ಕಂದಾ! ನಿನ್ನ ಮುಖದ ಮುದ್ರಾಕೃತಿಯು ನನ್ನಂತಿದೆ;
ಆದರೆ ದೇಹದ ಭದ್ರಾಕೃತಿಯು ಅವರಂತಿದೆ.
ಕಂದಾ! ನಿನ್ನ ಕಣೊಳಗಿನ ಕರುಣೆ ನನ್ನಂತಿದೆ;
ಆದರೆ ನೋಟದೊಳಗಿನ ಸರಣಿ ಅವರಂತಿದೆ.
ಕಂದಾ! ನಿನ್ನ ಗದ್ದದ ಮೇಲಣ ಕುಣಿಯು ನನ್ನಂತಿದೆ;
ಆದರೆ ಮೂಗಿನ ಕೆಳಗಣ ಮಣಿಯು ಅವರಂತಿದೆ.
ಕಂದಾ! ನಿನ್ನ ಹುಬ್ಬಿನ ಕೊನೆಯ ನನ್ನಂತಿದೆ;
ಆದರೆ ಮೂಗಿನ ತೆನೆಯು ಅವರಂತಿದೆ.
ಆಹಹ! ಹುಟ್ಟಾ ಗೆಲ್ಲಬಲ್ಲ ಸೋಲದ ಸೊಬಗುಗಾರ !
ಗಂಡುಗಾಡಿಯಲ್ಲಿ ಹೆಣ್ಣಮೋಡಿ ಬೆರೆತು
ಅರ್‍ಧನಾರಿ-ನಟೇಶ್ವರನ ಅಭಿನವಸೃಷ್ಟಿಯಾದೆಯಲ್ಲ!
*****


















