ಮನೆಗೆ ಬಂದೆ ಭಾಗ್ಯ ಸಖಿ
ಅಂದು ನೀ ವಿವಾಹಿತ
ಮನದಿ ಬರೆದ ಸ್ವಪ್ನ ಲಿಪಿ
ಮೃದು ಮೃಣಾಲ ಶಿಲ್ಪಿತ
ತೆರೆಯಿತೆಂದೆ ದೈವಕೃಪಾ
ಜನುಮ ಜನುಮ ವಾಂಛಿತ
ನಿಂತೆ ನೀನು ನನ್ನ ಎದುರು
ನನ್ನ ದೇಹ ನವಿರಿನ ತರು
ಅಡಿಮುಡಿಗಳ ಅದರು ಪದರು
ದಾದಿಡಗಳ ಝೋಂಕೃತ
ಮನದ ಮೂಲೆ ಮೂಲೆಗಳೂ
ಸಪ್ತವರ್ಣರಂಜಿತ
ನನ್ನ ಹೃದಯ ಕೊಳಲ ಬಿದಿರು
ನಿನ್ನೊಲುಮೆಯ ಹಕ್ಕಿ ಹೊದರು
ನನ್ನ ಬಾಳ ಬಾನಿನಲ್ಲಿ
ಸರಿಗಮಗಳ ಮಧುರುತ
ನಿನ್ನ ನುಡಿಯ ಕುಡಿಕುಡಿಯಲಿ
ಸುಧಾಸೇಕ ಅವಿರತ
ನಿನ್ನ ಚೆಲುವು ಎತ್ತಿರುವುದು
ನನ್ನಾಸೆಯ ಕುಂಚಲ
ದಿನವು ಚಿತ್ರ ಬರೆಯುತಿಹುದು
ಸುಖ ಮೋಹಕ ಚಂಚಲ
ದೈವಾಧರ ಅರೆಯರಳಿದ
ಅರುಣವರ್ಣ ಹಾಸಿತ
ಹೊರಗೆ ಇರಲಿ ಬಿಸಿಲು ಬೇನೆ
ನನ್ನ ಸುಖಕೆ ಇಲ್ಲ ಕೊನೆ
ನಿನ್ನೆದೆಯಲಿ ನನ್ನ ಮನೆ
ಹುರುಷವಾಯ್ತು ನನೆಕೊನೆ
ನಿನ್ನ ಕೈಯಲೀ ಜೀವಿತ
ವಾಯ್ತು ಸುಮನಗಂಧಿತ.
*****



















