ನನ್ನ ಬಾಲಗೋಪಾಲನ ಗೋದಲೆಗಳವ್ವಾ ಇವು;
ಕಪಿಲೆಕಾಮಧೇನುಗಳು ಕಟ್ಟಿಹವಿಲ್ಲಿ.
ಅವನಿಗೇನು ಕಡಿಮೆ?
ಗಂಗೆಗೆ ಉಣಿಸುವ ಹಿಮವತಿಯ
ತುಂಗಶಿಖರದ ಮಾದರಿಗಳಿವು.
ಅವನಿಗೇನು ಕಡಿಮೆ?
ವಾತ್ಸಲ್ಯದ ವಿಜಯಯಾತ್ರೆಯಲ್ಲಿ
ನನ್ನ ಕಂದನೂದುವ ಅವಳಿ ಶಂಖಗಳಿವು.
ಅವನಿಗೇನು ಕಡಿಮೆ?
ಎಲ್ಲರ ತಾಯಿಯಾದ ನಲ್ಲಮ್ಮನ ಗುಡಿಯ
ಜೋಡು ಕಳಸಗಳಿವು………….
ಅವನಿಗೇನು ಕಡಿಮೆ?
ಹಾಲಿನ ಬಟ್ಟಲುಗಳಲ್ಲ; ಮಾಂಸದ ಒಟ್ಟಿಲುಗಳಲ್ಲ!
ಜಗದಂಬೆಯು ಜೀವಶಿಶುವನ್ನು ಮಲಗಿಸಿ ತೂಗುವ
ತೊಟ್ಟಿಲ ಕಾಲುಗಳಿವು.
ಅವನಿಗೇನು ಕಡಿಮೆ!
*****


















