ಮೂಲ: ಡಿ.ಎಚ್. ಲಾರೆನ್ಸ್
(The snake ಎಂಬ ಇಂಗ್ಲಿಷ್ ಕವನ)
ಒಂದು ದಿನ ರಣ ರಣ ಬಿಸಿಲು
ಹಾವೊಂದು ಬಾಯಾರಿ ಬಂತು ಮನೆ ನೀರಿನ ತೊಟ್ಟಿಗೆ
ಸೆಖೆ ಅಂತ ನಾನೂ ಪೈಜಾಮದಲ್ಲಿಯೇ ಹೊರಟಿದ್ದೆ ಅಲ್ಲಿಗೆ
ಕಪ್ಪಗೆ ಸೊಪ್ಪು ಜಗ್ಗಿದ್ದ ಹೊಂಗೆಯ ದಟ್ಟನೆರಳಲ್ಲಿ
ಬಿಂದಿಗೆ ಹಿಡಿದು ಮೆಟ್ಟಿಲಿಳಿದು ಬಂದೆ.
ಆದರೆ ಕಾಯಬೇಕು ನೀರಿಗೆ
ಕಾದು ನಿಲ್ಲಬೇಕು ಸರದಿಗೆ
ಎಷ್ಟಾದರೂ ಆ ಹಾವು ಮೊದಲೇ ಬಂದಿತ್ತು ಅಲ್ಲಿಗೆ
ಗೋಡೆ ಬರುಕಿಂದ ಬಳಬಳ ಹರಿದಿಳಿಯಿತು
ಮರಗಳ ಕರಿನರಳಿಗೆ.
ಮಿದುವೆದೆಯ ಕಂದುಗೆರೆಯ ನೀಳ ರೇಶಿಮೆ ಮೈ
ತೊಟ್ಟಿಯ ಮೇಲಂಚಿನಲ್ಲಿ ಸಳಗಳ ಹರಿದು
ಕಲ್ಲಕಟ್ಟೆಯಲ್ಲಿ ಮುಖವಿಟ್ಟಿತು
ನಲ್ಲಿ ಬಾಯಿಂದ ಹನಿಹನಿ ಕಡಿದು
ಕಲ್ಲ ತಗ್ಗಿನಲ್ಲಿ ನಿಂತ ತಿಳಿನೀರನ್ನ
ಮೆಲ್ಲಗೆ ನೀಳಬಾಯಿಂದ ಹೀರಿತು.
ಬೇರೊಬ್ಬರು ಬಂದಿದ್ದರು ನನ್ನ ನೀರಿನ ತೊಟ್ಟಿಗೆ
ನಾನೋ
ನಿಂತಿದ್ದೆ ಕಾಯುತ್ತ ನಂತರ ಬಂದವನಂತೆ ಸರದಿಗೆ.
ನೀರು ಕುಡಿಯುತ್ತ ಕುಡಿಯುತ್ತ
ದನಗಳು ಕೊರಳೆತ್ತಿ ನೋಡುವಂತೆ
ನೋಡಿತು ನನ್ನನ್ನ ಅದು
ಹೌದೋ ಅಲ್ಲವೋ ಎನ್ನುವಂತೆ;
ಸೀಳು ನಾಲಿಗೆ ಘಳ ಘಳ ಚಾಚಿ
ಖುಷಿಪಟ್ಟಿತು ಒಂದು ಗಳಿಗೆ;
ಉರಿಬೇಸಿಗೆಯಲ್ಲಿ ಊರು ಧಗಧಗ ಉರಿಯುವಾಗ
ನೆಲದ ಸುಡುಬಸಿರಿಂದ ಹೊರಬಂದ
ಕಂದುಮಣ್ಣಿನ ಬಂಗಾರ ಬಣ್ಣದ ಆ ಹಾವು
ಬಗ್ಗಿತು ಕೆಳಗೆ, ಇನ್ನಷ್ಟು
ನೀರು ಹೀರಿತು ಒಳಗೆ
ಕಲಿತ ವಿದ್ಯೆ ಬೋಧಿಸಿತು ಒಳಗೊಳಗೆ
“ಮುಗಿಸಿಬಿಡು ಒಂದು ಬಡಿಗೆ ಬೀಸಿ ಇದನ್ನು
ಯಾಕೆಂದರೆ
ಸಿಸಿಲಿಯಲ್ಲಿ ಕರಿಹಾವು ನಿರಪಾಯಿಯಾದರೂ
ಉರಿಬಣ್ಣದವಕ್ಕೆ ವಿಷಬಾಯಿ”
ಒಳಗಿನ ದನಿಗಳೆಲ್ಲ ಗರಿಗಟ್ಟಿ ಕೂಗಿದವು.
“ಎಲವೋ
ಗಂಡಸೇ ಆದರೆ ನೀನು
ತಗೊ ಕೋಲನ್ನು
ಹೊಡಿ ಹಾವನ್ನು
ಮುಗಿಸಿಬಿಡು ಒಂದೇ ಏಟಿಗೆ ಅದರ ಕಥೆಯನ್ನು”
ಆದರ
ಆ ಹಾವು ಎಷ್ಟು ಇಷ್ಟವಾಯಿತು ಗೊತ್ತ ನನಗೆ?
ಎಷ್ಟು ಹಾಯೆನಿಸಿತೂ ಅತಿಥಿಯಂತೆ ಹಾಗೆ
ಗದ್ದಲವಿಲ್ಲದೆ ನಿರಾತಂಕ ಬಂದದ್ದಕ್ಕೆ ಹಿತ್ತಲಿಗೆ
ಪಾಪ! ಹಾಗೆ ಬಂದರೂ
ಸಂತೋಷಕ್ಕೆ ಸಂದರೂ
ಮತ್ತೆ ಮರಳಬೇಕು ಆ ಬಡಪಾಯಿ
ನೆಲದ ಉರಿಮಾಳಿಗೆಯೊಳಕ್ಕೆ
ನಾನು ಅದನ್ನು ಕೊಲ್ಲಲಿಲ್ಲವಲ್ಲ
ಅದೇನು ಹೇಡಿತನವೆ?
ಮಾತಾಡಬಯಸಿದ್ದೇನು ಮೂರ್ಖತನವೆ?
ಅದು ಬಂದದ್ದಕ್ಕೆ ಹೆಮ್ಮೆಯೆನಿಸಿದ್ದೇನು ದೈನ್ಯವೆ?
ಸುಳ್ಳೇಕೆ?
ಬಲು ಹೆಮ್ಮೆಯೆನಿಸಿತು ನನಗೆ
ಮತ್ತೂ ಮತ್ತೂ ಅದೆ ಹನಿಗಳು ಕಿವಿಯಿರಿದವು
“ಪುಕ್ಕ!
ಹದರಿಕೆ ನಿನಗೆ
ಇರದಿದ್ದರೆ ಹೊಡೆದೆಸೆಯುತ್ತಿದ್ದೆ ಇದನ್ನು ಹೊರಗೆ”
ಹೆದರಿದ್ದೇನೋ ಹೌದು, ತೀರ ಹೆದರಿದ್ದೆ.
ಆದರೆ ನೆಲದ ಕತ್ತಲಗೂಢದಿಂದ ಅದು
ಅತಿಥಿಯಾಗಿ ಹಾಗೆ ಬಂದದ್ದ ಕಂಡು
ಹೆದರಿಕೆಗಿಂತ ಹೆಚ್ಚು ಉಬ್ಬಿದ್ದೆ.
ಹಾವು
ಕುಡಿಯಿತು ತೃಪ್ತಿಯಾಗುವಷ್ಟು ನೀರು
ಕತ್ತೆತ್ತಿತ್ತು
ಕನಸಿಗನಂತೆ
ಕುಡಿದವನಂತೆ.
ಕತ್ತಲೆ ಸೀಳುವ ಮಿಂಚಿನಂತೆ
ಕರಿಸೀಳು ನಾಲಿಗೆ ಫಳ ಫಳ ಚಾಚಿತು ಹೊರಗೆ
ತುಟಿ ಒರೆಸಿಕೊಳ್ಳುವಂತೆ.
ಕತ್ತು ಹೊರಳಿಸಿತು ಗಾಳಿಯಲ್ಲಿ ಒಮ್ಮೆ
ದೃಷ್ಟಿ ನೆಡದೆ ದೇವತೆಯಂತೆ.
ಮರುಕ್ಷಣ
ಗೋಡೆಮುಖದ ಒಡಕು ಕಟ್ಟೆಯನ್ನು
ಹಬ್ಬಿ ಬೆಳೆಯಿತು ಬಳ್ಳಿಡೊಂಕಿನಂತೆ
ಹಾಗೆ ಬೆಳೆಬೆಳೆದು
ಆ ಭಯಾನಕ ಬಿರುಕಿನಲ್ಲಿ ತಲೆತೂರುತ್ತಲೆ
ಮೈ ಸಡಿಲಿಸಿ ಒಳಒಳಕ್ಕೆ ಸರಿಯುತ್ತಲೆ
ಹೆಡೆಯೆತ್ತಿತು ನನ್ನಲ್ಲಿ ಎಂಥದೊ ಭೀತಿ.
ಆ ಕತ್ತಲೆ ಬಿರುಕೊಳಗೆ ಹಾಗೆ ಸರಿಯುವುದನ್ನ
ಸರಿಸರಿದು ಹಾಗೇ ಮರೆಯಾಗುವುದನ್ನ
ಖಂಡಿಸಿ ನೀತಿ ಬಂಡೇಳುತ್ತಿರುವಂತೆ
ಹಾವು ಬೆನ್ನಾಯಿತು ನನಗೆ
ಒದಗಿತು ನನ್ನ ಗಳಿಗೆ
ಸುತ್ತ ನೋಡಿದೆ
ಚಟ್ಟನೆ ಬಿಂದಿಗೆ ಕೆಳಗಿಟ್ಟು ಕೊರಡೊಂದು ಭದ್ರನೆ ಬೀಸಿದೆ.
ತಗುಲಿರಲಾರದು ಏಟು
ಹೊರಗುಳಿದ ಮೈ ಸಲ್ಲದ ಅವಸರದಲ್ಲಿ
ವಿಲಿವಿಲಿ ಹೊಯ್ದಾಡಿತು
ಮಿಂಚು ಹೊರಳಿ ಸರ್ರನೆ ಜಗುಳಿ
ಕಟ್ಟೆಯ ಪಟ್ಟಿಬಾಯಲ್ಲಿ
ಕತ್ತಲಗೂಢದಲ್ಲಿ
ಹಠಾತನೆ ಮರೆಯಾಯಿತು
ಆ ಉರಿಹಗಲಲ್ಲಿ ಪರವಶವಾಗಿ ಕಣ್ಣು
ಎವೆಯಿಕ್ಕದೆ ಅದನ್ನೇ ನೋಡಿತು.
ಒಂದೇ ಗಳಿಗೆ
ಉಕ್ಕಿತು ನಾಚಿಕೆ!
ಏನು ಕೀಳು, ಎಷ್ಟು ಹೊಲಸು
ಎಂಥ ಕುನ್ನಿಕೆಲಸ ಅನ್ನಿಸಿತು
ನನ್ನನ್ನೇ ನಾನು ತೆಗಳಿದೆ
ಒಳಗೆ ಅವಿತಿದ್ದ ಮನುಷ್ಯವಿದ್ಯೆಗೆ ಉಗುಳಿದೆ
ಮುದುಕ ನಾವಿಕ ಕೊಂದ ಕಡಲ ಹಕ್ಕಿಯ ನೆನಪಾಗಿ
ಹಾವು ಮತ್ತೆ ಬಂದರೆ ಹೊರಗೆ
ಎಷ್ಟು ಚೆಂದ ಅನ್ನಿಸಿತು
ಯಾಕೋ ಮನಸ್ಸು ಮೂಕವಾಗಿ ಹಳಹಳಿಸಿತು.
ಆ ಹಾವು ಕಂಡಾಗಲೇ
ಇದರದೆಂಥ ಠೀವಿ ಏನು ತೇಜ!
ಕಿರೀಟ ಕಳೆದ ಪಾತಾಳದ
ಪದಚ್ಯುತ ನಾಗರಾಜನೇ ನಿಜ ಎನಿಸಿತ್ತು
ಸೃಷ್ಟಿಯ ಇಂಥ ಪ್ರಭುವೊಬ್ಬನನ್ನ ನಾ ಕಂಡಿದ್ದು
ಕಡೆಗುಳಿಯಿತು ಪಶ್ಚಾತ್ತಾಪಕ್ಕೆ
ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗಿದೆ ನಾ ನನ್ನ
ಸಣ್ಣತನಕ್ಕೆ.
*****
















