Home / ಕಥೆ / ಕಾದಂಬರಿ / ಸಂಗಪ್ಪನ ಸಾಹಸಗಳು – ೬

ಸಂಗಪ್ಪನ ಸಾಹಸಗಳು – ೬

ಸಂಗಪ್ಪನೇನೋ ರಾಜೇಂದ್ರ ಬರೆದ ಪದ್ಯಗಳನ್ನು ಸುಟ್ಟ; ಆದರೆ ರಾಜೇಂದ್ರನಂಥ ಜನರ ಮನಸ್ಸಿನಲ್ಲಿರೊ ಆ ಸತ್ವವನ್ನು ಸುಡೋದು ಅವನಿಂದ ಹೇಗೆ ಸಾಧ್ಯ? ಪ್ರತಿಭಟನೆಯ ಶಕ್ತಿ ಅದು ನಿಜಕ್ಕೂ ಪ್ರಾಮಾಣಿಕವಾಗಿದ್ದರೆ ಇಂಥ ದಬ್ಬಾಳಿಕೆಗಳನ್ನು ಎದುರಿಸುವ ಮತ್ತಷ್ಟು ಸತ್ವ ತುಂಬಿಕೊಳ್ಳುತ್ತೆ. ಸಂಗಪ್ಪ ಸುಟ್ಟ ಹಾಳೆಗಳಲ್ಲಿ ಬಡವರ ಬದುಕು ಇದೆ; ಅದರ ಪರವಾದ ಆಶಯಿದೆ. ನಿಜವಾದ ಹೃದಯ ಇದೆ; ಮನುಷ್ಯತ್ವ ಇದೆ. ಹೀಗೆಲ್ಲ ನಿಮಗೆ ಅನ್ನಿಸೋದಿಲ್ಲವೆ? ಹೀಗೆ ನಾನು ಕೇಳಿದಾಗ ರಾಮೂನ ಆ ಪದ್ಯವನ್ನು ಮುಂದಿಟ್ಟುಕೊಂಡು ಆತನ ಕಾವ್ಯಶಕ್ತಿಯ ವಿಮರ್ಶೆಗೆ ತೊಡಗಿ ಇಂಥ ತೂಕದ ಮಾತುಗಳಿಗೆ ಅದು, ಅವನು ಅರ್ಹವೆ ಅಂತ ಆಲೋಚಿಸಬೇಡಿ. ಯಾಕೆಂದ್ರೆ ನಾನು ಅದರ ಆಶಯ ಕುರಿತು ಮಾತ್ರ ಮಾತಾಡಿದ್ದೀನಿ. ಅಷ್ಟರ ಮಟ್ಟಿಗೆ ಮಾತು ಸೀಮಿತಗೊಳಿಸಿಕೊಳ್ಳೋಣ. ಆಗ ನನ್ನ ಮೇಲಿನ ಮಾತುಗಳಿಗೂ ಮರ್ಯಾದೆ ಇದೆ ಅನ್ನಿಸುತ್ತೆ. ಅಲ್ಲವೆ? ಅದೇನೇ ಆಗಲಿ, ರಾಜೇಂದ್ರನ ಪದ್ಯದ ಮೂಲಕ ಬಂದ ಪ್ರಾಥಮಿಕ ಪ್ರತಿಭಟನೇನ ಸುಟ್ಟು ಬೂದಿ ಮಾಡ್ತೀನಿ ಅನ್ನೊ ಅಹಮ್ಮಿಗೆ ಒಂದ್ಸಾರಿ ಅಟ್ಟ ಹತ್ತೊ ಅವಕಾಶ ಸಿಕ್ಕಿರಬಹುದು. ಆದರೆ ಇಂಥ ಅಹಮ್ಮಿಗೆ ಚಟ್ಟಕಟ್ಟೋ ದಿನವೂ ಇರುತ್ತೆ. ಇಂಥ ವಿಶ್ವಾಸ ನಮಗೆ ನಿಮಗೆ ಇರ್ಲಿ; ಇರ್ಬೇಕು. ಹಾಗೇ ನಮ್ಮ ರಾಜೇಂದ್ರನಿಗೂ ಇದೆ.

ಅವನಿಗೆ ಗೊತ್ತಾಯ್ತು ಪುಸ್ತಕ ನಾಪತ್ತೆ ಆಗಿರೋದು. ಮನೆಯಲ್ಲಿ ಕೇಳಿದ. ರೇಗಾಡಿದ; ಕಡೆಗೆ ಅಂಗಲಾಚಿದ; ಅಸಹಾಯಕತೆಯಿಂದ ಅತ್ತ ಆಗ ಅಮ್ಮ ಬಾಯ್ಬಿಟ್ಟಳು. ಹಿಂಗಾಯ್ತು ಮಗ ಅಂದಳು. ರಾಜೇಂದ್ರ ‘ಆ ಸಂಗಪ್ಪನ್ನ ಸಿಗಿದುಬಿಡ್ತೀನಿ’ ಅಂತ ಕೂಗಾಡ್ದ, ಉಳಿದ ಸ್ನೇಹಿತರೂ ಸಿಟ್ಟಿಗೆ ಸಿಟ್ಟು ಸೇರಿಸಿ ರಟ್ಟೆ ನೋಡ್ಕೊಂಡರು. ಆದರೆ ರಾಜೇಂದ್ರನ ಅಮ್ಮ ಕಂಡ ಇತಿಹಾಸ ದೊಡ್ಡದು. ತಿರುಗಿಬಿದ್ದವರ ಗತಿ ಏನಾಯ್ತು, ಸಂಗಪ್ಪ ಹೇಗೆ ಊರು ಬಿಡಿಸ್ದ, ಹೇಗೆ ಮನುಷ್ಯರನ್ನೇ ನಾಪತ್ತೆ ಮಾಡ್ದ ಅಂತ ಎಲ್ಲಾ ವಿವರಿಸಿ ಹೇಳಿದಳು. ‘ಈಗೆಷ್ಟೋ ವಾಸಿ. ಆದ್ರೂ ನನ್ನಂತೂ ಊರ್ ಬಿಡುಸ್ತಾನೆ. ಇಲ್ಲ ಸಾಯಿಸ್ತಾನೆ’ ಅಂದಾಗ ಎಲ್ರೂ ಯೋಚನೆ ಮಾಡೋ ಹಾಗಾಯ್ತು. ಸರಿ ಇನ್ನೇನು ಮಾಡೋದು. ಹಾಳೆ ಸುಟ್ಟರೆ ಸುಟ್ಟಂಗಾಯ್ತು- ಅಂತ ಕಾರ್ಯೋದ್ಯುಕ್ತರಾದರು. ಸಂಗಪ್ಪನ ಮೇಲಿನ ಹಾಡನ್ನು ಹುಡುಗ್ರಿಗೆಲ್ಲ ಕಲಿಸೋಣ ಎಂದುಕೊಂಡರು.

ರಾಜೇಂದ್ರ ಐದಾರು ದಿನ ಬೆಪ್ಪಾಗಿ ಇದ್ದ. ಅರಳೀಕಟ್ಟೆಯೂ ಖಾಲಿಯಾಗಿತ್ತು. ಬೇರೆ ಯಾರಾದ್ರೂ ಕೂತಿರ್ತಾ ಇದ್ರು. ಸಂಗಪ್ಪನ್ನ ಕಂಡಕೂಡ್ಲೆ ನಿಲ್ತಾ ಇದ್ರು; ಅಷ್ಟೆ. ರಾಜೇಂದ್ರನಿಗೆ ಜಂಘಾಬಲ ಉಡುಗಿ ಹೋಗಿದೆ ಅಂತ ಭಾವಿಸಿ ಸಂಗಪ್ಪ ಸಂತೋಷಪ್ಪನಾಗಿ ಒಂದು ದಿನ `ತನ್ನ ಮೇಲೆ ಕಟ್ಟಿದ’ ಹಾಡು ‘ಅರಸುಗಳಿಗಿಳಿದು ವೀರ ದ್ವಿಜರಿಗೆ ಪರಮವೇದದ ಸಾರ’ವನ್ನು ಗುನುಗ್ತಾ ಹೋಗ್ತಾ ಇದ್ದಾಗ ಇದ್ದಕ್ಕಿದ್ದಂತೆ ಷಾಕ್ ಆಗಿ ನಿಂತ್ಕಂಡು ನೋಡಿದ; ಕೇಳಿದ. ಹೌದು ಅದೇ ಹಾಡು; ದೂರದಲ್ಲಿ ಎಮ್ಮೆ ಕಾಯೋ ಹುಡುಗರು ಹಾಡ್ತಾ ಇದ್ದರು;
…..
ಕಂಡೋರ ಹೊಲದಲ್ಲಿ ಹಿಂಡೆಲ್ಲವ ದುಡಿದರೂ
ಬೀದಿಬೀದಿಲೆಲ್ಲ ಬೆವರಾಗಿ ಹರಿದರೂ
ಅವರೆಲ್ಲ ದುಡಿದದ್ದು ಇವನಿಗೆ ಬಂತು
ಮಿಂಡುಗಾರನ ಹೊಟ್ಟೆ ಮುಂದಕ್ಕೆ ಬಂತು ||ಸಾವ್ಕಾರ||

ಎಲಾ ಕಳ್ಳನನ್ ಮಕ್ಳ ಅಂದುಕೊಂಡು ಅವರ ಕಡೆಗೆ ಹೊರಟ; ಇವನು ಹೋಗ್ತಿರುವಾಗ ಹಾಡು ಮುಂದುವರೀತಾ ಇತ್ತು; ಹಿಂದಿನ ಸಾರಿ ಸಂಗಪ್ಪ ಈ ಭಾಗವನ್ನು ಕೇಳಿರಲಿಲ್ಲ.

ಸಾವ್‌ಕಾರನ ಹೊಟ್ಟೆ ಸೀಳಿ ನೋಡಿದರಲ್ಲಿ
ತುಂಬಿದ ಬಡವರ ಹೆಣಗಳು
ಲಕ್ಷಲಕ್ಷವನೆಲ್ಲ ಲೂಟಿ ಮಾಡಿದ ತೋಳ
ಮನುಷ್ಯರೆಲ್ಲರು ಬರಿ ನೊಣಗಳು ||
ಮಾನವತೆಯ ನುಂಗಿ ನೀರು ಕುಡಿದ ನಿನ್ನ
ಹೊಟ್ಟೆಯ ಬಗೆದೇವು ಸಿಟ್ಟಿಗೆದ್ದು
ಕರುಳು ಕರುಳನು ಕಿತ್ತು ಒಳಗೆಲ್ಲ ಹುಡುಕಿ
ಹೆಣಗಳಿಗೆ ಬದುಕ ಕೊಟ್ಟೆವು ||

ಎಮ್ಮೆಗಳ ಮೇಲೆ ಕೂತು ಭಾವಪೂರ್ಣವಾಗಿ ಹಾಡ್ತಿದ್ದ ಹುಡುಗರಿಗೆ ಹಿಂದುಗಡೆಯಿಂದ ವಾಕಿಂಗ್‌ ಸ್ಟಿಕ್‌ ಟಕ್ಕಂತ ಬಡಿದಾಗಲೇ ಗೊತ್ತಾಗಿದ್ದು ಹಾಡಿನ ಅಪಾಯ. ದಡಕ್ಕನೆ ಕೆಳಗೆ ಇಳಿದರು; ಮತ್ತೆ ಎರಡೆರಡು ಏಟು ಬಿತ್ತು. “ಯಾವನ್ಲೆ ಕಲ್ಸಿದ್ದು ನಿಮ್ಗೆ” ಎಂದಾಗ ಸಂಗಪ್ಪನ ದೃಷ್ಟಿಯ ಪುಂಡ ಹುಡುಗರ ಹೆಸರುಗಳು ಬಂದವು. “ಇನ್ನೊಂದ್ಸಾರಿ ಹೇಳಿದ್ರೆ ನಾಲಿಗೆ ಸೀಳ್ಸಿ ಊರ್ಮುಂದೆ ತೋರಣ ಕಟ್ಟಿಸ್ಬಿಡ್ತೇನೆ” ಎಂದು ಹುಡ್ಡರಿಕೆ ಹಾಕಿ ಹಿಂತಿರುಗಿದೆ. ಒಂದಷ್ಟು ದೂರ ಹೋದಮೇಲೆ ಮತ್ತೆ ಕೇಳಿಸಬೇಕೆ ಅದೇ ಹಾಡು! ಅದೇ ಹುಡುಗರು! ಮತ್ತೆ ಹೋಗೋಣವೆಂದುಕೊಂಡ. ಆದರೆ ರಾಜೇಂದ್ರನ ಸೈಕಲ್ ಸವಾರಿ ಪ್ರಸಂಗ ನೆನಪಿಗೆ ಬಂದು ಆದೆಲ್ಲಾ ಬೇಡ ಆನ್ನಿಸಿ ಉರೀತಾ ಹೊರಟ.

ಊರು ತಾನಂದುಕೊಂಡುದ್ದಕ್ಕಿಂತ ಜಾಸ್ತಿ ಮುಂದುವರೀತಿದೆ ಅನ್ನಿಸಿ ಒಂದು ಕ್ಷಣ ದಿಗಿಲು ಬಿದ್ದ. ಈ ಬಡ್ಡಿ ಮಕ್ಳಿಗೆ ಚಡ್ಡಿಕೊಂಡುಕೊಳ್ಳೊ ಯೋಗ್ತೆ ಇಲ್ಲದಿದ್ರೂ ಏನೆಲ್ಲ ಮಾಡುತ್ವೆ ಅಂತ ಹಿಡಿ ಶಾಪ ಹಾಕಿದ. ಚಡಪಡುಸ್ತಾನೆ ಹೊಲಾನೆಲ್ಲ ಸುತ್ತು ಹಾಕಿದ. ಹೇಗೆ ಇವರ ಆಟಗಳನ್ನೇ ಮಣ್ಣು ಮುಕ್ಸೋದು ಅಂತ ಲೆಕ್ಕಾಚಾರ ಹಾಕಿದ. ಏನೂ ಸ್ಪಷ್ಟವಾಗಿ ಹೊಳೀಲಿಲ್ಲ.

ಹೊಲದಿಂದ ಮನೆಯ ಕಡೆ ಹೊರಟಾಗ ಸಂಗಪ್ಪನ ಶಕ್ತಿಗೆ ಸವಾಲಾಗಿ ಅರಳಿಕಟ್ಟೆಯಲ್ಲಿ ಕೂತಿದ್ದರು ರಾಜೇಂದ್ರ, ಸೋಮು, ಭೀಮು ಇತ್ಯಾದಿ; ನೋಡಿದ, ನೋಡದವನಂತೆ ಹೊರಟ. ತಾನು ಬಂದರೂ ಮೇಲಕ್ಕೆ ಏಳದೆ ಯಥಾಪ್ರಕಾರ ಕಾಲು ಆಡುಸ್ತಾ ಕೂತಿದ್ದಲ್ಲದೆ ಅವರಲ್ಲೊಬ್ಬ ಸಿಗರೇಟು ಹಚ್ಚಿದ್ದು ಕಂಡಾಗ ಓಡಿ ಹೋಗಿ ಕಿತ್ತು ಎಸೀಲ ಅನ್ನಿಸ್ತು. ಅವರ ಬಳಿ ಹೋಗೋದಿಕ್ಕಾಗ್ದೆ ತಾನೇ ಬಿರಬಿರನೆ ಮನೆಯ ಕಡೆ ಹೊರಟ; ಇವನ ರಭಸದ ಹಿಂದೆಯೇ ಹಾಡು ಅಪ್ಪಳಿಸಿತು:

ಸಾಸ್ಕಾರ ಬಿಚ್ಚಿದ ಬೆಲೆ ಬಾಳೊ ಬಟ್ಟೆ
ಕಾಣಿಸ್ತು ನೋಡ್ರಣ್ಣ ದೊಡ್ಡ ಹೊಟ್ಟೆ ||…

ಈ ಸಾರಿ ಸಿಟ್ಟು ಹಾಡಿಗಷ್ಟೇ ಅಲ್ಲ. ಹಾದಿಗೆ ಹತ್ತಿರ ಇದ್ದ ಅರಳೀಕಟ್ಟೆಯ ಮೇಲೂ ಬಂತು. “ಮಾಡ್ತೀನಿ” ತಡಿ ಈ ಮಂಗಮುಂಡೆ ಮಕ್ಳಿಗೆ ಆ ಅರಳೀಕಟ್ಟೆ ಇದ್ರಲ್ವ ಅಲ್ಲಿ ಕೂತ್ಕೊಳ್ಳಾದು ಕಾಲ್ ಅಳ್ಳಾಡ್ಸಾದು; ಸಿಗರೇಟು ಸೇದೋದು; ಹಾಡೇಳಾದು” ಅಂತ ಒಳಗೆ ಗಟ್ಟಿಯಾಗ್ತ ಮನೆಗೆ ಬಂದು ಆಳುಗಳಿಗೆ ಆಜ್ಞೆ ಮಾಡೇಬಿಟ್ಟ:

“ರಾತ್ರೀಗೆ ಆ ಅರಳಿಕಟ್ಟೆ ಧ್ವಂಸ ಆಗ್ಬೇಕು.”

ಶಾನುಭೋಗರಿಗೆ ಹೇಗೋ ಗೊತ್ತಾಗಿ ಓಡಿಬಂದರು. ಅರಳಿಕಟ್ಟೆಯ ಪಾವಿತ್ರ್ಯ ಅದೂ ಇದೂ ಹೇಳಿ ತಾವೇ ರೋಸಿ ಹೋದರು. ಸಂಗಪ್ಪ ಒಂದೇ ಮಾತು ಹೇಳಿದ: “ಆದಕ್ಕೆ ಏನಾದ್ರೂ ಪ್ರಾಯಶ್ಚಿತ್ತ ಇದ್ರೆ ಹೇಳ್ರಿ ಸಾಕು.”

“ಅದೆಲ್ಲ ಆಮೇಲೆ; ಅದಕ್ಕೆ ನಾನಿದ್ದೀನಿ. ಆದ್ರೂ ಮರ ಕಡ್ಸೋದು ಅಂದ್ರೆ..”

“ಸರಿ, ಕಟ್ಟೆ ಇದ್ರೆ ತಾನೆ ಕೂತ್ಕೊಳ್ಳೋದು, ಅದನ್ನು ತಗ್ಸಿದ್ರಾಯ್ತು; ಮರ ಇರ್ಲಿ.”

“ಕಟ್ಟೆ ಕೀಳ್ಸಿದ್ರೂ ಪ್ರಾಯಶ್ಚಿತ್ತ ಮಾಡ್ಕೊಬೇಕು ಸಾವ್ಕಾರ್ರೆ, ಮರೀಬೇಡಿ.”

“ಸರಿ.”
* * *

ಬೆಳಗ್ಗೆ ಎದ್ದು ನೋಡಿದ ಅನೇಕರಿಗೆ ಆಶ್ಚರ್ಯ ಕಾದಿತ್ತು. ಅರಳಿಕಟ್ಟೆ ಕಿತ್ತು ಹಾಕಲ್ಪಟ್ಟಿತ್ತು; ಮರ ಮಾತ್ರ ಉಳಿದಿತ್ತು. ಮರಬೆಳೆದ ಮೇಲೆ ಕಟ್ಟಿಸಿದ್ದ ಕಟ್ಟೆಯಾದ್ದರಿಂದ ಸಮಸ್ಯೆಯೇನೂ ಆಗಲಿಲ್ಲ. ಊರಲ್ಲೆಲ್ಲ ಒಂದೇ ಸುದ್ದಿ ರಾಜೇಂದ್ರ ಮುಂತಾದವರು ಕೂತದ್ದರಿಂದ ಹೀಗಾಯ್ತು ಅನ್ನೋದು ಎಲ್ಲರಿಗೂ ಗೊತ್ತಾಯ್ತು. ಇದರಿಂದ ಊರಿಗೆ ಏನೇನು ಅಶುಭ ಕಾದಿದೆಯೋ ಅನ್ನೊ ಆತಂಕ ಜನಕ್ಕೆ. ಎಲ್ಲರೂ ಒಳಗೊಳಗೆ ಬೊಯ್ಕೊಳೋರೆ; ಸಂಗಪ್ಪನ್ನಲ್ಲ; ರಾಜೇಂದ್ರ ಮತ್ತು ಅವನ ಸ್ನೇಹಿತರನ್ನ. ಯಾರೊ ಕೆಲವರಿಗೆ ಸಂಗಪ್ಪನ ಮೇಲೆ ಸಿಟ್ಟಿದ್ದರೂ ಹೊರಗಡೆ ಅನ್ನೋ ಹಾಗಿಲ್ಲ; ಆಮೇಲೆ ಅನುಭವಿಸೋ ಹಾಗಿಲ್ಲ ಅದ್ರಿಂದ ತೆಪ್ಪಗಿದ್ದರು; ಕೆಲವರು ನಮ್ಮ ತರುಣ ಮಿತ್ರರನ್ನು ನೇರವಾಗಿ ಕೇಳಿಯೇಬಿಟ್ಟರು. “ಯಾಕ್ರಪ್ಪ ನಿಮ್ಗೆ ಇದೆಲ್ಲ? ಇವತ್ತು ಇದ್ದು ನಾಳೆ ನೀವು ಕೆಲಸಕ್ಕೆ ಹೋದ್ರೆ ಆಮೇಲೆ ನಾವೇ ತಾನೆ ಇರೋರು ಊರ್ನಾಗೆ.”

“ನಾವು ಎಲ್ಲಿಗೆ ಹೋದ್ರೂ ಇಲ್ಲಿಗೆ ಬಾರ್ತಾನೆ ಇರ್ತೀವಲ್ಲ ?” – ಇವರು ಉತ್ತರ ಕೊಟ್ಟರು.

“ಅದ್ಸರೀನಪ್ಪ; ಊರಿಗೆ ಏನಾದ್ರೂ ಕೆಟ್ಟಾಪತ್ತು ಬಂದ್ರೆ ಆರಳಿಕಟ್ಟೆ ಕೀಳ್ಸಿದ್ರಿಂದ?”

ಅಂಥಾದ್ದೇನೂ ಆಗೊಲ್ಲ, ಅದೆಲ್ಲ ಮೂಢನಂಬಿಕೆ ಅಂತ ಹೇಳಿದರೂ ಅವರು ನಂಬಬೇಕಲ್ಲ; ಆದರೂ ಇವರು ಸಮಾಧಾನವಾಗಿ ವಿವರಿಸಿದ್ದರು.

ಸಂಗಪ್ಪನಿಗೆ ತನ್ನ ಕೆಲಸದ ಬಗ್ಗೆ ತನಗೆ ಹೆಮ್ಮೆಯೆನಿಸಿತ್ತು. ಊರಿನ ಇತಿಹಾಸದಲ್ಲಿ ಇದೊಂದು ಅಪೂರ್ವ ದಾಖಲೆ ಅಂತ ಆನಂದದಲ್ಲಿ ತೇಲಾಡಿದ; ತಾನು ಏನು ಮಾಡಿದ್ರೂ ಊರುದ್ದಕ್ಕೂ ಒಂದು ನರಪಿಳ್ಳೇನೂ ಕಿಮಕ್ಕೆನ್ನೋಲ್ಲ ಇನ್ನು ಈ ಪುಂಡರ ಕತೆ ಮುಗೀತು ಅಂದ್ಕೊಂಡು ಹಾಯವಾಗಿ ನಿದ್ದೆ ಹೋದ. ಇವತ್ತು ಸ್ವಿಚ್ಚಿನ ತಂಟೆಗೆ ಹೋಗಲಿಲ್ಲ.

ಬೆಳಗ್ಗೆ ಎದ್ದು ತಿಂಡಿ ಕಾಫಿ ಮುಗಿಸಿ, ಸರ್ವಾಲಂಕಾರ ಭೂಷಿತನಾಗಿ ಒಂದು ಸಾರಿ `ಸ್ವಿಚ್ ಹಾಕಿ’ ಹೊರಗಡೆ ಹೊರಟ. ದೂರದಿಂದಲೆ ಹೇಳಹೆಸರಿಲ್ಲದಂತೆ ನಾಶವಾಗಿದ್ದ ಕಟ್ಟೆಯನ್ನು ನೋಡಿ ಎದೆಯುಬ್ಬಿಸಿ ಅದರ ಬಳಿ ಬಂದ; ಬರುವಾಗ ದಾರಿಯಲ್ಲಿ ಸಿಕ್ಕಿದ ಶಾನುಭೋಗರು, ಇನ್ನೊಂದಿಬ್ಬರ ಜೊತೆಯಲ್ಲಿ ಬಂದು ನಿಂತು “ನೋಡ್ರಿ, ನನ್ನ ತಂಟೆಗೆ ಬಂದ್ರೆ ಏನೆಲ್ಲ ಆಗ್ತೈತೆ. ಈ ಕಟ್ಟೆ ಕಟ್ಟಿದ್ದು ಯಾರು? ನಾನೇ. ಕೀಳ್ಸಿದ್ದು ಯಾರು? ನಾನೇ ತುಟಿಪಿಟುಕ್ಕೆಂದ್ರ ನಮ್ಮ ಜನ? ಇಲ್ಲ. ಯಾಕೆ? ನನ್ನ ಮ್ಯಾಲೆ ನಂಬಿಕೆ ಐತೆ. ಈ ಊರಿಗೆ ಏನೇ ಆದ್ರೂ ನಾನೇ ದಿಕ್ಕು ಅಂತ ನಂಬವ್ರೆ ನಮ್ಮ ಜನ, ಈ ಜುಜುಬಿ ಬಡ್ಡೆತ್‌ಗಳು ಪಟ್ಟಣಕ್ಕೆ ಹೋಗಿ ಎರಡಕ್ಷರ ಕಲ್ತು ಬಂದಿಲ್ಲಿ ಕಾಲಳಾಡ್ಸಿದ್ರೆ ಊರುದ್ಧಾರ ಆಗ್ತೈತಾ? ಹಿಂದ್ನಿಂದ ಆಳ್ದೋರು, ಈಗ ಸೇವೆ ಮಾಡ್ತಿರೋರು ನಾವೇ, ನಮ್ಮ ಮನೆತನ್ದೋರೆ. ಇಂಥ ನನ್ ಮೇಲೆ ಈ ಗೇಣುದ್ದ ಗಣೆಕಾರ್ರು ಸೇರ್ಕಂಡು ಮಸಲತ್ತು ಮಾಡ್ತಾರೆ, ಮಸಲತ್ತು ಇನ್ಮೇಲೆ ಕುಂತ್ಕಳ್ಳಿ ಅದೆಲ್ಲಿ ಕುಂತ್ಗಂಬ್ತಾರೊ…” ಎಂದು ಉದ್ದ ಭಾಷಣ ಮುಂದುವರುಸ್ತಾ ಇದ್ದಾಗಲೇ ಕೇಳಿಸಬೇಕೆ `ಹೊಟ್ಟೆ ಹಾಡು.’

“ಎಲ್ಲಿ? ಎಲ್ಲಿಂದ ಬಂತು?” ಎಲ್ಲರೂ ತಡವರಿಸಿದರು. ಕೆಲ ಕ್ಷಣಗಳಲ್ಲಿ ಗೊತ್ತಾಯ್ತು. ಹಾಡು ಅರಳೀಮರದ ಮೇಲಿಂದ ಬರ್ತಾ ಇತ್ತು. ಇವರನ್ನ ನೋಡದೆ ಎಲ್ಲೋ ನೋಡ್ತ ಏನೂ ಗೊತ್ತಿಲ್ಲದವರಂತೆ ಗೆಳೆಯರು ‘ಗಾನ ಸಮಾಧಿ’ಯಲ್ಲಿದ್ದರು.

ಇಷ್ಟು ಹೊತ್ತು ಉಬ್ಬಿಹೋಗಿದ್ದ ಸಂಗಪ್ಪನ ಕೊಬ್ಬಿನ ಕಂಠ ಭಂಗಗೊಂಡು ಬೇರೆ ದಾರಿ ಹಿಡೀತು. ಈಗಂತೂ ಬಾಯಿಮುಚ್ಚಿಕೊಂಡು ಹೋಗೋ ಹಾಗಿರಲಿಲ್ಲ. ತನ್ನ ಬಾಣ ಬಿಟ್ಟ; “ಈ ಎಳೆ ನಿಂಬೆಕಾಯಿಗಳಿಗೆಲ್ಲ ಹೆದ್ರುತೀನ ನಾನು, ಮಾಡ್ತೀನ್ ನೋಡ್ತಾ ಇರ್ರಿ, ಏನೋ ಹಾಳಾಗಿ ಹೋಗ್ಲಿ ಹುಡುಗ್ರು ಅಂತ ಸುಮ್ನಿದ್ರೆ ಮೇಲಕ್ಕೋಗಿದಾರೆ; ಅದೂ ಮರದ ಮೇಲಕ್ಕೆ” ಅಂತ ದೊಡ್ಡದಾಗಿ ಕೂಗಾಡ್ತ ಅಲ್ಲಿಂದ ಕಾಲು ಕಿತ್ತ. ಇನ್ನು ಆ ತರುಣರು ತಂಗಳು ತಿನ್ಸೋಕೆ ಶುರು ಮಾಡಿದ್ರೆ ಮತ್ತಷ್ಟು ಅವಮಾನವಾದೀತೆನ್ನಿಸಿರಬೇಕು.
* * *

ಬೆಳಗ್ಗೆ ಎದ್ದಾಗ ಈ ‘ಪುಣ್ಯಭೂಮಿ’ಯಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಯಾಗಿತ್ತು. ಕಟ್ಟೆ ಹೋಗಿತ್ತು; ಉಳಿದಿದ್ದ ಅರಳೀ ಮರಾನ ಬುಡ ಸಮೇತ ಕಡಿದು ಹಾಕಲಾಗಿತ್ತು. ಮರ ಕಡಿದು ಅಲ್ಲೇ ಬಿಟ್ಟಿದ್ದರೆ ಕೊಂಬೆ ಕೊರಡುಗಳ ಮೇಲೆ ಕೂತು, ಅವರು ಮತ್ತೆ ದೌಲತ್ತು ಮಾಡಿಯಾರು ಅಂತ ಅನ್ನಿಸಿರಬೇಕು, ಅದಕ್ಕೆ ಅಲ್ಲಿ ಏನೂ ಬಿಟ್ಟಿರಲಿಲ್ಲ.

ವಿಷಯ ತಿಳಿದ ಜನ ಅಲ್ಲಿ ಜಮಾಯಿಸಿದರು. ಕಟ್ಟೆ ಹೋಯ್ತು; ಹೋದ್ರೆ ಹೋಗ್ಲಿ ಅಂತಿದ್ರೆ ಮರಾನೂ ಹೋಯ್ತಲ್ಲ; ಏನು ಕೆಟ್ಟದ್ದು ಕಾದಿದ್ಯೋ ಈ ಊರಿಗೆ ಅನ್ನೋ ಆತಂಕ ಅನೇಕರಲ್ಲಿದ್ದಿತ್ತು. ಗುಜುಗುಜುವಿನೊಳಗೆ ಅದೆಷ್ಟೋ ಗುಸುಗುಸುಗಳಿದ್ದವು.

ಅಷ್ಟರಲ್ಲಿ ಕೇಳಿಸಿದ ತಮಟೆ ಸದ್ದು ಜನರನ್ನು ಎಚ್ಚರಿಸಿತು. ಮರ ಮಾಯವಾಗಿದೆ ಅಂತ ಯಾರೂ ಭಯಬೀಳಬಾರದೆಂದೂ ಊರಿಗೆ ಕೆಟ್ಟದಾಗದಂತೆ ಈಗಿಂದೀಗಲೇ ಬಲಿಕೊಡೋದ್ರಿಂದ ಹಿಡಿದು, ಊರ ಹಬ್ಬ ನವಗ್ರಹ ಪೂಜೆ – ಮತ್ತೆ ಏನೇನು ಬೇಕೊ ಎಲ್ಲವನ್ನೂ ‘ಧರ್ಮಾತ್ಮ’ರಾದ ಸಾವ್ಕಾರ ಸಂಗಪ್ಪನವರು ಮಾಡಿಸುತ್ತಾರೆಂದೂ, ಹೀಗಂತ ಅವರು ಅಪ್ಪಣೆ ಕೊಡಿಸಿದ್ದಾರೆಂದೂ ತಮಟೆಯವನು ಸಾರಿಕೊಂಡು ಹೋದ.
ಜನ ಮೂಕರಾಗಿ ನಿಂತು ಕೇಳಿಸಿಕೊಂಡರು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...