ಅಲ್ಲಿಂಕು ಇಲ್ಲಿಂಕು
ನಡುವಿಲ್ಲ ‘ಲಿಂಕು’
ಬರಿ ಮಸಿಯ ಗೊಣ್ಣೆ.
ಪಿತ್ತ ಕೆರಳಿದ ಹಾಗೆ
ಮೂಕ- ಸನ್ನೆ.
ಒಪ್ಪಿಗಿಲ್ಲ ಮಾತು ತಿಳಿಯಲಿಲ್ಲ
ತಪ್ಪಿಗೇ ಬಣ್ಣ ಬಳೆದು
ಹೊಸದೆಂದು ತಿಳಿದು.
ಹೊಟ್ಟೆಯೊಳೆ ಕಣ್ಣು
ಹಿಂಭಾಗ ಮೂಗು
ಕಿವಿಯಿರುವ ಜಾಗದಲಿ
ಚೂಪು ಕೋಡು
ಕಾಲಾಯ್ತು ಬಾಲ
ಕೈಯಾಯ್ತು ಕೋಲು
ತಲೆಯ ಹೆಸರಿಲೆ ಒಂದು
ಮಣ್ಣ ಹೆಂಟೆ
ಇದು ಪಿಕ್ಯಾಸೋ-ಪ್ರತಿಮೆ.
ಗುದ್ದಲಿಯ ಹಾಕಿ
ಎಳೆ ಪಿಕಾಸಿ,
ಪಾತಾಳ ಅಗೆದಾಗ
ವೇತಾಳ ಬರಬಹುದು
ನಾಗರಿಕತೆಯ ಹಲವು ರುಂಡ ಮುಂಡ,
ಯಾವ ಸಂಸ್ಕೃತಿ-ಕೃತಿಯೊ
ಬರಿ ಅನಾರುಂಡ
ಭಂಡ ರಾಕ್ಷಸ ಮಿಂಡ
ಎಣ್ಣೆಗೊಂಡ
ಏನೊ ಮುದ್ರೆ, ಏನೊ ಚಿತ್ಕಾಟು
ಏನರ್ಥ ಹೊರಟರೂ
ಹುಸಿ ಸಪಾಟು.
ನಾಳಿನಾ ಬಾಳಿಗೇ ಅಡ್ಡಗಾಲು
ಇಂದಿನಾ ಬದುಕಿಗೇ ಮರುಸವಾಲು
ಹೆಣಗಳನೆ ಗುರುಮಾಡಿ ಶಿಷ್ಯಬಂಟ
ಬಿಸಿಲುಗುದುರೆಯನೇರಿ
ಹಾಳು ಪಾಳಿಗೆ ಹೊಂಟ!
ಹೊಡೆದ ಪಂಟ!
*****

















