ರಘುಪತಿ ರಾಘವ ರಾಜಾರಾಮ
ಮಹಾಜೀವನಕೆ
ಇಂದು ಬರೆದೆಯಾ
ದೇವನೆ, ಪೂರ್ಣವಿರಾಮ!
ರಘುಪತಿ ರಾಘವ ರಾಜಾರಾಮ!
೨
ಪತಿತ ಪಾವನ!
ಪಟೇಲ ಜೀವನ
ವಾಯಿತು ದೇವನ-
ಮುರಲೀವಾದನ
ಸ್ವಾತಂತ್ರ್ಯದ ಆ ವೀರೋದಾಮನ
ಬೆಳೆಯಿತು ತಾನ ವಿತಾನ
ದೇವಾ, ಸಖ್ಯ ಸೌಖ್ಯ, ಸಂಧ
ರಘುಪತಿ ರಾಘವ ರಾಜಾರಾಮ
ಪತಿತ ಪಾವನ ಸೀತಾರಾಮ
ವಿಧಿಯ ಘಟನೆಯಲಿ
ಘೋರ ಮರಣದಲಿ
ಪಡೆದಿತು ಗಾನವಿರಾಮ
ಸುಂದರ ಮಾಧವ ಮೇಘಶ್ಯಾಮ
೩
ಜರೆಯನು ಜರೆದನು
ಅವನೇ ನಿರ್ಜರ
ದುಡಿಮೆಗೆ ಎಂದಿಗು
ಇಲ್ಲ ಅಂತರ
ಮಿಂಚು ತೂರಿತೆನೆ
ಹರಿದು ನಿರ್ಝರ
ದೇಹದಿ ಉಕ್ಕಿತು
ಪ್ರಾಣಸಾಗರ
ನಾಡಿನ ಪುಣ್ಯದ
ಉದಿತ ಭಾಸ್ಕರ
ಅದೋ ನಮ್ಮ ಸರದಾರ
ಅವನ ದರ್ಶನ
ಉತ್ಸಾಹದ ಸಂಚಾರ
ರಘುಪತಿ ರಾಘವ ರಾಜಾರಾಮ
ಭಾರತ ಪಂಚ ಪ್ರಾಣ
ಬತ್ತಿತು
ಅಯ್ಯೋ ಮೇಫಶ್ಯಾಮ!
೪
ಆತ್ಮ ಕವಚವದು
ವಜ್ರ ಕೇವಲ
ಒಳಗೆ ಬೆಳೆಯಿತೈ
ಕಮಲ ಕೋಮಲ
ಭಾರತ ಭಾಗ್ಯದ
ಗಂಧ ಪರಿಮಳ
ಹರಿಯಿತು ಸಾಗರ ಪಾರ
ದೇವಾ,
ಏನು ಮಹಾ ಸರದಾರ!
ಕೇಳು ದೇವನೆ
ದೇಶ ಕೂಗುತಿದೆ
ಅಣ್ಣನ ವಾರಂವಾರ
ರಘುಪತಿ ರಾಘವ ರಾಜಾರಾಮ
೫
ಯುದ್ಧ ಭೂಮಿಯಲಿ
ಸ್ಫುರಣ ಕಾರಣ
ಕಾಡ ಸವರಿದನು
ವೈರಿ ಮರ್‍ದನ
ನಾಡ ಕಟ್ಟಿದನು
ಭೀಮ ಯೋಧನ
ಸ್ವಾತಂತ್ರ್ಯದ ಸಂಗ್ರಾಮ
ಗೆದ್ದನು,
ಅವನಿಗೆ ಪ್ರೇಮ ಪ್ರಣಾಮ
ರಘುಪತಿ ರಾಘವ ರಾಜಾರಾಮ!
೬
ದೇಹ ಮುರಿದರೂ
ಸಾವು ಬಾರದು
ಅಮೃತ ಪುತ್ರನಾ
ಸತ್ವ ಸರಿಯದು
ಅವನ ಧೈರ್ಯದಾ
ಕವಚ ನಾಡಿಗೆ
ಅವನ ಉಕ್ಕಿನಾ
ಹುರಿಯು ಮನಸಿಗೆ
ಅವನ ಪುಣ್ಯದಾ
ರಕ್ಷೆ ಬೆನ್ನಿಗೆ
ಅವನ ಕನಸಿನಾ-
ಮಾಲೆ ಕೊರಳಿಗೆ
ಅವನ ಧ್ಯೇಯದಾ
ಮೂರ್ತಿ ಕಣ್ಣಿಗೆ
ಇರಲು ಎಲ್ಲಿಯಾ
ಸಾವು ಅವನಿಗೆ
೭
ದುಃಖ ಸಂವೃತ
ತಾಳು ಭಾರತ
ಮೋಹ ವಿಸ್ಮೃತ
ಏಳು ಭಾರತ
ಪ್ರಗತಿ ಸುವ್ರತ
ಬಾಳು ಅಮೃತ!
ರಘುಪತಿ ರಾಘವ ರಾಜಾರಾಮ
ಪತಿತ ಪಾವನ ಸೀತಾರಾಮ!
*****



















