ಜೀವನದಲ್ಲಿ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ನಿಷ್ಠೆ ಮತ್ತು ಶೃದ್ಧೆ ಇರಬೇಕು. ಶೃದ್ಧೆ ಇಲ್ಲದ ಕಾರ್ಯ ಎಂದಿಗೂ ಸುಗಮವಾಗದೆ ಕೆಡುತ್ತದೆ. ಅಂತಲೇ ನಾವು ಮಾಡುವ ಕಾಯಕದ ಮೇಲೆ ಮನಸಿಟ್ಟು ಮಾಡಬೇಕು. ಆದರೆ ಮನುಷ್ಯ ತಾನು ಮಾಡುತ್ತಿರುವ ಕಾರ್ಯದಲ್ಲಿ ತನುವು ತೊಡಗಿಸಿಕೊಂಡರೂ ಅವನ ಮನಸ್ಸು ಇನ್ನಾವುದೋ ವಿಚಾರದಲ್ಲಿ ತಲ್ಲೀನವಾಗುತ್ತದೆ. ಹೀಗೆ ಮಾಡುವುದರಿಂದ ಅವನೆಂದೂ ಜೀವನದಲ್ಲಿ ಸಾರ್ಥಕವಾದ ಕಾರ್ಯ ಮಾಡಲಾರನು.
ಈಗ ಅನೇಕ ಸಲ ಕಚೇರಿಯಲ್ಲಿ ನಾವು ನೋಡುತ್ತೇವೆ. ಕಾರ್ಯ ನಿರ್ವಹಿಸುವ ಆ ಕಚೇರಿಯ ಸಿಬ್ಬಂದಿ ವರ್ಗದವರು ಕಾರ್ಯ ಮಾಡುತ್ತಿರುವಾಗಲೇ ಇನ್ನಾವುದೋ ಮಾತುಗಳಲ್ಲಿ, ವಿಷಯಗಳಲ್ಲಿ ತೇಲಾಡುತ್ತಾರೆ. ಹೀಗಾಗುವುದರಿಂದ ಲೆಕ್ಕ ತಪ್ಪಾಗಬಹುದು. ಅವಘಡಕ್ಕೆ ಕಾರಣವಾಗಬಹುದು. ಬ್ಯಾಂಕಿನಲ್ಲಿ ನಗದು ಗುಮಾಸ್ತ ತನ್ನ ಗ್ರಾಹಕರಿಗೆ ನೀಡುವ ಪ್ರತಿಯೊಂದು ಚೆಕ್ಕಿನ ಬಗ್ಗೆಯೂ ಲೆಕ್ಕವಿರಬೇಕು. ತುಸು ಅಲಕ್ಷ್ಯವಾದರೂ ಕೈಯಿಂದ ಕಾಸು ಕಳೆದುಕೊಳ್ಳಬೇಕಾಗುತ್ತದೆ.
ಮನೆಯಲ್ಲಿ ನಾರಿಯರು ಮನೆಗೆಲಸಗಳನ್ನು ಮಾಡುವಾಗ ಯಾವ ಕಾರ್ಯ ಮಾಡುತ್ತಿರುತ್ತಾರೋ ಅದರಲ್ಲಿಯೇ ಅವರ ಮನಸ್ಸಿರಬೇಕು. ಅಡುಗೆ ಮಾಡುವಾಗ ಬಟ್ಟೆ ಒಗೆಯುವ ಬಗ್ಗೆ, ಬಟ್ಟೆ ತೊಳೆಯುವಾಗ ಪಾತ್ರೆ ಸ್ವಚ್ಛಗೊಳಿಸುವ ಬಗ್ಗೆ ಚಿಂತನೆ ಮಾಡಿದರೆ ಈಗಿರುವ ಕೆಲಸ ಮತ್ತು ಮಾಡಬೇಕಾದ ಕೆಲಸಗಳೂ ಹಾಳಾಗುತ್ತವೆ.
ನಮ್ಮ ಶೃದ್ಧೆ ಕೇವಲ ಕಾರ್ಯದ ಮೇಲೆ ಮಾತ್ರ ಇರದೆ ಹಿರಿಯರ ಮಾತುಗಳನ್ನು ಸಹ ನಾವು ಶೃದ್ಧೆಯಿಂದ ಕೇಳಿ ನಿರ್ವಹಿಸವಬೇಕು. ಅವರು ಹೇಳುವ ಕಾಟಾಚಾರಕ್ಕೆ ಕಾರ್ಯ ನಿರ್ವಹಿಸಿದರೆ ಅವರಿಗೂ ಖುಷಿ ಕೊಡುವುದಿಲ್ಲ. ಮತ್ತು ಕಾರ್ಯವೂ ಶಿಸ್ತಾಗುವುದಿಲ್ಲ.
ಶ್ರೀ ರಾಮಕೃಷ್ಣ ಪರಮಹಂಸರು ಒಂದು ಪುಟ್ಟ ಕಥೆ ಹೇಳುತಿದ್ದರು. ಓರ್ವ ಪ್ರಯಾಣಿಕ ದಾರಿಯಲ್ಲಿ ನಡೆದು ನದಿ ತೀರಕ್ಕೆ ಬಂದಿದ್ದ. ನದಿ ದಾಟಿ ಆಚೆಗೆ ಹೋಗುವ ಪಸ್ರಂಗ, ನದಿಯಲ್ಲಿ ತುಂಬ ಜಾಸ್ತಿ ನೀರಿತ್ತು. ಹಿಂತಿರುಗಿ ಹೋಗಲು ಕತ್ತಲಾಗುತಿತ್ತು. ಏನೂ ತೋಚದೆ ನಿಂತಿರಲು ಅಲ್ಲೋರ್ವ ಸಾಧು ಈ ಪ್ರಯಾಣಿಕನ ಹೊಯ್ದಾಟ ಕಂಡು ಹತ್ತಿರಕ್ಕೆ ಕರೆದು ಒಂದು ಎಲೆಯ ಮೇಲೆ ಏನೋ ಬರೆದು ಈ ಪ್ರಯಾಣಿಕನ ಕೈಗಿತ್ತು. ‘ಹೋಗು ನೀನು ಈ ನೀರಿನ ಮೇಲಿಂದ ನಡೆದುಕೊಂಡು ಹೋಗಬಹುದು’ ಎಂದರು. ಪ್ರಯಾಣಿಕನು ಸಂತಸಗೊಂಡು ಸಾಧುವಿಗೆ ಅಭಿನಂದನೆ ಹೇಳಿ ಅದನ್ನು ಪಡೆದು ನೀರ ಮೇಲೆ ಪಾದವಿಟ್ಟನು. ಪ್ರಯಾಣಿಕ ಮುಳುಗದೆ ನೀರಿನ ಮೇಲೆ ನಡೆಯತೊಡಗಿದ. ಕೊನೆಗೆ ಆಶ್ಚರ್ಯಚಕಿತನಾಗಿ ನೀರಿನ ಮೇಲಿದ್ದ ಎಲೆಯಲ್ಲಿ ಏನಿದೆಯೋ? ಎಂದು ಬಿಡಿಸಿ ನೋಡಿದಾಗ ಅದರ ಮೇಲೆ “ಶ್ರೀರಾಮ” ಬರೆದಿತ್ತು. ಅಯ್ಯೋ ಇಷ್ಟೆನಾ! ಎಂದಾಗ ಪ್ರಯಾಣಿಕನ ಶೃದ್ಧೆ ಕರಗಿತ್ತು. ಹಾಗೆ ಅವನು ನೀರಿನಲ್ಲಿ ಮುಳುಗಿದ. ಅಂತಲೇ ಶೃದ್ಧೆಯೇ ಸಾರ್ಥಕ ಬದುಕಿನ ಮೆಟ್ಟಿಲಾಗಬೇಕು.
*****



















