ನಾಡಿಗೆ ನಾಡೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂಥ ಕೆಲಸ ಮಾಡಿದ ಸಂಗಪ್ಪ ದಿನ ಬೆಳಗಾಗುವುದರೊಳಗಾಗಿ ಸುಪ್ರಸಿದ್ಧನಾಗಿದ್ದ. ಅವನ ಈ ಊರೂ ಅಷ್ಟೆ, “ಸ್ವಾಮಿ, ಸಂಗಪ್ಪನೇನೋ ಸುಪ್ರಸಿದ್ಧನೋ ಕುಪ್ರಸಿದ್ದನೋ ಆದ; ಅದು ಪತ್ರಿಕೇಲೂ ಬಂತು; ಆದರೆ ಹರಿಜನ ಪೂಜಾರಿಯ ಗತಿ ಏನಾಯ್ತು? ಅದನ್ನು ಯಾವ ಪತ್ರಿಕೇನೂ ಹೇಳಿಲ್ಲ. ಯಾವ ನಾಯಕನೂ ಕೇಳಲ್ಲವಲ್ಲ?” ಇದು ನಿಮ್ಮ ಪ್ರಶ್ನೆಯಿರಬೇಕು. ನಂಗೊತ್ತು. ಇಲ್ಲೀವರೆಗೆ ಸಂಗಪ್ಪನ ಸಾಹಸಗಳ ಪರಿಚಯ ಮಾಡಿಕೊಂಡ ನಿಮಗೆ ಈ ಪ್ರಶ್ನೆ ಎದ್ದಿದ್ದರೆ ತೀರಾ ಸಹಜ. ನಿಜ, ಯಾವ ನಾಯಕರೂ ಈ ಹರಿಜನ ಪೂಜಾರಿಯ ಬಗ್ಗೆ ಕೇಳಲಿಲ್ಲ; ಮುಂದೆಯೂ ಕೇಳದೆ ಇರಬಹುದು. ಆದರೆ ಅದೇ ಊರಿನ ಹುಡುಗರು – ಅದೇ ರಾಜೇಂದ್ರನ ಬಳಗದವರು – ಕಾಳಜಿವಹಿಸಿದರು. ಇದರ ಹಿಂದಿರೊ ಸೂಕ್ಷ್ಮಾನ ಬಯಲಿಗೆಳ್ಯೋಕೆ ಪ್ರಯತ್ನಿಸಿದರು. ಗಾಂಧಿಗೆ ಕಟ್ಟಿದ್ದು ಗುಡಿ ಅಲ್ಲ ಗೋರಿ.. ಎಂದೇ ಬಹಿರಂಗವಾಗಿ ಅಂದರು. ಹೀಗೆ ಪೂಜುಸ್ತೀವಿ ಅಂತ ಅವರನ್ನು ದೂರದಲ್ಲಿಡ್ತೇವೆ. ನಮ್ಮೊಳಗೆ ಒಬ್ಬನಾಗಿ ನೋಡದೆ, ಶೋಧನೆ ನಡೆಸದೆ ಆತ್ಮವಂಚನೆ ಮಾಡ್ಕೊಳ್ತೇವೆ -ಹೀಗೆ ಏನೇನೊ ಹೇಳಿದರು. ಆದರೆ ಅವರ ಮಾತು ಎಷ್ಟು ಜನಕ್ಕೆ ತಲುಪಿತೋ ಗೊತ್ತಿಲ್ಲ. ಹರಿಜನ ಪೂಜಾರಿಗಂತೂ ಅನುಭವಕ್ಕೆ ಬಂತು.
ಒಂದು ಹದಿನೈದು ದಿನ ಈ ಊರಿಗೆ ಜನರು ಬಂದು ಹೋದರು; ಗುಡಿ ನೋಡಿದರು; ಕೆಲವರು ಪೂಜೇನೂ ಮಾಡಿಸಿದರು: ದಕ್ಷಿಣೆ ಕೊಟ್ಟರು. ಇನ್ನು ಕೆಲವರಿಗೆ ಕುತೂಹಲ ಮಾತ್ರ ಇತ್ತು. ಕೆಲವರು ಹರಿಜನ ಪೂಜಾರಿ ಅಂತ ದೂರವೇ ನಿಂತರು. ಭಕ್ತಿ ಅನ್ನೋದು ಟನ್‌ಗಟ್ಟಲೆ ಇದ್ದರೂ ಪೂಜೆ ಮಾಡಿಸಲಿಲ್ಲ. ಇನ್ನು ಕೆಲವು ಜನ ಪೂಜಾರಿಯ ಅನುಭವ ಕುರಿತು ಕೇಳಿ ಗುರುತು ಹಾಕಿಕೊಂಡರು. ಪೂಜೆಯ ದಕ್ಷಿಣೆಗಿಂತ ಕೊಟ್ಟ ಭಕ್ಷೀಸೆ ಹೆಚ್ಚಾಗಿತ್ತು. ಹರಿಜನ ಪೂಜಾರಿಯಾಗಿ ಮೆಟ್ಟು ಹೊಲೆಯೋದು ತಪ್ಪಿತು ಅಂತ ಖುಷಿಪಟ್ಟ. ದುಡ್ಡು ಹೆಚ್ಚಾದ ದಿನ ಹೆಂಡ ತಂದು ಗಾಂಧಿಗೆ ನಮಸ್ಕಾರ ಮಾಡಿ “ಎಲ್ಲ ನಿನ್ನ ದಯೆ ಮಾಸೋಮಿ” ಅಂತ ಹೇಳಿ ಹಾಕ್ಕೊಂಡ.
ಆದರಿದೆಲ್ಲ ಎಷ್ಟು ದಿನ ನಡೆದೀತು? ಜನರ ಕುತೂಹಲ ಕರಗಿತು. ಜನ ಬರೋದು ತೀರಾ ಅಪರೂಪವಾಯ್ತು. ಅದೇ ಊರಿನ ಜನರಂತೂ ಈ ‘ಪೂಜಾರಿ’ ಇದಾನೇಂತೆ ಈ ಕಡೆ ಸುಳೀಲಿಲ್ಲ. ಆ ಕಡೆ ಮೆಟ್ಟು ಹೊಲೆಯೋಣ ಅಂದ್ರೆ ತಮ್ಮ ಜನವೇ ಹೇಳ್ತಾರೆ. “ಪೂಜಾರಪ್ಪ ಆಗಿರೋನು ಇಂಥ ಕೆಲ್ಸ ಮಾಡ್ಬಾರ್ದು. ಆಮ್ಯಾಕೆ ಒಂದಾಗೊಂದಾದಾತು.” ಈ ಮಾತು ಕೇಳ್ಕೊಂಡಿರೋಣಾಂದ್ರೆ ಹೊಟ್ಟೆ ಕೇಳೋಹಾಗಿಲ್ಲ. ಸಂಗಪ್ಪ ಸ್ವಾಮಿ ನೀನೇ ಗತಿ ಅಂತ ಅವನ ಬಳಿ ಬಂದ. ಸಂಗಪ್ಪ ಸೆಟೆಗೊಂದು ಹೇಳಿದ:
“ಎಲ್ಲೋ ಮೆಟ್ಟೊಲ್ಕೊಂಡ್ ಕುಂತಿದ್ದೋನ್ನ ತಂದು ಪೂಜಾರಿ ಮಾಡಿದ್ದೀನಿ. ನಮ್ಮೂರ್ ಜನ ಒಳಗೊಳಗೇ ಎಷ್ಟು ಅಂದ್ಕಂಡವ್ರೆ ಅಂತ ನಿಂಗೊತ್ತೇನೋ ? ನನ್ನ ಎದುರು ಮಾತಾಡಂಗಿಲ್ಲ ಅಂತ ಸುಮ್ನೆ ಮುದ್ರಿಕೊಂಡವ್ರೆ. ಇಷ್ಟುಪಕಾರ ಮಾಡಿದ್ದೀನಿ ನಿಂಗೆ; ಹೋಗ್ ಹೋಗಲೇ ಯಾವ ಜನ್ಮದ ಪುಣ್ಯಾನೊ ನಿಂದು; ಹೋಗೊ ಸುಮ್ಕೆ, ಯಾರಾನ ಯಾವತ್ತಾದ್ರೂ ಈ ಕೆಲ್ಸ ಮಾಡಿದ್ರೇನೋ ಹನುಮ?”
“ಸೋಮೇರ, ಬೇಕಾದ್ರೆ ಹೊತ್ತಾರೆಯಿಂದ ಚಂಜೆವರ್ಗೆ ನಿಮ್ಮ ಪೂಜೆ ಮಾಡ್ಕಂಡಿರ್ತೀನಿ, ಅದು ಮಾತ್ರ ಬ್ಯಾಡ್ರ ಬುದ್ಧಿ.”
-ಆಂಗಲಾಚಿದ ಹನುಮ; ಸಂಗಪ್ಪ ಜಪ್ಪೆನ್ನಲಿಲ್ಲ.
“ಬ್ಯಾಡ್ದಿದ್ರೆ ನಂಗೇನ್ ಹೇಳ್ತೀಯ? ಇದೊಂದ್ ಕ್ರಾಂತಿ ಮಾಡಿದ್ದೀನಿ ಕಣೋ. ಇದೆಲ್ಲ ನಿಮ್ಮಂಥ ದಡ್ಡ ಮುಂಡೇವ್ಕೆ ಹೆಂಗ್ ಗೊತ್ತಾಗ್ತೈತೆ? ನಿನ್ನ ತಲೇಲಿ ಸಗಣಿ ಐತಿ ಸಗಣಿ. ನಮ್ಮೂರಾಗೊಂದು ಕ್ರಾಂತೀನೆ ಆಗಿದ್ದಾಗ ಬಂದಿಲ್ಲಿ ಪೂಜಾರ್ಕೆ ಬ್ಯಾಡ ಅನ್ನಾಕ್ ನಾಚ್ಗೆ ಆಗಲ್ವ? ಎದ್ದೋಗ್ಲೆ ಸುಮ್ಕೆ.”
ಏನೂ ಪ್ರಯೋಜನವಿಲ್ಲಾಂತ ಬಂದ. ಗಾಂಧಿ ಗುಡಿ ಹತ್ರ ಸುಮ್ಕೆ ಕೂತ್ಕೊಳ್ಳೋದು, ಮಲಗೋದು, ಹೊರಳಾಡೋದು, ಬಂದು ಅಳೋ ಹೆಂಡ್ತಿ ಮಕ್ಕಳಿಗೆ ಸಮಾಧಾನ ಮಾಡೋದು ಇಷ್ಟೇ ಆಯ್ತು ಹನುಮನ ಬದುಕು.
ನಮ್ಮ ರಾಜೇಂದ್ರನ ಬಳಗ ಇದನ್ನು ಗಮನಿಸಿತು. ಬಂದು ಧೈರ್ಯ ಹೇಳ್ತು. ಆದ್ರೇನ್ ಬಂತು? ಹೊಟ್ಟೆಪಾಡು? ಸ್ವಲ್ಪ ಪುಡಿಗಾಸು ಕೊಟ್ಟರು. “ಈ ಪೂಜಾರಿ ಕೆಲ್ಸ ಬಿಟ್ಬಿಡು; ನಿನ್ನ ಕೆಲ್ಸನಾದ್ರು ಮಾಡಿದ್ರೆ ಹೆಂಗೊ ಹೊಟ್ಟೆ ಹೊರೀಬಹುದು. ಮೊದ್ಲಿನಂಗೆ ಕೂಲಿನಾಲಿ ಮಾಡು ಪರವಾಗಿಲ್ಲ” ಎಂದರು. ಅದಲ್ಲದೆ ಬೇರೆ ದಾರಿಯಿರಲಿಲ್ಲ. ಬೇರೆ ಪೂಜಾರಿಗಳಿಗೆ ಸುಗ್ಗೀಲಿ ಕೊಟ್ಟಂತೆ ಕಾಳುಕಡ್ಡಿಯನ್ನು ಕೊಡಲಿಲ್ಲ, ಕೇಳೋದಿಕ್ಕೆ ಹೋದಾಗ “ನೀನಿನ್ನು ಯಾವ ಘನಂದಾರಿ ಹೋಗೋ. ಒಂದು ಮಂತ್ರ ಹೇಳಾಕ್ ಬರಲ್ಲ. ಪೂಜಾರಿನಂತೆ” ಅಂತ ಒಬ್ಬರು ಅಂದ್ರೆ ಇನ್ನೊಬ್ಬರು “ಮಂತ್ರ ಕಲ್ತಾನು ಕಷ್ಟಬಿದ್ದು, ಆದ್ರೆ ಪೂಜಾರಿ ಅಂತ ಒಪ್ಕೊಳ್ಳೋಕಾಗ್ತೈತಾ ?” ಎಂದರು.
ಕಡೆಗೆ ಕೂಲಿನಾಲಿ, ಮೆಟ್ಟು ಹೊಲ್ಯೋದೆ ಗತಿಯಾಯ್ತು. ಹೀಗಾಗಿ ಗಾಂಧಿ ಗುಡಿ ಮುಂದೆಯೇ ಮೆಟ್ಟು ಹೊಲೆಯೋಕೆ ಶುರುಮಾಡಿದ. ಸಂಗಪ್ಪ “ಏನಾರ ಮಾಡ್ಕ ಹೊರ್ಗಡೇರು ಯಾರಾನ ಕೇಳಿದ್ರೆ ಹರಿಜನ ಪೂಜಾರಿ ಅಂತ ಹೇಳು; ಅಷ್ಟೆ” ಎಂದ.
ಈಗ ಗಾಂಧೀಗುಡಿ ಹಾಳು ಸುರೀತಿದೆ, ಕೂಲಿನಾಲಿ ಇಲ್ಲದ ದಿನ, ಪೂಜಾರಿ, ಗುಡಿಯ ಮುಂದೆ ಮೆಟ್ಟು ಹೊಲ್ಯೊ ಸಾಮಗ್ರಿ ಸಮೇತ ಗಿರಾಕಿಗಳಿಗೆ ಕಾಯ್ತಾ ಕೂತಿರ್ತಾನೆ.
* * *
ಈ ಪ್ರಸಂಗ ಇಷ್ಟಕ್ಕೇ ಮುಗೀತು ಅಂದ್ಕೋಬೇಡಿ. ರಾಜೇಂದ್ರನ ಬಳಗ ಇರುವಾಗ ಇಷ್ಟಕ್ಕೇ ಮುಗ್ಯೋದು ಹೇಗೆ ಸಾಧ್ಯ? ಈ ಗಾಂಧೀ ಗುಡಿಪೂಜಾರಿಯ ಸ್ಥಿತಿಗತಿ ಕುರಿತು ಪತ್ರಿಕೆಗಳಿಗೆ ಒಂದು ಪತ್ರ ಬರೆದೇಬಿಟ್ಟರು. ಅದು ಪ್ರಕಟವೂ ಆಯ್ತು. ಸಂಗಪ್ಪನಿಗೆ ಈಗ ಇದೂ ಒಂದು ಸವಾಲು.
“ಈ ನನ್ ಮಕ್ಕಳ ಚಮ್ಡಾ ನಿಕಾಲ್ ಮಾಡ್ತೀನಿ ನೋಡ್ರಿ” ಅಂದ ಶಾನುಭೋಗರ ಬಳಿ.
“ಇವ್ರಿಗೆ ಮಾಡೋದು ಇರ್ಲಿ ಸಾವ್ಕಾರ್ರೆ. ಈಗ ಪತ್ರಿಕೇಲಿ ನೋಡಿ ಯಾರಾದ್ರೂ ಬೇರೆ ಊರಿನವರು ನೋಡೋಕೆ ಬರಬಹುದು. ಅದ್ರಿಂದ ಸರ್ಯಾಗಿ ವ್ಯವಸ್ಥೆ ಮಾಡಿ” ಎಂದರು ಶ್ಯಾನುಭೋಗರು; “ಹರಿಜನರಿಗೆ ಅನ್ಯಾಯ ಆಗಿದೆ ಅಂದ್ರೆ ಸರ್ಕಾರ ಸುಮ್ನೆ ಕೂರೋಕಾಗೋಲ್ಲ. ಅದುನ್ನೂ ತಿಳ್ಕಳ್ರಿ” ಎಂದೂ ಎಚ್ಚರಿಸಿದರು.
ಇಬ್ಬರೂ ಸಮಾಲೋಚಿಸಿದರು. ಕಡೆಗೆ ತೀರ್ಮಾನಕ್ಕೆ ಬಂದು ಹನುಮನಿಗೆ ಹೇಳಿ ಕಳಿಸಿದರು; ಹನುಮ ಬಂದ.
“ಯಾಕ್ ಬುದ್ಧೇರ ಏನಾರ ಮೆಟ್ಟು ಅರ್ದಿತ್ರಾ?” ಎಂದ.
“ನಿನ್ನ ತಲೆ ಹರ್ಯುತ್ತೆ. ಮೊದ್ಲು ಹೇಳೋದ್ ಕೇಳಲೆ”
“ಹೇಳ್ರಿ ಬುದ್ಧಿ.”
“ಏನ್ ಮಾಡ್ತಿದ್ದೆ ಈಗ ?”
“ಯಾರೊ ಮೆಟ್ಟು ಅರ್ದೋಗಿತ್ರ: ಅಂಗೇ ಒಲೀತಾ ಕುಂತಿದ್ದೆ.”
“ಇವತ್ತಿಂದ ಅದೆಲ್ಲ ಕಟ್ಟಿಟ್‌ಬಿಡು. ನಿಂಗೆ ಹೊಟ್ಟೆ ಪಾಡಿಗೆ ಏನೇನ್ ಬೇಕು ಎಲ್ಲಾ ಕೊಡ್ತೀನಿ ಮುಂದೆ ಹೇಳಾವರ್ಗೂ ಬರೀ ಪೂಜೇನೆ ಮಾಡ್ಬೇಕು. ಶಾನುಭೋಗರು ನಿಂಗೆ ಮಂತ್ರ ಹೇಳ್ಕೊಡ್ತಾರೆ. ಎರಡು ದಿನ್ದಾಗ್ ಕಲ್ತ್‌ಕಾಬೇಕು.”
“ಮಂತ್ರಾನ? ನಂಗೆ ನಾಲ್ಗೇನೆ ತಿರಾಗಿಲ್ವಲ್ರ ಬುದ್ಧಿ.”
“ತಿರುಗ್ದೆ ಇದ್ರೆ ಇಕ್ಕಳ ತಗಂಡ್ ತಿರುಗುಸ್ತೀವಿ, ಅಂಗೊಂದೆರಡು ಕಲ್ತ್ಕೊ. ಇನ್‌ಮ್ಯಾಲೆ ಎರಡು ದಿನ ನಮ್ಮನೆ ಹಜಾರ್ದಾಗೇ ಇರು. ರಾತ್ರಿ ಎಲ್ಲ ಮಲಗಿದ್ಮೇಲೆ ನಿಂಗೆ ಮಂತ್ರದ ಪಾಠ.”
ಸಂಗಪ್ಪನಿಂದ ಶಾನುಭೋಗರಿಗೆ ಹಣ ಬಂತು; ಹನುಮ ಮಂತ್ರ ಕಲ್ತಿದ್ದೂ ಆಯಿತು. ಶಾನುಭೋಗರು ಒಂದೈದು ನಿಮಿಷಕ್ಕೆ ಆಗೋವಷ್ಟು ಕಲಿಸಿ, “ಸ್ಪಷ್ಟವಾಗಿ ಹೇಳ್ಬೇಡ; ಗೊಣಗಿಕೊಂಡಂತೆ ಹೇಳು: ತಪ್ಪುಗಳು ಯಾರ್ಗೂ ಗೊತ್ತಾಗೊಲ್ಲ” ಅಂತ ಸೂಚನೆ ಕೊಟ್ಟರು.
ಇದಾದ ಕೂಡಲೆ ಸಂಗಪ್ಪನವರ ಸವಾರಿ ರಾಜಧಾನಿಗೆ ಆಗಮಿಸಿತು. ಗೋಂದಯ್ಯನವರಾದಿಯಾಗಿ ನಾಯಕರ ಭೇಟಿ ಮಾಡಿಯಾಯ್ತು. ಈ ವೇಳೆಗೆ ಪತ್ರಿಕೇಲಿ ಅದೊಂದು ಚರ್ಚಾ ವಿಷಯವಾಗಿತ್ತಾದ್ದರಿಂದ `ಸರ್ವ ಪಕ್ಷಗಳ ಪ್ರತಿನಿಧಿಗಳಿಗೆ ಒಂದು ನಿಯೋಗ ಕಳಿಸಿ ಪರೀಕ್ಷಿಸಿ’ ಅಂತ ಒಂದು ಅರ್ಜಿಯನ್ನು ಸಂಗಪ್ಪನವರೇ ಸ್ವತಃ ಕೊಟ್ಟರು; ಒಪ್ಪಿಸಿದರು. ದಿನಾಂಕವೂ ಗೊತ್ತಾಯ್ತು, “ಸರ್ವಪಕ್ಷ ನಿಯೋಗ ನಿಜ ವಿಷಯ ತಿಳಿಯೋದಿಕ್ಕೆ ಹೋಗ್ತಾ ಇದೆ. ಪತ್ರಿಕೆಯವರೂ ಹೋಗಿ ಬನ್ನಿ” ಅಂತ ಗೋಂದಯ್ಯನವರ ಮನವಿ ಪತ್ರಿಕಾಲಯಗಳಿಗೆ ಹೋಯ್ತು.
ಸರ್ವಪಕ್ಷ ನಿಯೋಗ ಬರುವ ದಿನ ಊರಲ್ಲಿ ಅದೇನು ಹಸಿರು ತೋರಣ; ಅದೆಂಥ ಅದ್ಭುತ ಸ್ವಾಗತ ಕಮಾನು! ಗಾಂಧೀ ಗುಡಿಯಂತೂ ಬಣ್ಣಬಣ್ಣದ ದೀಪಾಲಂಕಾರದಿಂದ ಕಣ್ಣು ಕೋರೈಸುತ್ತ ಹರಿಜನ ಪೂಜಾರಿ ಅದೆಷ್ಟು ಶುಭ್ರನಾಗಿ ನಿಂತಿದ್ದಾನೆ! ಪೂಜೆ ಮಾಡುವಾಗ ಬಣ ಬಣಾಂತ ಮಂತ್ರವನ್ನೂ ಹೇಳ್ತಾನೆ; ಕೆಲವರು ಹಣ್ಣು ಕಾಯಿ ತಂದು ಪೂಜೆ ಮಾಡಿಸುತ್ತಿದ್ದಾರೆ! (ಇವರು ಸಂಗಪ್ಪನೇ ನಿಯೋಜಿಸಿದವರು ಎಂಬ ವಿಚಾರ ಬೇರೆ) ಇದಕ್ಕಿಂತ ಏನು ಬೇಕು ಪ್ರತ್ಯಕ್ಷ ಸಾಕ್ಷಿ?
ಸರ್ವಪಕ್ಷ ನಿಯೋಗ ಗಾಂಧೀಯೇ ಮೈಮೇಲೆ ಬಂದಂತೆ ಆಡಿತು. ಅದೇನು ಹೊಗಳಿಕೆ? ಗಾಂಧಿವಾದ ಕುರಿತು ಅದೆಷ್ಟು ಮಾತು! ಅದೆಷ್ಟು ಪ್ರಶಂಸೆ! ಸಂಗಪ್ಪನ ಬೆನ್ನಿಗೆ ಅದೆಂಥ ಬೇಷ್‌ಗಿರಿ!
ಈ ಗಾಂಧಿ ಮತ್ತಿನಲ್ಲಿರುವಾಗ ರಾಮ ಬಳಗ ತನ್ನ ಅಹವಾಲನ್ನು ಮಂಡಿಸಿತು. ಸಂಗಪ್ಪ ‘ಬೇಕಾದ್ರೆ ಊರಾಗೆಲ್ಲ ಕೇಳ್ರಿ’ ಎಂದೂ ಹೇಳಿದ. ಪತ್ರಿಕೆಯವರು ಜೊತೇಲಿ ಇದ್ದದ್ದರಿಂದ ಆ ಕೆಲ್ಸಾನೂ ಮಾಡೋಣ ಎಂದುಕೊಂಡು ಊರೊಳಗೆ ಹೋದ ಸಮಿತಿಗೆ ಸಂಗಪ್ಪನ ಪರವಾದ ಮಾಹಿತಿಯೇ ಸಿಕ್ಕಿತು, ಎಲ್ಲಾ ಸುಸೂತ್ರವಾಗಿ ನಡೀತಾ ಇದೆ; ಹರಿಜನ ಪೂಜಾರಿಯ ಜೀವನ ಭದ್ರತೆಗೆ ಸಂಗಪ್ಪನವರೇ ವ್ಯವಸ್ಥೆ ಮಾಡಿದ್ದಾರೆ – ಮುಂತಾದ ಮಾಹಿತಿ.
ರಾಜೇಂದ್ರ ಬಳಗ ತನ್ನಾರಕ್ಕೆ ತಾನು ಪ್ರತಿಭಟನೆಯನ್ನು ತೋರಿಸಿತು. “ಗಾಂಧೀ ಗುಡಿ ವ್ಯವಹಾರ, ಪೂಜಾರಿಗೆ ಪುರಸ್ಕಾರ ಸರ್ಯಾಗಿದ್ಯೊ ಇಲ್ಲವೋ ಅನ್ನೋದಷ್ಟೇ ಅಲ್ಲ ಪ್ರಶ್ನೆ. ಇಂಥ ಗುಡಿ ಕಟ್ಟೋದು ಪೂಜೆ ಮಾಡೋದು ಮುಖ್ಯ ಅಲ್ಲ. ತೋರಿಕೆ ಬದ್ಲು ಗಾಂಧಿ ಗುಣಗಳನ್ನು ರೂಢಿಸ್ಕೊಂಡ್ರೆ ಒಪ್ಪಬಹುದು.” ಎಂದು ಬಲವಾಗಿ ಹೇಳಿದಾಗ, ನಿಯೋಗ ಹೇಳಿತು; “ಅದು ನಮ್ಮ ಕೆಲಸ ಅಲ್ಲ. ನಮ್ಮ ಕೆಲಸ ಏನಿದ್ದರೂ ಸ್ಪಾಟ್ ಇನ್ಸ್‌ಪೆಕ್ಷನ್; ಅಷ್ಟೆ”
ಒಟ್ಟು ಕತೆಯ ನೀತಿ ಇಷ್ಟು; ಮತ್ತೊಮ್ಮೆ ಸಂಗಪ್ಪನ ಚರಿತ್ರಾರ್ಹ ಕೆಲಸ ಜಾಹೀರಾಯಿತು; ಕೆಲಕಾಲ ಕಳೆದ ನಂತರ ಮೂಲೆ ಹಿಡಿದಿದ್ದ ಮೆಟ್ಟು ಹೊಲ್ಯೂ ಸಾಮಗ್ರಿ ಗಾಂಧೀ ಗುಡಿಯ ಮುಂದೆ ಬಂತು; ಪೂಜಾರಿ ಗಿರಾಕಿಗೆ ಕಾಯ್ತಾ ಕೂತ್ಕಂಡಿದ್ದ. ಅವನ ಮಂತ್ರಕ್ಕೀಗ ಕೆಲಸವಿಲ್ಲ; ಸಂಗಪ್ಪ ಮೂಸಿ ನೋಡೋದಿಲ್ಲ.
ಅವನ ಮುಖದ ಸುಕ್ಕುಗಳಲ್ಲಿ ಮತ್ತದೇ ಬದುಕಿನ ಬರಹ!
*****
ಮುಂದುವರೆಯುವುದು

















