ಗೋಪುರಗಳ ಕಟ್ಟಿ ಗೋಪುರಗಳನಳಿಸುತಿರುವೆ
ಓ! ರುದ್ರಪುರುಷ!
ಮೆಯ್ಯುಬ್ಬಿ ಬಂದ ಮೆರುಗನ್ನು ಬುರುಗಾಗಿ ಮಾಡುತಿರುವೆ.
ಓ! ಮಾರುತಿ ಬಲಭೀಮ!
ಎನಿತು ಪುರಗಳ ಸಂಹರಿಸಿರುವೆ
ಓ! ತ್ರಿಪ್ರರಾಂತಕ!
ಎನಿತು ಖಂಡಗಳ ಕಂಡರಿಸಿರುವೆ
ಓ! ಮಾರ್ತಾಂಡ ಭೈರವ!
ಈ ನಿನ್ನ ತಾಂಡವ ನೃತ್ಯ,
ಈ ನಿನ್ನ ಪ್ರಚಂಡ ಕೋಲಾಹಲ,
ಈ ನಿನ್ನ ನಿಲುವು,
ಈ ನಿನ್ನ ಗೆಲುವು,
ಇದಕೆ ಎಣೆಯಾರು ಕಾಣೆ! ಓ! ನಟಸಮ್ರಾಟ!
ನೀರ ನೀಲಗ೦ಬಳಿ ಹಾಸಿ
ಹಚ್ಚಪಚ್ಚನ್ನ ಹೊದಿಕೆಯ ಹೊಚ್ಚಿ
ಸೀರ್ಪನಿಗಳ ಸೆಂಡಾಡಿ
ತೆರೆಯ ತೊಟ್ಟಿಲಲಿ ತೂಗಾಡುತಿರುವೆ!
ಮೆರೆಯ ಬಂದ ಮಾನವನು
ಹಸುಗೂಸಾಗಿ ಮರೆಯುವನು.
ಮುಗಿಯದ ತರಂಗಮಾಲೆಯ ಕಂಡು
ಅಂತರಂಗವದುಕ್ಕಿ ಬರಲು
ಕೈಮುಗಿಯುವನು.
ನಿನ್ನ ವೈಭವಗಳನ್ನೆನಿತು ಬಣ್ಣಿಸಲಿ, –
ಸಕಲ ಸಾರ್ವಭೌಮ!
*****



















