್ಪಿಗೆಯನ್ನು ಸೂಚಿಸುವ ಸಲುವಾಗಿ ಗುರುಗಳು ಹೀಗೆ ಮಾಡ್ತಾರೆ. ನೀವಿನ್ನು ಹೋಗಬಹುದು. ಅವರ ಆಶೀರ್ವಾದ ಒಪ್ಪಿಗೆ ಎಲ್ಲಾ ಸಿಕ್ಕಿದೆ. ನೀವು ಅದೃಷ್ಟವಂತರು.”

“ಅರೇ! ಇಷ್ಟಕ್ಕೆ ಹೋಗೋಹಾಗಿಲ್ಲ ಸ್ವಾಮಿ. ನಿಮ್ಮ ಗುರುಗಳನ್ನು ಕರಕಂಡು ಹೋಗ್ಬೇಕು; ಇವರ ಸಮ್ಮುಖದಲ್ಲೇ ಭೂದಾನ ನಡೀಬೇಕು. ಬೇಕಾದ್ರೆ ಮೌನವ್ರತ ಮುಗಿದ ಮೇಲೆ ಬರಲಿ” ಎಂದ ಸಂಗಪ್ಪ ವಿನೋದಾನಂದರ ಕಡೆ ತಿರುಗಿ, ದಯವಿಟ್ಟು ನೀವು ಬರಲೇಬೇಕು. ಇಲ್ಲವೆನ್ನಬಾರದು. ಭೂ ಸುಧಾರಣೇಲಿ ಜಮೀನು ಕಳಕೊಂಡು, ಅಷ್ಟೋ ಇಷ್ಟೋ ಉಳಿಸಿಕೊಂಡಿರೋ ನಾನು ಅದ್ರಲ್ಲೂ ಭೂದಾನ ಮಾಡ್ಬೇಕೂಂತಿದ್ದೀನಿ. ಇದೆಲ್ಲ ನಿಮ್ಮ ತತ್ವದ ಬಗ್ಗೆ ಇರೋ ಗೌರವದಿಂದ ಮಾಡ್ತಿರೋದು. ನಿಮ್ಮಂಥೋರಿಂದಲೇ ಇನ್ನೂ ಈ ದೇಶದಲ್ಲಿ ಎಲ್ಲೋ ಒಂದೊಂದು ಸಂದೀಲಿ ಶಾಂತಿ ಉಳಕೊಂಡಿದೆ. ಅದೇನೋ ಭೂಸುಧಾರಣೆ ತರೋಬದ್ಲು ಭೂದಾನ ಚಳುವಳಿನ ಜಾಸ್ತಿ ಮಾಡಿದ್ರಾಗಿತ್ತು. ನೀವೇ ಈ ದೇಶಕ್ಕೆ ದಿಕ್ಕು ದೆಸೆ ಎಲ್ಲಾ. ಬಂದೇ ಬರ್ಬೇಕು ಸ್ವಾಮಿ” ಎಂದು ಸಾಷ್ಟಾಂಗ ನಮಸ್ಕಾರ ಮಾಡಿದ.

ವಿನೋದಾನಂದರ ಕಣ್ಣಲ್ಲಿ ಹನಿಗೂಡಿತು. ಕನ್ನಡಕ ತೆಗೆದು ಒರೆಸಿಕೊಂಡರು. ಕನ್ನಡಕ ಹಾಕಿಕೊಂಡು ಚಪ್ಪಾಳೆ ತಟ್ಟಿದರು.

ಸಂಗಪ್ಪ ಧನ್ಯನಾದೆ ಎಂಬ ಭಾವದಿಂದ ಅವರ ಮುಖ ನೋಡಿದ. ಕಣ್ಣೀರಿನ ಅರ್ಥ ಮಾತ್ರ ಗೊತ್ತಾಗದೆ ಶಿಷ್ಯನನ್ನು ಸನ್ನೆಯಲ್ಲೇ ಕೇಳಿದ: ಶಿಷ್ಯ ಅರ್ಥ ಹೇಳಿದ: “ನಿಮ್ಮ ಮಾತು ಕೇಳಿ ಅವರಿಗೆ ಆನಂದಾತಿರೇಕದಿಂದ ಹಾಗಾಗಿದೆ ಅಷ್ಟೆ ದುಃಖದಿಂದ ಅಂತ ಭಾವಿಸಬೇಡಿ. ನಮ್ಮ ಗುರುಗಳ ಹೆಸರೇ ವಿನೋದಾನಂದರು ತಾನೆ? ಇನ್ನು ನೀವು ಹೊರಡಬಹುದು. ಆಮೇಲೆ ಗುರುಗಳು ಬರೋ ದಿನವನ್ನು ತಿಳಿಸಲಾಗುತ್ತೆ.”

ಸಂಗಪ್ಪ ಮತ್ತೊಮ್ಮೆ ನಮಸ್ಕರಿಸಿ ಹೊರಬಿದ್ದ.
* * *

ಯಥಾ ಪ್ರಕಾರ ಊರಲ್ಲಿ ಸಂಭ್ರಮದ ವಾತಾವರಣ, ಹೆಚ್ಚು ಕೆಲಸಕ್ಕೆ ಬರದ ಜಮೀನನ್ನು ಭೂದಾನಕ್ಕೆ ಅಣಿಗೊಳಿಸಿದ ಸಂಗಪ್ಪ, ಶಾನುಭೋಗರಿಗೆ ಕಿವಿಮಾತು ಹೇಳಿದ; “ನಿಮಗೆ ಎರಡು ಎಕರೆ ನೀರಾವರಿ ಸ್ವಾಮಿ, ಆದರೆ ಸಭೇಲಿ ನಿಮ್ಮ ಹೆಸರನ್ನ ಕಡೇಲಿ ಕರೆಯೊ ಹಾಗೆ ಮಾಡ್ತೇನೆ. ಮೊದಲು ಹರಿಜನರದೇ ಇರಲಿ, ಹೇಗಿದೆ ನನ್ನ ಪ್ಲಾನು?”

ಶಾನುಭೋಗರು ‘ಮೊದ್ಲಾದ್ರೇನು ಕಡೇಲಾದ್ರೇನು ನೀರಾವರಿ ಜಮೀನು ತಾನೆ. ಅದು ಮುಖ್ಯ’ ಎಂದುಕೊಂಡು “ನಿಮ್ಮ ಪ್ಲಾನ್ ಯಾವಾಗೂ ಸರ್ಯಾಗೇ ಇರುತ್ತೆ ಬಿಡಿ. ಭೂದಾನ ಮಾಡ್ದಂಗೂ ಆಯ್ತು. ದೊಡ್ಡ ಮನುಷ್ರಾಗಿ ಉಳಿದ ಜಮೀನು ಭದ್ರ ಮಾಡ್ಕೊಂಡಂಗೂ ಆಯ್ತು” ಎಂದು ನಕ್ಕರು.

ಆಮೇಲೇನಾಯ್ತು ಅನ್ನೋ ಕುತೂಹಲ ನಿಮಗೆ ಇರಲಾರದು. ಇಷ್ಟು ಹೇಳಿದ ಮೇಲೆ ಮುಂದೇನು ನಡೇದೀತು ಅಂತ ನೀವೇ ಊಹಿಸಬಲ್ಲಿರಿ. ಸಂಗಪ್ಪನ ಕೆಲಸ ಸುಸೂತ್ರವಾಗಿ ನಡೀತು ಅವನ ಅಭೀಷ್ಟದಂತೆ, ಎಂದು ಹೇಳಿದರೆ ಸಾಕಲ್ಲವೆ? ಕೆಲವು ಸಾರಿ ತೀರಾ ಹಿಂಜೋದು ಸರಿಯಲ್ಲ. ಇದೂ ಅಂಥದೇ ಸಂದರ್ಭ. ಯಾಕೇಂದ್ರೆ ಭೂಸುಧಾರಣೆ. ಗಾಂಧೀಗುಡಿ ಸಮಾರಂಭಗಳ ಪರಿಚಯ ಇರುವಾಗ ಇದರಲ್ಲಿ ಇನ್ನೇನು ವಿಶೇಷ ಹುಡುಕೋಕೆ ಸಾಧ್ಯ ಹೇಳಿ ಮತ್ತೆ? ಅದಕ್ಕೆ ಒಂದೇ ಮಾತು ಹೇಳಿ ಮೊಟಕು ಮಾಡಿದ್ದು. ಸ್ಟಾಂಪ್‌ ಹಚ್ಚೋಣಾಂತ ಸ್ವಲ್ಪ ನಾಲಗೆಗೆ ಹೀಗಂದು ಅಂಟಿಸಿದರೆ ಸಾಕು. ಅದರ ಬದಲು ನಾಲಗೆಗೆ ಚೆನ್ನಾಗಿ ತಿಕ್ಕಿ ಅಂಟಿಸೋಕೆ ಹೋದ್ರೆ ಏನಾಗುತ್ತೆ ಹೇಳಿ? ಗಮ್ಮು ಸ್ಟಾಂಪಿನ ಬದಲು ನಾಲಗೇಲಿರುತ್ತೆ. ಹಾಗೇ ಇದೂನು ಸಾಕಲ್ಲವೆ ಈ ಸಭೆಯ ಸಂಗತಿ?
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ