ಒಮ್ಮೆ ಒಂದು ಪಕ್ಷಿ, ಗೂಡಿನಲ್ಲಿಟ್ಟ, ಮೊಟ್ಟೆಯನ್ನು ದಿಟ್ಟಿಸಿ ನೋಡುತಿತ್ತು. ಈ ಮೊಟ್ಟೆಯಿಂದ ಹೊರ ಬರುವ ನನ್ನ ಮರಿ ಹಕ್ಕಿ, ಎಷ್ಟು ಕಠಿಣ ಜಗತ್ತನ್ನು ಎದುರಿಸಬೇಕೆಂದು ಯೋಚಿಸುತಿತ್ತು. ಗಾಳಿ-ಮಳೆ, ಗುಡುಗು-ಮಿಂಚು, ಶತ್ರುಮಿತ್ರರ ಹಾವಳಿಯಿಂದ ಹೇಗೆ ನನ್ನ ಈ ಪುಟ್ಟ ಕಂದಮ್ಮನನ್ನು ಸಂರಕ್ಷಿಸಲಿ ಎಂದು ಚಿಂತೆಗೊಳಗಾಯಿತು. ಮೊಟ್ಟೆ ಒಳಗಿಂದ ಮರಿಯೂ ತಾಯಿಯ ಗಾಭರಿಯ ಆತಂಕಕ್ಕೆ ಓಗೊಟ್ಟು ತನ್ನ ಭಯವನ್ನು ವ್ಯಕ್ತಪಡಿಸಿತು.
“ಅಮ್ಮಾ! ನನಗೆ ಹೊರಗೆ ಬರಲು ಬಹಳ ಭಯವಾಗುತ್ತಿದೆ” ಎಂದಿತು.
“ಮಗು, ನೀ ಭಯ ಪಡಬೇಡ. ನಾನು, ಕಟ್ಟಿರುವ ಮೊಟ್ಟೆಯ ಕೋಟೆಯಲ್ಲಿ ನೀ ಹಾಯಾಗಿರು. ನೀನು ಈ ಕಷ್ಟದ ಪ್ರಪಂಚಕ್ಕೆ ಬಂದು ಕಷ್ಟ ಪಡುವುದು ಬೇಡ” ಎಂದಿತು ತಾಯಿ ಹಕ್ಕಿ.
ದಿನವೂ ತಾಯಿಹಕ್ಕಿ, ಆಗಸದಾದ್ಯಂತ ಹಾರಾಡಿ ಬಂದು ಮೊಟ್ಟೆ ಒಳಗಿನ ಮರಿಮಗುವಿಗೆ ಎಲ್ಲಾ ಸುದ್ದಿ ಹೇಳುತ್ತಿತ್ತು. ವನದಲ್ಲಿ ಬಿಟ್ಟ ಮೊಗ್ಗು, ಹೂಗಳ ಬಗ್ಗೆ, ಎಲೆ, ಕಾಯಿ, ಹಣ್ಣುಗಳ ಬಗ್ಗೆ ವರ್ಣಿಸಿ ಹೇಳುತ್ತಿತ್ತು. ಋತುಗಳ ಬದಲಾವಣೆಯಾದಾಗಲೂ ಎಲ್ಲಾ ವರದಿ ಒಪ್ಪಿಸುತ್ತಿತ್ತು.
ಮಳೆ ಬಂದಾಗ “ಮಗು ನಿನ್ನ ತೋಯದಂತೆ ಮಾಡಿರುವೆ ಅಲ್ಲವೇ?” ಎಂದಿತು.
“ಅಮ್ಮಾ! ಮಳೆ ಎಂದರೇನು? ಮಿಂಚು ಅಂದರೇನು? ನೋಡಬೇಕು ಅನಿಸುತ್ತಿದೆ. ವನದ ಹೂವು, ಹಣ್ಣು ಎಲ್ಲಾ ನೋಡಬೇಕು ಅನ್ನಿಸುತ್ತಿದೆ.” ಎಂದು ಮರಿಹಕ್ಕಿ ಅಮ್ಮನಲ್ಲಿ ಹೇಳಿಕೊಂಡಿತು. “ಮಗು! ಹೋಗಲಿ ನಿನ್ನ ಮೊಟ್ಟೆಯ ಕೋಟೆಗೆ ಬಂದು ಸಣ್ಣ ಕಿಡಕಿಯ ತೂತು ಮಾಡುತ್ತೇನೆ. ನೀನು ಅದರಿಂದ ಜಗವನ್ನು ನೋಡು” ಎಂದಿತು.
ಮೊಟ್ಟೆ ತೂತಿನ ಕಿಡಕಿಯಿಂದ ಮರಿಹಕ್ಕಿ ಜಗವನ್ನು ನೋಡಲಾರಂಭಿಸಿತು. ಜಗದ ಬಿಸಿಲ ಕಿರಣ, ಬೆಳದಿಂಗಳು, ಮಂದಮಾರುತ, ಎಲ್ಲವೂ ಕಿಡಕಿಯಿಂದ ಒಳಹೊಕ್ಕು ಮರಿಹಕ್ಕಿಯನ್ನು ಮೋಹಿಸಿದವು. ಮರಿಗೆ ಜಗದಲ್ಲಿ ಮೋಹ ಹುಟ್ಟಿತು.
ಜಗದ ಮೋಹಕತೆ ಜೊತೆಗೆ ಚಿಕ್ಕ ಹುಳು ಹುಪ್ಪಟೆಗಳು ಮೊಟ್ಟೆ ಒಳಗೆ ಬಂದು ಮರಿ ಹಕ್ಕಿಯನ್ನು ಕಾಡಲಾರಂಭಿಸಿದವು. ಮರಿಗೆ ಮೊಟ್ಟೆಯ ಕೋಟೆಯಲ್ಲಿ ಉಸಿರುಕಟ್ಟಲಾರಂಭಿಸಿತು. ಒಂದು ದಿನ “ಅಮಾ!” ಎಂದು ಚೀರಿಕೊಂಡು ಮೊಟ್ಟೆಯಿಂದ ಹೊರಬಂದಿತು.
ತಾಯಿ ಹಕ್ಕಿ “ಇದೇನು ಕೆಲಸ ಮಾಡಿದೆ ಲಕ್ಷ್ಮಣ ರೇಖೆಯಂತೆ ಇದ್ದ ಮೊಟ್ಟೆ ಹೊಸಿಲು ದಾಟಿ ಬಂದು ಬಿಟ್ಟೆಯಾ? ಮರಿಹಕ್ಕಿ” ಎಂದಿತು. “ಅಮ್ಮಾ! ಮೊಟ್ಟೆಯಲ್ಲಿ ಕಣ್ಣುಮುಚ್ಚಿ ಕೂತರೆ ನನ್ನ ರೆಕ್ಕೆ ಬಲಿಯುವುದೇ? ನಾನು ಆಗಸ ನೋಡುವುದೆಂದು? ಭೂಮಿ ಸುತ್ತುವುದೆಂದು? ನಿನ್ನ ರೆಕ್ಕೆಯ ನೆರಳಿರುವಾಗ ಮೊಟ್ಟೆಯ ಕೋಟೆ ಏಕೆ?” ಎಂದು ಮೆತ್ತ ಮೆತ್ತಗೆ ಹಾರುತ್ತ ಆಗಸ ಸೇರಿತು.
ತಾಯಿಹಕ್ಕಿ ಆನಂದ ಬಾಷ್ಪ ಸುರಿಸುತ್ತ ಕಂದಮ್ಮನ ಸಾಹಸವನ್ನು ಮೆಚ್ಚಿಕೊಂಡಿತು. ಆಗಸದ ಸೂರು, ಭೂಮಿಯ ನೆಲೆ, ವೃಕ್ಷದ ಗೂಡು ಕೊಟ್ಟಿರುವ ದೈವ ಇರುವವರೆಗೆ ನನಗೇಕೆ ನನ್ನ ಮರಿಯ ಚಿಂತೆ ಎಂದು ಅರಿತುಕೊಂಡಿತು ತಾಯಿ ಹಕ್ಕಿ.
*****

















